ಚೀನಾದಲ್ಲಿ ಕೋವಿಡ್ ಅಬ್ಬರ; ಮುಂದಿನ 3 ತಿಂಗಳಲ್ಲಿ ಶೇ.60 ಚೀನಿಯರಿಗೆ ಸೋಂಕು ಸಾಧ್ಯತೆ

By Kannadaprabha NewsFirst Published Dec 21, 2022, 7:28 AM IST
Highlights

ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕಿನ ತೀವ್ರತೆ ಹೆಚ್ಚಾಗಿದೆ.  ಶೇ.60 ಚೀನಿಯರಿಗೆ ಮುಂದಿನ 3 ತಿಂಗಳಲ್ಲಿ ಕೋವಿಡ್‌ ಸೋಂಕು ತಗಲುವ ಸಾಧ್ಯತೆಯಿದೆ. 21 ಲಕ್ಷ ಸಾವು ಸಂಭವಿಸಲಿದೆ ಎಂದು ಅಮೆರಿಕ, ಬ್ರಿಟನ್‌ನ ತಜ್ಞರು ಹೇಳಿದ್ದಾರೆ. ಚೀನಾದಲ್ಲಿ ಎಲ್ಲಾ ನಿರ್ಬಂಧ ಸಡಿಲಿಸಿದ್ದರಿಂದ ಪರಿಸ್ಥಿತಿ ಕೈ ಮೀರಿದೆ ಎಂದು ಹೇಳಲಾಗುತ್ತಿದೆ.

ಬೀಜಿಂಗ್‌: ‘ಚೀನಾದಲ್ಲಿ ಕೊರೋನಾ ವೈರಸ್‌ ಆರ್ಭಟ ಮಿತಿಮೀರಿದ್ದು, 13 ಲಕ್ಷದಿಂದ 21 ಲಕ್ಷ ಜನರು ಸಾವನ್ನಪ್ಪಬಹುದು’ ಎಂದು ಜಾಗತಿಕ ಸಾಂಕ್ರಾಮಿಕ ರೋಗಗಳ ತಜ್ಞರು (Experts) ಹೇಳಿದ್ದಾರೆ. ಇದೇ ವೇಳೆ, ಇನ್ನು 3 ತಿಂಗಳಲ್ಲಿ ಶೇ.60ಕ್ಕೂ ಹೆಚ್ಚು ಚೀನಾದ ಜನಸಂಖ್ಯೆಗೆ (Population) ಕೋವಿಡ್‌ ಸೋಂಕು ತಗುಲಲಿದೆ. ಕೋವಿಡ್‌ ನಿರ್ಬಂಧಗಳನ್ನು ಬೇಕಾಬಿಟ್ಟಿಯಾಗಿ ಸಡಿಲಿಸಿದ ಪರಿಣಾಮ ಚೀನಾದಲ್ಲಿ ಪರಿಸ್ಥಿತಿ ಕೈಮೀರಲಿದೆ’ ಎಂದು ಎಚ್ಚರಿಸಿದ್ದಾರೆ ‘ಚೀನಾ ಜನರಲ್ಲಿ ಪ್ರತಿಕಾಯ ಶಕ್ತಿ ಕಮ್ಮಿ ಇದೆ. ಅಲ್ಲದೆ ಸ್ವದೇಶಿ ನಿರ್ಮಿತ 2 ಲಸಿಕೆ ಪರಿಣಾಮಕಾರಿಯಲ್ಲ ಎಂದು ರುಜುವಾತಾಗಿದೆ. ಹೀಗಾಗಿ 13ರಿಂದ 21 ಲಕ್ಷ ಜನ ಸಾಯಬಹುದು’ ಎಂದು ಬ್ರಿಟನ್‌ನ ‘ಏರ್‌ಫಿನಿಟಿ’ ಎಂಬ ಚಿಂತಕರ ತಂಡ ತಿಳಿಸಿದ್ದಾರೆ.

ನಿರ್ಬಂಧ ಸಡಿಲಿಸಿದ್ದರಿಂದ ಸೋಂಕು ಹೆಚ್ಚಳ
ಇದೇ ವೇಳೆ, ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್‌ ಫೀಗಲ್‌ ಡಿಂಗ್‌ ಇನ್ನೊಂದು ಹೇಳಿಕೆ ನೀಡಿದ್ದು, ‘ಕೋವಿಡ್‌ ನಿರ್ಬಂಧಗಳ ವಿರುದ್ಧ ಜನರು ರೊಚ್ಚಿಗೆದ್ದು ಪ್ರತಿಭಟಿಸಿದ (Protest) ಕಾರಣ ಚೀನಾದ ಕಮ್ಯುನಿಸ್ಟ್‌ ಸರ್ಕಾರ ಸಿಟ್ಟುಗೊಂಡು ಎಲ್ಲಾ ನಿರ್ಬಂಧಗಳನ್ನೂ ತೆಗೆದುಹಾಕಿದೆ.

Canada Faces Tridemic: ಕೋವಿಡ್ ಬೆನ್ನಲ್ಲೇ ಕೆನಡಾದಲ್ಲಿ ಮತ್ತೊಂದು ಡೇಂಜರಸ್ ಸೋಂಕು !

