
ನೀವು ನಿಮ್ಮ ಕಣ್ಣುಗಳನ್ನು ಕನ್ನಡಿಯಲ್ಲಿ ಎಂದಾದರೂ ದಿಟ್ಟಿಸಿ ನೋಡಿಕೊಂಡಿದ್ದೀರಾ? ಕಣ್ಣುಗಳ ಸುತ್ತಮುತ್ತ ಏನಾದರೂ ವ್ಯತ್ಯಾಸ ಕಂಡುಬಂದಿದೆಯೇ? ಚೆಕ್ ಮಾಡಿಕೊಳ್ಳಿ. ಏಕೆಂದರೆ, ಕೆಲವೊಮ್ಮೆ ಕಣ್ಣುಗಳ ಸುತ್ತಮುತ್ತ ಊದಿಕೊಳ್ಳಬಹುದು. ಹಾಗೆಯೇ, ಕೆಲವರ ಕಣ್ಣುಗಳನ್ನು ನೋಡಿ, ಕಣ್ಣುಗಳ ಸುತ್ತಮುತ್ತಿನ ಭಾಗ, ರೆಪ್ಪೆಗಳು ಊದಿಕೊಂಡಿರುತ್ತವೆ. ವಯಸ್ಸಾದಂತೆ ಕೆಲಮಟ್ಟಿಗೆ ಇದು ಸಹಜವಾದರೂ ಊದಿಕೊಂಡಿರುವುದು ಕೆಲವು ಆರೋಗ್ಯ ಸಮಸ್ಯೆಗಳನ್ನೂ ಬಿಂಬಿಸುತ್ತದೆ. ಹೀಗಾಗಿ, ಮೊದಲೇ ಗುರುತಿಸಿದರೆ ಹೆಚ್ಚು ಅನುಕೂಲ. ಹಲವು ಚಿತ್ರತಾರೆಯರ ಕಣ್ಣುಗಳ ಕೆಳಭಾಗ ಊದಿಕೊಂಡಿರುವುದನ್ನು ಕಾಣಬಹುದು. ಇದಕ್ಕೆ ರಾತ್ರಿ ಸರಿಯಾಗಿ ನಿದ್ರೆಯಿಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿರಬಹುದು. ಸೈನಸ್ ಸಮಸ್ಯೆ ಇದ್ದಾಗಲೂ ಹೀಗಾಗುತ್ತದೆ ಎನ್ನುತ್ತಾರೆ ತಜ್ಞರು. ಕಣ್ಣುಗಳ ಸುತ್ತಮುತ್ತ ಊದಿಕೊಳ್ಳುವುದರಿಂದ ಯಾವುದೇ ಸಮಸ್ಯೆ, ಕಿರಿಕಿರಿ ಉಂಟಾಗದ ಕಾರಣದಿಂದ ಸಾಕಷ್ಟು ಜನ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ, ಇದು ಹಲವು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು ಎಂದು ಎಚ್ಚರಿಸುತ್ತಾರೆ ತಜ್ಞರು. ಅಮೆರಿಕನ್ ಆಫ್ತಲ್ಮಾಲಜಿ ಸಂಸ್ಥೆಯ ಪ್ರಕಾರ, ಸಣ್ಣದೊಂದು ಅಲರ್ಜಿಯಿಂದಲೂ ಕಣ್ಣುಗಳ ಸುತ್ತಮುತ್ತ ಬಾವು ಕಂಡುಬರಬಹುದು.
ಕಿಡ್ನಿಗೆ (Kidney) ಸಂಬಂಧಿಸಿದ ಸಮಸ್ಯೆ ಇದ್ದಾಗಲೂ ಕಣ್ಣುಗಳ (Eyes) ಸುತ್ತಮುತ್ತ ಊದಿಕೊಳ್ಳುವುದು (Swollen) ಕಂಡುಬರುತ್ತದೆ. ಹೃದಯ (Heart), ಥೈರಾಯ್ಡ್ (Thyroid) ಗೆ ಸಂಬಂಧಿಸಿದ ಸಮಸ್ಯೆ ಇದ್ದಾಗಲೂ ಇದು ಉಂಟಾಗುತ್ತದೆ. ಹೀಗಾಗಿ, ಕಣ್ಣುಗಳು ನಮ್ಮ ಒಟ್ಟಾರೆ ಆರೋಗ್ಯ (Health) ಬಿಂಬಿಸುವ ಪ್ರಮುಖ ಕಿಂಡಿಯಾಗಿವೆ ಎಂದರೆ ತಪ್ಪಾಗಲಾರದು.
ಪೈನ್ ಕಿಲ್ಲರ್ಸ್‌ಗಳಿಂದಲೂ ಕಿಡ್ನಿ ಸಮಸ್ಯೆ ಬರುತ್ತೆ ಹುಷಾರ್!
ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಪ್ರಕಾರ, ಕಣ್ಣುಗಳ ಸುತ್ತಮುತ್ತ ಯಾವಾಗಲೋ ಒಮ್ಮೆ ಊದಿಕೊಂಡು ಹಾಗೆಯೇ ಮಾಯವಾದರೆ ಸಮಸ್ಯೆಯಿಲ್ಲ. ಆದರೆ, ನಿರಂತರವಾಗಿ ಊದಿಕೊಂಡಿದ್ದರೆ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಇದಲ್ಲದೆ, ಇನ್ನೂ ಅನೇಕ ಅಪರೂಪದ ಸಮಸ್ಯೆಗಳಾದ ಗ್ರೇವ್ಸ್ ಡಿಸೀಸ್, ಕಣ್ಣುಗಳ ಕೋಶಗಳ ಸೋಂಕಿನಿಂದಲೂ ಹೀಗಾಗಬಹುದು. ಕಣ್ಣುಗಳ ಸರ್ಪಸುತ್ತು ಉಂಟಾದಾಗಲೂ ಬಾವು ಉಂಟಾಗಬಹುದು.
