ಯೋಗದ ಮಹತ್ವವೇನು? ನಾವೇಕೆ ಯೋಗ ಮಾಡಬೇಕು?

By Girish Goudar  |  First Published Jun 21, 2022, 9:28 AM IST

*  6 ಸಾವಿರ ವರ್ಷಗಳ ಇತಿಹಾಸವಿರುವ ಭಾರತೀಯ ಜೀವನ ಪದ್ಧತಿಯಿದು
*  ಒತ್ತಡ ನಿವಾರಣೆಗೆ ಯೋಗ ಸಹಕಾರಿ
*  ಯೋಗದಿಂದ ಆಂತರಿಕ ಶಾಂತಿ ಹೆಚ್ಚಳ


ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ಯೋಗ ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಒಂದು ಪ್ರಕ್ರಿಯೆಯಾಗಿದೆ. ಇದು ಮಾನವನ ದೇಹದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ಯೋಗವು ದೇಹ ಮತ್ತು ಮನಸ್ಸಿಗೆ ಪುನರ್‌ ಯೌವನ ನೀಡುತ್ತದೆ. ಯೋಗದ ಕಲಿಕೆ ವೈಚಾರಿಕತೆ, ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಪಿಸಿಕೊಳ್ಳುವುದರಿಂದ ಸಾಕಷ್ಟುಲಾಭ ಪಡೆದುಕೊಳ್ಳಬಹುದಾಗಿದೆ.

ಯೋಗ ಎಂದರೇನು?

Tap to resize

Latest Videos

undefined

ಯೋಗ ಎನ್ನುವ ಪದ ಸಂಸ್ಕೃತದ ಧಾತುವಾದ ಯುಜ್‌ನಿಂದ ರೂಪುಗೊಂಡಿದೆ. ಯುಜ್‌ ಎಂದರೆ ಕೂಡಿಸು ಅಥವಾ ಕೇಂದ್ರೀಕರಿಸು ಎಂದರ್ಥ. ಹಾಗಾಗಿ ಯೋಗ ಎನ್ನುವುದು ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುವ ಕ್ರಿಯೆಯಾಗಿದೆ. ಇಂತಹ ಅಮೂಲ್ಯವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ. ಯೋಗಾಭ್ಯಾಸವು ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ದೈಹಿಕವಾಗಿ ನಮ್ಮನ್ನು ಸಕ್ರಿಯವಾಗಿರಿಸುವುದರ ಜೊತೆಗೆ ಮಾನಸಿಕ ಸಮಸ್ಯೆಯಾದ ಖಿನ್ನತೆಗೂ ಪರಿಹಾರ ಒದಗಿಸುತ್ತದೆ. ಹೀಗಾಗಿ ಯೋಗವನ್ನು ಚಿತ್ತವೃತ್ತಿ ನಿರೋಧಃ ಎಂದು ಕರೆಯುತ್ತಾರೆ. ಅಂದರೆ ಮನಸ್ಸನ್ನು ನಿಯಂತ್ರಿಸುವ ಕಲೆ ಇದು.
ಯೋಗದ ವ್ಯಾಪ್ತಿ ವಿಶಾಲವಾದದ್ದು. ಕೇವಲ ಆಸನಗಳು ಅಥವಾ ಪ್ರಾಣಾಯಾಮಗಳಷ್ಟೇ ಯೋಗವಲ್ಲ. ಯೋಗ ಎಂಬುದು ಅಷ್ಟಾಂಗಗಳನ್ನು ಒಳಗೊಂಡಿದೆ. ಇದು ಭಾರತದ ಪ್ರಾಚೀನ ಭಾರತದ ಋುಷಿಗಳು ಪ್ರಪಂಚಕ್ಕೆ ನೀಡಿದ ಜ್ಞಾನ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವುಗಳು ಅಷ್ಟಾಂಗ ಯೋಗಗಳು.

Yoga Mat History: ಯೋಗ ಮ್ಯಾಟ್ ಬಳಕೆ ಶುರು ಮಾಡಿದ್ದು ಯಾರು ?

ಯೋಗದ ಪ್ರಮುಖ ವಿಧಗಳು

ಚಂಚಲವಾದ ಮನಸ್ಸನ್ನು ನಿಯಂತ್ರಿಸಿ ಏಕಾಗ್ರತೆಯನ್ನು ತಂದುಕೊಳ್ಳಲು ಯೋಗ ಸಹಕಾರಿಯಾಗಿದೆ. ಯೋಗ ಪ್ರಮುಖವಾಗಿ ಪ್ರಾಣಾಯಾಮ, ಆಸನಗಳು ಮತ್ತು ವ್ಯಾಯಾಮಗಳನ್ನು ಒಳಗೊಂಡಿದೆ.

