
ಗಡ್ಡ ಪುರುಷರ ಲಕ್ಷಣ ಎಂದು ಹೇಳುವ ಎಷ್ಟೋ ಗಂಡಸರು ಇದ್ದಾರೆ. ಗಡ್ಡ ಬಿಡುವುದು ಎಂದರೆ ಅವರಿಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಸೆಲೆಬ್ರಿಟಿ ಪ್ರಿಯರಾಗಿದ್ದರಂತೂ ಮುಗಿದೇ ಹೋಯ್ತು. ತಮ್ಮ ಆರಾಧ್ಯ ದೈವ ನಟನಂತೆ ತಾವೂ ಗಡ್ಡ ಬಿಟ್ಟು ಖುಷಿ ಪಡುವ ದೊಡ್ಡ ವರ್ಗವೇ ಇದೆ. ತಾವು ನಟ ಆಗದ ಸಾಧ್ಯವಿಲ್ಲವಾದರೂ, ಅವರಂತೆಯೇ ಗೆಟಪ್ ಮಾಡಿಕೊಂಡು ತಾವೂ ನಟನಾದಂತೆ ಹೆಮ್ಮೆ ಪಡುವವರು ಅನೇಕರಿದ್ದಾರೆ. ಇನ್ನು ಕೆಲವರಿಗೆ ನಟರೇ ದೇವರ ಸಮಾನ ಆಗಿರುವ ಕಾರಣ, ಅವರನ್ನು ಅನುಸರಿಸುವುದು ಎಂದರೆ ಇನ್ನಿಲ್ಲದ ಖುಷಿ.
ಗಡ್ಡ ಯಾವುದೇ ಕಾರಣಕ್ಕೆ ಬಿಟ್ಟುಕೊಳ್ಳಿ. ಇಷ್ಟಕ್ಕೋ, ಇನ್ನೊಬ್ಬರನ್ನು ಅನುಸರಿಸಿಯೋ, ನಿಮ್ಮವರಿಗೆ ಇಷ್ಟ ಎಂದೋ... ಕಾರಣ ಏನೇ ಇರಲಿ. ಆದರೆ ಗಡ್ಡಧಾರಿಗಳಿಗೆ ಶಾಕಿಂಗ್ ಎನ್ನುವಂಥ ಅಧ್ಯಯನವೊಂದು ಇದೀಗ ಬಹಿರಂಗಗೊಂಡಿದೆ. ಅದೇನೆಂದರೆ ಗಡ್ಡದಲ್ಲಿ ಇರುವ ಬ್ಯಾಕ್ಟೀರಿಯಾಗಳು ಮನುಷ್ಯರ ಜೀವಕ್ಕೆ ಅಪಾಯಕಾರಿ ಎನ್ನುವುದು ಈ ಅಧ್ಯಯನ ತಿಳಿಸಿದೆ. ಅಷ್ಟಕ್ಕೂ ನಾಯಿಯ ಕೂದಲು ಅರ್ಥಾತ್ ತುಪ್ಪಳದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇವೆ. ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಮನುಷ್ಯರ ಗಡ್ಡದಲ್ಲಿ ಬ್ಯಾಕ್ಟೀರಿಯಾ ಇವೆ ಎಂದಿದೆ ಈ ಅಧ್ಯಯನ. ಯುರೋಪಿಯನ್ ರೇಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ವರದಿಯ ಪ್ರಕಾರ, ನಾಯಿಗಳ ತುಪ್ಪಳಕ್ಕೆ ಹೋಲಿಸಿದರೆ ಪುರುಷರ ಗಡ್ಡಗಳು ಮಾನವ- ರೋಗಕಾರಕ ತಳಿಗಳನ್ನು ಒಳಗೊಂಡಂತೆ ಹೆಚ್ಚಿನ ಮಟ್ಟದ ಬ್ಯಾಕ್ಟೀರಿಯಾಗಳನ್ನು ಹೊಂದಿದೆ. 18 ಪುರುಷರು ಮತ್ತು 30 ನಾಯಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಎಲ್ಲಾ ಪುರುಷರು ತಮ್ಮ ಗಡ್ಡಗಳಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳನ್ನು ಹೊಂದಿರುವುದು ಇದರಿಂದ ತಿಳಿಸಿದೆ. ಇವುಗಳ ಪೈಕಿ ಕೆಲವು ಅಪಾಯಕಾರಿ ರೋಗಕಾರಕಗಳನ್ನು ಹೊಂದಿರುವುದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಗಡ್ಡಧಾರಿ ಪುರುಷರಲ್ಲಿ ನಾಯಿಗಳ ತುಪ್ಪಳಕ್ಕಿಂತ ಗಮನಾರ್ಹವಾಗಿ ಹೆಚ್ಚಿನ ಬ್ಯಾಕ್ಟೀರಿಯಾದ ಹೊರೆ ಇದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಅಧ್ಯಯನ ಮಾಡಿದ 18 ಪುರುಷರಲ್ಲಿ ಏಳು ಜನರು ಎಂಟರೊಕೊಕಸ್ ಫೆಕಾಲಿಸ್ (ಕರುಳಿನ ಬ್ಯಾಕ್ಟೀರಿಯಂ) ಮತ್ತು ಸ್ಟ್ಯಾಫಿಲೋಕೊಕಸ್ ಔರಿಯಸ್ (ದೇಹದೊಳಗೆ ಸಮಸ್ಯೆ ಉಂಟುಮಾಡುವ ಚರ್ಮದ ಬ್ಯಾಕ್ಟೀರಿಯಂ) ನಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದರು.
