
ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಬೆಳೆಯುತ್ತದೆ ಎಂಬ ಮಾತನ್ನು ನೀವು ಕೇಳಿರ್ತೀರಿ. ಆರೋಗ್ಯವಂತ ಮನಸ್ಸು ನಮ್ಮ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮಾನಸಿಕ ರೋಗ ಎಂಬ ವಿಷ್ಯ ಬಂದಾಗ ಜನರು ಸುಮ್ಮನಾಗ್ತಾರೆ. ಅದನ್ನು ಗುಪ್ತವಾಗಿಡಲು ಪ್ರಯತ್ನಿಸುತ್ತಾರೆ. ಯಾವುದೋ ವ್ಯಕ್ತಿ ಮಾನಸಿಕ ತಜ್ಞರ ಬಳಿ ಹೋಗಿ ಬಂದ ಅಂದ್ರೆ ಆತನನ್ನು ಹುಚ್ಚ ಎನ್ನುವವರೇ ಹೆಚ್ಚು. ಇದೇ ಕಾರಣಕ್ಕೆ ಅನೇಕರು ಮಾನಸಿಕ ಆರೋಗ್ಯ ಹದಗೆಟ್ಟಿದ್ದರೂ ಆಸ್ಪತ್ರೆಗೆ ಹೋಗೋದಿಲ್ಲ. ತಜ್ಞರಿಂದ ಚಿಕಿತ್ಸೆ ಪಡೆಯೋದಿಲ್ಲ. ಅಷ್ಟೇ ಅಲ್ಲ ಈ ವಿಷ್ಯವನ್ನು ಕುಟುಂಬಸ್ಥರ ಮುಂದೆಯೂ ಹೇಳೋದಿಲ್ಲ.
ನಾನಾ ಕಾರಣಕ್ಕೆ ಮಾನಸಿಕ (Mental) ಖಾಯಿಲೆಗಳು ನಮ್ಮನ್ನು ಕಾಡುತ್ತವೆ. ನಾವಿಂದು ಯುವಕರನ್ನು ಕಾಡುವ ಹಿಸ್ಟೀರಿಯಾ (Hysteria) ಬಗ್ಗೆ ನಿಮಗೆ ಹೇಳ್ತೇವೆ.
HEALTH TIPS: ನಿಮಗೆ ಫುಡ್ ಅಲರ್ಜಿ ಇದೆ ಅನ್ನೋದನ್ನು ತಿಳಿಯೋದು ಹೇಗೆ?
ಚಿಕ್ಕ ಹುಡುಗರನ್ನು ಕಾಡುತ್ತೆ ಹಿಸ್ಟೀರಿಯಾ : ಮಾನಸಿಕ ಖಾಯಿಲೆ ಎಂದಾಗ ಅದು ವಯಸ್ಸಾದವರನ್ನು ಕಾಡುವ ಖಾಯಿಲೆ ಎನ್ನುವ ನಂಬಿಕೆ ಅನೇಕರಲ್ಲಿದೆ. ಆದ್ರೆ ಮಾನಸಿಕ ಖಾಯಿಲೆ (Disease) ಸಣ್ಣ ಮಕ್ಕಳನ್ನು ಕೂಡ ಕಾಡುತ್ತದೆ. ಹಿಸ್ಟೀರಿಯಾ 12 – 20 ವರ್ಷ ವಯಸ್ಸಿನ ಹುಡುಗರಲ್ಲಿ ಕಾಣಿಸಿಕೊಳ್ಳುವ ಖಾಯಿಲೆಯಾಗಿದೆ. ಈ ವಯಸ್ಸಿನಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ. ಮನಸ್ಸು ಹಕ್ಕಿಯಂತೆ ಅತ್ತಿಂದಿತ್ತ ಹಾರಾಡುತ್ತಿರುತ್ತದೆ. ಮಕ್ಕಳ ಮನಸ್ಸಿನಲ್ಲಿ ಅನೇಕ ಗೊಂದಲವಿರುತ್ತದೆ. ಮಕ್ಕಳಿಗೆ ಅನೇಕ ಪ್ರಶ್ನೆಗಳು ಏಳುತ್ತವೆ. ಉತ್ತರ ಕಂಡು ಹಿಡಿಯಲು ಮಕ್ಕಳು ಸಾಕಷ್ಟು ಕಷ್ಟಪಡುತ್ತಾರೆ. ಪಾಲಕರು ಹಾಗೂ ಮಕ್ಕಳ ಮಧ್ಯೆ ಇರುವ ಅಂತರ ಇದಕ್ಕೆ ಕಾರಣ. ಪಾಲಕರ ಜೊತೆ ತಮ್ಮ ಸಮಸ್ಯೆ ಹೇಳಿಕೊಳ್ಳಲಾಗದ ಮಕ್ಕಳು ಒಂಟಿಯಾಗ್ತಾರೆ. ಮಕ್ಕಳಿಗೆ ಉಸಿರುಗಟ್ಟಿಸಿದ ಅನುಭವವಾಗುತ್ತದೆ. ಒಳಗೇ ನೊಂದುಕೊಳ್ಳುವ ಮಕ್ಕಳ ಮಾನಸಿಕ ಸ್ಥಿತಿ ಕೈಮೀರಿ ಹೋಗಿರುತ್ತದೆ. ಸ್ನೇಹಿತರ ಜೊತೆಯೂ ಇದನ್ನು ಹಂಚಿಕೊಳ್ಳಲಾಗದ ಮಕ್ಕಳು ಕೊನೆಯಲ್ಲಿ ಆತ್ಮಹತ್ಯೆಯಂತ ಆಲೋಚನೆಗೆ ಬರುವುದಿದೆ. ಇನ್ನು ಕೆಲ ಮಕ್ಕಳು ಆಸ್ಪತ್ರೆ ಸೇರ್ತಾರೆ.