‘ಯಾರಿಗೆ ಕೋವಿಡ್‌ ಬರಬೇಕೋ ಅವರಿಗೆಲ್ಲ ಬರಲಿ. ಯಾರು ಕೋವಿಡ್‌ನಿಂದ ಸಾಯಬೇಕೋ ಅವರೆಲ್ಲ ಸಾಯಲಿ. ಬೇಗ ಸೋಂಕು ಹರಡಿ, ಬೇಗ ಸಾವು ಸಂಭವಿಸಿ, ಬೇಗ ತುತ್ತತುದಿಗೆ ಹೋಗಿ, ಬೇಗ ಆರ್ಥಿಕ ಚಟುವಟಿಕೆಗಳು ಮೊದಲಿನಂತಾಗಲಿ’ ಎಂಬ ನೀತಿಯನ್ನು ಚೀನಾ ಸರ್ಕಾರ ಅನುಸರಿಸುತ್ತಿದೆ. ಇದರ ಪರಿಣಾಮ ಇನ್ನು 90 ದಿನಗಳಲ್ಲಿ ಚೀನಾದ ಶೇ.60 ಜನಸಂಖ್ಯೆ ಹಾಗೂ ಭೂಮಂಡಲದ ಶೇ.10ರಷ್ಟು ಜನಸಂಖ್ಯೆಗೆ ಕೋವಿಡ್‌ ತಗುಲಲಿದೆ’ ಎಂದಿದ್ದಾರೆ.

ಕೋವಿಡ್‌ ಹೆಚ್ಚಳಕ್ಕೆ ಕಾರಣವೇನು ?
ಚೀನಾದಲ್ಲಿ ವೃದ್ಧರು (Doctors) ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಕಡೆ 3ನೇ ಡೋಸ್‌ ಲಸಿಕಾಕರಣವೇ ಆರಂಭವಾಗಿಲ್ಲ. ಅಲ್ಲದೆ, ಚೀನಾ ಲಸಿಕೆಗೆ ವಿಶ್ವ ಮನ್ನಣೆ ಕೂಡ ಇಲ್ಲ. ಇನ್ನು ಕೋವಿಡ್‌ ಶೂನ್ಯ ಸಹಿಷ್ಣುತೆ ಕಾರಣ ವಿಧಿಸಲಾದ ನಿರ್ಬಂಧದಿಂದ ಅನೇಕ ಚೀನೀಯರು 2 ವರ್ಷದಿಂದ ಮನೆ ಹೊರಗೇ ಬಂದಿರಲಿಲ್ಲ. ಅಂಥವರಿಗೆ ಹೊರಗಿನ ವಾತಾವರಣದಲ್ಲಿನ ಪ್ರತಿಕಾಯ ಶಕ್ತಿ ಇಲ್ಲ. ಈಗ ಲಾಕ್‌ಡೌನ್‌ ತೆರವು ಕಾರಣ ಅವರು ಹೊರ ಬರುತ್ತಿದ್ದು, ಅವರಿಗೆ ಬೇಗ ಕೋವಿಡ್‌ ತಗಲುತ್ತಿದೆ. ಹೀಗಾಗಿ ಚೀನಾದಲ್ಲಿ ಕೋವಿಡ್‌ ಹೆಚ್ಚಳ ಆಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಕೊರೋನಾ ವೈರಸ್ ಮಾನವ ನಿರ್ಮಿತ, ಚೀನಾದ ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ!

ಚೀನಾ ಆತಂಕದ ಬೆನ್ನಲ್ಲೇ ಕೋವಿಡ್ ಪರೀಕ್ಷೆಗೆ ಕೇಂದ್ರದ ಸೂಚನೆ
ಚೀನಾದಲ್ಲಿ ಮತ್ತೊಂದು ಬಾರಿ ಕೋವಿಡ್ ಸ್ಫೋಟಗೊಂಡಿದೆ. ಒಂದೊಂದು ಪ್ರಕರಣಕ್ಕೂ ಲಾಕ್‌ಡೌನ್ ಮಾಡುತ್ತಿದ್ದ ಚೀನಾ ಇದೀಗ ಯಾವುದನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಪರದಾಡುತ್ತಿದೆ. ಚೀನಾ ಮಾತ್ರವಲ್ಲ ಅಮೆರಿಕ, ಬ್ರೆಜಿಲ್, ಜಪಾನ್ ದೇಶಗಳಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಇದರ ಪರಿಣಾಮ ಭಾರತದಲ್ಲೂ ಕೋವಿಡ್ ಮುಂಜಾಗ್ರತೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಕೋವಿಡ್ ಸೋಂಕು ಪತ್ತೆಹಚ್ಚಲು ಪರೀಕ್ಷೆ (Test) ನಡೆಸಲು ಸೂಚಿಸಿದೆ. ಎಲ್ಲೆಡೆ ಕೋವಿಡ್ ಪರೀಕ್ಷೆ ಮಾಡುವಂತೆ ಸೂಚನೆ ನೀಡಲಾಗಿದೆ. ಪಾಸಿಟೀವ್ ಕೇಸ್ ಪತ್ತೆಯಾದರೆ ಜಿನೋಮ್ ಸೀಕ್ಪೆನ್ಸ್ ತಪಾಸಣೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಮಾರ್ಗಸೂಚಿ (Guidelines) ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಪ್ರಮುಖವಾಗಿ ಜೆನೋಮ್ ಸೀಕ್ಪೆನ್ಸ್ ಮೂಲಕ ಕೊರೋನಾ ವೈರಸ್ ತಳಿ ಪತ್ತೆ ಹಚ್ಚಲು ಸೂಚಿಸಲಾಗಿದೆ. INSACOG ಮೂಲಕ ಕೊರೋನಾ ತಳಿ ಹಾಗೂ ಪರಿಣಾಮದ ಮಾಹಿತಿ ಲಭ್ಯವಾಗಲಿದೆ. ಇದರಿಂದ ಈಗಿನಿಂದಲೇ ಸೂಕ್ತ ಕ್ರಮಕೈಗೊಳ್ಳಲು ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

click me!