
New Blood Group Found: ಕರ್ನಾಟಕದ ಕೋಲಾರ ಜಿಲ್ಲೆಯ ಮಹಿಳೆಯಲ್ಲಿ ಅಪರೂಪದ ರಕ್ತದ ಗುಂಪು (Rare Blood group) ಪತ್ತೆಯಾಗಿದೆ. ಈ ರಕ್ತದ ಗುಂಪಿನ (Blood Group) ಬಗ್ಗೆ ಇದುವರೆಗೆ ಜಗತ್ತಿನ ಯಾವುದೇ ಭಾಗದಲ್ಲಿಯೂ ತಿಳಿದಿಲ್ಲ. ಮಹಿಳೆಗೆ 38 ವರ್ಷವಾಗಿದ್ದು, ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ದಾಖಲಿಸಿದಾಗ ಈ ಗಮನಾರ್ಹ ಪ್ರಕರಣ ಬೆಳಕಿಗೆ ಬಂದಿದೆ. ಅಂದಹಾಗೆ ಅವರ ರಕ್ತದ ಗುಂಪು O Rh+ ಆಗಿತ್ತು. ಇದು ಅತಿ ಅಪರೂಪದ
ಬ್ಲಡ್ ಗ್ರೂಪ್ ಆದ ಕಾರಣ ಲಭ್ಯವಿರುವ ಯಾವುದೇ O ಪಾಸಿಟಿವ್ ರಕ್ತದ ಘಟಕಗಳು ಅವರಿಗೆ ಹೊಂದಿಕೆಯಾಗಲಿಲ್ಲ. ಹೆಚ್ಚಿನ ತನಿಖೆಗಾಗಿ ಆಸ್ಪತ್ರೆಯು ಪ್ರಕರಣವನ್ನು ರೋಟರಿ ಬೆಂಗಳೂರು ಟಿಟಿಕೆ ಬ್ಲಡ್ ಸೆಂಟರ್‌ನಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೋರೇಟರಿ ಗಮನಕ್ಕೆ ತಂದಿತು.
ವೈದ್ಯರು ಹೇಳಿದ್ದೇನು?
"ಸುಧಾರಿತ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ನಮ್ಮ ತಂಡವು ಅವರ ರಕ್ತವು 'ಪ್ಯಾನ್ರಿಯಾಕ್ಟಿವ್' ಎಂದು ಕಂಡುಹಿಡಿದಿದೆ. ಅಂದರೆ ಎಲ್ಲಾ ಪರೀಕ್ಷಾ ಮಾದರಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಇದು ಅಪರೂಪದ ಬ್ಲಡ್ ಗ್ರೂಪ್ ಪ್ರಕರಣವೆಂದು ಗುರುತಿಸಿ, ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿತು. ಆದರೆ ಅವುಗಳಲ್ಲಿ ಯಾವುದೂ ಹೊಂದಿಕೆಯಾಗಲಿಲ್ಲ. ಪ್ರಕರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ಅವರ ವೈದ್ಯರು ಮತ್ತು ಕುಟುಂಬದ ಪ್ರಯತ್ನದಿಂದ, ರಕ್ತ ವರ್ಗಾವಣೆಯ ಅಗತ್ಯವಿಲ್ಲದೆ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು" ಎಂದು ಡಾ. ಮಾಥುರ್ ತಿಳಿಸಿದ್ದಾರೆ.
