ಚೀನಾದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ದಿನವೊಂದಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಈ ಮಧ್ಯೆ ಉಸಿರಾಟ ವೈಫಲ್ಯದಿಂದಾಗಿ ಮೃತಪಟ್ಟರೆ ಮಾತ್ರ ಅದನ್ನು ಅಧಿಕೃತವಾಗಿ ಕೋವಿಡ್ ಸಾವು ಎಂದು ಪರಿಗಣಿಸಲಾಗುವುದು ಎಂದು ಚೀನಾ ಸರ್ಕಾರ ಹೇಳಿದೆ.
ಬೀಜಿಂಗ್: ವಿಶ್ವಕ್ಕೇ ಕೋವಿಡ್ ಹಬ್ಬಿಸಿದ ಕಳಂಕ ಹೊತ್ತಿರುವ ಚೀನಾದಲ್ಲಿ ಈಗ ಕೋವಿಡ್ ತಾಂಡವ ಆಡುತ್ತಿದೆ. ದೇಶದಲಿ ಸದ್ಯ ಕೋವಿಡ್‌ನಿಂದ ಸಂಭವಿಸುತ್ತಿರುವ ಸಾವುಗಳನ್ನು (Death) ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಆಸ್ಪತ್ರೆಗಳೂ, ಶವಾಗಾರಗಳೂ ಕಿಕ್ಕಿರಿದು ತುಂಬಿವೆ. ಸ್ಮಶಾನಗಳಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ (Cremation) ಹಲವು ದಿನ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ. ಇದೇ ವೇಳೆ, ಆಸ್ಪತ್ರೆಗಳು ಕೂಡ ಭರ್ತಿ ಆಗಿವೆ. ಆಸ್ಪತ್ರೆಯ ಐಸಿಯುಗಳಲ್ಲಿನ ಸಾಲು ಸಾಲು ರೋಗಿಗಳ (Patients) ದೃಶ್ಯವೂ ವೈರಲ್ ಆಗಿದೆ. ರೋಗಿಗಳು ಉಸಿರಾಟದ ಸಮಸ್ಯೆ ಕಾರಣ ವೆಂಟಿಲೇಟರ್ ಧರಿಸಿ ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ.
ಚೀನಾ ಸರ್ಕಾರ ಅಧಿಕೃತ ಸಾವು ಹಾಗೂ ಸೋಂಕಿನ ಅಂಕಿಅಂಶಗಳನ್ನು ನೀಡುತ್ತಿಲ್ಲ. ಆದರೆ ಕೆಲವು ಸ್ಮಶಾನಗಳ ನಿರ್ವಾಹಕರು, 'ನಾವು ಕೆಲ ದಿನಗಳಿಂದ 24 ಗಂಟೆ ಶವಸಂಸ್ಕಾರ ಮಾಡುತ್ತಿದ್ದೇವೆ. ಆದರೂ ಶವಗಳ ಸಾಲು ಕರಗುತ್ತಿಲ್ಲ. ನಮ್ಮಿಂದ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ನಿತ್ಯ 30-40 ಶವ ಬರುತ್ತಿದ್ದರೆ, ಈಗ ಸರಾಸರಿ 200ಕ್ಕೂ ಹೆಚ್ಚು ಶವಗಳು ಬರುತ್ತಿವೆ’ ಎಂದು ಹೇಳಿಕೊಂಡಿದ್ದಾರೆ ಎಂದು ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
undefined
ಚೀನಾದಲ್ಲಿ ಕೋವಿಡ್ ಅಬ್ಬರ; ಮುಂದಿನ 3 ತಿಂಗಳಲ್ಲಿ ಶೇ.60 ಚೀನಿಯರಿಗೆ ಸೋಂಕು ಸಾಧ್ಯತೆ
ಗಂಟೆಗಳ ಲೆಕ್ಕದಲ್ಲಿ ಸೋಂಕು ಡಬಲ್
'ಚೀನಾದಲ್ಲೀಗ ದಿನಗಳ ಲೆಕ್ಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿಲ್ಲ, ಬದಲಿಗೆ ಗಂಟೆಗಳ ಲೆಕ್ಕದಲ್ಲಿ ದುಪ್ಪಟ್ಟಾಗುತ್ತಿದೆ. ಕೋವಿಡ್ ಹರಡುವ ‘ಆರ್’ ದರವನ್ನು ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ. ಕೆಲ ಪ್ರದೇಶಗಳಲ್ಲಿ 2000ಕ್ಕೂ ಹೆಚ್ಚು ಶವಗಳು ಸಂಸ್ಕಾರಕ್ಕೆ ಕಾಯುತ್ತಿವೆ. ಚೀನಾದಿಂದಾಗಿ ಮತ್ತೆ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಫೀಗಲ್ ಡಿಂಗ್ ಎಚ್ಚರಿಸಿದ್ದಾರೆ.
ಮಾತ್ರೆಗಳ ಅಭಾವ
ಕೊರೋನಾದಿಂದ ಪಾರಾಗಲು ದೇಶದ ಎಲ್ಲೆಡೆ ರೋಗನಿರೋಧಕ ಐಬುಪ್ರೊಫೆನ್ ಮಾತ್ರೆಗಳನ್ನು ಮಾರಲಾಗುತ್ತಿದೆ. ಜನರು ಮುಗಿಬಿದ್ದು ಅವುಗಳನ್ನು ಕೊಳ್ಳುತ್ತಿದ್ದು, ಬಹುತೇಕ ಕಡೆ ಮಾತ್ರೆಗಳು (Tablets) ಸಿಗುತ್ತಿಲ್ಲ ಎಂದು ವರದಿಯಾಗಿದೆ.
