ಆಫ್ರಿಕಾದ 12 ದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ ಮಂಕಿಪಾಕ್ಸ್‌ ಭಾರತಕ್ಕೂ ಪ್ರವೇಶ?

By Kannadaprabha NewsFirst Published Sep 9, 2024, 5:48 AM IST
Highlights

ಆಫ್ರಿಕಾದ 12 ದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ, ಇತ್ತೀಚೆಗೆ ನೆರೆಯ ಪಾಕಿಸ್ತಾನದಲ್ಲೂ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್‌ ವೈರಸ್‌ ಇದೀಗ ಭಾರತಕ್ಕೂ ಪ್ರವೇಶ ಮಾಡಿರುವ ಆತಂಕ ಎದುರಾಗಿದೆ. ಸೋಂಕು ವ್ಯಾಪಕವಾಗಿರುವ ದೇಶದಿಂದ ಬಂದ ಯುವಕನೊಬ್ಬನಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದೆ.

ನವದೆಹಲಿ (ಸೆ.9): ಆಫ್ರಿಕಾದ 12 ದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ, ಇತ್ತೀಚೆಗೆ ನೆರೆಯ ಪಾಕಿಸ್ತಾನದಲ್ಲೂ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್‌ ವೈರಸ್‌ ಇದೀಗ ಭಾರತಕ್ಕೂ ಪ್ರವೇಶ ಮಾಡಿರುವ ಆತಂಕ ಎದುರಾಗಿದೆ. ಸೋಂಕು ವ್ಯಾಪಕವಾಗಿರುವ ದೇಶದಿಂದ ಬಂದ ಯುವಕನೊಬ್ಬನಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಶಂಕಿತ ಸೋಂಕಿಗೆ ತುತ್ತಾದ ವ್ಯಕ್ತಿಯ ರಕ್ತದ ಮಾದರಿ ಸಂಗ್ರಹಿಸಿ, ವೈರಸ್‌ನ ಮಾದರಿ ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮತ್ತೊಂದೆಡೆ ಮುಂಜಾಗ್ರತಾ ಕ್ರಮವಾಗಿ ಸೋಂಕಿಗೆ ತುತ್ತಾದ ಶಂಕೆ ಹೊಂದಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪಟ್ಟಿ ತಯಾರಿಸಲಾಗಿದೆ. ಸದ್ಯ ಸೋಂಕಿಗೆ ತುತ್ತಾದ ಶಂಕಿತ ವ್ಯಕ್ತಿಯನ್ನು ಪ್ರತ್ಯೇಕಿಸಿ ಇಡಲಾಗಿದ್ದು, ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ. ರೂಪಿತ ಶಿಷ್ಟಾಚಾರಗಳ ಅನ್ವಯ ಪ್ರಕರಣ ನಿರ್ವಹಿಸಲಾಗುತ್ತಿದೆ. ವ್ಯಕ್ತಿಗೆ ಸೋಂಕು ತಗುಲಿದ ಮೂಲ ಮತ್ತು ಭಾರತದಲ್ಲಿ ಅದರ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

Latest Videos

ಭಾರತದಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ವರದಿ, ಐಸೋಲೇಶನ್‌ನಲ್ಲಿ ರೋಗಿ!

ಇದೇ ವೇಳೆ, ‘ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸರ್ಕಾರ ಸಜ್ಜಾಗಿದೆ. ಆತಂಕಕ್ಕೆ ಯಾವುದೇ ಕಾರಣವಿಲ್ಲ. ಪ್ರವಾಸ ಸಂಬಂಧಿ ಹರಡುವ ಇಂಥ ಪ್ರಕರಣ ಎದುರಿಸಲು ಸರ್ಕಾರವೆಲ್ಲಾ ಸಿದ್ಧತೆ ನಡೆಸಿದೆ. ಸಂಭವನೀಯ ಅಪಾಯ ಎದುರಿಸಲು ಮತ್ತು ಅದನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ಕ್ರಮಗಳು ಸನ್ನದ್ಧ ಸ್ಥಿತಿಯಲ್ಲಿದೆ’ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.
ಜಾಗತಿಕ ಪಿಡುಗು:

ಮಂಕಿಪಾಕ್ಸ್‌ ಸಾಂಕ್ರಾಮಿಕ ಆಫ್ರಿಕಾದ 12 ದೇಶಗಳಲ್ಲಿ ಈ ವರ್ಷವೊಂದರಲ್ಲೇ 500ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು, ಮಂಕಿಪಾಕ್ಸ್‌ ಅನ್ನು ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿತ್ತು. ಅಲ್ಲದೆ ಇದರ ಪ್ರಸರಣ ತಡೆಗೆ ಜಾಗತಿಕ ಸಮುದಾಯ ಒಂದಾಗಬೇಕು ಎಂದು ಕರೆ ನೀಡಿತ್ತು. ಅದರ ಬೆನ್ನಲ್ಲೇ ಈ ಸೋಂಕು ಭಾರತಕ್ಕೂ ಪ್ರವೇಶ ಮಾಡಿರುವ ಶಂಕೆಯ ಮಾಹಿತಿ ಹೊರಬಿದ್ದಿದೆ.

ಏನಿದು ಮಂಕಿಪಾಕ್ಸ್‌?

ಇದು ಕೂಡಾ ಸಿಡುಬಿನ ರೀತಿಯ ವೈರಸ್‌. ಮೈಮೇಲೆ ಸಣ್ಣ ಸಣ್ಣ ಗುಳ್ಳೆ ಮೂಡುವ ಮೂಲಕ ವೈರಸ್‌ ತನ್ನ ಇರುವಿಕೆ ತೋರಿಸುತ್ತದೆ. ಇದರ ಜೊತೆಗೆ ಮೈಕೈ ನೋವು, ಬೆನ್ನು ನೋವು, ಜ್ವರ ಕಾಣಿಸಿಕೊಳ್ಳುತ್ತದೆ. ಇದು ಯಾರಿಗೆ ಬೇಕಾದರೂ ಬರಬಹುದು. ವಯಸ್ಸಿನ ಮಿತಿ ಇಲ್ಲ.

ಮಂಕಿಪಾಕ್ಸ್‌ ವೈರಸ್‌: ಏರ್‌ಪೋರ್ಟ್‌ ಮಲ, ಮೂತ್ರ ಮೇಲೆ ನಿಗಾ

ಪ್ರಸರಣ ಹೇಗೆ?

ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಇನ್ನೊಬ್ಬರಿಗೆ ವೈರಸ್‌ ಹಬ್ಬುತ್ತದೆ. ಇದು ಸಾಂಕ್ರಾಮಿಕ ವೈರಸ್‌. ನಿರ್ಲಕ್ಷ್ಯ ವಹಿಸಿದರೆ ಸಾವಿಗೂ ಕಾರಣ ಆಗಬಹುದು

click me!