ಜಸ್ಟ್ ಒನ್ ಪೆಗ್ ಕುಡಿದ್ರೆ ಏನಾಗಲ್ಲ ಅನ್ಬೇಡಿ, ಕಡಿಮೆ ಅಲ್ಕೋಹಾಲ್ ಸೇವನೆಯೂ ಕ್ಯಾನ್ಸರ್‌ಗೆ ಕಾರಣವಾಗುತ್ತೆ !

By Vinutha Perla  |  First Published Jan 12, 2023, 9:43 AM IST

ಅಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ಕೆಲವೊಬ್ಬರು ಸ್ಪಲ್ಪ ಕುಡಿದ್ರೆ ಎಲ್ಲ ಏನಾಗಲ್ಲಪ್ಪ ಅಂದ್ಕೊಳ್ತಾರೆ. ಆದ್ರೆ ಇದು ನಿಜವಲ್ಲ. ಕಡಿಮೆ ಪ್ರಮಾಣದ ಅಲ್ಕೋಹಾಲ್ ಸೇವನೆಯೂ ಕ್ಯಾನ್ಸರ್‌ಗೆ ಕಾರಣವಾಗ್ಬೋದು ಅಂತ WHO ಎಚ್ಚರಿಕೆ ನೀಡಿದೆ. 


ಧೂಮಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ ಒಂದು ಚಟ. ಇವುಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದಲ್ಲದೆ ಮತ್ಯಾವ ಪ್ರಯೋಜನವೂ ಇಲ್ಲ. ಹೀಗಿದ್ದೂ ಕೆಲವೊಬ್ಬರು ಅತಿಯಾದ ಖುಷಿಯಾದಾಗ, ದುಃಖವಾದಾಗ, ಟೆನ್ಶನ್ ಆದಾಗ ಒತ್ತಡ ನಿವಾರಿಸೋಕೆ ಅನ್ನೋ ನೆಪವನ್ನೊಡ್ಡಿ ಇವುಗಳನ್ನು ತೆಗೆದುಕೊಳ್ತಾರೆ. ಅದರಲ್ಲೂ ಅಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಮದ್ಯದ ಬಾಟಲ್‌ಗಳಲ್ಲೇ ಈ ಬಗ್ಗೆ ಸೂಚನೆ ಹಾಕಿರುತ್ತಾರೆ. ಹೀಗಿದ್ದರೂ ಕೆಲವೊಬ್ಬರು ನಾವೇನು ಹೆಚ್ಚು ಕುಡಿಯಲ್ಲ, ಕಡಿಮೆ ಕುಡಿದ್ರೆ ಏನ್ ಪ್ರಾಬ್ಲಂ ಆಗಲ್ಲ ಅಂತ ಮದ್ಯ ಸೇವನೆಯನ್ನೂ ಸಮರ್ಥಿಸಿಕೊಳ್ತಾರೆ. ಆದ್ರೆ ಸ್ಪಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೂ ಇದು ಕ್ಯಾನ್ಸರ್‌ಗೆ ಕಾರಣವಾಗ್ಬೋದು ಅನ್ನುತ್ತೆ WHO.ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಕರುಳಿನ ಕ್ಯಾನ್ಸರ್‌ಗೆ ಕಾರಣವಾಗುವ ಅಲ್ಕೋಹಾಲ್ ಸೇವನೆ
ಅತಿ ಕಡಿಮೆ ಪ್ರಮಾಣದ ಅಲ್ಕೋಹಾಲ್ ಸೇವನೆಯೂ ಕರುಳಿನ ಕ್ಯಾನ್ಸರ್‌(Bowel cancer)ಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಎಚ್ಚರಿಕೆ ನೀಡಿದೆ. ಈ ಮೂಲಕ ಕಡಿಮೆ ಮದ್ಯಪಾನ ಮಾಡುವುದರಿಂದ ಆರೋಗ್ಯಕ್ಕೆ (Health) ಯಾವುದೇ ರೀತಿ ತೊಂದರೆಯಿಲ್ಲ ಅನ್ನೋ ಜನರ ಅಭಿಪ್ರಾಯವನ್ನು ಅಲ್ಲಗಳೆದಿದೆ. ವಿಶ್ವ ಆರೋಗ್ಯ ಸಂಸ್ಥೆಯು ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್‌ನಲ್ಲಿ ಈ ಹೇಳಿಕೆಯನ್ನು ಪ್ರಕಟಿಸಿದೆ. ಅತಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವನೆಯೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಕ್ಯಾನ್ಸರ್‌ಗೂ ಕಾರಣವಾಗುತ್ತೆ ಎಂದಿದೆ. ಕರುಳಿನ ಕ್ಯಾನ್ಸರ್ ಮತ್ತು ಸ್ತ್ರೀ ಸ್ತನ ಕ್ಯಾನ್ಸರ್‌ನಂತಹ ಸಾಮಾನ್ಯವಾದವುಗಳನ್ನು ಒಳಗೊಂಡಂತೆ ಅಲ್ಕೊಹಾಲ್ ಕನಿಷ್ಠ ಏಳು ವಿಧದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

Tap to resize

Latest Videos

ಹೇರ್ ಕೇರ್ ಪ್ರಾಡಕ್ಟ್‌ನಲ್ಲಿರೋ ಈ ಕೆಮಿಕಲ್ ಕ್ಯಾನ್ಸರ್‌ಗೂ ಕಾರಣವಾಗುತ್ತೆ !

