ನಮ್ಮ ಮನಸ್ಸು ಸದಾಕಾಲ ಉತ್ಸಾಹದಿಂದ ಕೂಡಿರಬೇಕು ಎಂದಾದರೆ, ನಮ್ಮ ಮೂಡು ಸರಿಯಾಗಿ ಇರಬೇಕು ಎಂದಾದರೆ, ಖಿನ್ನತೆ ಕಾಡಬಾರದು. ಅದಕ್ಕೆ ಒಮೆಗಾ 3 ಫ್ಯಾಟಿ ಆಸಿಡ್ ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು. ಇದರಿಂದ ಉತ್ತಮ ಮನಸ್ಥಿತಿಗೆ ಕಾರಣವಾಗುವ ಸೆರಟೋನಿನ್ ಪ್ರಮಾಣ ಮಿದುಳಿನಲ್ಲಿ ಹೆಚ್ಚುತ್ತದೆ.
ಯಾಕೋ ಇದ್ದಕ್ಕಿದ್ದ ಹಾಗೆ ಮೂಡ್ ಆಫ್ ಆಗುತ್ತದೆ. ಯಾವುದರಲ್ಲೂ ಆಸಕ್ತಿ ಮೂಡದೇ ಸುಮ್ಮನೆ ಸೋಮಾರಿಯಾಗಿ ಕಾಲ ಕಳೆಯುವ ಮನಸ್ಸಾಗುತ್ತದೆ. ಆದರೆ, ದೀರ್ಘಕಾಲ ಹೀಗೆಯೇ ಆದರೆ ನಮ್ಮಲ್ಲೇ ಒಂದು ರೀತಿಯ ಅಸಹನೆ, ಕಿರಿಕಿರಿ ಶುರುವಾಗುವುದು ಗ್ಯಾರೆಂಟಿ. ಹೀಗಾಗಿ, ಮನಸ್ಥಿತಿ ಅಥವಾ ಮೂಡು ಚೆನ್ನಾಗಿರಬೇಕಾದುದು ಅಗತ್ಯ. ಮೂಡು ಸರಿಯಾಗಿಲ್ಲದೆ ಇರುವ ಸಮಯದಲ್ಲಿ ಅಥವಾ ಅಂತರಂಗದಲ್ಲಿರುವ ಯಾವುದೋ ಒತ್ತಡದ ಕಾರಣದಿಂದ ಸಾಕಷ್ಟು ಜನ ಕರಿದ ಅಥವಾ ಸಿಹಿ ತಿನಿಸುಗಳ ಮೊರೆ ಹೋಗುತ್ತಾರೆ. ಇದರಿಂದ ಇನ್ನಷ್ಟು ಸಮಸ್ಯೆ ಆಗಬಹುದು. ಏಕೆಂದರೆ, ಇವುಗಳಲ್ಲಿ ನೈಸರ್ಗಿಕವಾಗಿ ಮೂಡನ್ನು ಸರಿಪಡಿಸುವಂತಹ ಯಾವುದೇ ಅಂಶಗಳಿಲ್ಲ. ಸರಿಯಾದ ಆಹಾರದಿಂದ “ಮೂಡಿಲ್ಲ’ ಎನ್ನುವ ಸಮಸ್ಯೆಯಿಂದ ದೂರವಿರಬಹುದು. ಉತ್ತಮ ಪೌಷ್ಟಿಕಾಂಶ ಇರುವ ಆಹಾರದ ಮೂಲಕ ಮನಸ್ಥಿತಿಯಲ್ಲಿ ಗೆಲವು ತುಂದುಕೊಳ್ಳುವುದು ಉತ್ತಮ ವಿಧಾನ. ಹೀಗಾಗಿ, ನೀವು ಯಾವಾಗೆಲ್ಲ ಮೂಡಿಲ್ಲದ ಸಮಸ್ಯೆಯಿಂದ ಬಳಲುತ್ತೀರೋ ಅಥವಾ ಗೆಲುವಿನ ಮನಸ್ಥಿತಿ ಹೊಂದಿರುವುದಿಲ್ಲವೋ ಆಗ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಇರುವ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ, ಇದರಲ್ಲಿ ನೈಸರ್ಗಿಕವಾಗಿ ಮನಸ್ಥಿತಿಯನ್ನು ಉತ್ತಮ ಪಡಿಸುವಂತಹ ಗುಣವಿದೆ.