ಯಾವಾಗ ವೈದ್ಯರನ್ನು ಕಾಣುವುದು ಸೂಕ್ತ?
ಸಾಮಾನ್ಯವಾಗಿ, ಕಣ್ಣುಗಳ ಸೋಂಕು (Infection), ಉರಿ, ನೋವುಗಳಿರುವಾಗ ವೈದ್ಯರನ್ನು ಕಾಣುತ್ತೇವೆ. ಹಾಗೆಯೇ, ಹೆಚ್ಚು ಸಮಯ ಅಥವಾ ಪದೇ ಪದೆ ಊದಿಕೊಳ್ಳುತ್ತಿದ್ದರೂ ವೈದ್ಯರನ್ನು ಕಾಣುವುದು ಸೂಕ್ತ.
ಮನೆಯಲ್ಲೇ ಸರಳ ಪರಿಹಾರಗಳು (Simple Remedies)
ಊದಿಕೊಳ್ಳುವ ರೆಪ್ಪೆ (Eyelid) ಮತ್ತು ಕಣ್ಣುಗಳ ಸುತ್ತಮುತ್ತಲ ಪ್ರದೇಶಕ್ಕೆ ಕೆಲವು ಸರಳ ಪರಿಹಾರಗಳನ್ನು ಮಾಡಿಕೊಳ್ಳಬಹುದು.
• ತಣ್ಣಗಿನ ಬಟ್ಟೆ (Cold Compress)
ಮನೆಯಲ್ಲೇ ಸುಲಭವಾಗಿ ಕೋಲ್ಡ್ ಕಂಪ್ರೆಸ್ ಮಾಡಿಕೊಳ್ಳಬಹುದು. ಬಾವು ಇಳಿಸಲು ಇದು ಅತ್ಯಂತ ಸುಲಭದ ಉಪಾಯ. ಶುದ್ಧವಾದ ಬಟ್ಟೆಯನ್ನು ತಣ್ಣಗಿನ ನೀರಿನಲ್ಲಿ ಅದ್ದಿ ಕಣ್ಣುಗಳ ಮೇಲೆ ಇರಿಸಿಕೊಳ್ಳಬಹುದು.
40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತ ಆಗೋದಕ್ಕೆ ಇದುವೇ ಕಾರಣ!
• ಸೌತೆಕಾಯಿ ಹೋಳುಗಳನ್ನು (Cucumber Slice) ಕಣ್ಣುಗಳ ಮೇಲೆ ಇರಿಸಿಕೊಳ್ಳುವುದರಿಂದ ಕಣ್ಣುಗಳ ಆಯಾಸ ನೀಗುತ್ತದೆ. ಉರಿಯೂತ ತಡೆಗಟ್ಟಲು ಇದು ಭಾರೀ ಸಹಕಾರಿ.
• ಸೂಕ್ತ ನಿದ್ರೆ (Sleep) ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಇದನ್ನು ತಡೆಯಬಹುದು. ಅಧ್ಯಯನಗಳ ಪ್ರಕಾರ, ಪ್ರತಿದಿನ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡುವುದರಿಂದ ಕಣ್ಣುಗಳಿಗೆ ಸರಿಯಾದ ಪ್ರಮಾಣದ ವಿಶ್ರಾಂತಿ ದೊರೆಯುತ್ತದೆ.
• ಸಾಕಷ್ಟು ನೀರು (Water) ಕುಡಿಯಬೇಕು. ದೇಹ ಡಿಹೈಡ್ರೇಟ್ ಆದಾಗ ಕಣ್ಣುಗಳ ಊದಿಕೊಳ್ಳುವಿಕೆ ಹೆಚ್ಚುತ್ತದೆ.
• ಕ್ಯಾಮೊಮೈಲ್ ಟೀ ಬ್ಯಾಗ್ ಗಳನ್ನು ನೀರಿನಲ್ಲಿ ಅದ್ದಿ ಕಣ್ಣುಗಳ ಮೇಲೆ ಇರಿಸಿಕೊಳ್ಳುವುದರಿಂದ ಉರಿಯೂತ (Inflammation) ಕಡಿಮೆಯಾಗಿ ಊದಿಕೊಳ್ಳುವುದು ನಿಯಂತ್ರಣಕ್ಕೆ ಬರುತ್ತದೆ.
• ಹಾಗೆಯೇ, ಗ್ರೀನ್ ಟೀ ಕೂಡ ಸಹಕಾರಿ. ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿನೀರಿನಲ್ಲಿ ಅದ್ದಿ ತಕ್ಷಣ ಕೋಲ್ಡ್ ನೀರಿನಲ್ಲಿ ಹಾಕಿ ಕಣ್ಣುಗಳ ಮೇಲೆ ಇಟ್ಟುಕೊಳ್ಳಬೇಕು.
• ಹತ್ತಿಬಟ್ಟೆಯನ್ನು ಉಪ್ಪುನೀರಿನಲ್ಲಿ ಅದ್ದಿ ಕಣ್ಣುಗಳ ಮೇಲೆ ಇರಿಸಿಕೊಳ್ಳಬೇಕು.
• ಅಲೋವೆರಾ ತುಣುಕನ್ನು ಇಟ್ಟುಕೊಳ್ಳಬಹುದು.
• ಮಸಾಜ್ (Massage) ಮಾಡುವುದರಿಂದಲೂ ಪರಿಹಾರ ಸಾಧ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.