ವಿಶ್ವ ಆರೋಗ್ಯ ಸಂಸ್ಥೆಯು ಮಂಕಿ ಪಾಕ್ಸ್‌ ಕಾಯಿಲೆ ಬಗ್ಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆಯು ಸಾಂಕ್ರಾಮಿಕ ರೋಗಗಳ ಕುರಿತು ರಚಿಸಿರುವ ರಾಜ್ಯ ತಾಂತ್ರಿಕ ಸಲಹಾ ಸಮಿತಿಯು ಆ.19 ರಂದು ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಗೆ ವರದಿ ನೀಡಿದೆ. 

ಶ್ರೀಕಾಂತ್‌ ಎನ್. ಗೌಡಸಂದ್ರ

ಬೆಂಗಳೂರು (ಆ.29): ರಾಜ್ಯದಲ್ಲಿ ಮಂಕಿಪಾಕ್ಸ್‌ ವೈರಸ್‌ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಹಾಗೂ ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿನ ವಿಮಾನ ಆಗಮನ ಟರ್ಮಿನಲ್‌ಗಳಲ್ಲಿನ ಶೌಚಗೃಹಗಳ ತ್ಯಾಜ್ಯ ಅಥವಾ ಶೌಚ ನೀರಿನ ಮೇಲೆ ನಿಗಾ ಇಡುವಂತೆ ರಾಜ್ಯ ತಾಂತ್ರಿಕ ಸಲಹಾ ಸಮಿತಿ (ಸ್ಟ್ಯಾಕ್) ಆರೋಗ್ಯ ಇಲಾಖೆಗೆ ವರದಿ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಂಕಿ ಪಾಕ್ಸ್‌ ಕಾಯಿಲೆ ಬಗ್ಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆಯು ಸಾಂಕ್ರಾಮಿಕ ರೋಗಗಳ ಕುರಿತು ರಚಿಸಿರುವ ರಾಜ್ಯ ತಾಂತ್ರಿಕ ಸಲಹಾ ಸಮಿತಿಯು ಆ.19 ರಂದು ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಗೆ ವರದಿ ನೀಡಿದೆ.

ಈ ವರದಿಯಲ್ಲಿ ಮಂಕಿ ಪಾಕ್ಸ್‌ ವೈರಸ್‌ ಪ್ರಕರಣಗಳನ್ನು ಪತ್ತೆ ಹಚ್ಚಲು ತ್ಯಾಜ್ಯ ನೀರಿನ ಮೇಲೆ ನಿಗಾ ವಹಿಸಬೇಕು. ರಾಜ್ಯದಲ್ಲಿ ಈವರೆಗೆ ಮಂಕಿಪಾಕ್ಸ್‌ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ. ಆದರೆ ಒಂದು ಪ್ರಕರಣ ವರದಿಯಾದರೂ ‘ಔಟ್‌ ಬ್ರೇಕ್‌’ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ವಿದೇಶದಿಂದ ಬರುವವರಲ್ಲಿ ಹೆಚ್ಚಾಗಿ ಈ ವೈರಸ್‌ ಕಂಡು ಬರುವುದರಿಂದ ಬೆಂಗಳೂರು ಹಾಗೂ ಮಂಗಳೂರಿನ ವಿಮಾನ ನಿಲ್ದಾಣಗಳಲ್ಲಿನ ಅರೈವಲ್‌ ಟರ್ಮಿನಲ್‌ಗಳಲ್ಲಿ ಟಾಟಾ ಇನ್‌ಸ್ಟಿಟ್ಯೂಟ್‌ ಫಾರ್ ಜೆನೆಟಿಕ್ಸ್ ಅಂಡ್‌ ಸೊಸೈಟಿ (ಟಿಐಜಿಎಸ್‌) ಸಹಾಯದಿಂದ ತ್ಯಾಜ್ಯ ನೀರಿನ ಮೇಲೆ ನಿಗಾ ವಹಿಸಿ ಪರೀಕ್ಷೆ ನಡೆಸಬೇಕು ಎಂದು ಡಾ.ಕೆ. ರವಿ ನೇತೃತ್ವದ ಸಮಿತಿ ಸಲಹೆ ನೀಡಿದೆ.

ಸಿಬಿಐ ತನಿಖೆ: ಡಿ.ಕೆ.ಶಿವಕುಮಾರ್‌ ಕೇಸ್ ತೀರ್ಪು ಇಂದು: ಸರ್ಕಾರದ ವಿರುದ್ಧ ಶಾಸಕ ಯತ್ನಾಳ ಕೋರ್ಟ್‌ಗೆ!

