
ಸಕ್ಕರೆಯನ್ನು ಬಿಳಿ ವಿಷ ಎಂದು ಪರಿಗಣಿಸಲಾಗಿದೆ. ಸಕ್ಕರೆಯ ಅಧಿಕ ಸೇವನೆಯಿಂದಾಗುವ ಪರಿಣಾಮಗಳನ್ನು ಅರಿತರೆ ಅದು ಖಂಡಿತವಾಗಿ ವಿಷ ಎನ್ನುವುದು ಮನದಟ್ಟಾಗುತ್ತದೆ. ಕೆಲವರು ಸಿಹಿ ಇಷ್ಟವೆಂದು ಸಕ್ಕರೆಯನ್ನು ಹೆಚ್ಚು ಸೇವಿಸುತ್ತಾರೆ. ಚಹಾ, ಕಾಫಿಗೆ ಹೆಚ್ಚು ಸಕ್ಕರೆ ಬಳಕೆ ಮಾಡುತ್ತಾರೆ. ಸಿಹಿ ತಿಂಡಿಗಳ ಮೇಲೆ ಮತ್ತೆ ಸಕ್ಕರೆ ಉದುರಿಸಿಕೊಂಡು ತಿನ್ನುವವರಿದ್ದಾರೆ. ಕೆಲವು ಕಡೆಗಳಲ್ಲಿ ಹೋಳಿಗೆ ಅಥವಾ ಒಬ್ಬಟ್ಟಿಗೆ ಮೇಲಿನಿಂದ ಸಕ್ಕರೆಪಾಕವನ್ನು ಬಳಕೆ ಮಾಡುತ್ತಾರೆ. ಆದರೆ, ಅಧಿಕ ಸಕ್ಕರೆಯ ಸೇವನೆ ಆರೋಗ್ಯದ ಮೇಲೆ ಹಲವಾರು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ತೂಕ ಹೆಚ್ಚಳಕ್ಕೆ ಸಕ್ಕರೆ ಬಹುಮುಖ್ಯ ಕೊಡುಗೆ ನೀಡುತ್ತದೆ ಎನ್ನುವ ಅರಿವಿರಲಿ. ನಿಮಗೆ ತೂಕ ಇಳಿಸಿಕೊಳ್ಳಬೇಕೆಂಬ ಮನಸ್ಸಿದ್ದರೆ ಸಕ್ಕರೆಯುಕ್ತ ಸಿಹಿಯನ್ನು ಸಂಪೂರ್ಣವಾಗಿ ತ್ಯಜಿಸಿ ನೋಡಿ, ಬಹುಬೇಗ ಪರಿಣಾಮ ಗೋಚರಿಸುತ್ತದೆ. ಅಷ್ಟೇ ಅಲ್ಲ, ಸಕ್ಕರೆ ದೇಹದಲ್ಲಿ ದೀರ್ಘಕಾಲದ ಆರೋಗ್ಯ ಸಮಸ್ಯೆ ಉಂಟುಮಾಡುತ್ತದೆ. ದಂತಕುಳಿಯ ಸಮಸ್ಯೆಯಿಂದ ಹಿಡಿದು ಕ್ಯಾನ್ಸರ್ ವರೆಗೂ ಸಕ್ಕರೆಯ ಪಾತ್ರವಿದೆ. ಅರಿವಿಲ್ಲದೇ ನೀವೂ ಸಹ ಸಿಹಿಯ ಓವರ್ ಲೋಡ್ ನಿಂದ ಬಳಲುತ್ತಿದ್ದೀರಾ? ಹಾಗಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಸಿಹಿ ಹೆಚ್ಚಾದರೆ ದೇಹದಲ್ಲಿ ಏನಾಗುತ್ತದೆ ಎಂದು ನೋಡಿ.
