
ಇಂದು ಪ್ರತಿಯೊಬ್ಬರ ಸ್ಕ್ರೀನ್ ಟೈಮ್ ಹೆಚ್ಚಾಗಿದೆ. ಅದರಲ್ಲೂ ಮಕ್ಕಳ ಮೊಬೈಲ್ ವೀಕ್ಷಣೆಯ ಸಮಯ ಅಧಿಕವಾಗಿದೆ. ಇದು ಜಗತ್ತಿನಾದ್ಯಂತ ಕಂಡುಬರುತ್ತಿರುವ ಟ್ರೆಂಡ್. ಹೀಗಾಗಿ, ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚುತ್ತಿವೆ. ಈ ಸಮಸ್ಯೆ ವಿಶ್ವಾದ್ಯಂತ ಏರಿಕೆಯಾಗುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಬಹಿರಂಗವಾಗಿದೆ. ಕಣ್ಣುಗಳ ಆರೋಗ್ಯಕ್ಕೆ ಅನೇಕ ಅಂಶಗಳು ಕಾರಣವಾಗಿವೆಯಾದರೂ ಇತ್ತೀಚಿನ ದಿನಗಳಲ್ಲಿ ಎಚ್ಚರಿಕೆಯ ಗಂಟೆಯಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಮೊಬೈಲ್ ಹಾಗೂ ಇತರೆ ಸ್ಕ್ರೀನ್ ಗಳ ಬಳಕೆ. ಇದರಿಂದಾಗಿ, ತಲೆನೋವು, ದೃಷ್ಟಿ ಮಂದವಾಗುವುದು ಹಾಗೂ ವಾಕರಿಕೆಯೂ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ದಿನಕ್ಕೆ ಎಂಟು ಗಂಟೆ ಸ್ಕ್ರೀನ್ ವೀಕ್ಷಣೆ ಮಾಡುವುದರಿಂದ ಕಣ್ಣುಗಳ ರಚನೆಯಲ್ಲೇ ಬದಲಾವಣೆ ಆರಂಭವಾಗುತ್ತದೆ! ಅಲ್ಲದೆ, ಕಣ್ಣುಗುಡ್ಡೆಯ ಉದ್ದದ ಬೆಳವಣಿಗೆಗೆ ಇದು ಉತ್ತೇಜನ ನೀಡುತ್ತದೆ. ಕೋವಿಡ್-19 ಸಾಂಕ್ರಾಮಿಕದ ಬಳಿಕ ಮಕ್ಕಳಲ್ಲಿ ಮಯೋಪಿಯಾ ಸಮಸ್ಯೆ ಹೆಚ್ಚಿರುವುದು ಕಂಡುಬಂದಿದೆ. ಅಂದರೆ, ಸಮೀಪದ ವಸ್ತುಗಳು ಕ್ಲಿಯರ್ ಆಗಿ ಕಾಣಿಸುತ್ತವೆ ಆದರೆ, ದೂರದ ವಸ್ತುಗಳು ಅಸ್ಪಷ್ಟವಾಗಿ ಗೋಚರವಾಗುತ್ತವೆ. ಮಕ್ಕಳ ದೃಷ್ಟಿಶಕ್ತಿ 18 ವರ್ಷವಾಗುವ ಹೊತ್ತಿಗೆ ಸ್ಥಿರವಾಗುತ್ತದೆ ಎಂದು ಈ ಹಿಂದೆ ನಂಬಲಾಗಿತ್ತು. ಆದರೆ, ಇಂದು ಈ ವಯೋಮಾನದ ಜನರಲ್ಲೇ ಅತಿ ಹೆಚ್ಚು ದೃಷ್ಟಿದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತಿವೆ.
ಕೋವಿಡ್ ಬಳಿಕ ಹೆಚ್ಚಿನ ದೃಷ್ಟಿ ಸಮಸ್ಯೆ
ಕೋವಿಡ್ (Covid) ಬಳಿಕ ಕಂಡುಬರುತ್ತಿರುವ ಆತಂಕಕಾರಿ ಸಂಗತಿಗಳಲ್ಲಿ ದೃಷ್ಟಿದೋಷವೂ (Eye Problem) ಒಂದು. ಈಗಾಗಲೇ ಗ್ಲಾಸುಗಳನ್ನು ಬಳಸುತ್ತಿರುವ ಮಕ್ಕಳಲ್ಲಿ ಆನ್ ಲೈನ್ (Online) ಕ್ಲಾಸುಗಳಿಂದಾಗಿ ದೃಷ್ಟಿ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ದೀರ್ಘಕಾಲ ನಮ್ಮ ದೃಷ್ಟಿ ಸನಿಹದಲ್ಲೇ ಇದ್ದರೆ, ಅದು ಹಲವು ಸಮಸ್ಯೆಗಳನ್ನೂ ತರುತ್ತದೆ. ತಲೆನೋವು (Headache), ಮಂದ ದೃಷ್ಟಿ ಹಾಗೂ ಏಕಾಗ್ರತೆಯ (Concentration) ಕೊರತೆಯೂ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಮೊಬೈಲ್ ಸ್ಕ್ರೀನ್ ವೀಕ್ಷಣೆಯಿಂದ ಕಣ್ಣುಗಳಲ್ಲಿ ಶುಷ್ಕತೆ (Dryness) ಉಂಟಾಗುವ ಸಮಸ್ಯೆ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸ್ಕ್ರೀನ್ (Screen) ನೋಡುವ ಸಮಯದಲ್ಲಿ ಕಣ್ಣುಗಳ ರೆಪ್ಪೆ ಬಡಿಯುವ ಕ್ರಿಯೆ ನಿಧಾನವಾಗುತ್ತದೆ. ಇದರಿಂದಾಗಿ ಕಣ್ಣುಗಳಲ್ಲಿ ನೀರನ್ನು ಸೃಷ್ಟಿಸುವ ಕೋಶಗಳಲ್ಲಿ ಅಸಹಜತೆ ಕಂಡುಬರುತ್ತದೆ. ಪರಿಣಾಮವಾಗಿ, ಕಣ್ಣುಗಳು ಶುಷ್ಕವಾಗುವ ತೊಂದರೆ ಉಂಟಾಗುತ್ತದೆ. ಇದರಿಂದಾಗಿ ಕಣ್ಣುಗಳು ಕೆಂಪಗಾಗುವ, ಉರಿಯುವ ಹಾಗೂ ಊದಿಕೊಳ್ಳುವ ಸಮಸ್ಯೆಗಳೂ ಉಂಟಾಗಬಹುದು.
ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು? ಅದರ ಲಕ್ಷಣ, ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ
ಸ್ಕ್ರೀನ್‌ನಿಂದ ರಕ್ಷಣೆ (Safety) ಹೇಗೆ?
• ಸ್ಕ್ರೀನ್ ನೋಡುವುದಕ್ಕೆ ಕಡಿವಾಣ ಹಾಕುವುದು ಮೊದಲ ಪರಿಹಾರ. ಆದರೆ, ಒಂದೊಮ್ಮೆ ಸ್ಕ್ರೀನ್ ಮುಂದೆ ಕೆಲಸ ಮಾಡುವುದು ಅನಿವಾರ್ಯವೇ ಆದರೆ, ಕೆಲವು ಮುನ್ನೆಚ್ಚರಿಕೆ ಅನುಸರಿಸುವುದು ಉತ್ತಮ.
• ಕಣ್ಣುಗಳಿಗೆ ಹೆಚ್ಚು ಒತ್ತಡವಾಗದಂತೆ (Stress) ಎಚ್ಚರಿಕೆ ವಹಿಸಬೇಕು. ಸೋಷಿಯಲ್ ಮೀಡಿಯಾದಲ್ಲಿ (Social Media) ಸರ್ಫ್ ಮಾಡುವ ಅಭ್ಯಾಸ ಬಿಡಿ. ಇದರಿಂದಾಗಿ ಅನಗತ್ಯ ಸ್ಕ್ರೀನ್ ವೀಕ್ಷಣೆ ಕಡಿಮೆ ಆದಂತೆ ಆಗುತ್ತದೆ. ಕೆಲವರು ದಿನಕ್ಕೆ 6-7 ತಾಸು ಸೋಷಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೆ. ಇದು ಅಪಾಯಕಾರಿ ಪದ್ಧತಿ.
ಫಟಾಫಟ್ ಆಗಿ ಫೇಮಸ್ ಆಗೋ ಹುಚ್ಚು, ಇದ್ರಿಂದ ಅಪಾಯ ಖಂಡಿತ!
• ತೀರ ಅಗತ್ಯವಿಲ್ಲದೆ ಇರುವಾಗ ಮೊಬೈಲ್ (Mobile) ಅಥವಾ ಲ್ಯಾಪ್ ಟಾಪ್ (Laptop) ಬದಲು ಡೆಸ್ಕ್ ಟಾಪ್ ಬಳಕೆ ಮಾಡುವುದು ಒಳಿತು. ಸಣ್ಣ ಸ್ಕ್ರೀನ್ ಅಂದರೆ ಕಣ್ಣುಗಳು ಮತ್ತು ಅದರ ನಡುವಿನ ಅಂತರ ಕಡಿಮೆ ಇರುತ್ತದೆ. ಇದು ಕಣ್ಣುಗಳನ್ನು ಹೆಚ್ಚು ಸುಸ್ತು ಮಾಡುತ್ತದೆ. ದೊಡ್ಡ ಸ್ಕ್ರೀನ್ ಆದರೆ ಅಂತರ ಹೆಚ್ಚಿರುವಂತೆ ನೋಡಿಕೊಳ್ಳಬಹುದು. ಇದರಿಂದ ತೊಂದರೆ ಕಡಿಮೆ.
• ಪ್ರತಿ 20 ನಿಮಿಷಗಳಿಗೆ 20 ಸೆಕೆಂಡ್ ಗಳ ಕಾಲ ಬ್ರೇಕ್ (Break) ಪಡೆದುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಸಮಯದಲ್ಲಿ 6 ಮೀಟರ್ ದೂರದಲ್ಲಿರುವ ವಸ್ತುವನ್ನು ಅರ್ಧ ನಿಮಿಷಗಳ ಕಾಲ ದಿಟ್ಟಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.