9 ತಿಂಗಳ ಗರ್ಭಿಣಿಗೆ ಸಿ-ಸೆಕ್ಷನ್ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್! ಗರ್ಭದಿಂದಲೇ ಕಣ್ಮರೆಯಾಗಿದ್ದ ಮಗು

Published : Sep 04, 2026, 10:36 AM IST
C section

ಸಾರಾಂಶ

No baby found after C-section: 9 ತಿಂಗಳ ಗರ್ಭಿಣಿ ಎಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ (C-Section) ಮಾಡಿದಾಗ ವೈದ್ಯರು ದಂಗಾಗಿದ್ದಾರೆ. ಏಕೆಂದರೆ ಆಕೆಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ! ಸದ್ಯ ತನಿಖೆ ಮುಂದುವರಿದಿದ್ದು, ಈ ವಿಶಿಷ್ಟ ಘಟನೆ ಜಾಗತಿಕವಾಗಿ ಸುದ್ದಿಯಾಗಿದೆ.

ಪಾಕಿಸ್ತಾನದ ಕರಾಚಿಯಲ್ಲಿ ವೈದ್ಯಕೀಯ ಜಗತ್ತನ್ನೇ ಬೆಚ್ಚಿಬೀಳಿಸುವಂತಹ ಅಚ್ಚರಿಯ ಮತ್ತು ವಿಶಿಷ್ಟ ಘಟನೆಯೊಂದು ನಡೆದಿದೆ. 9 ತಿಂಗಳ ಗರ್ಭಿಣಿ ಎಂದು ನಂಬಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದಾಗ, ವೈದ್ಯರಿಗೆ ಹೊಟ್ಟೆಯಲ್ಲಿ ಮಗುವೇ ಸಿಗಲಿಲ್ಲ! ಇದು ಬರೀ ವೈದ್ಯಕೀಯ ಅಚ್ಚರಿಯಲ್ಲ, ಬದಲಾಗಿ ಒಬ್ಬ ಮಹಿಳೆ ಸಮಾಜದ ಒತ್ತಡಕ್ಕೆ ಹೆದರಿ ಹೆಣೆದ ಕರಾಳ ಸುಳ್ಳಿನ ಕಥೆ.

ಆಪರೇಷನ್ ಥಿಯೇಟರ್‌ನಲ್ಲಿ ಸೃಷ್ಟಿಯಾದ ಗೊಂದಲ

ಕರಾಚಿಯ ನಜೀಮಾಬಾದ್ ಪ್ರದೇಶದ ಹಮ್ದರ್ದ್ ಆಸ್ಪತ್ರೆಗೆ ಮಹಿಳೆಯೊಬ್ಬರನ್ನು ಆಕೆಯ ಕುಟುಂಬದವರು ಹೆರಿಗೆಗಾಗಿ ಕರೆತಂದಿದ್ದರು. ಆಕೆಯ ಬಳಿ ತಾನು 38 ವಾರಗಳ ಗರ್ಭಿಣಿ ಎಂದು ಸಾಬೀತುಪಡಿಸುವ ಅಲ್ಟ್ರಾಸೌಂಡ್ ವರದಿಗಳಿದ್ದವು. ಆಪರೇಷನ್ ಥಿಯೇಟರ್ ಹೊರಗೆ ಪತಿ ಮತ್ತು ಅತ್ತೆ-ಮಾವ ಮಗುವಿನ ಕಿರುನಗು ಕೇಳಲು ಕಾತುರದಿಂದ ಕಾಯುತ್ತಿದ್ದರು. ಆದರೆ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆ ಆರಂಭಿಸಿದ ವೈದ್ಯರಿಗೆ ಹೊಟ್ಟೆಯಲ್ಲಿ ಮಗುವೇ ಕಾಣಿಸಲಿಲ್ಲ. ಮಗು ಮಾಯವಾಗಿದೆ ಎಂದು ಗಾಬರಿಗೊಂಡ ಕುಟುಂಬದವರು ಆಸ್ಪತ್ರೆಯ ವೈದ್ಯರು ಮಗುವನ್ನು ಕದ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಗಲಾಟೆ ಆರಂಭಿಸಿದರು. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಅಸಲಿ ಸತ್ಯ ಬಯಲಾಯಿತು.

ಕೊನೆಯ ಕ್ಷಣದವರೆಗೂ ಸಂಶಯ ಬಂದಿರಲಿಲ್ಲ

ಪೊಲೀಸ್ ತನಿಖೆಯಲ್ಲಿ ತಿಳಿದುಬಂದ ಸತ್ಯಾಂಶ ಎಲ್ಲರನ್ನೂ ದಂಗಾಗಿಸಿತು. ಆ ಮಹಿಳೆ ಅಸಲಿಗೆ ಗರ್ಭಿಣಿಯೇ ಆಗಿರಲಿಲ್ಲ! ಮದುವೆಯಾಗಿ ಮೂರು ವರ್ಷ ಕಳೆದರೂ ತಾಯಿಯಾಗದ ಕಾರಣ ಪತಿ ಮತ್ತು ಸಮಾಜದ ಟೀಕೆಗೆ ಹೆದರಿ ಆಕೆ ತಾನು ಗರ್ಭಿಣಿ ಎಂಬ ಸುಳ್ಳು ನಾಟಕವಾಡಲು ಶುರುಮಾಡಿದ್ದಳು. ಕಾಲ ಕಳೆದಂತೆ ತಾನು ನಿಜವಾಗಿಯೂ ಗರ್ಭಿಣಿಯಾಗಬಹುದು ಎಂದು ಆಕೆ ನಂಬಿದ್ದಳು. ಆದರೆ ಅದು ಸಾಧ್ಯವಾಗದಿದ್ದಾಗ ನಕಲಿ ವೈದ್ಯಕೀಯ ವರದಿಗಳನ್ನು ಸೃಷ್ಟಿಸಿ ಮನೆಯವರನ್ನು ನಂಬಿಸಿದ್ದಳು. ಕೊನೆಗೆ ಹೆರಿಗೆಯ ಸಮಯ ಬಂದಾಗ ವಿಧಿಯಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದಳು. ಈಕೆಯ ಸುಳ್ಳು ಎಷ್ಟು ಗಟ್ಟಿಯಾಗಿತ್ತೆಂದರೆ ಮನೆಯವರಿಗಾಗಲಿ ಅಥವಾ ವೈದ್ಯರಿಗಾಗಲಿ ಕೊನೆಯ ಕ್ಷಣದವರೆಗೂ ಸಂಶಯ ಬಂದಿರಲಿಲ್ಲ.