• ತೂಕ ಏರಿಕೆ (Weight Gain)
ವಿಶ್ವಾದ್ಯಂತ ಇಂದು ಬೊಜ್ಜುದೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಥೂಲಕಾಯದ (Obesity) ಸಮಸ್ಯೆ ಎಲ್ಲೆಡೆ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಕ್ಕರೆ (Sugar). ಸಕ್ಕರೆಯ ಸಿಹಿಯುಳ್ಳ (Sweet) ಪಾನೀಯಗಳು (Beverages) ಸ್ಥೂಲಕಾಯ ಏರಿಕೆಗೆ ಪ್ರಮುಖ ಕೊಡುಗೆ ನೀಡುತ್ತಿವೆ. ಸೋಡಾ, ಸಾಫ್ಟ್ ಡ್ರಿಂಕ್ಸ್, ಜ್ಯೂಸ್, ಚಹಾ-ಕಾಫಿ ಸೇರಿದಂತೆ ಸಂಸ್ಕರಿತ (Processed) ಆಹಾರಗಳಲ್ಲಿ ಸಕ್ಕರೆಯ ಅಂಶ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ನೀವು ಮನೆಯಲ್ಲಿ ಜ್ಯೂಸ್ ಮಾಡಿಕೊಂಡು ನೋಡಿ, ಎಷ್ಟು ಚಮಚ ಸಕ್ಕರೆ ಬೆರೆಸಿದರೂ ಸಿಹಿ ಎನಿಸುವುದಿಲ್ಲ. ಕನಿಷ್ಠ ನಾಲ್ಕು ಚಮಚ ಸಕ್ಕರೆ ಸೇರಿಸಿದರೆ ಮಾತ್ರ ಸಿಹಿಯಾಗುತ್ತದೆ. ಅಂದರೆ, ಜ್ಯೂಸ್ ಸಕ್ಕರೆಯಿಂದಲೇ ಹಾನಿಕರವಾಗುತ್ತದೆ.
Health Tips: ವಿಟಮಿನ್ ಡಿ ಮಾತ್ರೆ ತಗೋತೀರಾ? ಹುಷಾರು, ಹೆಚ್ಚಾಗದಂತೆ ನೋಡ್ಕೊಳಿ
• ಕ್ಯಾನ್ಸರ್ (Cancer)
ಸಕ್ಕರೆಯ ಸೇವನೆಯಿಂದ ಕೆಲವು ಮಾದರಿಯ ಕ್ಯಾನ್ಸರ್ ವೃದ್ಧಿಯಾಗುವ ಅಪಾಯ (Danger) ಹೆಚ್ಚು. ಸಕ್ಕರೆಯುಕ್ತ ಆಹಾರ ಮತ್ತು ಪಾನೀಯಗಳಿಂದ ಕ್ಯಾನ್ಸರ್ ಸಂಭವ ಇರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಅಲ್ಲದೆ, ಕ್ಯಾನ್ಸರ್ ಇರುವಾಗ ಸಕ್ಕರೆ ಸೇವನೆ (Intake) ಮಾಡಿದರೆ ಅದು ಉಲ್ಬಣವಾಗುತ್ತದೆ. ಇನ್ನು, ಮಧುಮೇಹಿಗಳಂತೂ (Diabetics) ಸಕ್ಕರೆಯನ್ನು ಮರೆತುಬಿಡುವುದು ಕ್ಷೇಮ. ಮಧುಮೇಹದಿಂದಾಗಿ ದೇಹದ ವಿವಿಧ ಅಂಗಗಳು ಘಾಸಿಗೆ ಒಳಗಾಗಬಾರದು ಎಂದಾದರೆ ಸಕ್ಕರೆಯಿಂದ ದೂರವಿರಲೇ ಬೇಕು.
