Ghost and Science: ನೀವೆಂದಾದರೂ ದೆವ್ವ ಕಂಡಿದ್ದೀರಾ? ದೆವ್ವ-ಭೂತಗಳು ಯಾಕಾಗಿ ಕಾಣುತ್ತವೆ ಗೊತ್ತೇ?

By Suvarna News  |  First Published Apr 26, 2023, 6:56 PM IST

ದೆವ್ವ-ಭೂತಗಳ ಅಸ್ತಿತ್ವದ ಬಗ್ಗೆ ಎಂದಿನಿಂದಲೂ ಮನುಷ್ಯನಿಗೆ ಬಹುದೊಡ್ಡ ಪ್ರಶ್ನೆ ಇದೆ, ಕುತೂಹಲವಿದೆ. ಸಾಮಾನ್ಯ ಜನರಂತೂ ಅವುಗಳನ್ನು ಚಿತ್ರವಿಚಿತ್ರ ರೀತಿಯಲ್ಲಿ ನಂಬುತ್ತಾರೆ. ವಿಜ್ಞಾನವಂತೂ ಈ ವಿಚಾರದ ಬಗ್ಗೆ ಸ್ಪಷ್ಟವಾಗಿದೆ. ಹಾಗಾದರೆ, ವಿಜ್ಞಾನದ ಪ್ರಕಾರ ಅವು ಯಾಕಾಗಿ ಕಾಣಿಸಿಕೊಳ್ಳುತ್ತವೆ ಗೊತ್ತೇ?
 



ನೀವು ದೆವ್ವ, ಭೂತಗಳನ್ನು ನಂಬುತ್ತೀರಾ? ಅವುಗಳ ಅಸ್ತಿತ್ವದ ಬಗ್ಗೆ ನಂಬಿಕೆಯೂ ಇಲ್ಲದೆ, ಇಲ್ಲವೇ ಇಲ್ಲ ಎನ್ನುವ ದೃಢ ನಿಲುವೂ ಇಲ್ಲದೆ ಗೊಂದಲದಲ್ಲಿದ್ದೀರಾ? ದೆವ್ವ, ಭೂತಗಳ ಕತೆ ಕೇಳಿ ಬೆಳೆದವರು ನೀವಾಗಿದ್ದರೆ ಒಂದಿಷ್ಟು ನಂಬಿಕೆ ನಿಮ್ಮಲ್ಲಿರಬಹುದು. ಹಲವರು “ನಾವು ದೆವ್ವ, ಭೂತಗಳನ್ನು ನೋಡಿದ್ದೇನೆ’ ಎಂದು ಹೇಳುತ್ತಾರೆ. ಹಲವರು ಈ ಕುರಿತು ಭಯಪಟ್ಟವರೂ ಇದ್ದಾರೆ. ಅದೆಲ್ಲ ಸುಳ್ಳು ಎನ್ನುವವರೂ ಇದ್ದಾರೆ. ಆದರೆ, ದೆವ್ವ-ಭೂತಗಳನ್ನು ಕಂಡೆ ಎನ್ನುವವರು ಅವರೊಬ್ಬರೇ ಅಲ್ಲ. ಸಾಕಷ್ಟು ಜನರಿಗೆ ಇಂತಹ ಅನುಭವಗಳು ಆಗಿವೆ. ಕೆಲವೊಂದು ಸ್ಥಳಗಳು “ಭಯಪಡಿಸುವ ಪ್ರದೇಶ’ ವೆಂದೇ ಗುರುತಿಸಿಕೊಂಡಿರುತ್ತವೆ. ನಿಮ್ಮೂರಿನ ಯಾವುದೋ ಹೊಲದ ಬದಿಯೋ, ಹುಣಸೆಮರವೋ, ಬೆಟ್ಟವೋ, ನೀರಿನ ತಾಣವೋ ಯಾವುದೋ ಒಂದು. ವಿಜ್ಞಾನಿಗಳ ಪ್ರಕಾರ, ಇಂತಹ ಪ್ರದೇಶಗಳಲ್ಲಿರುವ ಅಯಸ್ಕಾಂತೀಯ ಪ್ರಭಾವದಿಂದಾಗಿ ಅನೇಕರು ವಿಚಿತ್ರ ಎನಿಸುವಂತಹ ಅನುಭವಗಳಿಗೆ ತುತ್ತಾಗಿರಬಹುದು. ಆಗ ದೆವ್ವ, ಭೂತಗಳಂತಹ ಅಸಹಜ ಚಟುವಟಿಕೆಗಳನ್ನು ನಂಬುವಂತೆ ಆಗುತ್ತದೆ. ಮಾನಸಿಕ ತಜ್ಞರು ಮತ್ತು ವಿಜ್ಞಾನಿಗಳು ಹೇಳುವಂತೆ ದೆವ್ವ-ಭೂತಗಳು ಯಾಕಾಗಿ ಕಾಣುತ್ತವೆ ಗೊತ್ತೇ? ವಿಜ್ಞಾನದ ಪ್ರಕಾರ, ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. 

