ಕೋವಿಡ್ ಸ್ಫೋಟದಿಂದ ಚೀನಾದಲ್ಲಿ ಹೆಣಗಳ ರಾಶಿಯಾಗುತ್ತಿದೆ. ಆಸ್ಪತ್ರೆ ಸಿಗದೆ ಜನರು ಪರದಾಡುತ್ತಿದ್ದಾರೆ. ಬೆಡ್ ಇಲ್ಲದೆ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಇದರ ನಡುವೆ ಚೀನಾ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ನಿಂಬೆ ಹಣ್ಣಿನ ಬೆಲೆ ಏರಿಕೆಯಾಗುತ್ತಿದೆ. ಚೀನಾದ ಕೋವಿಡ್ ಸ್ಫೋಟಕ್ಕೂ ನಿಂಬೆ ಹಣ್ಣಿನ ಬೆಲೆ ಏರಿಕೆಗೂ ಸಂಬಂಧವಿದೆಯಾ?
ನವದೆಹಲಿ(ಡಿ.20): ಚೀನಾದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಈ ಹಿಂದಿನ ಭೀಕರ ಪರಿಸ್ಥಿತಿ ಚೀನಾದ ಗಲ್ಲಿ ಗಲ್ಲಿಯಲ್ಲಿ ಕಾಣಿಸಿಕೊಂಡಿದೆ. ಆಸ್ಪತ್ರೆಗಳು ಭರ್ತಿಯಾಗಿದೆ. ಬೆಡ್ ಸಿಗದೆ ಆಸ್ಪತ್ರೆ ವರಾಂಡದಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗುತ್ತಿದೆ. ಇದೀಗ ಹೆಣಗಳ ಅಂತ್ಯಸಂಸ್ಕಾರಕ್ಕೆ 3 ದಿನ ಕಾಯುವಂತಾಗಿದೆ. ಚೀನಾದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆ ಚೀನಾ ಹಾಗೂ ಇತರ ರಾಷ್ಟ್ರಗಳಲ್ಲಿ ನಿಂಬೆ ಹಣ್ಣಿನ ಬೆಲೆಯೂ ಏರಿಕೆಯಾಗಿದೆ. ಇದಕ್ಕೆ ಕಾರಣ ಚೀನಿಯರು ಪಡೆದಿರುವ ಲಸಿಕೆ ತೀರಾ ಕಳಪೆ ಮಟ್ಟದ್ದಾಗಿದೆ. ಇಷ್ಟೇ ಅಲ್ಲ ಚೀನಿಯರಲ್ಲಿ ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇದೆ. ಇದಕ್ಕಾಗಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ನಿಂಬೆ ಹಣ್ಣನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ನಿಂಬೆ ಹಣ್ಣಿನ ಬೆಲೆ ಏರಿಕೆಯಾಗಿದೆ.
ಚೀನಾದಲ್ಲಿ ಸಾಮಾನ್ಯ ದಿನಗಳಲ್ಲಿ 1 ಕೆಜಿ ನಿಂಬೆ ಹಣ್ಣಿಗೆ 70 ರಿಂದ 80 ರೂಪಾಯಿ. ಆದರೆ ಕೋವಿಡ್ ಕಾರಣದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೊರಟಿರುವ ಚೀನಿಯರಿಂದ ಇದೀಗ ನಿಂಬೆ ಹಣ್ಣಿನ ಬೆಲೆ 140 ರಿಂದ 150 ರೂಪಾಯಿಗೆ ಏರಿಕೆಯಾಗಿದೆ. ಚೀನಾದಲ್ಲಿ ಮಾತ್ರವಲ್ಲ ಇತರ ರಾಷ್ಟ್ರಗಳಲ್ಲೂ ನಿಂಬೆ ಹಣ್ಣಿನ ಬೆಲೆ ಏರಿಕೆಯಾಗಿದೆ. ಚೀನಾ ಇದೀಗ ಹೆಚ್ಚು ನಿಂಬೆ ಹಣ್ಣನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.
undefined
ಚೀನಾ ಕೋವಿಡ್ ಸ್ಫೋಟದಿಂದ ಸೋಂಕಿತರಿಗೆ ಸಿಗುತ್ತಿಲ್ಲ ಆಸ್ಪತ್ರೆ, ಭಾರತದ ಅಲರ್ಟ್!