• ಉರಿಯೂತ ಮತ್ತು ಗುಳ್ಳೆಗಳು (Inflammation and Acne)
ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಿದಾಗ ದೇಹದ ವಿವಿಧ ಭಾಗಗಳಲ್ಲಿ ಉರಿಯೂತ ಕಂಡುಬರುತ್ತದೆ. ಇದರಿಂದಾಗ ಚರ್ಮದ (Skin) ಮೇಲೆ ಗುಳ್ಳೆಗಳು ಏಳುತ್ತವೆ. ಸಕ್ಕರೆಯಿಂದ ಇನ್ಸುಲಿನ್ (Insulin) ಮಟ್ಟದಲ್ಲಿ ಏರಿಕೆಯಾಗಿ ಮೇದೋಗ್ರಂಥಿಗಳ ಸ್ರಾವ ಹೆಚ್ಚುತ್ತದೆ. ಪರಿಣಾಮವಾಗಿ ಚರ್ಮದ ರಂಧ್ರಗಳು (Pores) ಕಟ್ಟಿಕೊಂಡುಬಿಡುತ್ತವೆ. ಆಗ ಗುಳ್ಳೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಸೃಷ್ಟಿಯಾಗುತ್ತವೆ.
• ಖಿನ್ನತೆ (Depression)
ಖಿನ್ನತೆಗೂ ಸಕ್ಕರೆಗೂ ಭಾರೀ ನಂಟಿದೆ ಎಂದರೆ ಅಚ್ಚರಿಯಾಗಬಹುದು. ಆರೋಗ್ಯಕರ ಆಹಾರ ಪದ್ಧತಿ (Healthy Food Diet) ಮನಸ್ಥಿತಿಯನ್ನು ಉತ್ತಮಪಡಿಸಿದರೆ ಸಕ್ಕರೆ ಹಾಗೂ ಸಕ್ಕರೆಯುಕ್ತ ಸಂಸ್ಕರಿತ ಆಹಾರಗಳು ಮನಸ್ಥಿತಿ (Mood) ಮತ್ತು ಭಾವನೆಗಳ (Emotions) ಮೇಲೆ ಭಾರೀ ಪರಿಣಾಮ ಬೀರುತ್ತದೆ. ಸಕ್ಕರೆ ಸೇವನೆ ಹೆಚ್ಚಿದಾಗ ಖಿನ್ನತೆ ಉಂಟಾಗುವ ಅಪಾಯ ಹೆಚ್ಚು. ಇದರಿಂದಾಗಿ ಆರೋಗ್ಯದಲ್ಲಿ ಭಾರೀ ಏರುಪೇರಾಗಬಹುದು.
Iron Deficiency: ಅಮೆರಿಕಾ ಹುಡ್ಗೀರನ್ನೂ ಬಿಡದ ಈ ಕಾಯಿಲೆ ನಮ್ಮನ್ ಬಿಡುತ್ತಾ
• ಚರ್ಮಕ್ಕೆ ವಯಸ್ಸಾಗುತ್ತೆ (Aging Skin)
ಸಕ್ಕರೆಯಿಂದ ನಮ್ಮ ಚರ್ಮ ಬಹುಬೇಗ ಕಳೆಗುಂದುತ್ತದೆ. ಬರೀ ಕಳೆಗುಂದುವುದಷ್ಟೇ ಅಲ್ಲ, ಚರ್ಮದ ವಯಸ್ಸಾಗುವಿಕೆಯ ವೇಗ ದ್ವಿಗುಣವಾಗುತ್ತದೆ, ಚರ್ಮದಲ್ಲಿ ನೆರಿಗೆಗಳು (Wrinkles) ಮೂಡುತ್ತವೆ. ಸಕ್ಕರೆಯುಕ್ತ ಕಳಪೆ ಆಹಾರದಿಂದ ಚರ್ಮ ಅವಧಿಗೂ ಮುನ್ನವೇ ವೃದ್ಧಾಪ್ಯಕ್ಕೆ ತುತ್ತಾಗುವುದರಿಂದ ಹಲವು ರೀತಿಯ ಪರಿಣಾಮಗಳು ಉಂಟಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.