ಧಗಧಗಿಸುವ ಬಿಸಿಲಿನಲ್ಲಿ ಎಸಿ ನಮ್ಮನ್ನು ತಣ್ಣಗಿಡುತ್ತದೆ. ಮೊದಲು ಶ್ರೀಮಂತಿಕೆಯ ಸಂಕೇತವಾಗಿದ್ದ ಎಸಿಯನ್ನು ಈಗ ಎಲ್ಲರೂ ಬಳಸ್ತಾರೆ. ಆದ್ರೆ ಹೆಚ್ಚು ತಣ್ಣನೆ ಗಾಳಿ ನೀಡುವ ಈ ಎಸಿ ಆರೋಗ್ಯಕ್ಕೆ ಹಾನಿಕರ ಎಂಬುದು ನಿಮಗೆ ಗೊತ್ತಾ?
ಬೇಸಿಗೆ (Summer) ಯಲ್ಲಿ ಬಿಸಿಯ ಶಾಖ (Heat) ದಿಂದ ರಕ್ಷಣೆ ಪಡೆಯಲು ಬಹುತೇಕರು ಎಸಿ ಬಳಕೆ ಮಾಡ್ತಾರೆ. ಮತ್ತೆ ಕೆಲವರು ಋತು ಯಾವುದೇ ಇರಲಿ ಎಸಿ ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವರಿಗೆ ಏರ್ ಕಂಡಿಷನರ್ (Air Conditioner) ರೂಮಿನಲ್ಲಿ ಮಲಗಿದ್ರೆ ಮಾತ್ರ ನಿದ್ರೆ ಬರುತ್ತದೆ. ಇನ್ನು ಕೆಲವರಿಗೆ ಪ್ರಯಾಣದ ವೇಳೆ ಎಸಿ ಅತ್ಯಗತ್ಯ. ಮತ್ತೆ ಕೆಲವರು ಎಸಿ ರೂಮಿನಲ್ಲಿ ದಿನದ 8 ಗಂಟೆ ಕೆಲಸ ಮಾಡ್ತಾರೆ. ಕಂಪ್ಯೂಟರ್ ಸೇರಿದಂತೆ ಕಚೇರಿಯಲ್ಲಿರುವ ಯಂತ್ರಗಳನ್ನು ರಕ್ಷಿಸಲು ಎಸಿ ಹಾಕಲಾಗುತ್ತದೆ. ಆದ್ರೆ ಇದೇ ಎಸಿ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಬೆಳಿಗ್ಗೆ ಕಚೇರಿಯಲ್ಲಿ 8 ಗಂಟೆ ಹಾಗೂ ರಾತ್ರಿ ಪೂರ್ತಿ ಎಸಿ ಗಾಳಿಯಲ್ಲಿ ಮಲಗಿದ್ರೆ ಅನೇಕ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ರಾತ್ರಿಯಿಡೀ ಎಸಿ ಗಾಳಿ ತೆಗೆದುಕೊಂಡ್ರೆ ದೇಹದ ನೋವು, ಉಸಿರಾಟದ ತೊಂದರೆ, ಶುಷ್ಕ ಚರ್ಮ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಮಾತ್ರ ಎಸಿ ಗಾಳಿ ಪಡೆಯುವುದು ಸೂಕ್ತ. ನಾವಿಂದು ಎಸಿ ಗಾಳಿಯಿಂದಾಗುವ ಸಮಸ್ಯೆ ಏನು ಎಂಬುದನ್ನು ಹೇಳ್ತೇವೆ.
ಎಸಿ ಗಾಳಿಯಲ್ಲಿ ಮಲಗುವ ಅನಾನುಕೂಲತೆಗಳು :
ಒಣ ಚರ್ಮ : ಮನೆಯ ರೂಮಿನಲ್ಲಿ ಹವಾನಿಯಂತ್ರಣ ಅಳವಡಿಸಿದ್ದು, ರಾತ್ರಿಯಿಡೀ ಈ ಗಾಳಿಯಲ್ಲಿ ಮಲಗುತ್ತಿದ್ದರೆ ನಿಮ್ಮ ಚರ್ಮದೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹೌದು, ನೀವು ದೀರ್ಘಕಾಲ ಎಸಿ ಗಾಳಿಯಲ್ಲಿ ಇದ್ದರೆ ಅದು ನಿಮ್ಮ ಚರ್ಮದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಚರ್ಮವು ಒಣಗಲು ಶುರುವಾಗುತ್ತದೆ. ಚರ್ಮ ಬಿರುಕು ಬಿಡುತ್ತದೆ. ಇದ್ರಿಂದ ಕೆಲವೊಮ್ಮೆ ನೋವು ಕಾಣಿಸಿಕೊಳ್ಳಬಹುದು. ಚರ್ಮದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ರಕ್ತ ಸಂಚಾರಕ್ಕೆ ನೀರು ಅಗತ್ಯ. ಹಾಗಾಗಿ ಚರ್ಮ ಸುಕ್ಕುಗಟ್ಟಿದಂತೆ ಕಾಣುತ್ತದೆ. ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ ಹೆಚ್ಚು ಹೊತ್ತು ಎಸಿ ಗಾಳಿಯಲ್ಲಿ ಇರಬೇಡಿ. ಇಡೀ ರಾತ್ರಿ ಎಸಿಯಲ್ಲಿ ಮಲಗುವುದನ್ನು ತಪ್ಪಿಸಿ.
