
26 ವರ್ಷದ ರಾಜೇಶ್ (ಹೆಸರು ಬದಲಿಸಲಾಗಿದೆ) ಅವರಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಅವರು ಬಂಜೆತನದ ಪರೀಕ್ಷೆ ಮಾಡಿಸಿಕೊಂಡರು ದೆಹಲಿಯ ಆರ್ ಜಿ ಆಸ್ಪತ್ರೆಗೆ ದಾಖಲಾಗಿದ್ದರು.. ಆದರೆ ಎಂಆರ್‌ಐ ಮತ್ತು ಆನುವಂಶಿಕ ಪರೀಕ್ಷೆಯ ವರದಿ ವೈದ್ಯರನ್ನೇ ಅಚ್ಚರಿಗೊಳಿಸಿತು. ತನ್ನ ದೇಹದೊಳಗೆ ಈ ರೀತಿಯಾದ ಒಂದು ವಿಷಯ ಇದೆ ಅನ್ನೋದನ್ನು ರಾಜೇಶ್ ಕನಸಿನಲ್ಲೂ ಸಹ ಯೋಚನೆ ಮಾಡಿರಲಿಲ್ಲ. ಎಂಆರ್‌ಐ ಮತ್ತು ಜೆನೆಟಿಕ್ ಟೆಸ್ಟ್ ನಲ್ಲಿ ರಾಜೇಶ್ ಅವರ ದೇಹದೊಳಗೆ ಗರ್ಭಾಶಯ ಮತ್ತು ಫ್ಯಾಲೋಪಿಯನ್ ಟ್ಯೂಬ್‌ಗಳಂತಹ ಮಹಿಳೆಯರ ದೇಹದ ಒಳಗಿನ ರಚನೆಗಳು ಪತ್ತೆಯಾಗಿದ್ದವು. ಆದರೆ ರಾಜೇಶ್ ಅವರ ಕ್ರೋಮೋಸೋಮ್‌ಗಳು 46,XY ಆಗಿದ್ದು, ಅವರು ಅನುವಂಶಿಕವಾಗಿ ಪುರುಷರಾಗಿದ್ದಾರೆ. ವೈದ್ಯಕೀಯವಾಗಿ ಇದನ್ನು Persistent Müllerian Duct Syndrome (PMDS) ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದ್ದು, ಜಗತ್ತಿನಾದ್ಯಂತ ಸುಮಾರು 300 ಪ್ರಕರಣಗಳು ಮಾತ್ರ ವರದಿಯಾಗಿವೆ.
ತಾಯಿಯ ಗರ್ಭದಲ್ಲಿರುವಾಗ ಮಗುವಿನ ದೇಹದಲ್ಲಿ ಆರಂಭದಲ್ಲಿ ಎರಡು ರೀತಿಯ ನಾಳಗಳು ಇರುತ್ತವೆ. ಹೆಣ್ಣುಮಕ್ಕಳಲ್ಲಿ Müllerian ducts ಮುಂದಕ್ಕೆ ಗರ್ಭಾಶಯ ಮತ್ತು ಫ್ಯಾಲೋಪಿಯನ್ ಟ್ಯೂಬ್‌ಗಳನ್ನು ರೂಪಿಸುತ್ತವೆ. ಗಂಡುಮಕ್ಕಳಲ್ಲಿ Wolffian duct ಪುರುಷರ ಪ್ರಜನನ ಅಂಗ ಬೆಳೆಯಲು ಸಹಾಯ ಮಾಡುತ್ತದೆ. ಆದರೆ AMH ಎಂಬ ಹಾರ್ಮೋನ್ ಈ ನಾಳಗಳು ಬೆಳೆಯದಂತೆ ತಡೆಯುತ್ತದೆ. ಆದರೆ PMDS ಇರುವ ಕೆಲವು ಪುರುಷರಲ್ಲಿ AMH ಹಾರ್ಮೋನ್ ಅಥವಾ ಅದರ ಕಾರ್ಯವಿಧಾನ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಗರ್ಭಾಶಯ ಮತ್ತು ಟ್ಯೂಬ್‌ಗಳಂತಹ ರಚನೆಗಳು ದೇಹದೊಳಗೆ ಉಳಿದುಕೊಳ್ಳಬಹುದು. ಹೊರಗಿನಿಂದ ವ್ಯಕ್ತಿ ಸಾಮಾನ್ಯ ಪುರುಷನಂತೆಯೇ ಕಾಣಬಹುದು.
ಬಂಜೆತನದಿಂದ ಪತ್ತೆಯಾಗಬಹುದು
ಈ ಸ್ಥಿತಿ ಕೆಲವೊಮ್ಮೆ ಬಾಲ್ಯದಲ್ಲೇ ಪತ್ತೆಯಾಗುತ್ತದೆ. ವಿಶೇಷವಾಗಿ ಅಂಡಕೋಶಗಳು ಕೆಳಗೆ ಇಳಿಯದಿರುವುದು ಪ್ರಮುಖ ಸೂಚನೆಯಾಗಿರಬಹುದು. ಆದರೆ ಕೆಲವು ಪ್ರಕರಣಗಳಲ್ಲಿ ಯಾವುದೇ ಹೊರಗಿನ ಲಕ್ಷಣಗಳಿಲ್ಲದ ಕಾರಣ ವಯಸ್ಕರಾದ ನಂತರ ಬಂಜೆತನದ ಪರೀಕ್ಷೆ ವೇಳೆ ಪತ್ತೆಯಾಗುತ್ತದೆ. PMDS ತಕ್ಷಣ ಜೀವಕ್ಕೆ ಅಪಾಯ ಉಂಟುಮಾಡುವ ಸ್ಥಿತಿಯಲ್ಲ. ಆದರೆ ಹೊಟ್ಟೆಯೊಳಗೆ ದೀರ್ಘಕಾಲ ಉಳಿದ ಅಂಡಕೋಶಗಳಿಂದ ಕ್ಯಾನ್ಸರ್ ಅಪಾಯ ಮತ್ತು ಬಂಜೆತನದ ಸಮಸ್ಯೆ ಹೆಚ್ಚಾಗಬಹುದು. ಅಗತ್ಯವಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅಸಹಜ ರಚನೆಗಳು ಮತ್ತು ಅಂಡಕೋಶಗಳನ್ನು ತೆಗೆದುಹಾಕುತ್ತಾರೆ.
ಇದು ಜನ್ಮಜಾತ ಸ್ಥಿತಿಯಾಗಿದ್ದು, ಇದಕ್ಕೆ ಮಗುವಾಗಲಿ ಅಥವಾ ಪೋಷಕರದ್ದಾಗಲಿ ಯಾವುದೇ ತಪ್ಪಿಲ್ಲ. ಮಕ್ಕಳಲ್ಲಿ ಅಂಡಕೋಶಗಳು ಕೆಳಗೆ ಇಳಿಯದಿದ್ದರೆ ತಡ ಮಾಡದೆ ಯೂರೋಲಾಜಿಸ್ಟ್ ತಜ್ಞರನ್ನು ಸಂಪರ್ಕಿಸುವುದು ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.