ಶೌಚ ನೀರಿನಲ್ಲಿ ವೈರಸ್‌ ಪತ್ತೆ ಹೇಗೆ?: ಮಂಕಿ ಪಾಕ್ಸ್‌ ಸಾಂಕ್ರಾಮಿಕ ರೋಗವಾಗಿದ್ದರೂ ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ಒಂದೊಮ್ಮೆ ಮಂಕಿ ಪಾಕ್ಸ್‌ ಸೋಂಕಿತರು ರಾಜ್ಯಕ್ಕೆ ಬಂದರೂ ಗೊತ್ತಾಗುವುದಿಲ್ಲ. ಆದರೆ, ತ್ಯಾಜ್ಯ ನೀರಿನ ತಪಾಸಣೆಯಿಂದ ಮಂಕಿ ಪಾಕ್ಸ್‌ ಮೇಲೆ ನಿಗಾ ಮಾಡುವ ಪದ್ಧತಿ ಅಮೆರಿಕಾದಲ್ಲಿ 2022ರಲ್ಲಿ ಜಾರಿಯಾಗಿದೆ. ಮಂಕಿ ಪಾಕ್ಸ್‌ ಸೋಂಕಿತರ ಗಾಯ, ಮಲ ಹಾಗೂ ಮೂತ್ರದಲ್ಲಿ ವೈರಾಣುಗಳ ಸೆನ್ಸಿಟಿವಿಟಿ ಪತ್ತೆಯಾಗುತ್ತದೆ. ತ್ಯಾಜ್ಯ ನೀರಿನ ಪರೀಕ್ಷೆಯಲ್ಲಿ ಪಾಸಿಟಿವ್‌ ಪ್ರಿಡೆಕ್ಟಿವ್‌ ವ್ಯಾಲ್ಯು (ಪಿಪಿವಿ) ಹಾಗೂ ನೆಗೆಟಿವ್ ಪ್ರಿಡೆಕ್ಟಿವ್‌ ವ್ಯಾಲ್ಯು (ಎನ್‌ಪಿವಿ) ಮೂಲಕ ಸೆನ್ಸಿಟಿವಿಟಿ ಅಳತೆ ಮಾಡಿ ಮಂಕಿ ಪಾಕ್ಸ್ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ರ್‍ಯಾಪಿಡ್‌ ತಂಡ ಸಜ್ಜುಗೊಳಿಸಿ: ಇನ್ನು ಯಾವುದೇ ಪರಿಸ್ಥಿತಿ ಎದುರಿಸಲು ಆರ್‌ಆರ್‌ಟಿ (ರ್‍ಯಾಪಿಡ್‌ ರೆಸ್ಪಾನ್ಸ್‌ ಟೀಂ) ಸಜ್ಜಾಗಿರಬೇಕು. ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ತಲಾ ಒಂದೊಂದು ಐಸೊಲೇಷನ್‌ ಕೇಂದ್ರಗಳನ್ನು ಸಿದ್ಧಗೊಳಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಮೇಲೆ ನಿಗಾ ವಹಿಸಲು ಟಾಟಾ ಇನ್‌ಸ್ಟಿಟ್ಯೂಟ್‌ ಫಾರ್ ಜೆನೆಟಿಕ್ಸ್ ಅಂಡ್‌ ಸೊಸೈಟಿ (ಟಿಐಜಿಎಸ್‌) ಸಹಜ ಪ್ರಕ್ರಿಯೆಯಂತೆ ತ್ಯಾಜ್ಯ ನೀರಿನ ತಪಾಸಣೆ ನಡೆಸುತ್ತಿದೆ. ಕೊರೋನಾ ಹಾಗೂ ಡೆಂಘೀ, ಜೀವವಿರೋಧಿ ವೈರಸ್‌ಗಳ ಪತ್ತೆಗಾಗಿ ನಿರಂತರವಾಗಿ ತ್ಯಾಜ್ಯ ನೀರಿನ ಪರಿಶೀಲನೆ ನಡೆಯುತ್ತಿದೆ. ಈ ವೇಳೆ ಎಂ-ಪಾಕ್ಸ್‌ (ಮಂಕಿ ಪಾಕ್ಸ್) ವೈರಲ್‌ ಡಿಎನ್‌ಎ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ನಟ ದರ್ಶನ್‌ ಕೇಸ್ ಬಳಿಕ ಜೈಲಿನಲ್ಲಿ ಅಕ್ರಮ ಬಂದ್ ಆಗುತ್ತೆ ಅನ್ನೋದು ಭ್ರಮೆ: ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್‌

ರಾಜ್ಯದಲ್ಲಿ ಒಂದೂ ಪ್ರಕರಣ ವರದಿಯಾಗಿಲ್ಲ: ದೇಶದಲ್ಲಿ ಮೊದಲ ಬಾರಿಗೆ ಮಂಕಿ ಪಾಕ್ಸ್‌ ಪ್ರಕರಣ 2022ರ ಜು.14 ರಂದು ಕೇರಳದ ಕೊಲ್ಲಂನಲ್ಲಿ ವರದಿಯಾಗಿತ್ತು. ಕೊನೆಯ ಪ್ರಕರಣ ಕೇರಳದಲ್ಲೇ 2024ರ ಮಾ.27 ರಂದು ವರದಿಯಾಗಿತ್ತು. ಈವರೆಗೆ ದೇಶದಲ್ಲಿ 30 ಪ್ರಕರಣ ದೃಢಪಟ್ಟಿದ್ದು ಇದರಲ್ಲಿ ಕೇರಳ ಹಾಗೂ ದೆಹಲಿಯಲ್ಲಿ ತಲಾ 15 ಪ್ರಕರಣ ವರದಿಯಾಗಿವೆ. ಇದರಲ್ಲಿ 12 ಮಂದಿ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ ಉಳಿದವರಿಗೆ ಇವರ ಸಂಪರ್ಕದಿಂದ ಬಂದಿದೆ. ಕೇರಳದಲ್ಲಿ ಒಂದು ಸಾವು ವರದಿಯಾಗಿದೆ. 2022ರಿಂದ ತೀವ್ರ ನಿಗಾ ವಹಿಸಿದ ಹೊರತಾಗಿಯೂ ರಾಜ್ಯದಲ್ಲಿ ಈವರೆಗೆ ಒಂದೂ ಮಂಕಿ ಪಾಕ್ಸ್‌ ಪ್ರಕರಣ ವರದಿಯಾಗಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.