ನಮ್ಮ ಮಾನಸಿಕ ಆರೋಗ್ಯ (Mental Health) ಮತ್ತು ಪೌಷ್ಟಿಕಾಂಶದ (Nutrition) ನಡುವೆ ಇರುವ ಸಂಬಂಧವನ್ನು ಬಹಳಷ್ಟು ಅಧ್ಯಯನಗಳು ತಿಳಿಸಿವೆ. ನಿಮಗೆ ಗೊತ್ತಿರಬಹುದು. ನಮ್ಮ ಮಿದುಳಿನಲ್ಲಿ (Brain) ಬಿಡುಗಡೆಯಾಗುವ ಡೊಪಮೈನ್ (Dopamine) ಮತ್ತು ಸೆರಟೋನಿನ್ (Serotonin) ಎನ್ನುವ ಹಾರ್ಮೋನುಗಳು (Hormone) ಮನುಷ್ಯನ ವರ್ತನೆ, ಮೂಡು (Mood) ಮತ್ತು ಒತ್ತಡದ (Stress) ಮೇಲೆ ಭಾರೀ ಪರಿಣಾಮ ಬೀರುತ್ತವೆ. ಸೆರಟೋನಿನ್ ಅಂಶವು ಒಂದು ಬಗೆಯ ನ್ಯೂರೋಟ್ರಾನ್ಸ್ ಮಿಟರ್ (Neurotransmitter) ಆಗಿದ್ದು, ಆಹಾರದಿಂದ (Food) ನೇರವಾಗಿ ಉತ್ತೇಜನವಾಗುವುದಿಲ್ಲ. ಆದರೆ, ಪ್ರೊಟೀನ್ ನಿಂದಾಗಿ ಉತ್ಪಾದನೆ ಆಗುವ ಅಮಿನೋ ಆಸಿಡ್ (Amino Acid) ಹಾಗೂ ಟ್ರೈಪ್ಟೊಫಾನ್ ಎನ್ನುವ ಅಂಶಗಳು ಸೆರಟೋನಿನ್ ಹೆಚ್ಚಲು ಕಾರಣವಾಗುತ್ತವೆ. ಈ ರೀತಿಯಲ್ಲಿ ಪೌಷ್ಟಿಕ ಆಹಾರ ಪರೋಕ್ಷವಾಗಿಯಾದರೂ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
Winter Blues: ಇದು ಆರೋಗ್ಯ ಸಮಸ್ಯೆ ಅಲ್ವೇ ಅಲ್ಲ, ಬರೀ ಚಳಿಗಾಲದ ಕಿರಿಕಿರಿ
ಊಟದೊಂದಿಗೆ ಉಪ್ಪಿನಕಾಯಿ ಇರಲಿ!
ಮನಸ್ಥಿತಿಯಲ್ಲಿ ಗೆಲುವು, ಉತ್ಸಾಹ ಇರಬೇಕೆಂದರೆ, ಒಮೆಗಾ 3 ಫ್ಯಾಟಿ ಆಸಿಡ್ (Omega 3 Fatty Acid) ಸೇವನೆ ಮಾಡುವುದು ಅಗತ್ಯ. ಮೀನು (Fish), ಬೀಜಗಳು (Nuts), ಧಾನ್ಯ, ಬೆರಿ, ಅನಾನಸ್, ಬಾಳೆ ಹಣ್ಣುಗಳಲ್ಲಿ ಈ ಅಂಶ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಮೊಸರಿನಲ್ಲಿ (Curd) ಇರುವ ಪ್ರೊಬಯಾಟಿಕ್ಸ್ (Probiotics) ಕೂಡ ಇದಕ್ಕೆ ಸಹಾಯಕ. ನಿಮಗೆ ಅಚ್ಚರಿಯಾಗಬಹುದು. ಊಟದ ಜತೆ ಉಪ್ಪಿನಕಾಯಿ (Pickle) ಕೇವಲ ರುಚಿಗಲ್ಲ. ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ಸೇವನೆ ಮಾಡುವುದು ಮನಸ್ಥಿತಿ ಉತ್ತೇಜನಕ್ಕೆ ಸಹಕಾರಿ. ಹುದುಗು ಬಂದ ಆಹಾರದಿಂದ ಈ ಲಾಭವಾಗುತ್ತದೆ. ಅಲ್ಲದೆ, ಉಪ್ಪಿನಕಾಯಿಯಿಂದ ಕರುಳಿನಲ್ಲಿ (Gut) ಉತ್ತಮ ಬ್ಯಾಕ್ಟೀರಿಯಾ (Bacteria) ಪ್ರಮಾಣ ಹೆಚ್ಚಾಗುತ್ತದೆ. ಹಾಗೆಯೇ, ಕಾಫಿ (Coffee) ಮತ್ತು ಡಾರ್ಕ್ ಚಾಕೊಲೇಟ್ (Dark Chocolate) ಕೂಡ ಉತ್ತಮ.
