ಮೂರು ಕಿಡ್ನಿ ಹೊಂದಿರುವ ಇವರು ಸಾಮಾನ್ಯರಲ್ಲ, ನೀರು ಕುಡಿಯೋ ರೀತಿಯೇ ವಿಭಿನ್ನ!

By Suvarna NewsFirst Published Mar 13, 2024, 2:55 PM IST
Highlights

ಈಗಿನ ಕಾಲದಲ್ಲಿ ಎರಡು ಕಿಡ್ನಿ ಆರೋಗ್ಯವಾಗಿದ್ದರೆ ಭಾಗ್ಯವಂತರು ಎನ್ನಬಹುದು. ಒಂದರಲ್ಲೂ ಜೀವನ ನಡೆಸೋದು ಕಷ್ಟವೇನಲ್ಲ. ಆದ್ರೆ ಮೂರು ಮೂರು ಕಿಡ್ನಿ ಇದ್ರೆ ಸಮಸ್ಯೆ ಆಗ್ಬಹುದಾ? ಅದಕ್ಕೆ ಇಲ್ಲಿದೆ ಉತ್ತರ. 

ನಮ್ಮ ಹೃದಯ ಎಡಭಾಗದಲ್ಲಿದೆ, ಎರಡು ಕಿಡ್ನಿ ಇದೆ, ಎರಡು ಕಣ್ಣಿದೆ ಹೀಗೆ ನಮ್ಮ ದೇಹದ ಅಂಗಾಂಗಗಳ ಬಗ್ಗೆ ನಾವು ತಿಳಿದಿದ್ದೇವೆ. ಯಾವ ಅಂಗ ಎಲ್ಲಿದೆ ಎನ್ನುವ ಬಗ್ಗೆ ಮಕ್ಕಳಿಗೆ ಶಾಲೆಯಲ್ಲಿಯೇ ಮಾಹಿತಿ ನೀಡಿರುತ್ತಾರೆ. ಆದ್ರೆ ಎಲ್ಲ ವ್ಯಕ್ತಿಗಳ ಅಂಗ ಒಂದೇ ರೀತಿ ಇರಬೇಕೆಂದೇನಿಲ್ಲ, ಇರೋದು ಇಲ್ಲ. ಅಪರೂಪಕ್ಕೆ ಎನ್ನುವಂತೆ ಕೆಲ ವ್ಯಕ್ತಿಗಳ ಹೃದಯ ಬಲಭಾಗದಲ್ಲಿ ಹೊಡೆದುಕೊಳ್ಳುತ್ತದೆ. ಹಾಗೆ ಒಂದು ಕಿಡ್ನಿಯಲ್ಲೇ ಜೀವನ ಪೂರ್ತಿ ಕಳೆಯುವ ಜನರಿದ್ದಾರೆ. ಆದ್ರೆ ಇಲ್ಲೊಬ್ಬರು ಸ್ವಲ್ಪ ಅಚ್ಚರಿಗೊಳಿಸುವ ವ್ಯಕ್ತಿ ಇದ್ದಾರೆ. ಅವರಿಗೆ ಒಂದು, ಎರಡು ಅಲ್ಲ ಮೂರು ಕಿಡ್ನಿ ಇದೆ. ಯಾವುದೇ ಕಿಡ್ನಿ ಕಸಿ ಮಾಡಿದ್ದಲ್ಲ. ಹುಟ್ಟುವಾಗ್ಲೇ ಮೂರು ಕಿಡ್ನಿ ಪಡೆದು ಹುಟ್ಟಿರುವ ಈ ವ್ಯಕ್ತಿ ಆರೋಗ್ಯವಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿರುವ ಅವರಿಗೆ ಮೂರನೇ ಕಿಡ್ನಿ ತೊಂದರೆ ನೀಡಿಲ್ಲ. 

ಮೂರು ಕಿಡ್ನಿ (Kidney) ಇದ್ರೂ ಆರೋಗ್ಯವಾಗಿದ್ದಾರೆ ಈ ವ್ಯಕ್ತಿ : ಮೂರು ಕಿಡ್ನಿ ಹೊಂದಿರುವ ವ್ಯಕ್ತಿ ಹೆಸರು ಖಲೀಲ್ ಮೊಹಮ್ಮದ್. ಬುಂದೇಲ್ಖಂಡ್ ನ ಟಿಕಾಮ್‌ಘರ್‌ನ ಕುಮೇದನ್ ಮೊಹಲ್ಲಾದ ನಿವಾಸಿ. ವಯಸ್ಸು 64 ವರ್ಷ. 31 ವರ್ಷ ಪೊಲೀಸ್ (Police) ಇಲಾಖೆಯಲ್ಲಿ ಕೆಲಸ ಮಾಡಿರುವ ಖಲೀಲ್ ಮೊಹಮ್ಮದ್ ಈಗ್ಲೂ ಆರೋಗ್ಯ (Health) ವಾಗಿದ್ದಾರೆ. ಖಲೀಲ್ ಮೊಹಮ್ಮದ್ ಅವರಿಗೆ ಒಟ್ಟೂ ಮೂರು ಕಿಡ್ನಿ ಇದೆ. ಎರಡು ಕಿಡ್ನಿ ಬಲಭಾಗದಲ್ಲಿದ್ದರೆ ಒಂದು ಕಿಡ್ನಿ ಎಡಭಾಗದಲ್ಲಿದೆ. 

ಬಾಂಬೆ ಬ್ಲಡ್‌ ಗ್ರೂಪ್‌ ಅನ್ನೋ ಅತಿ ಅಪರೂಪದ ರಕ್ತದ ಗುಂಪು ಯಾರಿಗಿರುತ್ತೆ?