ಗಡ್ಡಗಳು ಬೆಚ್ಚಗಿನ, ತೇವಾಂಶವುಳ್ಳ ಮತ್ತು ದಟ್ಟವಾದ ವಾತಾವರಣವನ್ನು ಒದಗಿಸುತ್ತವೆ, ಇದು ಸೂಕ್ಷ್ಮಜೀವಿಗಳು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ, ವಿಶೇಷವಾಗಿ ಮುಖದ ಕೂದಲನ್ನು ನಿಯಮಿತವಾಗಿ ಅಥವಾ ಸರಿಯಾಗಿ ಸ್ವಚ್ಛಗೊಳಿಸದಿದ್ದಾಗ, ಸೈನ್ಸ್ ಅಲರ್ಟ್ ಉಲ್ಲೇಖಿಸಿದ ಅಧ್ಯಯನಗಳು ಹೇಳುತ್ತವೆ. ಗಡ್ಡಗಳಲ್ಲಿ ಕಂಡುಬರುವ ಸೂಕ್ಷ್ಮಜೀವಿಯ ಹೊರೆಗೆ ಹೋಲಿಸಿದರೆ, ನಾಯಿಗಳನ್ನು "ಸ್ವಚ್ಛ" ಎಂದು ಪರಿಗಣಿಸಬಹುದು ಎಂದು ಅಧ್ಯಯನವು ಸೂಚಿಸಿದೆ.
ಅಧ್ಯಯನಕಾರರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ..
ನಿಯಮಿತವಾಗಿ ತೊಳೆಯುವುದು: ನಿಮ್ಮ ತಲೆಯ ಮೇಲಿನ ಕೂದಲಿನಂತೆಯೇ ನಿಮ್ಮ ಗಡ್ಡದ ಕೂದಲನ್ನು ತೊಳೆದು ಕಂಡೀಷನಿಂಗ್ ಮಾಡಿ, ನೀವು ಪ್ರತಿ ಬಾರಿ ಸ್ನಾನ ಮಾಡುವಾಗ ಅಥವಾ ವಾರದಲ್ಲಿ ಕೆಲವು ಬಾರಿ ಸೂಕ್ತವಾಗಿರುತ್ತದೆ.
ಎಕ್ಸ್‌ಫೋಲಿಯೇಶನ್: ಗಡ್ಡದ ಕೆಳಗಿರುವ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸ್ಕ್ರಬ್‌ಗಳು ಅಥವಾ ಉತ್ಪನ್ನಗಳನ್ನು ಬಳಸಬೇಕು.
ಮಾಯಿಶ್ಚರೈಸ್: ಚರ್ಮವನ್ನು ಹೈಡ್ರೀಕರಿಸಿದ ಮತ್ತು ಆರೋಗ್ಯಕರವಾಗಿಡಲು ಗಡ್ಡದ ಎಣ್ಣೆ ಅಥವಾ ಮುಲಾಮು ಬಳಸಿ ಎಂದಿದ್ದಾರೆ ತಜ್ಞರು.
ಹಾಗೆಯೇ ಗುಡ್ನ್ಯೂಸ್ ಕೂಡ ಇದೆ. ಅದೇನೆಂದರೆ, ಗಡ್ಡಗಳು ಬ್ಯಾಕ್ಟೀರಿಯಾವನ್ನು ಹಿಡಿದಿಟ್ಟುಕೊಳ್ಳಬಹುದಾದರೂ, ಸ್ಥಿರವಾದ ಅಂದಗೊಳಿಸುವಿಕೆಯು ಅವುಗಳನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಓಹಿಯೋ ಸ್ಟೇಟ್ ಯೂನಿವರ್ಸಿಟಿ ವೆಕ್ಸ್ನರ್ ವೈದ್ಯಕೀಯ ಕೇಂದ್ರದ ಅಧ್ಯಯನಗಳು ತಿಳಿಸಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.