
ಪುರುಷರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಸಣ್ಣಪುಟ್ಟ ಖಾಯಿಲೆಯನ್ನು ಅವರು ನಿರ್ಲಕ್ಷ್ಯಿಸ್ತಾರೆ. ಕೆಲಸದ ಒತ್ತಡ ಹಾಗೂ ಬೇರೆ ಸಮಸ್ಯೆಗಳಿಂದ ಪುರುಷರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಆರಂಭದಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲವೆಂದ್ರೆ ರೋಗ ಕ್ರಮೇಣ ಉಲ್ಬಣಿಸುತ್ತದೆ. ರೋಗ ಕೈಮೀರಿದಾಗ ಚಿಕಿತ್ಸೆ ಕಷ್ಟವಾಗುತ್ತದೆ. ಹಗಲಿರುಳು ದುಡಿಯುವ, ಕುಟುಂಬದ ಬಗ್ಗೆ ಸದಾ ಕಾಳಜಿವಹಿಸುವ, ಹೆಚ್ಚಿನ ಸಮಯವನ್ನು ಮನೆಯಿಂದ ಹೊರಗೆ ಕಳೆಯುವ ಹಾಗೂ ಹೊರಗೆ ಊಟ, ಆಹಾರ ಸೇವನೆ ಮಾಡುವ ಪುರುಷರು ಆಗಾಗ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಾವಿಂದು ಪುರುಷರು ಯಾವ ಯಾವ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು ಎಂಬುದನ್ನು ಹೇಳ್ತೇವೆ.
ಪುರುಷ (Men) ರು ಒಳಗಾಗಬೇಕಾದ ಪ್ರಮುಖ ವೈದ್ಯಕೀಯ (Medical) ಪರೀಕ್ಷೆಗಳು :
ಮೊದಲೇ ಹೇಳಿದಂತೆ ಪುರುಷರು ಸಣ್ಣ ಆರೋಗ್ಯ (Health) ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಇದ್ರಿಂದಾಗಿ ಗಂಭೀರ ಕಾಯಿಲೆಗಳಿಗೆ ಒಳಗಾಗುತ್ತಾರೆ. ಆಗಾಗ್ಗೆ ಬಾಯಾರಿಕೆ, ತುರಿಕೆ, ಕೈಕಾಲುಗಳು ಶಕ್ತಿ ಕಳೆದುಕೊಳ್ಳುವುದು, ತಲೆನೋವು, ಉಸಿರಾಟದ ತೊಂದರೆ ಸೇರಿದಂತೆ ಅನೇಕ ಸಣ್ಣಪುಟ್ಟ ಸಮಸ್ಯೆಯೇ ನಂತ್ರ ದೊಡ್ಡದಾಗುತ್ತದೆ. ಇದೇ ರೋಗಲಕ್ಷಣಗಳು ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ. ಪದೇ ಪದೇ ಈ ಸಮಸ್ಯೆ ನಿಮಗೆ ಕಾಡ್ತಿದ್ದರೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು.
ರಕ್ತ ಪರೀಕ್ಷೆ ಬಹಳ ಮುಖ್ಯ : ಪದೇ ಪದೇ ಬಾಯಾರಿಕೆ, ತುರಿಕೆ, ಅತಿಯಾದ ಮೂತ್ರ ವಿಸರ್ಜನೆ, ಶಕ್ತಿ ಕಳೆದುಕೊಳ್ಳುವ ಕೈಕಾಲು ಪುರುಷರಲ್ಲಿ ಮಧುಮೇಹದ ಲಕ್ಷಣಗಳಾಗಿರಬಹುದು. ಹೆಚ್ಚಿನ ಸಂಖ್ಯೆಯ ಭಾರತೀಯ ಪುರುಷರು ಪೂರ್ವ ಮಧುಮೇಹದಿಂದ ಬಳಲುತ್ತಿದ್ದಾರೆ. ಆದ್ರೆ ಅದ್ರ ಬಗ್ಗೆ ಪುರುಷರಿಗೆ ಸರಿಯಾದ ಮಾಹಿತಿ ಇರೋದಿಲ್ಲ. ಹಾಗಾಗಿ ಪುರುಷರು ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವುದು ಬಹಳ ಮುಖ್ಯ.
ತಿಂದ ತಕ್ಷಣ ಮಲಗಿದರೆ ಗಂಭೀರ ಆರೋಗ್ಯ ತೊಂದರೆ ಕಾಡಬಹುದು ಎಚ್ಚರ
ಪರೀಕ್ಷೆಯನ್ನು ಯಾವಾಗ ಮಾಡಬೇಕು? : ವಯಸ್ಸು ಚಿಕ್ಕದಿದೆ, ರಕ್ತ ಪರೀಕ್ಷೆ ಅಗತ್ಯವಿಲ್ಲ ಎಂದು ಅನೇಕರು ಭಾವಿಸ್ತಾರೆ. ಆದ್ರೆ ಸಣ್ಣ ವಯಸ್ಸಿನಲ್ಲೂ ಸಕ್ಕರೆ ಖಾಯಿಲೆ ಕಾಡುತ್ತದೆ. ಹಾಗಾಗಿ 18 ವರ್ಷದಿಂದ 40 ವರ್ಷದೊಳಗಿನ ಪುರುಷರು ಕೂಡ ರಕ್ತ ಪರೀಕ್ಷೆಗೆ ಒಳಗಾಗುವ ಅಗತ್ಯವಿದೆ. ಆರೋಗ್ಯವಂತ ಪುರುಷರು ಎರಡು ವರ್ಷಗಳಲ್ಲಿ 1 ಬಾರಿಯಾದ್ರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಇನ್ನು 40 ವರ್ಷದಿಂದ 65 ವರ್ಷ ಮೇಲ್ಪಟ್ಟ ವಯಸ್ಸಿನ ಆರೋಗ್ಯವಂತ ಪುರುಷರು ವರ್ಷದಲ್ಲಿ 2 ಬಾರಿ ರಕ್ತ ಪರೀಕ್ಷೆಗೆ ಒಳಪಡುವುದು ಬಹಳ ಮುಖ್ಯ.
ರಕ್ತದೊತ್ತಡ ಪರೀಕ್ಷೆ : ಪುರುಷರಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಅಧಿಕ ರಕ್ತದೊತ್ತಡ. ಅಧಿಕ ರಕ್ತದೊತ್ತಡ ಪಾರ್ಶ್ವವಾಯು ಅಪಾಯವನ್ನು ಸಹ ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದಿಂದ ಚಿಕ್ಕ ವಯಸ್ಸಿನಲ್ಲಿಯೇ ಅನೇಕರು ಸಾವನ್ನಪ್ಪುತ್ತಿದ್ದಾರೆ.
ರಕ್ತದೊತ್ತಡ ಪರೀಕ್ಷೆ (Blood Pressure) ಮಾಡೋದು ಯಾವಾಗ? : 18 ವರ್ಷದಿಂದ 40 ವರ್ಷ ಒಳಗಿನ ಆರೋಗ್ಯವಂತ ಪುರುಷರು ಎರಡು ವರ್ಷಗಳಲ್ಲಿ 1 ಬಾರಿ ರಕ್ತದೊತ್ತಡ ಪರೀಕ್ಷೆಗೆ ಒಳಗಾಗಬೇಕು. 40 ವರ್ಷದಿಂದ 65 ವರ್ಷ ಮೇಲ್ಪಟ್ಟ ಆರೋಗ್ಯವಂತ ಪುರುಷರು ವರ್ಷದಲ್ಲಿ 2 ಬಾರಿ ರಕ್ತದೊತ್ತಡ ಪರೀಕ್ಷೆಗೆ ಒಳಗಾಗಬೇಕು ಎನ್ನುತ್ತಾರೆ ವೈದ್ಯರು.
ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ಪರೀಕ್ಷೆ : ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರ ಸಾವಿಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಪುರುಷರು ಪಿಎಸ್ಎ ವೈದ್ಯಕೀಯ ಪರೀಕ್ಷೆಯನ್ನು (Medical Test) ಮಾಡಿಸಿಕೊಳ್ಳಬೇಕು. ಇದು ರಕ್ತ ಪರೀಕ್ಷೆಯಾಗಿದ್ದು, ಕ್ಯಾನ್ಸರ್ ಬಗ್ಗೆ ಇದ್ರಿಂದ ಮಾಹಿತಿ ಪಡೆಯಬಹುದು.
World Diabetes Day: ದಿಢೀರ್ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದಾಗ ಕಡಿಮೆ ಮಾಡಲು ಟಿಪ್ಸ್
ಪ್ರಾಸ್ಟೇಟ್ ಕ್ಯಾನ್ಸರ್ ಪರೀಕ್ಷೆ ಯಾವಾಗ ? : 18 ರಿಂದ 40 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ನಾಲ್ಕರಿಂದ ಐದು ವರ್ಷಗಳಲ್ಲಿ ಒಮ್ಮೆ ಮಾಡಬೇಕು. 40 ವರ್ಷದಿಂದ 65 ಮೇಲ್ಪಟ್ಟ ಆರೋಗ್ಯವಂತ ಪುರುಷರು ಎರಡರಿಂದ ಮೂರು ವರ್ಷಗಳಲ್ಲಿ ಒಂದು ಬಾರಿ ಪರೀಕ್ಷೆಗೆ ಒಳಗಾಗಬೇಕು.
ವೃಷಣ ಕ್ಯಾನ್ಸರ್ ಪರೀಕ್ಷೆ : ವರದಿಯ ಪ್ರಕಾರ, 20 ರಿಂದ 39 ವರ್ಷ ವಯಸ್ಸಿನ ಪುರುಷರಲ್ಲಿ ಈ ಕ್ಯಾನ್ಸರ್ ಅಪಾಯ ಹೆಚ್ಚು. ವೃಷಣಗಳನ್ನು ಸ್ಪರ್ಶಿಸುವ ಮೂಲಕ ಕೂಡ ಇದ್ರ ಪರೀಕ್ಷೆ ಮಾಡಬಹುದು.
ವೃಷಣ ಕ್ಯಾನ್ಸರ್ ಪರೀಕ್ಷೆ ಯಾವಾಗ ? : 18 ವರ್ಷದಿಂದ 40 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ತಿಂಗಳಿಗೆ 1 ಬಾರಿ ಮತ್ತು 40 ವರ್ಷದಿಂದ 65 ವರ್ಷ ಮೇಲ್ಪಟ್ಟ ಆರೋಗ್ಯವಂತ ಪುರುಷರು ತಿಂಗಳಿಗೆ 1 ಬಾರಿ ಈ ಪರೀಕ್ಷೆಗೆ ಒಳಗಾಗಬೇಕು.
ಹೆಚ್ಐವಿ ಪರೀಕ್ಷೆ (HIV Test) : ಏಡ್ಸ್ ಮಾರಣಾಂತಿಕ ಲೈಂಗಿಕ ಖಾಯಿಲೆಯಾಗಿದೆ. ಸಂಭೋಗ ಬೆಳೆಸಿದ ನಂತ್ರ ಈ ಖಾಯಿಲೆ ಬರುತ್ತೆ ಎಂದು ಅನೇಕರು ನಂಬಿದ್ದಾರೆ. ಆದ್ರೆ ಸಂಭೋಗದಿಂದ ಮಾತ್ರ ಈ ಖಾಯಿಲೆ ಬರೋದಿಲ್ಲ. ಕೆಲವೊಮ್ಮೆ ಬಳಸಿದ ಸೂಜಿ ಬಳಕೆಯಿಂದಲೂ ಖಾಯಿಲೆ ಹರಡುತ್ತದೆ. ಹಾಗಾಗಿ ಎಸ್ ಟಿಡಿ ಪರೀಕ್ಷೆ ಅತ್ಯಗತ್ಯ.
ಎಸ್‌ಟಿಡಿ (STD) ಪರೀಕ್ಷೆಯನ್ನು ಯಾವಾಗ ಮಾಡಬೇಕು ? : 18 ವರ್ಷದಿಂದ 40 ವರ್ಷದ ಆರೋಗ್ಯವಂತ ಪುರುಷರು ವರ್ಷದಲ್ಲಿ 1 ಬಾರಿ ಈ ಪರೀಕ್ಷೆಗೆ ಒಳಗಾಗಬೇಕು. 40 ವರ್ಷದಿಂದ 65 ವರ್ಷ ಮೇಲ್ಪಟ್ಟ ಪುರುಷರು ವರ್ಷದಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿಕೊಂಡ್ರೆ ಸಾಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.