ಪ್ಲೇಲಿಸ್ಟ್‌ನಲ್ಲಿರುವ ಸಂತೋಷದ ಹಾಡುಗಳನ್ನು ಜನ ಅಂದಾಜು 175 ಬಾರಿ ಕೇಳಿದರೆ, ದುಃಖದ ಟ್ಯೂನ್‌ಗಳನ್ನು ಅಂದಾಜು 800 ಬಾರಿ ಕೇಳುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.
ಡಾ ಕೆ.ಎಸ್. ಪವಿತ್ರ
ಅಮೇಜಾನ್ ಪ್ರೈಂನ ‘ಬಂದಿಷ್ ಬ್ಯಾಂಡಿಟ್’ ಎಂಬ ಸಂಗೀತದ ಧಾರಾವಾಹಿ ನೋಡುತ್ತ ಕುಳಿತಿದ್ದೆ. ಪ್ರೇಮ-ಜಗಳ-ಡಾನ್ಸು-ಸಂಗೀತ ಎಲ್ಲವೂ ಇದ್ದವು. ಆದರೆ ನಮ್ಮ ಹಿನ್ನೆಲೆ-ಅಭಿರುಚಿಗಳನ್ನೆಲ್ಲ ಮೀರಿ, ಮನೆಯ ಎಲ್ಲರೂ ತಂತಮ್ಮ ಕೆಲಸ ಬಿಟ್ಟು ಕೆಲಕ್ಷಣ ಟಿ.ವಿ.ಯ ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದು ಮಾತ್ರ ‘ವಿರಹ್’ ಎನ್ನುವ ಒಂದು ಹಾಡು. ದುಃಖದ ಈ ‘ಟ್ಯೂನ್’ ಕೇಳಿ ಮನಸ್ಸಿಗೆ ಒಂಥರಾ ದುಃಖ-ಒಂಥರಾ ಸಂತಸ! ಆದರೆ ಮತ್ತೆ ಮತ್ತೆ ಕೇಳೋಣ ಎಂಬ ಭಾವ. ನಿಜವಾಗಿ ದುಃಖ ತರುವ ಘಟನೆ ನಡೆದಾಗ ನಾವು ಆದಷ್ಟುಬೇಗ ಅದರಿಂದ ಹೊರಬರಬೇಕು, ಅದನ್ನು ಮರೆತು ಬಿಡಬೇಕು ಎಂದು ಕಷ್ಟಪಡುತ್ತೇವಲ್ಲ, ಅದಕ್ಕೆ ವಿರುದ್ಧವಾಗಿ ಮತ್ತೊಮ್ಮೆ ಕೇಳೋಣ ಎಂಬ ಹಾತೊರೆಯುವಿಕೆ. ಏಕೆ ಹೀಗೆ?