ಸುಮಾರು 40 ವರ್ಷಗಳ ಹಿಂದೆ ಖಲೀಲ್ ಮೊಹಮ್ಮದ್ ಅವರಿಗೆ ತಮಗೆ ಮೂರು ಕಿಡ್ನಿ ಇದೆ ಎನ್ನುವ ಸಂಗತಿ ತಿಳಿದಿತ್ತು. ಖಲೀಲ್ ಮೊಹಮ್ಮದ್, ಫುಟ್ಬಾಲ್ ಆಟಗಾರರು. ಈಗ್ಲೂ ಅವರು ಫುಟ್ಬಾಲ್ ಆಟ ಆಡ್ತಾರೆ. ವ್ಯಾಯಾಮ ಮಾಡ್ತಾರೆ. ವಾಕಿಂಗ್ ಮಾಡಿ ಫಿಟ್ ಆಗಿದ್ದಾರೆ.

ಬಾಲ್ಯದಿಂದಲೂ ಫುಟ್ಬಾಲ್ ಆಡ್ತಿದ್ದ ಖಲೀಲ್ ಮೊಹಮ್ಮದ್, ಬಗ್ಗಿದಾಗ, ಭಾರವಾದ ವಸ್ತುಗಳನ್ನು ಎತ್ತುವಾಗ ಚುಚ್ಚಿದ ಅನುಭವ ಆಗ್ತಿತ್ತು. ಅದನ್ನು ಅವರು ನಿರ್ಲಕ್ಷ್ಯ ಮಾಡಿದ್ದರು. ತಮ್ಮ ಇಪ್ಪನ್ನಾಲ್ಕನೇ ವಯಸ್ಸಿನಲ್ಲಿ ಖಲೀಲ್ ಮೊಹಮ್ಮದ್ ಫುಟ್ಬಾಲ್ ಆಡುವಾಗ ಸೊಂಟದ ನೋವಿಗೆ ಒಳಗಾಗಿದ್ದಾರೆ. ನೋವು ವಿಪರೀತವಾದ ಕಾರಣ ಚಿಕಿತ್ಸೆಗೆ ಮುಂದಾಗಿದ್ದಾರೆ. ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಒಬ್ಬೊಬ್ಬರು ಒಂದೊಂದು ಕಾರಣ ನೀಡಿ, ಔಷಧಿ ಮಾಡುವಂತೆ ಹೇಳಿದ್ದರು.

ಖಲೀಲ್ ಮೊಹಮ್ಮದ್ ಫ್ಯಾಮಿಲಿ ಡಾಕ್ಟರ್ ಅನುರಾಗ್ ಜೈನ್ ಈ ಬಗ್ಗೆ ಹೆಚ್ಚು ಕಾಳಜಿವಹಿಸಿದ್ದರು. ಝಾನ್ಸಿಗೆ ಕಳುಹಿಸಿ ಹೆಚ್ಚಿನ ಪರೀಕ್ಷೆ ಮಾಡಿಸಿದ್ದರು. ಆ ವೇಳೆ ಖಲೀಲ್ ಮೊಹಮ್ಮದ್ ಗೆ ಮೂರು ಕಿಡ್ನಿ ಇರುವುದು ಗೊತ್ತಾಗಿದೆ. ಈ ವಿಷ್ಯ ತಿಳಿದು ಆರಂಭದಲ್ಲಿ ವೈದ್ಯರೇ ದಂಗಾಗಿದ್ದಾರೆ. ಆದ್ರೆ ಮೂರು ಕಿಡ್ನಿಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಲಹೆ ನೀಡಿದ್ದ ಅನುರಾಗ್ ಜೈನ್, ಸ್ವಲ್ಪ ಎಚ್ಚರಿಕೆವಹಿಸುವಂತೆ ಹೇಳಿದ್ದರು. ಕೆಳಗೆ ಬಾಗುವಾಗ ಕಾಳಜಿವಹಿಸುವಂತೆ ಸೂಚಿಸಿದ್ದರು.

ತಿಂಡಿ ತಿಂದ ಕೂಡ್ಲೇ ಟಾಯ್ಲೆಟ್ ಬರುತ್ತಾ?... ಹಾಗಿದ್ರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಇಲ್ಲ…

ಖಲೀಲ್ ಮೊಹಮ್ಮದ್ ಗೆ ನೆರವಾದ ನೀರು : ಕಿಡ್ನಿ ನಮ್ಮ ದೇಹದ ಅತ್ಯಗತ್ಯ ಅಂಗಗಳಲ್ಲಿ ಒಂದು. ಕಿಡ್ನಿ ಆರೋಗ್ಯಕ್ಕೆ ನೀರು ಅಗತ್ಯ. ಪ್ರತಿ ದಿನ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಖಲೀಲ್ ಮೊಹಮ್ಮದ್ ಅವರು ಸೇವಿಸುವ ನೀರಿನ ಪ್ರಮಾಣ ಹೆಚ್ಚಿದೆ. ಖಲೀಲ್ ಮೊಹಮ್ಮದ್ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ಆರರಿಂದ ಏಳು ಲೀಟರ್ ನೀರು ಸೇವನೆ ಮಾಡಬೇಕು. ಮೂರು ಕಿಡ್ನಿ ಪತ್ತೆಯಾದ ಬಳಿಕ ತಕ್ಷಣದಿಂದಲೇ ಖಲೀಲ್ ಮೊಹಮ್ಮದ್ ನೀರು ಸೇವನೆ ಹೆಚ್ಚು ಮಾಡಿದ್ದರು. ಹಾಗಾಗಿ ಅವರ ನೋವು ಕಡಿಮೆ ಆಗಿತ್ತು. 

click me!