ಚೀನಾದಲ್ಲಿ ನಿಂಬೆ ಹಣ್ಣಿನ ಜೊತೆಗೆ ಕಿತ್ತಳೆ ಹಾಗೂ ಪಿಯರ್ಸ್ ಹಣ್ಣಿಗೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಹೀಗಾಗಿ ಇ ಕಾಮರ್ಸ್ ಮೂಲಕವೂ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಬೀಜಿಂಗ್, ಶಾಂಘೈ ಸೇರಿದಂತೆ ಚೀನಾದ ಹಲವು ಪ್ರಾಂತ್ಯಗಳಿಂದ ನಿಂಬೆ ಹಣ್ಣಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
ಚೀನಾ ಸರ್ಕಾರ ಅಧಿಕೃತ ಸಾವು ಹಾಗೂ ಸೋಂಕಿನ ಅಂಕಿಅಂಶಗಳನ್ನು ನೀಡುತ್ತಿಲ್ಲ. ಆದರೆ ಕೆಲವು ಸ್ಮಶಾನಗಳ ನಿರ್ವಾಹಕರು, ‘ನಾವು ಕೆಲ ದಿನಗಳಿಂದ 24 ಗಂಟೆ ಶವಸಂಸ್ಕಾರ ಮಾಡುತ್ತಿದ್ದೇವೆ. ಆದರೂ ಶವಗಳ ಸಾಲು ಕರಗುತ್ತಿಲ್ಲ. ನಮ್ಮಿಂದ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ನಿತ್ಯ 30-40 ಶವ ಬರುತ್ತಿದ್ದರೆ, ಈಗ ಸರಾಸರಿ 200ಕ್ಕೂ ಹೆಚ್ಚು ಶವಗಳು ಬರುತ್ತಿವೆ’ ಎಂದು ಹೇಳಿಕೊಂಡಿದ್ದಾರೆ ಎಂದು ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
90 ದಿನದಲ್ಲಿ ಸ್ಮಶಾನವಾಗುತ್ತಾ ಚೀನಾ? ಕರ್ಮ ಬಿಡೋಲ್ಲ ಬಿಡಿ!
ಗಂಟೆಗಳ ಲೆಕ್ಕದಲ್ಲಿ ಸೋಂಕು ಡಬಲ್:
‘ಚೀನಾದಲ್ಲೀಗ ದಿನಗಳ ಲೆಕ್ಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿಲ್ಲ, ಬದಲಿಗೆ ಗಂಟೆಗಳ ಲೆಕ್ಕದಲ್ಲಿ ದುಪ್ಪಟ್ಟಾಗುತ್ತಿದೆ. ಕೋವಿಡ್ ಹರಡುವ ‘ಆರ್’ ದರವನ್ನು ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ. ಕೆಲ ಪ್ರದೇಶಗಳಲ್ಲಿ 2000ಕ್ಕೂ ಹೆಚ್ಚು ಶವಗಳು ಸಂಸ್ಕಾರಕ್ಕೆ ಕಾಯುತ್ತಿವೆ. ಚೀನಾದಿಂದಾಗಿ ಮತ್ತೆ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಫೀಗಲ್ ಡಿಂಗ್ ಎಚ್ಚರಿಸಿದ್ದಾರೆ.ಕೊರೋನಾದಿಂದ ಪಾರಾಗಲು ದೇಶದ ಎಲ್ಲೆಡೆ ರೋಗನಿರೋಧಕ ಐಬುಪ್ರೊಫೆನ್ ಮಾತ್ರೆಗಳನ್ನು ಮಾರಲಾಗುತ್ತಿದೆ. ಜನರು ಮುಗಿಬಿದ್ದು ಅವುಗಳನ್ನು ಕೊಳ್ಳುತ್ತಿದ್ದು, ಬಹುತೇಕ ಕಡೆ ಮಾತ್ರೆಗಳು ಸಿಗುತ್ತಿಲ್ಲ ಎಂದು ವರದಿಯಾಗಿದೆ.ಆಸ್ಪತ್ರೆಗಳು ಕೂಡ ಭರ್ತಿ ಆಗಿವೆ. ಆಸ್ಪತ್ರೆಯ ಐಸಿಯುಗಳಲ್ಲಿನ ಸಾಲು ಸಾಲು ರೋಗಿಗಳ ದೃಶ್ಯವೂ ವೈರಲ್ ಆಗಿದೆ. ರೋಗಿಗಳು ಉಸಿರಾಟದ ಸಮಸ್ಯೆ ಕಾರಣ ವೆಂಟಿಲೇಟರ್ ಧರಿಸಿ ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ.