
ಸಿಗ್ನಲ್ (Signal)ನಲ್ಲಿ ಹಸಿರು (Green) ಬಣ್ಣ ಬಿದ್ದಾಗ ರೆಡ್ (Red) ಬಿದ್ದಿದೆ ಎಂದುಕೊಳ್ಳುವುದು, ರೆಡ್ ಬಿದ್ದಾಗ ಹಸಿರು ಬಣ್ಣ ಬಂದಿದೆ ಎಂದುಕೊಂಡು ಸಾಗುವುದು ನಿಮ್ಮ ಗಮನಕ್ಕೆ ಬಂದಿದೆಯೇ? ಪದೇ ಪದೆ ಹೀಗಾಗುತ್ತಿದ್ದರೆ ಒಮ್ಮೆ ಕಣ್ಣುಗಳನ್ನು ಚೆಕ್ ಮಾಡಿಸಿಕೊಳ್ಳಿ. ಅದು ಬಣ್ಣಗುರುಡುತನ (Color Blindness) ಆಗಿರಬಹುದು.
ಬಣ್ಣ ಕುರುಡುತನ ಎಂದರೆ, ದಿನದ ಸಾಮಾನ್ಯ ಬೆಳಕಿನಲ್ಲಿ ಬಣ್ಣಗಳಲ್ಲಿನ ವಿಭಿನ್ನತೆಯನ್ನು ಗುರುತಿಸುವ ಸಾಮರ್ಥ್ಯ ಇಲ್ಲದಿರುವುದು. ಇದು ಬಹುದೊಡ್ಡ ಪ್ರಮಾಣದಲ್ಲಿ ಇರಬೇಕೆಂದಿಲ್ಲ, ಅತಿ ಸಣ್ಣ ಪ್ರಮಾಣದ ಕೊರತೆಯೂ ಇರಬಹುದು.
ಬಣ್ಣ ಕುರುಡುತನ ಅತಿ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರಿಗೆ ಚೆನ್ನಾಗಿ ಬೆಳಕಿದ್ದರೆ ಮಾತ್ರ ಬಣ್ಣಗಳ ವ್ಯತ್ಯಾಸ ಅರಿವಿಗೆ ಬರಬಹುದು. ಬೆಳಕಿನ ಕೊರತೆಯಿರುವಾಗ ಬಣ್ಣಗಳನ್ನು ಗುರುತಿಸಲು ಅವರು ವಿಫಲರಾಗಬಹುದು. ತೀವ್ರ ಸಮಸ್ಯೆ ಇರುವವರ ಕಣ್ಣಿಗೆ ಎಲ್ಲವೂ ಒಂದು ರೀತಿಯ ಬೂದು ಬಣ್ಣದಲ್ಲಿ ಗೋಚರಿಸಬಹುದು.
ಪುರುಷರಲ್ಲಿ ಹೆಚ್ಚು
ತಜ್ಞರ ಪ್ರಕಾರ, ಪುರುಷ(Male)ರಲ್ಲಿ ಬಣ್ಣಗುರುಡುತನ ಹೆಚ್ಚು. ಶೇ.8ರಷ್ಟು ಪುರುಷರು ಈ ಸಮಸ್ಯೆ ಹೊಂದಿದ್ದಾರೆ. ಇವರಲ್ಲಿ ಬಹುತೇಕ ಜನರು ಹುಟ್ಟಿನಿಂದಲೇ ಈ ಸಮಸ್ಯೆ ಹೊಂದಿರುತ್ತಾರೆ. ವಿಶೇಷವೆಂದರೆ, ಇದೊಂದು ಸಮಸ್ಯೆ ಎನ್ನುವುದು ಅವರ ಅರಿವಿಗೆ ಬರುವುದೇ ಇಲ್ಲ. ಕೆಲವರಿಗೆ ಹಸಿರು ಮತ್ತು ಕೆಂಪು, ನೀಲಿ ಮತ್ತು ಹಳದಿ ಬಣ್ಣಗಳ ನಡುವಿನ ವ್ಯತ್ಯಾಸ ಗೊತ್ತಾಗುವುದಿಲ್ಲ. ಹೀಗಾಗಿ, ಬಣ್ಣಗಳನ್ನು ಗುರುತಿಸುವಾಗ ಪದೇ ಪದೆ ನಿಮಗೂ, ಇನ್ನೊಬ್ಬರಿಗೂ ವ್ಯತ್ಯಾಸ ಕಂಡುಬಂದಲ್ಲಿ ಕಣ್ಣಿನ ಪರೀಕ್ಷೆ ಮಾಡಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಲೈಸೆನ್ಸ್ (Licence) ಸಿಗ್ತು
ನಿಮಗೆ ಗೊತ್ತೇ? ಮೊದಲು ಬಣ್ಣಗುರುಡುತನ ಉಳ್ಳವರಿಗೆ ಡ್ರೈವಿಂಗ್ (Driving) ಲೈಸೆನ್ಸ್ ನೀಡುತ್ತಿರಲಿಲ್ಲ. 2020ರಲ್ಲಷ್ಟೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬಣ್ಣಗುರುಡುತನವುಳ್ಳವರಿಗೂ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರ್ಧರಿಸಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಖಾಸಗಿ ವಾಹನದಲ್ಲಿ ಸಂಚರಿಸಲು ಬಯಸುವವರಿಗೆ ಇದು ಭಾರೀ ಸಮಾಧಾನ ನೀಡಿದೆ. ಆದರೆ, ಒಂದು ವೇಳೆ, ನಿಮಗೆ ಈ ಸಮಸ್ಯೆ ಇದ್ದು ಡ್ರೈವಿಂಗ್ ಮಾಡಲು ಬಯಸುತ್ತಿದ್ದರೆ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಎಚ್ಚರಿಕೆ ವಹಿಸಿ