ವೈದ್ಯಕೀಯ ವ್ಯವಸ್ಥೆಯ ವೈಫಲ್ಯ

ಈ ಪ್ರಕರಣವು ಈಗ ವೈದ್ಯಕೀಯ ವ್ಯವಸ್ಥೆಯ ಮೇಲೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಒಬ್ಬ ಮಹಿಳೆ ಗರ್ಭಿಣಿಯೇ ಅಲ್ಲದಿದ್ದರೂ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೆ ಹೇಗೆ ಮುಂದಾದರು? ಸಿ-ಸೆಕ್ಷನ್ ಮಾಡುವ ಮೊದಲು ರಕ್ತದ ಪರೀಕ್ಷೆ ಅಥವಾ ಕನಿಷ್ಠ ದೈಹಿಕ ಪರೀಕ್ಷೆಗಳನ್ನು ಮಾಡದಿರುವುದು ಆಸ್ಪತ್ರೆಯ ದೊಡ್ಡ ನಿರ್ಲಕ್ಷ್ಯವಲ್ಲವೇ ಎಂಬ ಟೀಕೆ ಕೇಳಿಬಂದಿದೆ. ಸದ್ಯ ಅಲ್ಲಿನ ಆರೋಗ್ಯ ಇಲಾಖೆಯು ಆಸ್ಪತ್ರೆಯ ವಿರುದ್ಧ ತನಿಖೆ ನಡೆಸುತ್ತಿದೆ. ಸಮಾಜವು ಮಹಿಳೆಯರ ಮೇಲೆ ಮಗು ಪಡೆಯುವಂತೆ ಹೇರುವ ಅತಿಯಾದ ಒತ್ತಡವು ಒಬ್ಬ ವ್ಯಕ್ತಿಯನ್ನು ಎಂತಹ ಮಾನಸಿಕ ಸ್ಥಿತಿಗೆ ತಳ್ಳುತ್ತದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಸದ್ಯ ತನಿಖೆ ಮುಂದುವರಿದಿದ್ದು, ಈ ವಿಶಿಷ್ಟ ಘಟನೆ ಜಾಗತಿಕವಾಗಿ ಸುದ್ದಿಯಾಗಿದೆ.

ಭಾರತದಲ್ಲೂ ಗ್ರಾಮೀಣ ಭಾಗಗಳಲ್ಲಿ ಮಗುವಾಗದ ಮಹಿಳೆಯರು ಅತ್ತೆ-ಮಾವ ಅಥವಾ ಪತಿಯ ಕಿರುಕುಳಕ್ಕೆ ಹೆದರಿ ತಾನು ಗರ್ಭಿಣಿ ಎಂದು ಸುಳ್ಳು ಹೇಳಿ, ಹೆರಿಗೆಯ ಸಮಯ ಬಂದಾಗ ಯಾವುದೋ ಮಗುವನ್ನು ಕದಿಯಲು ಹೋದಾಗ ಅಥವಾ ಸುಳ್ಳು ಬಯಲಾದಾಗ ಸಿಕ್ಕಿಬಿದ್ದ ಘಟನೆಗಳು ವರದಿಯಾಗಿವೆ.

ವಿಜ್ಞಾನ ಹೇಳುವುದೇನು?

ಮಗುವಾಗಲೇಬೇಕು ಎಂಬ ತೀವ್ರ ಆಸೆ ಅಥವಾ ಸಮಾಜದ ಭಯದಿಂದ ಮಹಿಳೆಯ ಮಿದುಳು ದೇಹಕ್ಕೆ ತಪ್ಪು ಸಂದೇಶ ರವಾನಿಸುತ್ತದೆ. ಆಗ ಗರ್ಭಿಣಿಯರಿಗಾಗುವ ಎಲ್ಲ ದೈಹಿಕ ಬದಲಾವಣೆಗಳು (ಹೊಟ್ಟೆ ದಪ್ಪಗಾಗುವುದು, ಮುಟ್ಟು ನಿಲ್ಲುವುದು) ಅವರಲ್ಲಿ ಕಾಣಿಸಿಕೊಳ್ಳುತ್ತವೆ. ಇದನ್ನು ಅವರು ನಿಜವೆಂದೇ ನಂಬುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಕ್ಕಳಲ್ಲಿ ಜಂತು ಹುಳು: ಪತ್ತೆ ಹಚ್ಚುವುದು ಹೇಗೆ?
Peanuts: ದಿನಾ ಒಂದು ಹಿಡಿ ಕಡಲೆಕಾಯಿ ತಿಂದ್ರೆ ಎಷ್ಟೆಲ್ಲಾ ಪ್ರಯೋಜನಯಿದೆ ಗೊತ್ತಾ?