ಅನ್ನ vs ಚಪಾತಿ: ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಡಾಕ್ಟರ್ ಬಿಚ್ಚಿಟ್ಟ ಅಸಲಿ ಸತ್ಯವಿದು

Published : Oct 31, 2026, 06:34 PM IST
Rice vs Chapati for dinner

ಸಾರಾಂಶ

Rice vs chapati for dinner: ರಾತ್ರಿ ಊಟಕ್ಕೆ ಅನ್ನ ಒಳ್ಳೆಯದಾ ಅಥವಾ ಚಪಾತಿ ಒಳ್ಳೆಯದಾ? ಅದರಲ್ಲೂ ಮಧುಮೇಹ (ಶುಗರ್) ಇರುವವರು ರಾತ್ರಿ ಹೊತ್ತು ಏನನ್ನು ಸೇವಿಸಬೇಕು? ಖ್ಯಾತ ವೈದ್ಯೆ ಡಾ. ದೀಪ್ತಿ ಕರೇಟಿ ಅವರು ತಿಳಿಸಿರುವ ಮಹತ್ವದ ಮಾಹಿತಿ ಇಲ್ಲಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಸಣ್ಣ ವಯಸ್ಸಿನಲ್ಲೇ ಜನರನ್ನು ಮಧುಮೇಹ (ಡಯಾಬಿಟಿಸ್) ಆವರಿಸಿಕೊಳ್ಳುತ್ತಿದೆ. ಅದರಲ್ಲೂ ಕೊರೊನಾ ನಂತರ ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ, ಮಧುಮೇಹಿಗಳಲ್ಲಿ ಸದಾ ಒಂದು ದೊಡ್ಡ ಗೊಂದಲವಿರುತ್ತದೆ— "ರಾತ್ರಿ ಊಟಕ್ಕೆ ಒಂದು ಕಪ್ ಅನ್ನ ತಿನ್ನಬೇಕಾ ಅಥವಾ ಚಪಾತಿ ತಿನ್ನಬೇಕಾ? ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರಬೇಕೆಂದರೆ ಯಾವುದು ಉತ್ತಮ?" ಎಂಬ ಪ್ರಶ್ನೆಗೆ ಖ್ಯಾತ ವೈದ್ಯೆ ಡಾಕ್ಟರ್ ದೀಪ್ತಿ ಕರೇಟಿ ನೀಡಿರುವ ಸ್ಪಷ್ಟ ವಿವರಣೆ ಇಲ್ಲಿದೆ.

ಅನ್ನ vs ಚಪಾತಿ: ಪೋಷಕಾಂಶಗಳ ಲೆಕ್ಕಾಚಾರ

ಡಾ. ದೀಪ್ತಿ ಅವರ ಪ್ರಕಾರ, ನಾವು ಸೇವಿಸುವ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ಸ್ (ಪಿಷ್ಟ) ರಕ್ತದಲ್ಲಿನ ಶುಗರ್ ಮಟ್ಟವನ್ನು ನಿರ್ಧರಿಸುತ್ತದೆ.

ಅನ್ನ (Rice): ಒಂದು ಕಪ್ (ಸುಮಾರು ಒಂದು ಹಿಡಿ) ಅನ್ನದಲ್ಲಿ ಬರೋಬ್ಬರಿ 50 ಗ್ರಾಂ ಕಾರ್ಬೋಹೈಡ್ರೇಟ್ಸ್ ಇರುತ್ತದೆ.

ಚಪಾತಿ (Chapati): ಒಂದು ಸಾಧಾರಣ ಗಾತ್ರದ (6 ಇಂಚು) ಚಪಾತಿಯಲ್ಲಿ ಕೇವಲ 15 ಗ್ರಾಂ ಕಾರ್ಬೋಹೈಡ್ರೇಟ್ಸ್, 71 ಕ್ಯಾಲೋರಿ, 3 ಗ್ರಾಂ ಪ್ರೋಟೀನ್ ಮತ್ತು 0.4 ಗ್ರಾಂ ಕೊಬ್ಬು ಇರುತ್ತದೆ.