ತಜ್ಞರ ಪ್ರಕಾರ, ಸಿಗ್ನಲ್ ನಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಯೆಂದರೆ, ಕೆಂಪು ಮತ್ತು ಹಸಿರು ಬಣ್ಣಗಳದ್ದು. ಬಹಳಷ್ಟು ಜನರಿಗೆ ಹಸಿರು ಬಣ್ಣ ಮತ್ತಷ್ಟು ಕೆಂಪಾಗಿ, ಕೆಂಪು ಬಣ್ಣ ದಟ್ಟ ಹಸಿರಾಗಿ ಹಾಗೂ ಹೆಚ್ಚು ಗಾಢವಿಲ್ಲದಂತೆಯೂ ತೋರಬಹುದು. ಸಮಸ್ಯೆ ಬರುವುದು ಇಲ್ಲೇ. ಬಣ್ಣಗುರುಡುತನ ಸಮಸ್ಯೆ ಉಳ್ಳವರ ಪೈಕಿ ಶೇ.50ರಷ್ಟು ಜನ ಟ್ರಾಫಿಕ್ (Traffic) ಸಿಗ್ನಲ್ಲಿನ ಕೆಂಪು ಮತ್ತು ಹಸಿರು ಬಣ್ಣಗಳನ್ನು ಗುರುತಿಸಲು ಕಷ್ಟ ಎದುರಿಸುತ್ತಾರೆ. ಬಣ್ಣ ಗುರುತಿಸಲು ಅವರಿಗೆ ಹೆಚ್ಚು ಸೆಕೆಂಡುಗಳ ಸಮಯ ಬೇಕು. ಇದಕ್ಕಾಗಿ, ಕೆಂಪು, ಹಳದಿ, ಹಸಿರು ಬಣ್ಣದ ಪಟ್ಟಿಯನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಪಟ್ಟಿ ನೆನಪಿಲ್ಲದೇ ಹೋದರೆ ಏಕಾಏಕಿ ಸಿಗ್ನಲ್ ಬದಲಾವಣೆಯಾದಾಗ ಮತ್ತಷ್ಟು ಸಮಸ್ಯೆ ಆಗಬಹುದು. ಹೀಗಾಗಿ, ಟ್ರಾಫಿಕ್ ಸಿಗ್ನಲ್ ಸಮೀಪಿಸುತ್ತಿರುವ ಹಾಗೆಯೇ ವಾಹನವನ್ನು ಸ್ವಲ್ಪ ನಿಧಾನಗೊಳಿಸಿ, ಸಿಗ್ನಲ್ ಬಣ್ಣವನ್ನು ಸರಿಯಾಗಿ ಗಮನಿಸಿ.
ರಾತ್ರಿ (Night) ಸಮಯದಲ್ಲೂ ಹಲವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಪ್ರಕಾಶಮಾನವಾದ ಬೆಳಕಿನಿಂದ ಪ್ರತಿಫಲಕಗಳನ್ನು ಗುರುತಿಸುವುದೂ ಕಷ್ಟವಾಗುತ್ತದೆ. ರಾತ್ರಿ ಸಮಯದಲ್ಲಿ ಸಾಧ್ಯವಾದಷ್ಟೂ ನಿಧಾನವಾಗಿ ಚಲಿಸುವುದೇ ಇದಕ್ಕೆ ಪರಿಹಾರ. ಕಡಿಮೆ ಪ್ರಕಾಶವಿರುವ ಪರಿಸ್ಥಿತಿಗಳಲ್ಲಿ ಅಂದರೆ, ಮಳೆ ಬಂದಾಗ, ಹಿಮ ಅಥವಾ ಮಂಜು ಕವಿದಾಗಲೂ ಸಮಸ್ಯೆ ಆಗುತ್ತದೆ.
ಶೇ.20ರಷ್ಟು ಜನ ಬ್ರೇಕ್ ಲೈಟ್(Brakelight), ಟೇಲ್ ಲೈಟ್ (Talelight) ಗಳನ್ನು ಗುರುತಿಸುವಲ್ಲಿಯೂ ಎಡವುತ್ತಾರೆ. ಆಗ ಅಪಘಾತವಾಗುವ ಸಾಧ್ಯತೆ ಅಧಿಕ. ಹೀಗಾಗಿ, ಮುಂದಿನ ವಾಹನದಿಂದ ಸ್ವಲ್ಪ ಅಂತರದಲ್ಲೇ ಚಲಿಸುವುದು ಅತ್ಯಂತ ಸೂಕ್ತ. ಪ್ರಾಣಿಗಳು ಓಡಾಡುವ ಕಡೆಗಳಲ್ಲಿ, ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲೂ ಹೆಚ್ಚು ಎಚ್ಚರಿಕೆ ವಹಿಸಬೇಕು. ಬಣ್ಣಗುರುಡತನ ಹೊಂದಿರುವವರ ಸಬಲೀಕರಣಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿರುವಾಗ ಹೆಚ್ಚು ಜವಾಬ್ದಾರಿಯಿಂದ ವರ್ತಿಸುವುದು ಜನರ ಕರ್ತವ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.