workplace toxicity: ಕಚೇರಿಯ ವಿಷವರ್ತುಲದಿಂದ ಹೊರ ಬರುವುದು ಹೇಗೆ?

By Suvarna NewsFirst Published Jan 17, 2022, 5:52 PM IST
Highlights

ಆಫೀಸಿಗೆ ಹೋಗುವುದೆಂದರೇ ಆತಂಕ ಕಾಡುತ್ತದೆಯೇ? ಮ್ಯಾನೇಜರ್ ನಿಮ್ಮ ಸೆಲ್ಪ್ ವರ್ತ್‌ ಅನ್ನು ಪದೇ ಪದೆ ಪ್ರಶ್ನಿಸುತ್ತಾರೆಯೇ? ಕಚೇರಿಯಲ್ಲಿ ಕೆಲವರು ಮಾತ್ರ ಬಾಸ್ ಫೇವರೇಟ್ ಆಗಿ ಮೆರೆಯುತ್ತಾರೆಯೇ? ಇಲ್ಲ, ಇದ್ಯಾವುದೂ ನಿಮ್ಮ ಸಮಸ್ಯೆಯಲ್ಲ, ಸಮಸ್ಯೆ ಇರುವುದು ಕಚೇರಿಯ ಪರಿಸರದಲ್ಲಿ.

ದೇಹವನ್ನು ವಿಷವಸ್ತುಗಳಿಂದ ದೂರ ಉಳಿಸೋಕೆ ನಾವು ಹೆಚ್ಚು ವ್ಯಾಯಾಮ ಮಾಡ್ತೀವಿ, ಸೇವಿಸೋ ಆಹಾರ(food)ದಲ್ಲಿ ರಾಸಾಯನಿಕ ಇರಬಾರದೆಂದು ಹೆಚ್ಚು ಹಣ ಕೊಟ್ಟು ಆರ್ಗ್ಯಾನಿಕ್ ಫುಡ್ ಮೊರೆ ಹೋಗ್ತೀವಿ, ಮನೆಯ ಗಾಳಿಯಲ್ಲಿ ಟಾಕ್ಸಿಕ್ ವಸ್ತುಗಳಿರಕೂಡದು ಎಂದು ಒಳಾಂಗಣ ಸಸ್ಯ(indoor plants)ಗಳನ್ನು ಇಟ್ಟುಕೊಳ್ತೀವಿ.. ಟಾಕ್ಸಿಸಿಟಿ ದೂರವಿಡಲು ಇಷ್ಟೆಲ್ಲ ಮಾಡುವ ನಾವು ಕಚೇರಿಯ ವಿಷಯಕ್ಕೆ ಬಂದರೆ ಮಾತ್ರ ಬಾಯಿ ಮುಚ್ಚಿಕೊಂಡು ಕೆಲಸ ಮಾಡುವುದೇಕೆ? ವರ್ಕ್‌ಪ್ಲೇಸ್(workplace) ಎಷ್ಟೇ ಟಾಕ್ಸಿಕ್ ಆಗಿದೆ ಎಂದರೂ ತೆಪ್ಪಗಿರುವುದೇಕೆ?

ಬಾಸ್‌ಯಿಂದ ಬರೋ ಇ ಮೇಲೊಂದು ವೀಕೆಂಡನ್ನು ತಿಂದು ಹಾಕ್ಬೋದು, ಕಚೇರಿಯಲ್ಲಿ ಆದ ಅವಮಾನ ರಾತ್ರಿಯ ನಿದ್ದೆಗಳನ್ನು ಕಸೀಬೋದು, ಆಫೀಸಲ್ಲಿ ಸಹೋದ್ಯೋಗಿಗಳು ಮಾಡುವ ಗಾಸಿಪ್‌(gossip) ಮನಸ್ಸಿನ ಶಾಂತಿ ಕಸಿಯಬಹುದು, ಡೆಡ್‌ಲೈನ್ ಡೆಡ್‌ಲೈನ್ ಎಂದು ಮ್ಯಾನೇಜರ್ ಹಾಕುವ ಪ್ರೆಶರ್‌ಗೆ ಮನೆಯವರ ಮುಖ ನೋಡದೆ ವಾರಗಟ್ಟಲೆ ಕೆಲಸ ಮಾಡ್ಬೇಕಾಗ್ಬೋದು, ಗೌರವವಿಲ್ಲದೆ ನಡೆಸಿಕೊಳ್ಳುವ ಹಿರಿಯ ಸಹೋದ್ಯೋಗಿಗಳ ನಡೆಯಿಂದ ನೆಮ್ಮದಿ ಕೆಡುವುದು, ರಜೆ ಇದ್ದರೂ ಕೊಡದೆ ಸತಾಯಿಸುವ ಎಚ್‌ಆರ್‌ ನಮ್ಮ ಜೀವನದ ಅತ್ಯಮೂಲ್ಯ ಸಮಯ(time)ವನ್ನು ಸಿಗದಂತೆ ಮಾಡಿರಬಹುದು, ಕೆಲಸ ಮಾಡುವುದು ನಾವಾಗಿ, ಹೆಸರು ಪಡೆಯುವುದು ಇನ್ಯಾರೋ ಆಗಿ ಒತ್ತಡ(stress) ಹೆಚ್ಚುವುದು.. ಹಾಗಿದ್ದರೂ ನಾವು ತುಟಿ ಎರಡು ಮಾಡುವುದಿಲ್ಲ. ಕಚೇರಿಯ ಟಾಕ್ಸಿಕ್ ಪರಿಸರ ಬದಲಿಸುವ ಬಗ್ಗೆ ಯೋಚಿಸುವುದಿಲ್ಲ. ಏಕೆ?