ಗೋಧಿಗೆ ಹೋಲಿಸಿದರೆ ಅಕ್ಕಿಯಲ್ಲಿ ರಂಜಕ (ಫಾಸ್ಫರಸ್) ಮತ್ತು ಮೆಗ್ನೀಶಿಯಮ್ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಫೋಲೇಟ್ ಮತ್ತು ಕಬ್ಬಿಣದಂಶ ಎರಡರಲ್ಲೂ ಸಮಾನವಾಗಿರುತ್ತದೆ.

ಒಂದು ಚಪಾತಿಗೆ ಎಷ್ಟು ಅನ್ನ ಸಮ?

ಕ್ಯಾಲೋರಿಗಳ ಲೆಕ್ಕಾಚಾರಕ್ಕೆ ಬಂದರೆ, ಒಂದು ಸಾಧಾರಣ ಚಪಾತಿಯು ಅರ್ಧ ಕಪ್ ಬೆಂದ ಅನ್ನಕ್ಕೆ ಸಮಾನವಾಗಿರುತ್ತದೆ.

ಶುಗರ್ ಇರುವವರಿಗೆ ಮಲ್ಟಿಗ್ರೇನ್ ಚಪಾತಿ ಬೆಸ್ಟ್

ಟೈಪ್ 2 ಡಯಾಬಿಟಿಸ್ ಇರುವವರು ಕೇವಲ ಗೋಧಿ ಹಿಟ್ಟಿನ ಬದಲು, ಅದಕ್ಕೆ ಜೋಳ, ಸಜ್ಜೆ ಅಥವಾ ರಾಗಿ ಹಿಟ್ಟನ್ನು ಬೆರೆಸಿ ಚಪಾತಿ ಮಾಡುವುದು ಅತ್ಯಂತ ಆರೋಗ್ಯಕರ. ಈ ಸಿರಿಧಾನ್ಯಗಳಲ್ಲಿ ‘ಗ್ಲೈಸೆಮಿಕ್ ಇಂಡೆಕ್ಸ್’ (GI) ತುಂಬಾ ಕಡಿಮೆ ಇರುತ್ತದೆ ಹಾಗೂ ನಾರಿನಂಶ (ಫೈಬರ್), ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿರುತ್ತವೆ. ಇದು ರಕ್ತದಲ್ಲಿ ಶುಗರ್ ತಕ್ಷಣವೇ ಏರಿಕೆಯಾಗದಂತೆ ತಡೆಯುತ್ತದೆ. ಮೈದಾ ಅಥವಾ ರಿಫೈನ್ಡ್ ಗೋಧಿ ಹಿಟ್ಟಿನ ಬದಲು, ಹೊಟ್ಟು ಸಮೇತ ಇರುವ ನೈಸರ್ಗಿಕ ಗೋಧಿ ಹಿಟ್ಟನ್ನೇ ಬಳಸಬೇಕು.

ವೈದ್ಯರ ಅಂತಿಮ ತೀರ್ಪು: ಯಾವುದು ಉತ್ತಮ?

