ಯೋಗ ಆರೋಗ್ಯಕ್ಕೆ ಒಳ್ಳೆಯದು ಅಂತಾ ಹೇಗ್ ಹೇಗೋ ಯೋಗ ಮಾಡೋದು ಯೋಗ್ಯವಲ್ಲ. ನಿತ್ಯ ಮಾಡುವ ಯೋಗ ಅಡ್ಡಪರಿಣಾಮ ನೀಡದೆ ಲಾಭವಾಗ್ಬೇಕೆಂದ್ರೆ ಅದ್ರ ಬಗ್ಗೆ ಮಾಹಿತಿ ಇರಬೇಕು. ಲಾಭ – ನಷ್ಟಗಳನ್ನು ತಿಳಿದಿರಬೇಕು.
ಆರೋಗ್ಯಕರವಾಗಿರೋದು ಎಷ್ಟು ಮುಖ್ಯ ಎಂಬುದು ಕೊರೊನಾ ನಂತ್ರ ಜನರಿಗೆ ಸ್ಪಷ್ಟವಾಗಿದೆ. ಈ ಹಿಂದೆ ವ್ಯಾಯಾಮ, ಯೋಗಕ್ಕೆ ಮಹತ್ವ ನೀಡದ ಜನರು ಕೂಡ ಈಗ ದೇಹವನ್ನು ಆರೋಗ್ಯವಾಗಿಡಲು ಯೋಗದ ಮೊರೆ ಹೋಗ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಯೋಗವನ್ನು ಕಲಿಯುತ್ತಿದ್ದಾರೆ. ಯೋಗ, ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಯೋಗದಿಂದ ಆಗುವ ಲಾಭವನ್ನು ಲೆಕ್ಕ ಹಾಕ್ತಾ ಹೋದ್ರೆ ಪಟ್ಟಿ ದೊಡ್ಡದಾಗುತ್ತದೆ. ಯೋಗ ನಮ್ಮ ಉಸಿರಾಗಿರಬೇಕು ಎನ್ನುವವರಿದ್ದಾರೆ. ಪ್ರತಿ ನಿತ್ಯ ಒಂದೆರಡು ಗಂಟೆ ನಿರಂತರ ಯೋಗ ಮಾಡುವವರಿದ್ದಾರೆ. ಯೋಗದಿಂದ ಏನೆಲ್ಲ ಲಾಭವಿದೆ ಎಂಬುದನ್ನು ಓದಿ, ನೋಡಿ ತಿಳಿಯುವ ಜನರು ತಾವೂ ಯೋಗ ಮಾಡಲು ಮುಂದಾಗ್ತಾರೆ. ಆದ್ರೆ ಯೋಗ ಬರೀ ವ್ಯಾಯಾಮ ಮಾತ್ರವಲ್ಲ. ಅದಕ್ಕೊಂದು ಶಿಸ್ತಿನ ಅಗತ್ಯವಿರುತ್ತದೆ. ನೀವು ಯೋಗದಲ್ಲಿ ಮಾಡುವ ಕೆಲ ತಪ್ಪುಗಳಿಂದ ಸಮಸ್ಯೆ ನಿಮ್ಮನ್ನು ಕಾಡಬಹುದು.
ಯಾವುದೇ ವ್ಯಕ್ತಿ ಯೋಗ (Yoga) ಶುರು ಮಾಡುವ ಮುನ್ನ ಕೆಲವೊಂದು ಸಂಗತಿಯನ್ನು ತಿಳಿದಿರಬೇಕು. ಅತಿಯಾದ್ರೆ ಎಲ್ಲವೂ ಅಪಾಯ. ಇದಕ್ಕೆ ಯೋಗವೂ ಹೊರತಾಗಿಲ್ಲ. ನಾವಿಂದು ಯೋಗದಿಂದಾಗುವ ನಷ್ಟಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
undefined
YOGA FOR SEX: ಯೋಗದಿಂದ ಸೆಕ್ಸ್ ಲೈಫನ್ನೂ ಸುಧಾರಿಸಬಹುದು!