"ಈ ಮಧ್ಯೆ ಮಹಿಳೆ ಮತ್ತು ಅವರ ಕುಟುಂಬದವರ ರಕ್ತದ ಮಾದರಿಗಳನ್ನು ಯುಕೆಯ ಬ್ರಿಸ್ಟಲ್‌ನಲ್ಲಿರುವ ಐಬಿಜಿಆರ್‌ಎಲ್(International Blood Group Reference Laboratory)ಗೆ ಕಳುಹಿಸಲಾಯಿತು. ಹತ್ತು ತಿಂಗಳ ವ್ಯಾಪಕ ಸಂಶೋಧನೆ ಮತ್ತು ಆಣ್ವಿಕ ಪರೀಕ್ಷೆ(Molecular testing)ಯ ಪರಿಣಾಮವಾಗಿ ಹಿಂದೆ ತಿಳಿದಿಲ್ಲದ ರಕ್ತ ಗುಂಪು ಪ್ರತಿಜನಕವನ್ನು ಕಂಡುಹಿಡಿಯಲಾಯಿತು ಎಂದು ಮಾಥುರ್ ಹೇಳಿದರು.
CRIB ಪ್ರತಿಜನಕ ಹೊಂದಿರುವ ವಿಶ್ವದ ಮೊದಲ ಮಹಿಳೆ
ಕೋಲಾರದ ಮಹಿಳೆ ಸಿಆರ್‌ಐಬಿ ಪ್ರತಿಜನಕ (CRIB antigen) ಹೊಂದಿರುವ ವಿಶ್ವದ ಮೊದಲ ಮಹಿಳೆ. ಇಲ್ಲಿ 'CR' 'ಕ್ರೋಮರ್' ಅನ್ನು ಪ್ರತಿನಿಧಿಸುತ್ತದೆ ಮತ್ತು 'IB' 'ಭಾರತ'ವನ್ನು ಪ್ರತಿನಿಧಿಸುತ್ತದೆ, ಜೂನ್ 2025 ರಲ್ಲಿ ಇಟಲಿಯ ಮಿಲನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿಯ (ISBT) 35 ನೇ ಪ್ರಾದೇಶಿಕ ಸಮ್ಮೇಳನದಲ್ಲಿ ಈ ಐತಿಹಾಸಿಕ ಘೋಷಣೆಯನ್ನು ಮಾಡಲಾಯಿತು. ಈ ಮಹಿಳೆ CRIB ಪ್ರತಿಜನಕ ಹೊಂದಿರುವ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಡಾ. ಮಾಥುರ್ ಮಾಹಿತಿ ನೀಡಿದರು.
ಅಪರೂಪದ ರಕ್ತ ಪ್ರಕಾರಗಳು (Rarest Blood Types)
ಕರ್ನಾಟಕ ರಾಜ್ಯ ರಕ್ತ ವರ್ಗಾವಣೆ ಮತ್ತು ಮುಂಬೈನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ IIH ಕೇಂದ್ರದ ಸಹಭಾಗಿತ್ವದಲ್ಲಿ ಮತ್ತು ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿಯ ತಾಂತ್ರಿಕ ಬೆಂಬಲದೊಂದಿಗೆ, ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರವು ಸ್ವಯಂಪ್ರೇರಿತ ರಕ್ತದಾನಿಗಳ ಅಪರೂಪದ ದಾನಿ ನೋಂದಣಿಯನ್ನು ಪ್ರಾರಂಭಿಸಿದೆ.
"ಇತ್ತೀಚಿನ ವರ್ಷಗಳಲ್ಲಿ ನಾವು ಇತರ ಹಲವು ಅಪರೂಪದ ರಕ್ತ ಪ್ರಕಾರಗಳನ್ನು ಹೊಂದಿರುವ ರೋಗಿಗಳನ್ನು ಗುರುತಿಸುವಲ್ಲಿ ಮತ್ತು ಅವರಿಗೆ ಅತ್ಯುತ್ತಮ ರಕ್ತ ವರ್ಗಾವಣೆ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ. ಈ ಪ್ರಕರಣಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟಿಸಲಾಗಿದೆ ಮತ್ತು ಪ್ರಸ್ತುತಪಡಿಸಲಾಗಿದೆ (ಉದಾ: D-, Rh ಶೂನ್ಯ, B ಋಣಾತ್ಮಕ ಇತ್ಯಾದಿ)," ಎಂದು ವೈದ್ಯರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.