Mental Health : ಎಲ್ಲರ ಮುಂದೆ ಒಳ್ಳೆಯವರಾಗಲು ಹೋಗಿ ನೆಮ್ಮದಿ ಕಳೆದುಕೊಳ್ಬೇಡಿ

ಈ ವರ್ಕ್‌ಪ್ಲೇಸ್ ಟಾಕ್ಸಿಸಿಟಿಯಿಂದಾಗಿ ನಮ್ಮಲ್ಲಿ ಹೆಚ್ಚಿದ ಒತ್ತಡ, ಆತಂಕ, ಭಯ, ಖಿನ್ನತೆ(depression) ಮುಂತಾದ ನೆಗೆಟಿವ್ ಭಾವನೆಗಳು ನಮ್ಮ ಆರೋಗ್ಯ ಹಾಳುಗೆಡವುತ್ತವೆ, ಮನೆಯ ಸದಸ್ಯರಿಗೆ ಸಮಯ ಕೊಡಲಾಗದೆ, ಕಚೇರಿಯ ಸಿಟ್ಟನ್ನು ಅವರೆದುರು ಹೊರ ಹಾಕುವಂತೆ ಮಾಡಿ ಸಂಬಂಧ(relationship) ಹಾಳಾಗುತ್ತದೆ. ಮಕ್ಕಳು ತಂದೆತಾಯಿಯ ಈ ನೆಗೆಟಿವ್ ಭಾವನೆಗಳನ್ನು ನೋಡಿ ಹಾಳು ಬಿದ್ದು ಹೋಗುತ್ತಾರೆ. ಒಂದು ವೇಳೆ ಈ ಬಗ್ಗೆ ಮಾತಾಡ ಹೊರಟರೆ ವೈಯಕ್ತಿಕ ಬದುಕು ಹಾಗೂ ವೃತ್ತಿ ಜೀವನವನ್ನು ಬೇರೆ ಬೇರೆಯಾಗಿಟ್ಟುಕೊಳ್ಳುವ ಬಗ್ಗೆ ಎಲ್ಲರೂ ಸಲಹೆ ಕೊಡ್ತಾರೆಯೇ ಹೊರತು ಕಚೇರಿಯ ಪರಿಸರ ಬದಲಾವಣೆ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಜೀವನದ ಕಾಲು ಭಾಗಕ್ಕಿಂತ ಹೆಚ್ಚು ಸಮಯ ಕಳೆಯುವುದೇ ಕಚೇರಿಯಲ್ಲಿ. ಅಂದ ಮೇಲೆ ಅಲ್ಲಿನ ಪರಿಸರದ ಪರಿಣಾಮ ವೈಯಕ್ತಿಕ ಜೀವನಕ್ಕೆ ಆಗದಂತೆ ನೋಡಿಕೊಳ್ಳುವುದು ಸುಲಭ ಸಾಧ್ಯವೇ?

Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್

ಕತ್ತಲೆಯಲ್ಲಿ ಸಸ್ಯವನ್ನಿಟ್ಟರೆ ಅದು ಹೇಗೆ ಬೆಳೆಯುವುದಿಲ್ಲವೋ ಹಾಗೆಯೇ ಟಾಕ್ಸಿಕ್ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಯೂ ಬೆಳವಣಿಗೆ ಕಾಣಲಾರ. ಒಂದು ವೇಳೆ ನೀವೂ ಕೂಡಾ ವರ್ಕ್‌ಪ್ಲೇಸ್ ಟಾಕ್ಸಿಸಿಟಿ ಎದುರಿಸುತ್ತಿದ್ದರೆ ಹೀಗೆ ಮಾಡಿ. 