ಯೋಗದಿಂದ ಯಾವೆಲ್ಲ ಹಾನಿ (Damage) ಯಿದೆ ಗೊತ್ತಾ? : ಯೋಗ ಹಾಗೂ ವ್ಯಾಯಾಮಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಯೋಗದಲ್ಲಿ ವ್ಯಾಯಾಮದಂತೆ ಬೆವರು ಬರಬಾರದು. ಉಸಿರಾಟದ ಮೇಲೆ ಯೋಗ ನಿಂತಿರುತ್ತದೆ. ನೀವು ಮಾಡುವ ಭಂಗಿಯ ಮೇಲೂ ಗಮನವಿರಬೇಕು. ನಿಯಮಿತವಾಗಿ ಹಾಗೂ ಸರಿಯಾದ ರೀತಿಯಲ್ಲಿ ನೀವು ಯೋಗ ಮಾಡಿದ್ರೆ ದೈಹಿಕ ಸ್ಥಿರತೆ, ಒತ್ತಡ ನಿವಾರಣೆಯಾಗುವ ಜೊತೆಗೆ ಮಾನಸಿಕ ಶಾಂತಿ ಸಿಗುತ್ತದೆ.
ಅಗತ್ಯಕ್ಕಿಂತ ಹೆಚ್ಚು ಯೋಗ ಮಾಡ್ಬೇಡಿ : ಎಲ್ಲರೂ ಎಲ್ಲ ಯೋಗಾಸನ ಮಾಡಲು ಸಾಧ್ಯವಿಲ್ಲ. ನಮ್ಮ ದೇಹ (Body) ಅದಕ್ಕೆ ಸೂಕ್ತವಾಗಿರೋದಿಲ್ಲ. ನಮ್ಮ ದೇಹ ಯಾವುದನ್ನು ಮಾಡಬಲ್ಲದು ಎಂಬುದರ ಅರಿವು ನಿಮಗಿರಬೇಕು. ನಿಮ್ಮ ದೇಹವನ್ನು ಒತ್ತಾಯಿಸಿ ಯೋಗ ಮಾಡುವುದು ಸೂಕ್ತವಲ್ಲ. ಆರಂಭದಲ್ಲಿ ಸುಲಭವಾದ ಯೋಗಾಸನಗಳನ್ನು ಅಭ್ಯಾಸ ಮಾಡಿ, ದೇಹ ಹೊಂದಿಕೊಂಡ ನಂತ್ರ ನೀವು ಕಠಿಣ ಆಸನಗಳನ್ನು ಮಾಡಬೇಕು. ಅತಿಯಾದ ಉತ್ಸಾಹದಲ್ಲಿ ಕಠಿಣ ಆಸನಗಳನ್ನು ಒಂದೇ ಬಾರಿ ಮಾಡಿದ್ರೆ ಅಪಾಯವುಂಟಾಗುತ್ತದೆ. ಅನಗತ್ಯ ಬಲ ಪ್ರಯೋಗ ಮಾಡಿ ಆಸನ ಮಾಡಬಾರದು. ಹಾಗೆಯೇ ನಿಮಗೆ ಕಷ್ಟವೆನಿಸಿದ ಆಸನವನ್ನು ನೀವು ಬಿಡಬಹುದು. ಆಸನದ ನಂತ್ರ ಆಯಾಸವಾದ್ರೆ ವಿಶ್ರಾಂತಿ ಪಡೆದು ಮತ್ತೆ ಮಾಡಬಹುದು.
ನೀರಿನ ಮೇಲೆ ಮಲಗಿದ ಯೋಗ ಸಾಧಕ: ಜಲಯೋಗ ನೀವು ಪ್ರಯತ್ನಿಸಬೇಡಿ
• ಯೋಗವನ್ನು ನೀವು ಅತಿಯಾಗಿ ಮಾಡಿದಾಗ ನಿಮ್ಮ ಮುಖ ಕೆಂಪಾಗುತ್ತದೆ. ವಾಕರಿಗೆ ಬಂದಂತಾಗುತ್ತದೆ. ದಣಿವು ನಿಮ್ಮನ್ನು ಕಾಡುತ್ತದೆ.