ಪ್ಲೇಲಿಸ್ಟ್‌ನಲ್ಲಿರುವ ಸಂತೋಷದ ಹಾಡುಗಳನ್ನು ಜನ ಅಂದಾಜು 175 ಬಾರಿ ಕೇಳಿದರೆ, ದುಃಖದ ಟ್ಯೂನ್‌ಗಳನ್ನು ಅಂದಾಜು 800 ಬಾರಿ ಕೇಳುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಮನೋವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಇಂತಹ ದುಃಖದ ಟ್ಯೂನ್‌ಗಳನ್ನು ಜನರು ಸೌಂದರ್ಯ, ‘ಆಹ್’ ಎನ್ನುವ ಅದ್ಭುತದ ಭಾವ, ಒಂಥರಾ ‘ಆನಂದ’ ‘ಟ್ರಾನ್ಸ್’ ಗಳ ಅನುಭವಗಳೊಂದಿಗೆ ಹೊಂದಿಸುತ್ತಾರೆ. ಕನ್ನಡದ ಭಾವಗೀತೆಗಳು-ಸಿನೆಮಾ ಗೀತೆಗಳು, ಹಿಂದಿ ಬಾಲಿವುಡ್ ಗೀತೆಗಳು, ಶಾಸ್ತ್ರೀಯ ಸಂಗೀತದ ಕೆಲವು ರಾಗಗಳು, ಸ್ಪ್ಯಾನಿಷ್‌ನ ಫ್ಲಾಮೆಂಕೋ, ಪೋರ್ಚುಗೀಸ್ ಫ್ಯಾಡೋ, ಐರಿಷ್‌ನ ಲ್ಯಾಮೆಂಟ್, ಅಮೇರಿಕೆಯ ಕಂಟ್ರಿ ಮ್ಯೂಸಿಕ್, ಕೊನೆಗೆ ಮಕ್ಕಳನ್ನು ಮಲಗಿಸಲು ತಾಯಂದಿರು ಹಾಡುವ ಲಾಲಿ ಹಾಡುಗಳು ಇವೆಲ್ಲವೂ ದುಃಖದ, ಮನಸ್ಸನ್ನು ಆದ್ರ್ರಗೊಳಿಸುವಂತಹ ಧ್ವನಿಗಳೇ.
ಹಾಗೆ ನೋಡಿದರೆ ಈ ಭಾವ ಬರೀ ಸಂಗೀತಕ್ಕಷ್ಟೇ ಸೀಮಿತವೂ ಅಲ್ಲ. ಮಳೆ ಸುರಿಯುವ, ಸೂರ್ಯ ಮಂಕಾಗಿರುವ ದಿನಗಳು, ದುಃಖಾಂತದ ಟ್ರ್ಯಾಜಿಡಿ ಡ್ರಾಮಾ-ಕಾದಂಬರಿ-ಸಿನಿಮಾಗಳು, ಬೇಗ ಮುದುಡುವ ಪಾರಿಜಾತ/ಚೆರ್ರಿ ಹೂಗಳು, ಇವೆಲ್ಲವನ್ನೂ ನಮ್ಮ ಮನಸ್ಸುಗಳು ಇಷ್ಟಪಡುತ್ತವೆ! ತುಂಬಾ ‘ಸೀರಿಯಸ್ಸಾ’ಗಿ ಯೋಚನೆ ಮಾಡಿ ತತ್ತ$್ವಗಳನ್ನು ಕಲಿಯುವ-ಹೇಳುವ-ರೂಪಿಸುವ ತತ್ತ$್ವಜ್ಞಾನಿಗಳ ಪ್ರಕಾರ ಇದು ‘ಪ್ಯಾರಡಾಕ್ಸ್ ಆಫ್ ಟ್ರ್ಯಾಜಿಡಿ’. ಅಂದರೆ ನಮ್ಮ ಎಂದಿನ ನಡವಳಿಕೆಗೆ ವಿರುದ್ಧವಾಗಿ ಜೀವನದಲ್ಲಿ ‘ದುಃಖ ಬೇಡ’ ಎನ್ನುವ ನಾವು ಸಂಗೀತದಲ್ಲಿ ಮಾತ್ರ ‘ಸ್ಯಾಡ್ ಸಾಂಗ್’ ಬೇಕು ಎನ್ನುವುದು!