ಪ್ರಾಣಾಯಾಮ

ಇದರ ಅರ್ಥ ಪ್ರಾಣವನ್ನು ಹತೋಟಿಯಲ್ಲಿಡು ಅಥವಾ ಉಸಿರಾಡು ಎಂದು. ಯೋಗದಲ್ಲಿ ಪ್ರಾಣಾಯಾಮ ಎಂದರೆ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದು. ಪತಂಜಲಿ ಮಹರ್ಷಿಯ ಯೋಗ ಸೂತ್ರಗಳಲ್ಲೂ ಪ್ರಾಣಾಯಾಮದ ಮಹತ್ವದ ಬಗ್ಗೆ ವ್ಯಾಪಕವಾದ ವಿವರಣೆಗಳಿವೆ. ಪ್ರಾಣಾಯಾಮದ ಮುಖ್ಯ ಉದ್ದೇಶ ಏಕಾಗ್ರತೆಯನ್ನು ಸಾಧಿಸುವುದಾಗಿದೆ. ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಮನಸ್ಸಿನ ಚಂಚಲತೆಯನ್ನೂ ನಿಯಂತ್ರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬಹುದಾಗಿದೆ. ನಿಯಮಿತವಾಗಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿ ಆಮ್ಲಜನಕದ ಪೂರೈಕೆ ಹೆಚ್ಚಳವಾಗುತ್ತದೆ. ಇದು ದೇಹವನ್ನು ಆರೋಗ್ಯವಾಗಿಡುತ್ತದೆ.

ಆಸನಗಳು

ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಮಾಡುವಂತೆ ದೈಹಿಕ ಆರೋಗ್ಯಕ್ಕಾಗಿ, ಸದೃಢತೆಗಾಗಿ ಆಸನಗಳನ್ನು ಮಾಡಲಾಗುತ್ತದೆ. ಪತಂಜಲಿಯ ಯೋಗಸೂತ್ರ ಆಸನವನ್ನು ದೃಢ, ಆದರೆ ಆರಾಮದ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು ಎಂದು ವ್ಯಾಖ್ಯಾನಿಸಿದೆ. ಹೆಚ್ಚಿನ ಅವಧಿಯವರೆಗೆ ಕುಳಿತುಕೊಳ್ಳುವ ಸಾಮರ್ಥ್ಯವು ಆಸನದ ಭಾಗವಾಗಿದೆ. ಆಸನಗಳು ಉತ್ತಮ ಆರೋಗ್ಯವನ್ನು ಪ್ರೋತ್ಸಾಹಿಸುತ್ತವೆ. ದೈಹಿಕ ವ್ಯಾಯಾಮಗಳಿಗೆ ಹೋಲಿಸಿದರೆ ಭಿನ್ನ ರೀತಿಗಳಲ್ಲಿ, ಭಿನ್ನ ಭಂಗಿಗಳಲ್ಲಿ ದೇಹವನ್ನು ಇರಿಸುವುದು ಅರಿವು, ಶ್ರಾಂತಿ ಮತ್ತು ಏಕಾಗ್ರತೆಯನ್ನು ವಿಕಾಸಗೊಳಿಸುತ್ತದೆ. ಆಸನಗಳು ದೇಹವನ್ನು ಸಮತೋಲನದ ಸ್ಥಿತಿಯಲ್ಲಿ ಹಿಡಿದಿಡುತ್ತದೆ.

ವ್ಯಾಯಾಮಗಳು

ಯೋಗದ ಮತ್ತೊಂದು ಭಾಗವಾದ ವ್ಯಾಯಾಮಗಳು ದೈಹಿಕ ಸದೃಢತೆ ಮತ್ತು ಆರೋಗ್ಯ ಹಾಗೂ ಕ್ಷೇಮವನ್ನು ಹೆಚ್ಚಿಸುವ ಶಾರೀರಿಕ ಚಟುವಟಿಕೆಯಾಗಿದೆ. ಇದರಿಂದಾಗಿ ಸ್ನಾಯುಗಳು ಮತ್ತು ಹೃದಯನಾಳ ವ್ಯವಸ್ಥೆ ಬಲಗೊಳ್ಳುತ್ತದೆ. ಇದು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿ ಮಾಡುತ್ತದೆ. ಹೃದಯ ರೋಗ, ಹೃದಯನಾಳದ ರೋಗ, ಮಧುಮೇಹ ಮತ್ತು ಸ್ಥೂಲಕಾಯದಂತಹ ಸಂಪನ್ನತಾ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅಲ್ಲದೇ ನಿದ್ರಾಹೀನತೆಯಂತಹ ಸಮಸ್ಯೆಯನ್ನು ವ್ಯಾಯಾಮಗಳು ದೂರ ಮಾಡುತ್ತವೆ.

ಯೋಗದಿಂದಾಗುವ ಪ್ರಯೋಜನಗಳು

ಒತ್ತಡದ ಜೀವನದ ಬಳಲುವಿಕೆಯನ್ನು ಯೋಗ ನಿವಾರಿಸುತ್ತದೆ. ನಿರಂತರ ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದ ಜೊತೆಗೆ ಯೋಗವು ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಹೆಚ್ಚು ಮಾಡುತ್ತದೆ.