•    ಅಸಹಜ ನಂಬಿಕೆ (Paranormal Belief)
ನಮಗೆಲ್ಲ ಚಿಕ್ಕಂದಿನಿಂದಲೂ ಇವುಗಳ ಬಗ್ಗೆ ವಿಚಿತ್ರ ಭಾವನೆ (Feelings), ನಂಬಿಕೆ ಇದೆ. ನಾವು ಕೇಳಿಕೊಂಡು ಬೆಳೆದ ಕತೆಗಳು (Stories) ಇಂತಹ ಭಾವನೆಗಳನ್ನು ನಮ್ಮಲ್ಲಿ ತುಂಬಿವೆ. ನಿಮಗೆ ಅಚ್ಚರಿಯಾಗಬಹುದು. ನಾವೊಂದೇ ಅಲ್ಲ, ಅಮೆರಿಕದಂತಹ ಮುಂದುವರಿದ ದೇಶದಲ್ಲೂ ನಾಲ್ವರಲ್ಲಿ ಮೂರು ಮಂದಿ ತಾವು ದೆವ್ವಗಳನ್ನು (Ghosts) ನೋಡಿರುವುದಾಗಿ ಹೇಳುತ್ತಾರೆ. ಗ್ರುಪೊನ್ ಎನ್ನುವ ಸಂಸ್ಥೆ 2018ರಲ್ಲಿ ನಡೆಸಿದ್ದ ಸಮೀಕ್ಷೆ ಪ್ರಕಾರ, ಶೇ.60ರಷ್ಟು ಜನ ದೆವ್ವ ನೋಡಿರುವುದಾಗಿ ತಿಳಿಸಿದ್ದಾರೆ.

Latest Videos

undefined

ಪ್ರೇತದ ಮೇಲೆ ಪ್ರೀತಿ ಹುಟ್ಟಿ ಮದ್ವೆಯಾದ್ಲು, ಈಗ ಫಜೀತಿ, ದೆವ್ವ ಬಿಡಿಸಿ ಅಂತಿದ್ದಾಳೆ!

•    ಸಲಹೆಯ ಪ್ರಭಾವ (Power of Suggestion)
ಕೆಲವರು ದೆವ್ವವನ್ನು ಯಾಕೆ ನೋಡುತ್ತಾರೆ ಎಂದರೆ ಅವರು ಅದನ್ನು ನಿರೀಕ್ಷೆ ಮಾಡುತ್ತಿರುತ್ತಾರೆ. ಭಯಪಡಿಸುವ ಪ್ರದೇಶ (Haunted Place) ಅಥವಾ ಮನೆಯಲ್ಲಿದ್ದೀರಿ ಎಂದು ಯಾರಾದರೂ ಹೇಳಿದಾಗ ಅನೇಕರಿಗೆ ಅಂತಹ ಅನುಭವವಾಗುವುದು ಕಂಡುಬಂದಿದೆ. 

•    ಮಿದುಳಿನ ಸಮಸ್ಯೆ (Brain Problem)
ಮಿದುಳಿನ ಕೆಲವು ನರಗಳಲ್ಲಿ (Nerves) ಸಾಮರಸ್ಯವಿಲ್ಲದಿರುವಾಗ, ಮಿದುಳಿನ ಕಾರ್ಯ ಸರಿಯಾಗಿ ನಡೆಯದಿರುವಾಗ ಅನೇಕ ಜನ ಇಂತಹ ಅನುಭವಕ್ಕೆ ಒಳಗಾಗಿದ್ದಾರೆ. ನರರೋಗ ಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ಮಿದುಳಿನ ನಿರ್ದಿಷ್ಟ ಪ್ರದೇಶಕ್ಕೆ ಸಣ್ಣ ಪ್ರಮಾಣದ ವಿದ್ಯುತ್ (Current) ಹರಿಸಿದಾಗ ಅನೇಕರಿಗೆ ತಮ್ಮ ಹಿಂದೆ ಯಾರೋ ಇರುವಂತೆ, ತಮ್ಮನ್ನೇ ಅಣಕಿಸಿದಂತೆ ಭಾಸವಾಯಿತು.

•    ಒತ್ತಡ (Stress)
ಮಹಿಳೆಯರೊಬ್ಬರು ಅಸಹಜ ಅನುಭವಕ್ಕೆ ತುತ್ತಾದಾಗ ನಡೆಸಲಾಗಿದ್ದ ಪರೀಕ್ಷೆಯಿಂದ ಆಕೆ ಅತಿಯಾದ ಒತ್ತಡಕ್ಕೆ ತುತ್ತಾಗಿದ್ದುದು ಕಂಡುಬಂದಿತ್ತು. ನೋವಿನಿಂದ ಕೂಡಿರುವ ಒತ್ತಡದಿಂದಾಗಿ ಯಾರೋ ತನ್ನನ್ನು ಹಿಡಿದುಕೊಂಡಂತೆ ಆಕೆಗೆ ಭಾಸವಾಗುತ್ತಿತ್ತು. 