ಗ್ಯಾಸ್ ಮೇಲೆ ನೇರವಾಗಿ ಚಪಾತಿ ಬೇಯಿಸಿದ್ರೆ ಆರೋಗ್ಯಕ್ಕೆ ಹಾನಿ
ಹಿಸ್ಟೀರಿಯಾ ಲಕ್ಷಣ : ಹಿಸ್ಟೀರಿಯಾ ಒಂದು ನರಸಂಬಂಧಿ ಕಾಯಿಲೆಯಾಗಿದೆ. ಹುಡುಗರಿಗಿಂತ ಹುಡುಗಿಯರನ್ನು ಇದು ಹೆಚ್ಚಾಗಿ ಕಾಡುತ್ತದೆ. ಹಿಸ್ಟೀರಿಯಾದಲ್ಲಿ ಎರಡು ಹಂತಗಳನ್ನು ನೀವು ನೋಡ್ಬಹುದು. ಹಿಸ್ಟೀರಿಯಾದ ಮೊದಲ ಹಂತದಲ್ಲಿ ರೋಗಿ ಮೂರ್ಛೆ ಹೋಗ್ತಾನೆ. ಅದನ್ನು ನಿರ್ಲಕ್ಷ್ಯ ಮಾಡಿದ್ರೆ ಅದು ಎರಡನೇ ಹಂತಕ್ಕೆ ತಿರುಗುತ್ತದೆ. ಎರಡನೇ ಹಂತದಲ್ಲಿ ರೋಗಿಯ ದೇಹದಲ್ಲಿ ಕೆಲವು ಗಂಭೀರ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಣ್ಣಿನ ದೃಷ್ಟಿ ಕಡಿಮೆಯಾಗ್ತಾ ಬರುತ್ತದೆ. ಧ್ವನಿಯಲ್ಲಿ ಬದಲಾವಣೆಯನ್ನು ನೀವು ನೋಡ್ಬಹುದು. ಪಾರ್ಶ್ವವಾಯು ಸಂಭವಿಸುತ್ತದೆ. ಕೈ ಹಾಗೂ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಖಾಯಿಲೆಯ ಲಕ್ಷಣವನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಕೆಲ ಮಕ್ಕಳು ಪರೀಕ್ಷಾ ಹಾಲ್ ಗೆ ಹೋಗುವ ಸಮಯದಲ್ಲಿ ಮೂರ್ಛೆ ಹೋಗ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಹಿಸ್ಟ್ರಿಯಾನಿಕ್ ಪಾರ್ಶ್ವವಾಯು ಎಂದು ಕರೆಯುತ್ತಾರೆ. ಹುಡುಗಿಯರಲ್ಲಿ ಈ ಸಮಸ್ಯೆ ಕಂಡು ಬರಲು ಮುಖ್ಯ ಕಾರಣ ಸ್ವಾತಂತ್ರ್ಯ. ಅನೇಕ ಭಾರತೀಯ ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸ್ವಾತಂತ್ರ್ಯವಿರೋದಿಲ್ಲ. ಇದ್ರಿಂದಾಗಿ ಮಾನಸಿಕ ಒತ್ತಡ, ಉಸಿರುಗಟ್ಟುವಿಕೆ ಕಾಡುತ್ತದೆ.
ರೋಗ ಪತ್ತೆ ಹಚ್ಚೋದು ಹೇಗೆ? : ರೋಗದ ಲಕ್ಷಣ ಅಲ್ಪಸ್ವಲ್ಪ ಕಾಣಿಸ್ತಿದ್ದಂತೆ ತಜ್ಞರ ಬಳಿ ಹೋಗೋದು ಒಳ್ಳೆಯದು. ಇದಕ್ಕಾಗಿ ಸೈಕೋ-ಡಯಾಗ್ನೋಸ್ಟಿಕ್ ಪರೀಕ್ಷೆ, ಇಇಜಿ ಮತ್ತು ನರವೈಜ್ಞಾನಿಕ ಪರೀಕ್ಷೆಗಳನ್ನು ಮಾಡಬೇಕು. ಮೆದುಳಿನಲ್ಲಿ ನರ ಸಮಸ್ಯೆ ಕಾಣಿಸಿಕೊಂಡಾಗ ಹಿಸ್ಟೀರಿಯಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗದಿಂದ ಗುಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ರೋಗ ಪತ್ತೆಯಾದ ತಕ್ಷಣ ಚಿಕಿತ್ಸೆ ಪ್ರಾರಂಭಿಸಬೇಕು. ಸೈಕೋ ಥೆರಪಿ, ಹಿಪ್ನೋ ಥೆರಪಿ ಮತ್ತು ಸಪೋರ್ಟಿವ್ ಡ್ರಗ್ ಥೆರಪಿಯನ್ನು ರೋಗಿಗೆ ನೀಡಬೇಕು.
ಈ ರೋಗ ಬರದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಮಕ್ಕಳನ್ನು ಪಾಲಕರು ಸ್ನೇಹಿತರಂತೆ ಟ್ರೀಟ್ ಮಾಡಿದ್ರೆ ಎಲ್ಲ ಸಮಸ್ಯೆಯಿಂದ ದೂರವಿರಬಹುದು. ಮಕ್ಕಳನ್ನು ದೂರವಿಟ್ಟಾಗ ಸಮಸ್ಯೆ ಹೆಚ್ಚಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.