ಎಲ್ಲಕ್ಕಿಂತ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಸತ್ಯವೆಂದರೆ "ಆಹಾರದ ಪ್ರಮಾಣ" (Portion Size) ಅತ್ಯಂತ ಮುಖ್ಯ ಎಂದು ಡಾ. ದೀಪ್ತಿ ಹೇಳುತ್ತಾರೆ.
ರಾತ್ರಿ ಊಟಕ್ಕೆ ಒಂದು ಕಪ್ ಅನ್ನವಾದರೂ ತಿನ್ನಬಹುದು ಅಥವಾ 2 ಚಪಾತಿಯನ್ನಾದರೂ ತಿನ್ನಬಹುದು.
ಆದರೆ, ಅನ್ನ ತಿಂದಾಗ ಎಷ್ಟು ತಿಂದೆವು ಎಂಬ ಅಳತೆ ಸಿಗುವುದಿಲ್ಲ, ಸುಲಭವಾಗಿ ಹೆಚ್ಚೆಚ್ಚು ಅನ್ನ ತಿಂದುಬಿಡುತ್ತೇವೆ.
ಅದೇ ಚಪಾತಿ ಆದರೆ ಲೆಕ್ಕ ಸಿಗುತ್ತದೆ. ಸಾಮಾನ್ಯವಾಗಿ ಜನರು 2 ಚಪಾತಿ ತಿಂದು ಊಟ ಮುಗಿಸುತ್ತಾರೆ.
ಆದ್ದರಿಂದ, ರಾತ್ರಿಯ ಊಟಕ್ಕೆ ಮಿತಿಯಿಲ್ಲದೆ ಅನ್ನ ತಿನ್ನುವುದಕ್ಕಿಂತ, 2 ಚಪಾತಿ ತಿನ್ನುವುದೇ ಮಧುಮೇಹಿಗಳಿಗೆ ಅತ್ಯಂತ ಸುರಕ್ಷಿತ ಮತ್ತು ಉತ್ತಮ ಆಯ್ಕೆ.

ಸಮಯ ಮುಖ್ಯ

ಮಧುಮೇಹಿಗಳು ಕೇವಲ ಅನ್ನ ಅಥವಾ ಚಪಾತಿ ಬಗ್ಗೆ ಮಾತ್ರವಲ್ಲ, ಊಟ ಮಾಡುವ ಸಮಯದ ಬಗ್ಗೆಯೂ ಎಚ್ಚರ ವಹಿಸಬೇಕು. ರಾತ್ರಿ ಮಲಗುವುದಕ್ಕಿಂತ ಕನಿಷ್ಠ 2 ರಿಂದ 3 ಗಂಟೆ ಮುಂಚಿತವಾಗಿಯೇ (ರಾತ್ರಿ 8 ಗಂಟೆಯೊಳಗೆ) ಊಟ ಮುಗಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅತ್ಯಂತ ಸಹಕಾರಿ.

ಚಪಾತಿ ಜೊತೆಗೆ ಆಲೂಗಡ್ಡೆ ಬೇಡ

ಅನೇಕರು ಚಪಾತಿ ಜೊತೆಗೆ ಆಲೂಗಡ್ಡೆ ಪಲ್ಯ ತಿನ್ನುತ್ತಾರೆ. ಆದರೆ ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ಸ್ ತುಂಬಾ ಹೆಚ್ಚಿರುವುದರಿಂದ, ಚಪಾತಿಯ ಜೊತೆ ಹಸಿರು ಸೊಪ್ಪು, ತರಕಾರಿ ಪಲ್ಯ ಅಥವಾ ಬೇಳೆ ಸಾರು ಬಳಸುವುದು ಮಧುಮೇಹಿಗಳಿಗೆ ಅತ್ಯಂತ ಒಳ್ಳೆಯದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ತಿಳಿವಳಿಕೆಗಾಗಿ ಮಾತ್ರ. ನಿಮ್ಮ ಆರೋಗ್ಯ ಸ್ಥಿತಿಗೆ ತಕ್ಕಂತೆ ಆಹಾರ ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಉತ್ತಮ).

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಿಂಗಳಲ್ಲಿ 5 ಕೆ.ಜಿ ತೂಕ ಹೆಚ್ಚಿಸಿಕೊಳ್ಳಬೇಕೆ? ಮೊದಲು ನಿಮ್ಮ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ!
ಈರುಳ್ಳಿ ಮನೆಗೆ ತರುವ ಮೊದಲು ಈ ತಪ್ಪು ಮಾಡಬೇಡಿ; ಇಲ್ಲದಿದ್ದರೆ ಅಡುಗೆ ಮಾಡುವ ಬದಲು ಮನೆ ಕ್ಲೀನ್ ಮಾಡ್ಬೇಕಾಗುತ್ತೆ!