ಅಲ್ಕೋಹಾಲ್‌ ಸೇವಿಸದೇ ಇರುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಆದ್ರೆ ಹೆಚ್ಚು ಅಲ್ಕೋಹಾಲ್ ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯವು ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ. ಮಾತ್ರವಲ್ಲ WHOನ ಇತ್ತೀಚಿನ ಮಾಹಿತಿ, ಅರ್ಧದಷ್ಟು ಆಲ್ಕೋಹಾಲ್ ಆಟ್ರಿಬ್ಯೂಟಬಲ್ ಕ್ಯಾನ್ಸರ್‌ಗಳು ಲಘು ಮತ್ತು ಮಧ್ಯಮ ಪ್ರಮಾಣದ ಅಲ್ಕೋಹಾಲ್ ಸೇವನೆಯಿಂದ ಉಂಟಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದೆ. ಅಲ್ಕೋಹಾಲ್‌ ಸೇವನೆಯ ಬಳಿಕ ವಿವಿಧ ರೀತಿಯ ಕ್ಯಾನ್ಸರ್‌ಗಳಿಂದ ಉಂಟಾಗಿ ವ್ಯಕ್ತಿ ಸಾವನ್ನಪ್ಪುತ್ತಾನೆ. 

ಅಲ್ಕೋಹಾಲ್ ಕ್ಯಾನ್ಸರ್‌ಗೆ ಕಾರಣವಾಗೋದು ಹೇಗೆ ?

ಜೀವಕೋಶಗಳಿಗೆ ಹಾನಿ: ಅಲ್ಕೋಹಾಲ್ ಸೇವಿಸಿದಾಗ ದೇಹವು (Body) ಅದನ್ನು ಅಸಿಟಾಲ್ಡಿಹೈಡ್ ಎಂಬ ರಾಸಾಯನಿಕವಾಗಿ ಪರಿವರ್ತಿಸುತ್ತದೆ. ಅಸಿಟಾಲ್ಡಿಹೈಡ್ ನಮ್ಮ ಜೀವಕೋಶಗಳಿಗೆ ಹಾನಿಯನ್ನು ಉಂಟುಮಾಡಬಹುದು ಮತ್ತು ಈ ಹಾನಿಯನ್ನು ಸರಿಪಡಿಸದಂತೆ ಜೀವಕೋಶಗಳನ್ನು ನಿಲ್ಲಿಸಬಹುದು.

ಹಾರ್ಮೋನು ಬದಲಾವಣೆಗಳು: ಅಲ್ಕೋಹಾಲ್ ಈಸ್ಟ್ರೊಜೆನ್ ಮತ್ತು ಇನ್ಸುಲಿನ್‌ನಂತಹ ಕೆಲವು ಹಾರ್ಮೋನ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ. ಹಾರ್ಮೋನುಗಳು ರಾಸಾಯನಿಕ ಸಂದೇಶವಾಹಕಗಳಾಗಿವೆ ಮತ್ತು ಹೆಚ್ಚಿನ ಮಟ್ಟಗಳು ಜೀವಕೋಶಗಳನ್ನು ಹೆಚ್ಚಾಗಿ ವಿಭಜಿಸಬಹುದು. ಇದು ಕ್ಯಾನ್ಸರ್ ಕೋಶಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಹೆಚ್ಚಿಸುತ್ತದೆ.

ಟಾಲ್ಕಮ್ ಪೌಡರ್‌ ಬಳಸೋ ಮುನ್ನ ಎಚ್ಚರ, ಕ್ಯಾನ್ಸರ್‌ಗೂ ಕಾರಣವಾಗುತ್ತೆ

ಬಾಯಿ ಮತ್ತು ಗಂಟಲಿನ ಜೀವಕೋಶಗಳಲ್ಲಿ ಬದಲಾವಣೆ: ಅಲ್ಕೋಹಾಲ್ ಬಾಯಿ ಮತ್ತು ಗಂಟಲಿನ ಜೀವಕೋಶಗಳು ಹಾನಿಕಾರಕ ರಾಸಾಯನಿಕಗಳನ್ನು ಹೀರಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಕ್ಯಾನ್ಸರ್-ಉಂಟುಮಾಡುವ ವಸ್ತುಗಳು  ಜೀವಕೋಶದೊಳಗೆ ಪ್ರವೇಶಿಸಲು ಮತ್ತು ಹಾನಿಯನ್ನು ಉಂಟುಮಾಡಲು ಸುಲಭಗೊಳಿಸುತ್ತದೆ. ಹೀಗೆ ಒಟ್ಟು ಮೂರು ರೀತಿಯಲ್ಲಿ ಅಲ್ಕೋಹಾಲ್ ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತೆ. ಬಿಯರ್, ವೈನ್ ಅಥವಾ ಮದ್ಯವನ್ನು ಕುಡಿಯುತ್ತೀರಾ ಎಂಬುದು ಮುಖ್ಯವಲ್ಲ. ಎಲ್ಲಾ ರೀತಿಯ ಅಲ್ಕೊಹಾಲ್ಯುಕ್ತ ಪಾನೀಯಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು.

click me!