•    ಆವರ್ತನಗಳು (Frequencies)
ದೆವ್ವ ಎಂದರೆ ಕನಿಷ್ಠ ಸ್ತರದ ಆವರ್ತನಗಳೂ ಆಗಿರಬಹುದು! ಮನುಷ್ಯನಿಗೆ ಸಹಜವಾಗಿ ಕೇಳಿಸದ ಅತಿ ಕನಿಷ್ಠ ಶಬ್ದ ಆವರ್ತನವನ್ನು ಇನ್ ಫ್ರಾ ಸೌಂಡ್ ಎಂದು ಕರೆಯಲಾಗುತ್ತದೆ. ಮನುಷ್ಯ (Man) ಇವುಗಳ ಬಗ್ಗೆ ಕೆಲವೊಮ್ಮೆ ಸೂಕ್ಷ್ಮನಾಗುತ್ತಾನೆ. ಇದು ಅಸಹಜ ಅನುಭವಕ್ಕೆ ಎಡೆ ಮಾಡಿಕೊಡುತ್ತದೆ.

•    ಮಿದುಳಿನ ನಿಭಾಯಿಸುವ ಕಾರ್ಯತಂತ್ರ (Coping Mechanism)
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರು ದೆವ್ವ ಕಂಡಿರುವುದಾಗಿ ಹೇಳುವುದು ಹೆಚ್ಚು. ಇದು ಅತ್ಯಂತ ದುಃಖದಲ್ಲಿರುವ ಮಿದುಳು ತನ್ನನ್ನು ತಾನು ನಿಭಾಯಿಸುವ ಕಾರ್ಯತಂತ್ರವೆಂದು ವಿಜ್ಞಾನ ಹೇಳುತ್ತದೆ.

Scariest Place: ದೆಹಲಿಯ ದಂಗೆ ಮನೆ, ಸೈನಿಕರ ಆತ್ಮ ಜನರಿಗೆ ಕಾಟ ಕೊಟ್ತಿರೋದ್ಯಾಕೆ?

•    ಅಯಸ್ಕಾಂತೀಯ ಪರಿಣಾಮ (Magnetic Field)
ಕೆಲವು ಪ್ರದೇಶಗಳಲ್ಲಿ ಪದೇ ಪದೆ ಅಸಹಜ ಘಟನೆಗಳು ವರದಿಯಾಗುತ್ತವೆ. ಇಂತಹ ಸ್ಥಳಗಳಲ್ಲಿ ಅಯಸ್ಕಾಂತೀಯ ಪ್ರಭಾವ ಮತ್ತು ಬೆಳಕಿನ ಮಟ್ಟದ ಪ್ರಭಾವ ಅತಿಯಾಗಿರುತ್ತದೆ. 

•    ಭ್ರಾಂತಿ (Hallucination) ಮತ್ತು ಕಾರ್ಬನ್ ಮೊನಾಕ್ಸೈಡ್ ವಿಷ
ಭಯಗ್ರಸ್ತ ಮಿದುಳು ಕೆಲವೊಮ್ಮೆ ದೆವ್ವ-ಭೂತಗಳಂತಹ ಭ್ರಾಂತಿಗಳನ್ನು ಸತ್ಯವೆಂದು ಭಾವಿಸುತ್ತದೆ. ಹಲವು ವರ್ಷದ ಹಿಂದೆ ವೈದ್ಯಕೀಯ ಜರ್ನಲ್ ನಲ್ಲಿ ಅಧ್ಯಯನವೊಂದು ಪ್ರಕಟವಾಗಿತ್ತು. ಮನೆಯೊಂದರಲ್ಲಿ ದಂಪತಿಗಳು ಪದೇ ಪದೆ ಒಂದು ರೀತಿಯ ಭ್ರಾಂತಿಗೆ ತುತ್ತಾಗುತ್ತಿದ್ದರು. ಬಳಿಕ ಸೂಕ್ತ ತಪಾಸಣೆ ಬಳಿಕ ಅವರ ಮನೆಯ ಕುಲುಮೆಯಲ್ಲಿ ಕಾರ್ಬನ್ ಮೊನಾಕ್ಸೈಡ್ ವಿಷ ಹೊರಬರುತ್ತಿತ್ತು.

•      ಸ್ಲೀಪ್ ಪ್ಯಾರಾಲಿಸಿಸ್ (Sleep Paralysis) 
ಅಸಹಜ ಅನುಭವಗಳು ನಿದ್ರೆಯಲ್ಲಿ ಸಾಮಾನ್ಯ. ನಿದ್ರೆಯಲ್ಲಿ ಒಂದು ರೀತಿಯ ಪ್ಯಾರಾಲಿಸಿಸ್ ಉಂಟಾದಾಗ ಅತ್ತ ಎಚ್ಚರವೂ ಅಲ್ಲದ, ಇತ್ತ ನಿದ್ರೆಯ ಅಲ್ಲದ ಸ್ಥಿತಿಯಲ್ಲಿ ಭಯಾನಕ (Horrible) ಅನುಭವಗಳಾಗುವುದು ಹೆಚ್ಚು.
 

click me!