ಮನಸ್ಸು ಹಿಡಿತದಲ್ಲಿ ಇಲ್ವಾ? ಯಾಕೋ ಮೂಡಿಲ್ಲ ಅನ್ನೋರಿಗೆ ಇಲ್ಲಿವೆ ಟಿಪ್ಸ್
ಬೆಳಗಿನ ಬಿಸಿಲಲ್ಲಿ ಕೆಲಸ ಮಾಡಿ
ಮೊಟ್ಟೆ (Eggs), ಹಾಲಿನ ಉತ್ಪನ್ನ, ವಾಲ್ ನಟ್, ಕುಂಬಳಕಾಯಿ ಬೀಜ, ಅಗಸೆ ಬೀಜ, ಸೂರ್ಯಕಾಂತಿ ಬೀಜಗಳನ್ನು ಸೇವನೆ ಮಾಡಿದರೆ ಮನಸ್ಥಿತಿ ಹದಗೆಡುವುದಿಲ್ಲ. ಹಾಗೆಯೇ, ವಿಟಮಿನ್ ಡಿ (Vitamin D) ಕೂಡ ಅತ್ಯುತ್ತಮ ಮೂಡ್ ಬೂಸ್ಟರ್ (Mood Booster). ದೇಹದಲ್ಲಿ ವಿಟಮಿನ್ ಡಿ ಅಂಶ ಸಾಕಷ್ಟು ಪ್ರಮಾಣದಲ್ಲಿರಬೇಕು. ಒಂದೊಮ್ಮೆ ಇದರಲ್ಲಿ ಕೊರತೆಯಾದರೆ ಮನಸ್ಥಿತಿ ಕುಸಿಯುತ್ತದೆ. ಹೀಗಾಗಿ, ದಿನದ ಸ್ವಲ್ಪ ಸಮಯವಾದರೂ ಸೂರ್ಯನ ಬೆಳಕಿನಲ್ಲಿ (Sunlight) ಅಡ್ಡಾಡಬೇಕು, ಬೆಳಗಿನ ಬಿಸಿಲಿನಲ್ಲಿ ಕೆಲಸ ಮಾಡಬೇಕು. ವಿಟಮಿನ್ ಡಿ ನಮ್ಮ ದೇಹದಲ್ಲಿ ಸೆರಟೋನಿನ್ ಸಂಶ್ಲೇಷಣೆ ಮಾಡಲು ನೆರವಾಗುತ್ತದೆ.
ನೆನಪಿರಲಿ
ಒಮೆಗಾ 3 ಫ್ಯಾಟಿ ಆಸಿಡ್ ದೈನಂದಿನ ಆಹಾರದಲ್ಲಿ ಇರುವಂತೆ ನೋಡಿಕೊಳ್ಳುವ ಜತೆಗೆ ಧ್ಯಾನ (Meditation) ಮಾಡುವುದು ಮಾನಸಿಕ ಆರೋಗ್ಯಕ್ಕೆ ಅಗತ್ಯ. ಹಾಗೆಯೇ, ಮನಸ್ಥಿತಿ ಅತಿಯಾಗಿ ಕುಸಿದಿದ್ದರೆ ಆಹಾರವೊಂದೇ ಇದನ್ನು ಸರಿಪಡಿಸಲು ಸಾಧ್ಯವಿಲ್ಲ. ವೈದ್ಯರ ನೆರವು ಪಡೆದುಕೊಳ್ಳಬೇಕು.