  • ನಿಮ್ಮ ಬಳಿ ಬಂದು ಯಾರಾದರೂ ಗಾಸಿಪ್ ಮಾಡಲು ಆರಂಭಿಸಿದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಕೊಡಬೇಡಿ. ಇಲ್ಲವೇ ನೇರವಾಗಿ ಗಾಸಿಪ್(gossip) ಮಾಡಬೇಡಿ ಎಂದು ಹೇಳಿ. ಹಾಗೂ ಆ ವಿಷಯವನ್ನು ತೀರಾ ನಿರಾಸಕ್ತಿಯ ವಿಷಯದ ಹಾಗೆ ಪರಿಗಣಿಸಿ ಸುಮ್ಮನಿದ್ದು ಬಿಡಿ. ಅವರಿಗೆ ತಾವು ಮಾತಾಡಿದ್ದು ತಪ್ಪು ಎಂದು ಅರಿವಾಗುತ್ತದೆ, ಕನಿಷ್ಠ ಪಕ್ಷ ನಿಮ್ಮ ಬಳಿ ಇನ್ನೊಮ್ಮೆ ಗಾಸಿಪ್ ಮಾಡಲು ಬರುವುದಿಲ್ಲ. 
  • ಕಚೇರಿಯ ನೆಗೆಟಿವಿಟಿಗೆ ನುಜ್ಜುಗುಜ್ಜಾದ ಇನ್ನೂ ಕೆಲವರಿರಬಹುದು. ಅವರನ್ನು ಮಾತಾಡಿಸಿ. ಅವರ ಬಳಿ ಉಳಿದವರನ್ನು ದೂರುತ್ತಾ ಕೂರಬೇಡಿ. ಬದಲಿಗೆ ಪಾಸಿಟಿವ್ ಆಗಿರುವ ಸ್ನೇಹಿತರನ್ನು(friends) ಸಂಪಾದಿಸಿ. 
  • ಉಳಿದೆಲ್ಲ ವಿಷಯಗಳನ್ನು ಬದಿಗಿಟ್ಟು ನಿಮ್ಮ ಕೆಲಸ, ಜವಾಬ್ದಾರಿ(responsibility)ಗಳ ಕಡೆ ಹೆಚ್ಚು ಗಮನ ಹರಿಸಿ. ಅವನ್ನು ಅದ್ಭುತವಾಗಿ ನಿಭಾಯಿಸಿದಾಗ, ಆ ಬಗ್ಗೆ ಮೋಸವಾದರೆ, ಕ್ರೆಡಿಟ್ ಬೇರೆಯವರು ಪಡೆದರೆ ಅಥವಾ ಹಿರಿಯ ಉದ್ಯೋಗಿ ಬೈದರೆ ಮಾತಾಡಲು ನಿಮ್ಮಲ್ಲಿ ಧೈರ್ಯವೂ, ಶಕ್ತಿಯೂ ಇರುತ್ತದೆ. ನೀವು ಅವರನ್ನು ಖಂಡಿತಾ ಪ್ರಶ್ನಿಸಬಹುದು. ನಿಮ್ಮ ಪ್ರಶ್ನಿಸುವ ಗುಣ ಅವರಿಗೆ ಎಚ್ಚರಿಕೆಯಾಗಲಿದೆ. 
  • ಬಾಸ್ ಒಳ್ಳೆಯವರಾಗಿದ್ದೂ, ಕಚೇರಿ ಸಮಯದ ಹೊರತಾಗಿ ಮೇಲ್ ಕಳುಹಿಸುವುದು, ಕೆಲಸ ಮಾಡಿಸುವುದು ಮಾಡುತ್ತಿದ್ದರೆ, ಅವರ ಬಳಿ ಹೋಗಿ ಇದರಿಂದ ನಿಮ್ಮ ವೈಯಕ್ತಿಕ ಬದುಕಿಗಾಗುತ್ತಿರುವ ಹಾನಿಯನ್ನು ವಿವರಿಸಿ ಅರ್ಥ ಮಾಡಿಸಲು ಪ್ರಯತ್ನಿಸಬಹುದು. ಅನಿವಾರ್ಯ ಸಂದರ್ಭದ ಹೊರತಾಗಿ ಉಳಿದೆಲ್ಲ ಕೆಲಸವನ್ನು ಕಚೇರಿ ಸಮಯದಲ್ಲೇ ಮಾಡುವುದಾಗಿ ಅವರಿಗೆ ತಿಳಿಸಿ. 
  • ಇಷ್ಟೆಲ್ಲ ಮಾಡಿಯೂ ಕಚೇರಿಯ ಪರಿಸರ ನಿಮ್ಮ ಬೆಳವಣಿಗೆ(development)ಯನ್ನು ಕುಂಠಿತಗೊಳಿಸುತ್ತಿದೆ ಎಂದರೆ ಅಂಥ ಉದ್ಯೋಗವನ್ನು ತಕ್ಷಣ ಬದಲಿಸಲು ಸಂಪೂರ್ಣ ಪ್ರಯತ್ನ ಹಾಕಿ. 
     
click me!