ಉಸಿರಾಟ ವೈಫಲ್ಯದಿಂದ ಮೃತಪಟ್ಟರೆ ಮಾತ್ರ ಕೋವಿಡ್ ಲೆಕ್ಕ !
ಉಸಿರಾಟ ವೈಫಲ್ಯದಿಂದಾಗಿ ಮೃತಪಟ್ಟರೆ ಮಾತ್ರ ಅದನ್ನು ಅಧಿಕೃತವಾಗಿ ಕೋವಿಡ್ ಸಾವು ಎಂದು ಪರಿಗಣಿಸಲಾಗುವುದು ಎಂದು ಚೀನಾ ಸರ್ಕಾರ ಸ್ಪಷ್ಟಪಡಿಸಿದೆ. ಚೀನಾದಲ್ಲಿ ತೀವ್ರವಾಗಿ ಹರಡುವ ಒಮಿಕ್ರೋನ್‌ನ ಬಿಎ.5.2 ಹಾಗೂ ಬಿ.ಎಫ್.7 ತಳಿಯ ಸ್ಫೋಟವಾಗಿದ್ದು, ಭಾರೀ ಸಂಖ್ಯೆಯಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ಹಾಗೂ ಸಾವುಗಳು ವರದಿಯಾಗುತ್ತಿವೆ. ಆದರೆ ಸೋಂಕಿತರ ಸಾವಿನ ಪ್ರಮಾಣ ಕಡಿಮೆಯಿದ್ದಂತೆ ತೋರಿಸಲು ಚೀನಾ, ಕೋವಿಡ್ ಸೋಂಕಿತರು ಹೃದಯಾಘಾತ ಅಥವಾ ಇನ್ಯಾವುದೇ ಕಾರಣದಿಂದಾಗಿ ಮೃತಪಟ್ಟರೆ ಅದನ್ನು ಕೋವಿಡ್ ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಕೇವಲ ಉಸಿರಾಟ ವೈಫಲ್ಯದಿಂದ ಮೃತಪಟ್ಟವರನ್ನು ಮಾತ್ರ ಕೋವಿಡ್ ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಚೀನಾದ ಆರೋಗ್ಯಇಲಾಖೆ ಸ್ಪಷ್ಟಪಡಿಸಿದೆ.
ಚೀನಾ ಅತಂಕದ ಬೆನ್ನಲ್ಲೇ ಕೋವಿಡ್ ಪರೀಕ್ಷೆಗೆ ಕೇಂದ್ರದ ಸೂಚನೆ, ಜೊತೆಗೊಂದು ಎಚ್ಚರಿಕೆ!
ಕೋವಿಡ್‌ನಿಂದ ರಕ್ಷಣೆಗೆ ವಿಟಮಿನ್ ಸಿ ಅಗತ್ಯ, ನಿಂಬೆಗೆ ಭಾರೀ ಡಿಮ್ಯಾಂಡ್
ಚೀನಾದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆ ಚೀನಾ ಹಾಗೂ ಇತರ ರಾಷ್ಟ್ರಗಳಲ್ಲಿ ನಿಂಬೆ ಹಣ್ಣಿನ ಬೆಲೆಯೂ ಏರಿಕೆಯಾಗಿದೆ. ಇದಕ್ಕೆ ಕಾರಣ ಚೀನಿಯರು ಪಡೆದಿರುವ ಲಸಿಕೆ ತೀರಾ ಕಳಪೆ ಮಟ್ಟದ್ದಾಗಿದೆ. ಇಷ್ಟೇ ಅಲ್ಲ ಚೀನಿಯರಲ್ಲಿ ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇದೆ. ಇದಕ್ಕಾಗಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ನಿಂಬೆ ಹಣ್ಣನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ನಿಂಬೆ ಹಣ್ಣಿನ ಬೆಲೆ ಏರಿಕೆಯಾಗಿದೆ.
ಚೀನಾದಲ್ಲಿ ಸಾಮಾನ್ಯ ದಿನಗಳಲ್ಲಿ 1 ಕೆಜಿ ನಿಂಬೆ ಹಣ್ಣಿಗೆ 70 ರಿಂದ 80 ರೂಪಾಯಿ. ಆದರೆ ಕೋವಿಡ್ ಕಾರಣದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೊರಟಿರುವ ಚೀನಿಯರಿಂದ ಇದೀಗ ನಿಂಬೆ ಹಣ್ಣಿನ ಬೆಲೆ 140 ರಿಂದ 150 ರೂಪಾಯಿಗೆ ಏರಿಕೆಯಾಗಿದೆ. ಚೀನಾದಲ್ಲಿ ಮಾತ್ರವಲ್ಲ ಇತರ ರಾಷ್ಟ್ರಗಳಲ್ಲೂ ನಿಂಬೆ ಹಣ್ಣಿನ ಬೆಲೆ ಏರಿಕೆಯಾಗಿದೆ. ಚೀನಾ ಇದೀಗ ಹೆಚ್ಚು ನಿಂಬೆ ಹಣ್ಣನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.