
ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯ (Health) ಬಹುಬೇಗ ಹದಗೆಡುತ್ತಿದೆ. ಸರಿಯಾದ ಊಟ, ನಿದ್ರೆಯಿಲ್ಲದೆ ಜನರು ಬಳಲುತ್ತಿದ್ದಾರೆ. ತಪ್ಪಾದ ಜೀವನ ಶೈಲಿ (Lifestyle) ಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ (Sleep) ಬರ್ತಿಲ್ಲ. ಗ್ಯಾಸ್, ಅಸಿಡಿಟಿ (Acidity), ಹೊಟ್ಟೆ ಉರಿ ಸೇರಿದಂತೆ ಅನೇಕ ಸಮಸ್ಯೆ ಎದುರಾಗುತ್ತಿದೆ. ಇದ್ರಿಂದ ರಾತ್ರಿ ಉತ್ತಮ ನಿದ್ರೆಯಾಗುವುದಿಲ್ಲ. ಈ ಸಮಸ್ಯೆಗೆ ಯೋಗದಲ್ಲಿ ಮದ್ದಿದೆ. ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಯೋಗ ಸಹಾಯ ಮಾಡುತ್ತದೆ. ಯೋಗ ಜೀರ್ಣಕ್ರಿಯೆ (Digestion) ಯನ್ನು ಸುಧಾರಿಸುತ್ತದೆ.
ಅಧೋಮುಖ ಶ್ವಾನಾಸನ : ಊಟದ ನಂತರ ಕನಿಷ್ಠ 2 ಗಂಟೆಗಳ ನಂತರ ಖಾಲಿ ಹೊಟ್ಟೆಯಲ್ಲಿ ಇದನ್ನು ಅಭ್ಯಾಸ ಮಾಡಬೇಕು. ಅಧೋ ಮುಖ ಶ್ವಾನಾಸನ ಭಂಗಿಯು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಬೆನ್ನಿನ ನೋವನ್ನು ಕಡಿಮೆ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಗಾಗಿ ಕಿಬ್ಬೊಟ್ಟೆಯ ಸ್ನಾಯುಗಳನ್ನು ಸುಧಾರಿಸುತ್ತದೆ.
ಅಧೋಮುಖ ಶ್ವಾನಾಸನ ಮಾಡುವ ವಿಧಾನ : ಮೊದಲು ನೇರವಾಗಿ ನಿಂತುಕೊಳ್ಳಿ. ನಂತ್ರ ನಿಮ್ಮ ಪಾದದ ಪಕ್ಕದಲ್ಲಿ ಹಸ್ತವನ್ನು ತನ್ನಿ. ಹಸ್ತವನ್ನು ನೆಲಕ್ಕೆ ಒತ್ತಬೇಕು. ಒಂದು ಕಾಲಾದ್ಮೇಲೆ ಇನ್ನೊಂದು ಕಾಲನ್ನು ಹಿಂದಕ್ಕೆ ತೆಗೆದುಕೊಂಡು ಹೋಗ್ಬೇಕು. ಎರಡೂ ಕೈಗಳ ಮಧ್ಯದಿಂದ ತಲೆ ಕೆಳಗೆ ಹೋಗ್ಬೇಕು. ತಲೆಯನ್ನು ನೆಲಕ್ಕೆ ತಾಗಿಸುವ ಪ್ರಯತ್ನ ನಡೆಸಬೇಕು. ಕಾಲಿನ ಹಿಮ್ಮಡಿಯನ್ನು ನೆಲಕ್ಕೆ ಒತ್ತುವ ಪ್ರಯತ್ನ ಮಾಡ್ಬೇಕು. ಕೆಲ ನಿಮಿಷದ ನಂತ್ರ ಸಾಮಾನ್ಯ ಸ್ಥಿತಿಗೆ ಮರಳಬೇಕು.
ಬಿಯರ್ ಯೋಗದಿಂದ, ನ್ಯೂಡ್ ಯೋಗದವರೆಗೆ… ಟ್ರೆಂಡ್ ನಲ್ಲಿದೆ ಈ ಯೋಗಗಳು!
ಉತ್ತಾನಾಸನ : ಊಟದ ನಂತರ ಕನಿಷ್ಠ 2 ಗಂಟೆಗಳ ನಂತರ ಖಾಲಿ ಹೊಟ್ಟೆಯಲ್ಲಿ ಇದನ್ನು ಅಭ್ಯಾಸ ಮಾಡಬೇಕು. ಉತ್ತಾನಾಸನ ಜೀರ್ಣಕ್ರಿಯೆಯನ್ನು ಸುಧಾರಿಸಲು, ತಲೆನೋವಿನ ಸಮಸ್ಯೆ ದೂರ ಮಾಡಲು ನೆರವಾಗುತ್ತದೆ. ಮಾನಸಿಕ ಆಯಾಸವನ್ನು ನಿವಾರಿಸುವ ಕೆಲಸ ಮಾಡುತ್ತದೆ.