ಡ್ರೈ ಶೇವಿಂಗ್ ಮಾಡಿ ಕೊಳ್ಳೋರು ನೀವಾದ್ರೆ, ಈ ವಿಷಯ ಗಮನದಲ್ಲಿ ಇರಲಿ!
ನೆಗಡಿ –ಜ್ವರದ ಸಮಸ್ಯೆ : ಬೇಸಿಗೆ ಬಿಸಿಯಿಂದ ರಕ್ಷಣೆ ಪಡೆಯಲು ಎಸಿ ಬಳಸ್ತೇವೆ. ಎಸಿ ಗಾಳಿ ಹೊರಗೆ ಹೋಗ್ಬಾರದು, ಕೊಠಡಿಯಲ್ಲಿ ಮಾತ್ರ ಇರ್ಬೇಕೆನ್ನುವ ಕಾರಣಕ್ಕೆ ರೂಮ್ ಬಾಗಿಲು ಮುಚ್ಚಿರುತ್ತೇವೆ. ಇದ್ರಿಂದ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಎಸಿ ರೂಮಿನ ಬಳಕೆಯಿಂದ ಜ್ವರ, ನೆಗಡಿ ನಮ್ಮನ್ನು ಪದೇ ಪದೇ ಕಾಡಲು ಶುರುವಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಕೆಲವು ಗಂಟೆಗಳ ಕಾಲ ಎಸಿ ಚಲಾಯಿಸಿ ನಂತ್ರ ಆಫ್ ಮಾಡಿ ಮಲಗಲು ಪ್ರಯತ್ನಿಸಿ.
ಅಲರ್ಜಿ ಸಮಸ್ಯೆ : ಎಸಿಯನ್ನು ದೀರ್ಘಕಾಲ ಬಳಕೆ ಮಾಡಿದ್ರೆ ಅನೇಕರಿಗೆ ಅಲರ್ಜಿ ಕಾಡಲು ಶುರುವಾಗುತ್ತದೆ. ಎಸಿ ಸ್ವಚ್ಛಗೊಳಿಸದೆ ಅದ್ರ ಗಾಳಿಯನ್ನು ಸೇವನೆ ಮಾಡ್ತಿದ್ದರೆ ಚರ್ಮದ ಮೇಲೆ ಗುಳ್ಳೆಗಳಾಗಿ ಅಲರ್ಜಿಯಾಗ್ಬಹುದು. ಇದಲ್ಲದೆ ಅಸ್ತಮಾ ಸಮಸ್ಯೆ ಉಲ್ಬಣಿಸುತ್ತದೆ. ಎಸಿ ಬಳಸಿದ ನಂತ್ರ ಕೆಮ್ಮು, ಮೂಗು ಕಟ್ಟಿದ ಅನುಭವ ನಿಮಗೆ ಆಗುತ್ತದೆ.
Kids Health : ಮಕ್ಕಳಿಗೆ ಬೆಸ್ಟ್ ಈ ಯೋಗಾಸನ, ತಪ್ಪದೇ ಮಾಡಿದರೆ ಸುಧಾರಿಸುತ್ತೆ ಆರೋಗ್ಯ
ದೇಹದ ನೋವು : ನೀವು ದೀರ್ಘಕಾಲ ಎಸಿಯಲ್ಲಿ ಇದ್ದರೆ ದೇಹದ ಅನೇಕ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ರಾತ್ರಿಯಿಡೀ ಎಸಿ ರೂಮಿನಲ್ಲಿ ಮಲಗುವುದರಿಂದ ಅನೇಕರಿಗೆ ಬೆನ್ನು ನೋವು, ಸೊಂಟ ನೋವು, ಕಾಲು ನೋವಿನಂತಹ ಸಮಸ್ಯೆ ಕಾಡಲು ಶುರುವಾಗುತ್ತದೆ.
ತುರಿಕೆ : ಎಸಿ ಗಾಳಿ ಕಣ್ಣಿಗೂ ಹಾನಿಕರ. ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಬಹುದು. ಕಣ್ಣಿನಲ್ಲಿ ತುರಿಕೆಯಾಗುವುದೂ ಇದೆ. ಕೆಲವರಿಗೆ ತಲೆ ನೋವು ಕಾಡುತ್ತದೆ. ಬ್ಯಾಕ್ಟೀರಿಯಾ ಹೆಚ್ಚಾದಾಗ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಅಗತ್ಯವಿದ್ರೆ ಮಾತ್ರ ಎಸಿ ಬಳಕೆ ಮಾಡಿ. ಕಾರಿನಲ್ಲೂ ಎಸಿ ಬಳಕೆಯನ್ನು ಕಡಿಮೆ ಮಾಡಿ. ಕಚೇರಿಯಲ್ಲೂ ಆದಷ್ಟು ಎಸಿಗೆ ಪರ್ಯಾಯವಾದ ಯಂತ್ರದ ಬಳಕೆ ಶುರು ಮಾಡಿ.