ದೇಶದ ಮೊದಲ ಮಂಕಿಪಾಕ್ಸ್‌ ಸೋಂಕಿತ ಗುಣಮುಖ

Published : Jul 31, 2022, 01:24 PM IST
ದೇಶದ ಮೊದಲ ಮಂಕಿಪಾಕ್ಸ್‌ ಸೋಂಕಿತ ಗುಣಮುಖ

ಸಾರಾಂಶ

ಭಾರತದ ಮೊದಲ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೇರಳದ ಸೋಂಕಿತ ವ್ಯಕ್ತಿಯ ದೇಹದ ಮೇಲಿನ ಗುಳ್ಳೆಗಳು ವಾಸಿಯಾಗಿದ್ದು, ಪರೀಕ್ಷೆ ವರದಿಗಳಲ್ಲಿ ನೆಗೆಟಿವ್ ಬಂದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ತಿರುವನಂತಪುರ: ಭಾರತದ ಮೊದಲ ಮಂಕಿಪಾಕ್ಸ್‌ ಸೋಂಕಿತನಾದ ಕೇರಳದ 35 ವರ್ಷದ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಡಿಸ್ಚಾರ್ಜ್‌ ಮಾಡಲಾಗಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಹೇಳಿದ್ದಾರೆ. ಜು.14ರಂದು ವಿದೇಶದಿಂದ ಮರಳಿದ ಕೊಲ್ಲಮ್‌ ನಿವಾಸಿಯಾದ ವ್ಯಕ್ತಿಗೆ ಮಂಕಿಪಾಕ್ಸ್‌ ಸೋಂಕು ಧೃಢಪಟ್ಟಿತ್ತು. ಇದು ದೇಶದ ಮೊದಲ ಮಂಕಿಪಾಕ್ಸ್‌ ಪ್ರಕರಣ ಎನಿಸಿಕೊಂಡಿತ್ತು.

72 ಗಂಟೆಗಳ ಅಂತರದಲ್ಲಿ 2 ಬಾರಿ ಪರೀಕ್ಷೆ; ವರದಿ ನೆಗೆಟಿವ್
ವ್ಯಕ್ತಿಯು ಸಂಪೂರ್ಣವಾಗಿ ಮಂಕಿಪಾಕ್ಸ್‌ನಿಂದ ಗುಣಮುಖನಾಗಿದ್ದಾನೆ. ಆತನ ಚರ್ಮದ (Skin) ಮೇಲೆ ಎದ್ದ ಬೊಬ್ಬೆಗಳು ವಾಸಿಯಾಗಿವೆ. ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್‌ ವೈರಾಲಜಿಯಿಂದ ವ್ಯಕ್ತಿಯ ಮಾದರಿಗಳನ್ನು 72 ಗಂಟೆಗಳ ಅಂತರದಲ್ಲಿ 2 ಬಾರಿ ಪರೀಕ್ಷಿಸಲಾಗಿದೆ. 2 ಬಾರಿಯೂ ವ್ಯಕ್ತಿಗೆ ಮಂಕಿಪಾಕ್ಸ್‌ ನೆಗೆಟಿವ್‌ ವರದಿಯಾಗಿದೆ. ವ್ಯಕ್ತಿಯು ದೈಹಿಕ ಹಾಗೂ ಮಾನಸಿಕವಾಗಿ ಸ್ವಸ್ಥನಾಗಿರುವ ಕಾರಣ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಹೇಳಿದ್ದಾರೆ. ಸೋಂಕಿತ ವ್ಯಕ್ತಿಯ ಕುಟುಂಬದವರು ಹಾಗೂ ಆತನ ಪ್ರಾಥಮಿಕ ಸಂಪರ್ಕದಲ್ಲಿರುವವರ ಮಾದರಿ (Sample)ಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರಿಗೂ ಸೋಂಕು ದೃಢಪಟ್ಟಿಲ್ಲ. ಕೇರಳದ ಇನ್ನಿಬ್ಬರು ಮಂಕಿಪಾಕ್ಸ್‌ ಸೋಂಕಿತರ ಆರೋಗ್ಯ (Health) ಕೂಡಾ ಸ್ಥಿರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ’ ಎಂದು ಸಚಿವೆ ಹೇಳಿದ್ದಾರೆ.

ದೇಹದ ಸಣ್ಣ ಗಾಯವೂ ಮಂಕಿಪಾಕ್ಸ್ ಲಕ್ಷಣವಾಗಿರಬಹುದು, ಎಚ್ಚರ !