ಉತ್ತಾನಾಸನ ಮಾಡುವ ವಿಧಾನ : ಮೊದಲು ನೇರವಾಗಿ ನಿಂತುಕೊಳ್ಳಿ. ಎರಡೂ ಕೈಗಳನ್ನು ಮುಂದಕ್ಕೆ ಚಾಚುತ್ತ ಕೆಳಗೆ ಬಾಗಿ. ಕಾಲುಗಳ ಪಕ್ಕದಲ್ಲಿ ಹಸ್ತವನ್ನು ಒತ್ತಿ. ಮೊಣಕಾಲನ್ನು ಬಿಗಿಗೊಳಿಸಿ. ಮೊಣಕಾಲು ನೇರವಾಗಿರಲಿ. ಹೊಟ್ಟೆಯನ್ನು ತೊಡೆಗೆ ಹಾಗೂ ಮೂಗನ್ನು ಮೊಣಕಾಲಿಗೆ ತಾಗಿಸುವ ಪ್ರಯತ್ನ ಮಾಡಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ. ಬೆನ್ನಿನ ಸ್ನಾಯುಗಳು, ಮಂಡಿರಜ್ಜುಗಳು ವಿಸ್ತರಿಸಿ. ನಂತ್ರ ಸಮಸ್ಥಿತಿಗೆ ಬನ್ನಿ.
ಶವಾಸನ : ಶವಾಸನ ನರಮಂಡಲವನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ನೆರವಾಗುತ್ತದೆ.
Yoga Mat History: ಯೋಗ ಮ್ಯಾಟ್ ಬಳಕೆ ಶುರು ಮಾಡಿದ್ದು ಯಾರು ?
ಶವಾಸನವನ್ನು ಹೀಗೆ ಮಾಡಿ : ಯೋಗ ಮ್ಯಾಟ್ ಮೇಲೆ ಬೆನ್ನನ್ನು ಕೆಳಗೆ ಹಾಕಿ ಮಲಗಬೇಕು. ಕಣ್ಣುಗಳನ್ನು ಮುಚ್ಚಬೇಕು. ಪಾದ, ಕೈಗಳನ್ನು ಆರಾಮವಾಗಿ ಬಿಡಬೇಕು. ಅಂಗೈಗಳನ್ನು ನಿಮ್ಮ ದೇಹದ ಬದಿಯಲ್ಲಿ ಇರಿಸಬೇಕು. ನಾಲಿಗೆಯನ್ನು ಕಚ್ಚಬಾರದು. ನಿಧಾನವಾಗಿ ಉಸಿರಾಡಬೇಕು. ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಕನಿಷ್ಠ 15 ನಿಮಿಷಗಳ ಕಾಲ ಈ ಭಂಗಿಯಲ್ಲಿ ಇರಬೇಕು.
ಬಾಲಾಸನ : ಬಾಲಾಸನ ಮನಸ್ಸು ಮತ್ತು ದೇಹವನ್ನು ಸಂಪೂರ್ಣ ವಿಶ್ರಾಂತಿ ಸ್ಥಿತಿಗೆ ತರುತ್ತದೆ. ಇದು ದೇಹದ ಬಿಗಿತವನ್ನು ನಿವಾರಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಮಾಡುವುದ್ರಿಂದ ನಿದ್ರೆ ಸುಖವಾಗಿ ಬರುತ್ತದೆ.
ಬಾಲಾಸನ ಮಾಡುವ ವಿಧಾನ : ಮಂಡಿ ಮೇಲೆ ಕುಳಿತುಕೊಳ್ಳಬೇಕು. ನಂತ್ರ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ, ನೆಲಕ್ಕೆ ಚಾಚಬೇಕು. ತಲೆಯನ್ನು ನೆಲಕ್ಕೆ ತಾಗಿಸುವ ಪ್ರಯತ್ನ ಮಾಡ್ಬೇಕು. ಎದೆ, ತೊಡೆ ಮೇಲೆ ಬರುವಂತ ನೋಡಿಕೊಳ್ಳಬೇಕು. ಈ ಆಸನವು ನಿಮ್ಮ ಕೆಳ ಬೆನ್ನು ಮತ್ತು ಸೊಂಟವನ್ನು ವಿಸ್ತರಿಸುವುದರಿಂದ 5 ರಿಂದ 10 ಬಾರಿ ಭಂಗಿಯಲ್ಲಿಯೇ ನೀವು ಆಳವಾದ ಉಸಿರಾಟ ಮಾಡ್ಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.