• ಅತಿಯಾಗಿ ಯೋಗ ಮಾಡಿದ್ರೆ ನಿಮ್ಮ ಉಸಿರಾಟದ ಮೇಲೆ ಅಡ್ಡಪರಿಣಾಮವುಂಟಾಗುತ್ತದೆ.
• ದೇಹದ ಯಾವುದೇ ಭಾಗದಲ್ಲಿ ಊತ ಕಾಣಿಸಿಕೊಂಡ್ರೆ ನೀವು ಮಿತಿಗಿಂತ ಹೆಚ್ಚು ಯೋಗ ಮಾಡಿದ್ದೀರಿ ಎಂದರ್ಥ.
ತರಬೇತಿ ಇಲ್ಲವೆಂದ್ರೆ ಅಪಾಯ : ನೀವು ತಪ್ಪಾದ ಭಂಗಿಯಲ್ಲಿ ಯೋಗಾಸನ ಮಾಡಿದ್ರೆ ಗಾಯಗಳಾಗುವುದು, ಮೂಳೆ ಮುರಿಯುವ ಅಪಾಯವಿರುತ್ತದೆ. ಹಾಗಾಗಿ ನೀವು ಯೋಗಾಸನ ಆರಂಭಿಸುವ ಮೊದಲು ಸೂಕ್ತ ತರಬೇತಿ ಪಡೆಯಿರಿ. ಯಾವ ಭಂಗಿಯನ್ನು ಹೇಗೆ ಮಾಡ್ಬೇಕೆಂಬ ಬಗ್ಗೆ ಜ್ಞಾನವಿರಲಿ.
ಆರೋಗ್ಯಕ್ಕೆ ತಕ್ಕಂತೆ ಯೋಗಾಸನ : ಕತ್ತು ನೋವು, ಸೊಂಟ ನೋವು, ಕಾಲಿನ ನೋವು ಅಥವಾ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಆರೋಗ್ಯ ಸಮಸ್ಯೆಯಿರುವವರು ಬೇಕಾಬಿಟ್ಟಿ ಯೋಗ ಮಾಡಬಾರದು. ಯಾವ ಕಾಯಿಲೆಗೆ ಯಾವ ಯೋಗ ಸೂಕ್ತವೋ ಅದೇ ರೀತಿ ಯಾವ ಕಾಯಿಲೆಗೆ ಯಾವ ಭಂಗಿ ಅಪಾಯಕಾರಿ ಎಂಬುದನ್ನು ಅರಿತು ಮಾಡಬೇಕು. ಇಲ್ಲವೆಂದ್ರೆ ನೀವು ಮಾಡುವ ಯೋಗಾಸನ ನಿಮ್ಮ ನೋವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಬಹುದು.
ಯೋಗ ಮಾಡಿದ ತಕ್ಷಣ ಸ್ನಾನ : ಯೋಗ ಮಾಡುವ ಪ್ರತಿಯೊಬ್ಬ ವ್ಯಕ್ತಿ ಅದ್ರ ನಿಯಮ ತಿಳಿದಿರಬೇಕು. ಯಾವ ಭಂಗಿಯಲ್ಲಿ ಉಸಿರನ್ನು ತೆಗೆದುಕೊಳ್ಳಬೇಕು, ಬಿಡಬೇಕು ಎಂಬುದಲ್ಲದೆ, ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಬೇಕು ಎಂಬ ಅರಿವಿರಬೇಕು. ಹಾಗೆಯೇ ಯೋಗವಾದ ತಕ್ಷಣ ಸ್ನಾನ ಮಾಡಬಾರದು ಎಂಬ ಮಾಹಿತಿ ತಿಳಿದಿರಬೇಕು. ತಕ್ಷಣ ಸ್ನಾನ ಮಾಡಿದ್ರೆ ಶೀತ ಮತ್ತು ಕಫದಂತಹ ಸಮಸ್ಯೆ ನಿಮ್ಮನ್ನು ಕಾಡುತ್ತದೆ.