ಯುಎಇಯಿಂದ ಕೇರಳಕ್ಕೆ ಮರಳಿದ್ದ ವ್ಯಕ್ತಿ
ಯುಎಇಯಿಂದ ಕೇರಳಕ್ಕೆ ಮರಳಿದ್ದ 35 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಸ್ ಪಾಸಿಟಿವ್ ಪತ್ತೆಯಾಗಿತ್ತು. ಜುಲೈ 12ರಂದು ತ್ರಿವೇಂದ್ರಮ್ ವಿಮಾನ ನಿಲ್ದಾಣಕ್ಕೆ ತಲುಪಿದ್ದ ಅವರು, ಜುಲೈ 14ರಂದು ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಚಿಕಿತ್ಸೆ ಬಳಿಕ ಅವರ ಚರ್ಮದ ಮೇಲಿನ ಗುಳ್ಳೆ, ಕಜ್ಜಿಯ ಲಕ್ಷಣಗಳು ವಾಸಿಯಾಗಿವೆ. ದೆಹಲಿಯಲ್ಲಿ ಕೂಡ ಮಂಕಿಪಾಕ್ಸ್‌ ಕೇಸು ದೃಢಪಟ್ಟಿತ್ತು. ಹೀಗಾಗಿ ದೇಶದಲ್ಲಿ ಈವರೆಗೆ 4 ಪ್ರಕರಣ ದಾಖಲಾದಂತಾಗಿತ್ತು.

ಬೆಂಗಳೂರಿಗರಿಗೆ ಇಥಿಯೋಪಿಯಾದಿಂದ ಬಂದಿದ್ದ ವ್ಯಕ್ತಿಯ ಮಂಕಿಪಾಕ್ಸ್ ವರದಿ ನೆಗೆಟಿವ್‌
ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದ ಹಿನ್ನಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಅವರ ವರದಿಯಲ್ಲಿ ಮಂಕಿಪಾಕ್ಸ್ ನೆಗೆಟಿವ್ ಎಂದು ದೃಢಪಟ್ಟಿದ್ದು, ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಸುಧಾಕರ್ ಅವರೇ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೂತ್ರಪಿಂಡ ಚಿಕಿತ್ಸೆ ಪಡೆಯುತ್ತಿದ್ದ ಆಫ್ರಿಕಾ ಮೂಲದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ಸೋಂಕಿನ ಲಕ್ಷಣಗಳು ಕಂಡುಬಂದಿತ್ತು. ಆತನ ಮಾದರಿಗಳನ್ನು ಸಂಗ್ರಹಿಸಿ ಸೋಂಕು ಪರೀಕ್ಷೆಗೆಂದು ರಾಷ್ಟ್ರೀಯ ವೈರಾಣು ಸಂಸ್ಥೆ(ಎನ್‌ಐವಿ) ಕಳುಹಿಸಲಾಗಿತ್ತು. ಆ ವರದಿ ನೆಗೆಟಿವ್ ಬಂದಿದೆ.

ಮಂಕಿಪಾಕ್ಸ್ ಎಂದರೇನು ?
ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ಸಿಡುಬು ರೋಗದ ಲಕ್ಷಣಗಳನ್ನೇ ಹೊಂದಿದ್ದು, ಅದರ ತೀವ್ರತೆ ಕಡಿಮೆ. ವ್ಯಾಕ್ಸಿನೇಷನ್ ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.

ಮಂಕಿಪಾಕ್ಸ್ ಪತ್ತೆಗಾಗಿ ಆರ್‌ಟಿಪಿಸಿಆರ್ ಕಿಟ್; 50 ನಿಮಿಷದಲ್ಲೇ ನಿಖರ ಫಲಿತಾಂಶ

ಮಂಕಿಪಾಕ್ಸ್ ರೋಗಲಕ್ಷಣಗಳು
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ರೋಗದ ಆರಂಭಿಕ ಲಕ್ಷಣಗಳು (symptoms) ಜ್ವರ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ನಡುಕ ಮತ್ತು ಆಯಾಸವೂ ಇರಬಹುದು. ದೇಹದ ಮೇಲೆ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ದಡಾರ, ಸ್ಕರ್ವಿ ಮತ್ತು ಸಿಫಿಲಿನ್​ ಕೆಲವು ರೋಗಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ. ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವಲ್ಲಿ ಅನೇಕ ಜನರು ತಪ್ಪು ಮಾಡುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?