
ನಿಂತಲ್ಲೇ, ಕುಳಿತಲ್ಲೇ ಗೊರಕೆ (Snoring) ಹೊಡೆಯುವುದು ಹಲವರ ಅಭ್ಯಾಸ. ಬಸ್, ಟ್ರೈನ್, ವೈಟಿಂಗ್ ರೂಮ್, ಆಫೀಸ್, ಕ್ಲಾಸ್ ಹೀಗೆ ಎಲ್ಲಿದ್ರೂ ನಿದ್ದೆಯಂತೂ ಬರುತ್ತದೆ. ನಿದ್ದೆ ಮಾಡುವುದು ಯಾರಿಗೂ ಕಿರಿಕಿರಿಯಲ್ಲ. ಆದರೆ, ದೊಡ್ಡದಾಗಿ ಗೊರಕೆ ಹೊಡೆಯುತ್ತಾ ಮಲಗುವುದು ಸುತ್ತಮುತ್ತಲು ಇರುವವರನ್ನೆಲ್ಲಾ ಡಿಸ್ಟರ್ಬ್ ಮಾಡುತ್ತದೆ. ಎಲ್ಲರೂ ನೋಡಿಕೊಂಡು ಅಪಹಾಸ್ಯ ಮಾಡುವಂತಾಗುತ್ತದೆ. ಅಕ್ಕಪಕ್ಕ ಮಲಗಿದವರಿಗಂತೂ ರಾತ್ರಿ ಪೂರ್ತಿ ನಿದ್ದೆಯೇ ಇಲ್ಲ. ಗೊರಕೆ ಹೊಡೆಯುವ ಅಭ್ಯಾಸದಿಂದ ಹಲವರು ಮುಜುಗರಕ್ಕೀಡಾಗುತ್ತಾರೆ. ಹಾಗಿದ್ರೆ ಗೊರಕೆ ಎಂದರೇನು ? ಗೊರಕೆ ಹೊಡೆಯಲು ಕಾರಣವೇನು ? ಗೊರಕೆ ಹೊಡೆಯುವುದು ಕಡಿಮೆ ಮಾಡಲು ಏನು ಮಾಡಬಹುದು ತಿಳಿಯೋಣ.
ಗೊರಕೆ ಎಂದರೇನು ?
ಉಸಿರಾಟದ ಕ್ರಿಯೆಯಲ್ಲಿ ಆಗುವ ಕಂಪನದಿಂದಾಗಿ ಉಂಟಾಗುವ ಶಬ್ದವನ್ನು ಗೊರಕೆ ಎನ್ನುತ್ತಾರೆ. ಗಾಳಿಯ ಚಲನೆಗೆ ತೊಂದರೆಯುಂಟಾದಾಗ ಗೊರಕೆಯ ಶಬ್ದ ಕೇಳಿ ಬರುತ್ತದೆ. ಗಂಟಲಿನ ಸ್ನಾಯುಗಳ ಸೆಳೆತದಿಂದ ಮೂಗಿನ ಹೊಳ್ಳೆಗಳಲ್ಲಿ ಗಾಳಿ ಸರಾಗವಾಗಿ ಓಡಾಡಲು ಕಷ್ಟವಾಗುತ್ತದೆ. ಹೀಗಾದಾಗ ಗಂಟಲಿನ ಭಾಗದಲ್ಲಿ ಕೊಬ್ಬಿನಂಶ ಶೇಖರಣೆಯಾಗಿ, ಗಾಳಿಯನ ಚಲನೆ ನಿಯಮಿತವಾಗಿರುವುದಿಲ್ಲ. ಇದರಿಂದ ಗೊರಕೆಯ ಶಬ್ದ ಕೇಳುತ್ತದೆ.
ಗೊರಕೆ ಹೊಡೆಯಲು ಕಾರಣವೇನು ?
ಗೊರಕೆ ಹೊಡೆಯುವ ಅಭ್ಯಾಸ (Habit) ಶುರುವಾಗಲು ಹಲವಾರು ಕಾರಣಗಳಿವೆ. ಜನರು ಗೊರಕೆ ಹೊಡೆಯಲು ಮೂರು ಪ್ರಮುಖ ಕಾರಣಗಳೆಂದರೆ ಅಧಿಕ ತೂಕ, ಹೆಚ್ಚು ಧೂಮಪಾನ ಮಾಡುವುದು, ಹೆಚ್ಚು ಮದ್ಯಪಾನ ಮಾಡುವುದಾಗಿದೆ. ಗೊರಕೆ ಹೊಡೆಯುವವರು ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ, ಗೊರಕೆ ಹೊಡೆಯುವ ಅಭ್ಯಾಸ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ನೀವು ಮಲಗುವ ಮೊದಲು ಮದ್ಯಪಾನ, ಧೂಮಪಾನ ಮಾಡಬೇಡಿ.
ಗೊರಕೆ ಹೊಡೀತೀರಾ? ಇಲ್ಲಿದೆ ಮನೆ ಮದ್ದು..
ಕೆಲವೊಮ್ಮೆ ನಾವು ತಿನ್ನುವ ಕೆಲವು ಆಹಾರ (Food)ಗಳಿಂದಾಗಿ ಗೊರಕೆಯ ಸಮಸ್ಯೆ ಉಂಟಾಗುತ್ತದೆ. ಕೆಲವೊಂದು ಆಹಾರಗಳನ್ನು ತಿಂದಾಗ ಗಂಟಲಿನ ಸ್ನಾಯು ಸಡಿಲಗೊಂಡು, ಉರಿಯೂತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮಲಗುವ ಮುನ್ನ ಸಕ್ಕರೆ, ಸಕ್ಕರೆ ಪಾನೀಯಗಳು, ಗೋಧಿಯಿಂದ ಮಾಡಿದ ಆಹಾರ, ಹಾಲಿನ ಉತ್ಪನ್ನಗಳು, ಮೊಟ್ಟೆ (Egg), ಮಾಂಸದ ಸೇವನೆ ಮಾಡುವುದನ್ನು ತಪ್ಪಿಸಿ. ಗೊರಕೆ ಹೊಡೆಯುವುದು ತಪ್ಪಿಸಲು ಇವಿಷ್ಟಲ್ಲದೆ ಇನ್ನೇನು ಮಾಡಬಹುದು ?