ಶ್! ಇದು ‘ಸೃಷ್ಟಿ’ಯ ಸಮಯ: ಡಾ ಕೆ.ಎಸ್ ಪವಿತ್ರ ಮಾತು
18ನೇ ಶತಮಾನದ ಯೆಹೂದಿಗಳ ರಾರಯಬ್ಬಿ ನಹಮಾನ್ ಬ್ರಾಟ್‌ಸ್ಲಾವ್ ಹೇಳಿದನಂತೆ- ‘ಒಡೆದ ಹೃದಯಗಳೇ ನಮಗೆ ಮತ್ತೊಬ್ಬರೊಡನೆ-ಸಂಗೀತದ ಜಗತ್ತಿನೊಡನೆ ಸಂಬಂಧಗಳನ್ನು ಬೆಸೆಯುವಂತೆ ಮಾಡುತ್ತವೆ!’ ಸಂಗೀತಕ್ಕೂ-ವಿರಹ/ಶೋಕ/ದುಃಖಗಳಿಗೂ ಏಕಿಷ್ಟುಗಾಢ ಸಂಬಂಧ? ‘ಹಾತೊರೆಯುವಿಕೆ’ ಮತ್ತು ‘ನರಳುವಿಕೆ’ ಇವೆರಡೂ ಒಟ್ಟಿಗೇ ಹುಟ್ಟುವುದು ಸಂಗೀತದಲ್ಲಿ ಸಾಧ್ಯ. ಭಗ್ನ ಪ್ರೇಮಿಗಳಿಗೂ ಕೂಡ ದುಃಖದ ಟ್ಯೂನ್‌ಗಳನ್ನು ಕೇಳುವುದು ಸಂತಸವನ್ನೇ ತರುತ್ತದೆ, ಪ್ರೇಮದ ವಿಫಲತೆಯನ್ನು ಮರೆಸುತ್ತದೆ ಎಂಬುದು ಕುತೂಹಲಕಾರಿ ಸಂಗತಿ. ಇದಕ್ಕೆ ವೈಜ್ಞಾನಿಕ ಕಾರಣಗಳನ್ನೂ ಹುಡುಕಿದ್ದಾರೆ. ‘ಸ್ಯಾಡ್ ಟ್ಯೂನ್’ ಹಿಂದಿನ ಸಿಹಿ ನೆನಪುಗಳನ್ನು ‘ಟ್ರಿಗರ್’ ಮಾಡುತ್ತದಂತೆ.
ಮಿದುಳಿನಲ್ಲಿ ತಾಯಿ-ಮಗುವಿಗೆ ಹಾಲೂಡಿಸುವಾಗ ಸ್ರವಿಸಬೇಕಾದ ಪ್ರೊಲ್ಯಾಕ್ಟಿನ್ -ಆಕ್ಸಿಟೋಸಿನ್ ರಸದೂತಗಳು ದುಃಖದ ಧ್ವನಿಯ ಸಂಗೀತ ಕೇಳುವಾಗ ಹೆಚ್ಚುತ್ತವೆ. ಹಾಗಾಗಿಯೇ ‘ದುಃಖದ ಟ್ಯೂನ್’ ಗಳು ನಮ್ಮ ‘ಮೂಡ್’ ಇಳಿಸುವ ಬದಲು ಏರಿಸುತ್ತವೆ ಎನ್ನುವುದು ಒಂದು ವೈಜ್ಞಾನಿಕ ಸತ್ಯವೇ.
ಹಾಗಾಗಿ ನೀವು ನಿಮಗಿಷ್ಟವಾದ ಅಳು ಧ್ವನಿಯ ಹಿಂದಿ-ಕನ್ನಡ ಚಿತ್ರಗೀತೆ ಕೇಳುವಾಗ ಯಾರಾದರೂ ಬಂದು ‘ಅಯ್ಯೋ ಅದೇನು ಹಾಡ್ತಾ ಇದ್ದಾರೋ ಅಳ್ತಾ ಇದ್ದಾರೋ/ಯಾಕೆ ಈ ಥರಾ ಗೋಳಿನ ಸಂಗೀತ ಕೇಳ್ತಾ ಇದ್ದೀಯ’ ಅಂದರೆ ನಕ್ಕು, ಅವರನ್ನೂ ಪಕ್ಕ ಕುಳ್ಳಿರಿಸಿ, ‘ಸ್ಯಾಡ್, ಆದರೂ ಮೂಡ್ ಏರಿಸುವ ಹಾಡು’ ಕೇಳುವಂತೆ ಮಾಡಿ!