ಏಕಾಗ್ರತೆಯ ಹೆಚ್ಚಳ

ಪ್ರಾಣಾಯಾಮ ಮತ್ತು ಆಸನಗಳನ್ನು ಮಾಡುವಾಗ ಉಸಿರಾಟದ ಮೇಲೆ ನಿಯಂತ್ರಣವನ್ನು ಸಾಧಿಸಬಹುದು. ಹಾಗಾಗಿ ಇದು ಏಕಾಗ್ರತೆಯನ್ನು ಹೆಚ್ಚು ಮಾಡುತ್ತದೆ. ಯೋಗದಲ್ಲಿ ಧ್ಯಾನವು ಒಂದು ಸ್ಥಿತಿಯಾಗಿರುವುದರಿಂದ ಇದು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚು ಮಾಡುತ್ತದೆ.

ತೂಕ ನಿಯಂತ್ರಣ

ಯೋಗ ನಿರ್ದಿಷ್ಟವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುವುದಿಲ್ಲವಾದರೂ ದೇಹದ ಬಗ್ಗೆ ಹೆಚ್ಚು ಜಾಗೃತರಾಗಿರಲು ಸಹಾಯ ಮಾಡುತ್ತದೆ. ಸರಿಯಾದ ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ಕರುಳಿನ ಸಾಗಣೆ ಸುಧಾರಣೆಯಾಗುತ್ತದೆ. ಸ್ಥಿರವಾದ ಆಹಾರಕ್ರಮವು ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ.

 ವಿಶ್ವ ಮಾನ್ಯತೆ ದೊರೆತಿದ್ದು ಹೇಗೆ?

ವಿಶ್ರಾಂತಿಯ ಸುಧಾರಣೆ

ದೇಹಕ್ಕೆ ಆಹಾರ, ವ್ಯಾಯಾಮದಷ್ಟೇ ವಿಶ್ರಾಂತಿಯೂ ಅಗತ್ಯವಾಗಿದೆ. ಯೋಗದ ಹಲವು ಆಸನಗಳು ದೇಹಕ್ಕೆ ಮತ್ತು ಮನಸ್ಸಿಗೆ ಬೇಕಾದ ವಿಶ್ರಾಂತಿಯನ್ನು ಒದಗಿಸುತ್ತದೆ. ಅನೇಕ ಭಂಗಿಗಳು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ. ಧ್ಯಾನದ ಮೂಲಕ ದೈನಂದಿನ ಚಿಂತೆಗಳನ್ನು ಹೋಗಲಾಡಿಸಿಕೊಳ್ಳಬಹುದು.

ಆಂತರಿಕ ಶಾಂತಿ ಹೆಚ್ಚಳ

ವ್ಯಾಯಮಗಳು ಮತ್ತು ಆಸನಗಳು ಉತ್ತಮ ಸ್ಥಿತಿ ಮತ್ತು ಸಾಮರಸ್ಯವನ್ನು ಸಾಧಿಸಲು ಅನುವು ಮಾಡಿಕೊಡುತ್ತವೆ. ಭಾವನಾತ್ಮಕ ನಿಯಂತ್ರಣವನ್ನು ಸುಧಾರಿಸುವ ಮೂಲಕ ಯೋಗವು ಆಂತರಿಕವಾಗಿ ಶಾಂತಿ ಹೆಚ್ಚಾಗುವಂತೆ ಮಾಡುತ್ತದೆ.

ಉಸಿರಾಟದ ಸುಧಾರಣೆ

ಪ್ರಾಣಾಯಾಮ ಮಾಡುವುದರಿಂದ ಉಸಿರಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದಾಗಿದೆ. ಇದರಿಂದಾಗಿ ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕದ ಸರಬರಾಜನ್ನು ಹೆಚ್ಚಳ ಮಾಡಬಹುದಾಗಿದೆ. ಹಾಗಾಗಿ ಹಲವು ಆರೋಗ್ಯ ಸಮಸ್ಯೆಗಳನ್ನು ಯೋಗ ನಿವಾರಿಸುತ್ತದೆ.

ಒತ್ತಡ ನಿವಾರಣೆ

ಪ್ರಸ್ತುತ ಜೀವನಶೈಲಿಯಲ್ಲಿ ಜನ ಅನುಭವಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅದು ಒತ್ತಡ. ಇದಕ್ಕೆ ಯೋಗ ಪರಿಹಾರವನ್ನು ಒದಗಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸವನ್ನು ಮಾಡುವುದರಿಂದ ಎಲ್ಲಾ ಉದ್ವೇಗಗಳನ್ನು ನಿವಾರಿಸಿ ಒತ್ತಡಮುಕ್ತ ಬದುಕನ್ನು ಆನಂದಿಸಬಹುದಾಗಿದೆ.
 

click me!