ಬೆನ್ನಿನ ಮೇಲೆ ಮಲಗಬೇಡಿ
ನೀವು ನಿಮ್ಮ ಬೆನ್ನಿನ ಮೇಲೆ ಎಂದರೆ ಮೇಲಿಗೆ ಮುಖ ಮಾಡಿ ಮಲಗಿದ್ದರೆ, ಗೊರಕೆ ಹೊಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾಕೆಂದರೆ ಈ ರೀತಿ ಮಲಗುವುದರಿಂದ ಗಂಟಲಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ನಿಮ್ಮ ಅರಿವಿಲ್ಲದೆ ಗೊರಕೆ ಹೊಡೆಯಲು ಆರಂಭಿಸುತ್ತೀರಿ. ಹೀಗಾಗಿ ಯಾವತ್ತೂ ಮಲಗುವಾಗ ಮೇಲಿಗೆ ಮುಖ ಮಾಡಿ ಮಲಗಬೇಡಿ. ಬದಿಗೆ ಮುಖ ಮಾಡಿ ಮಲಗಿ.ಇದರಿಂದ ಗೊರಕೆ ಹೊಡೆಯುವ ಸಾಧ್ಯತೆ ಕಡಿಮೆಯಾಗುತ್ತದೆ.
ಪತಿಯ ಗೊರಕೆ ಸಮಸ್ಯೆಗೆ ಹೀಗ್ ಮಾಡಿ ನೋಡಿ
ಬೊಜ್ಜು ಕರಗಿಸಿಕೊಳ್ಳಿ
ಸ್ಥೂಲಕಾಯದವರಲ್ಲಿ ಹೆಚ್ಚಾಗಿ ಗೊರಕೆ ಹೊಡೆಯುವ ಸಮಸ್ಯೆ ಕಂಡು ಬರುತ್ತದೆ. ಅಧಿಕ ತೂಕ (Over Weight), ಬೊಜ್ಜು ಹೊಂದಿರುವವರ ಮೈಯಲ್ಲಿ ಹೆಚ್ಚು ಕೊಬ್ಬಿನಾಂಶ ಇರುವುದರಿಂದ ಈ ಸಮಸ್ಯೆಯುಂಟಾಗುತ್ತದೆ. ಹೀಗಾಗಿ ಮೈ ತೂಕ ಕರಗಿಸಿಕೊಳ್ಳಲು ಪ್ರಯತ್ನಿಸಿ. ಬೊಜ್ಜು ಕರಗಿಸಿಕೊಳ್ಳುವುದರಿಂದ ಬೊಜ್ಜಿನ ಸಮಸ್ಯೆಯೂ ಕಡಿಮೆಯಾಗುತ್ತದೆ.
ಸಾಕಷ್ಟು ನೀರು ಕುಡಿಯಿರಿ
ಗಂಟಲು, ಮೂಗು ಮತ್ತು ಮೂಗಿನ ಕುಳಿ ಒಣಗಿದಂತೆ ಅನುಭವವಾಗುತ್ತಿದೆಯೇ ? ಇದು ಕಿರಿಕಿರಿ ಮತ್ತು ಉರಿಯೂತಕ್ಕೆ ಕಾರಣವಾಗಬಹುದು ಮತ್ತು ನಿದ್ದೆ ಮಾಡುವ ಸಂದರ್ಭದಲ್ಲಿ ಇದು ಗೊರಕೆಗೆ ಕಾರಣವಾಗಬಹುದು. ಹೀಗಾಗಿ ಹಗಲಿನಲ್ಲಿ ಸಾಕಷ್ಟು ನೀರು (Water) ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ರಾತ್ರಿ ಮಲಗುವ ಮುನ್ನವೂ ಬಾಯಾರಿಕೆ ನೀಗುವಂತೆ ನೀರು ಕುಡಿದುಕೊಳ್ಳಿ.
ಮಲಗುವ ಕೋಣೆಯಲ್ಲಿ ತೇವಾಂಶವಿರಲಿ
ಮಲಗುವಾಗ ಯಾವಾಗಲೂ ಉಸಿರಾಡಲು ಸಾಧ್ಯವಾಗಬೇಕು. ಉಸಿರಾಟಕ್ಕೆ ಅಡಚಣೆಯುಂಟಾದಾಗ ಗೊರಕೆ ಹೊಡೆಯುತ್ತಾರೆ. ಹೀಗಾಗಿ ಮಲಗುವ ಕೋಣೆಯಲ್ಲಿ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ. ಕೊಠಡಿಯಲ್ಲಿ ಗಾಳಿ ಓಡಾಡದೆ ಒಣ ಒಣ ಆಗಿದ್ದಾಗ, ಇವುಗಳು ಮೂಗಿನ ನಾಳ ಒಣಗಿ ಹೋಗುವಂತೆ ಮಾಡುತ್ತದೆ. ಸ್ನಾಯುಗಳು ಕಂಪಿಸುವಂತೆ ಮಾಡುತ್ತದೆ. ಹೀಗಾಗಿ ಮಲಗುವ ಕೋಣೆಯಲ್ಲಿ ಹ್ಯೂಮಿಡಿಫೈಯರ್ ಅಳವಡಿಸುವುದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.