ಥೈರಾಯ್ಡ್ ಇದೆ, ತೂಕ ಇಳಿಸಿಕೊಳ್ಳಲು ಆಗೋಲ್ಲ ಅನ್ನೋರು ಹೀಗ್ ಮಾಡಿದ್ರೆ ಸರಿ

By Suvarna News  |  First Published Jul 8, 2023, 4:40 PM IST

ಥೈರಾಯ್ಡ್ ಸಮಸ್ಯೆ ಇರುವಾಗ ತೂಕ ಕಡಿಮೆ ಮಾಡಿಕೊಳ್ಳುವುದು ಸವಾಲಾಗುತ್ತದೆ. ಅದರಲ್ಲೂ ಹೈಪೋಥೈರಾಯ್ಡಿಸಂ ಅಂದರೆ ಥೈರಾಯ್ಡ್ ಹಾರ್ಮೋನ್ ಸ್ರವಿಕೆ ಕಡಿಮೆಯಾದಾಗ ತೂಕ ಕಡಿಮೆ ಮಾಡಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಕೆಲವು ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.
 


ತೂಕ ಇಳಿಸಿಕೊಳ್ಳಲು ಆರೋಗ್ಯಕರ ಆಹಾರ, ನಿಯಂತ್ರಿತ ಆಹಾರ ಪ್ರಮಾಣ, ನಿಯಮಿತ ವ್ಯಾಯಾಮ ಇವು ಎಲ್ಲರಿಗೂ ಅತ್ಯಗತ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಪದ್ಧತಿ ಅನುಸರಿಸುವುದು ಉತ್ತಮ. ಇನ್ನು, ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದರೆ ಆಹಾರದಲ್ಲಿ ಮತ್ತಷ್ಟು ಎಚ್ಚರಿಕೆ ಅಗತ್ಯವಾಗುತ್ತದೆ. ಮಧುಮೇಹಿಗಳಾಗಿದ್ದರೆ ಸೂಕ್ತ ಆಹಾರ ಸೇವನೆ ಪದ್ಧತಿ ಇಲ್ಲವಾದರೆ ಸಮಸ್ಯೆಯಾಗುತ್ತದೆ. ಎಷ್ಟು ಮಾತ್ರೆ ನುಂಗಿದರೂ, ಇನ್ಸುಲಿನ್ ತೆಗೆದುಕೊಂಡರೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುವುದಿಲ್ಲ. ಇನ್ಯಾವುದೇ ಅನಾರೋಗ್ಯವಿಲ್ಲ ಎಂದಾದರೆ ಮಧುಮೇಹವನ್ನು ಆಹಾರದ ಮೂಲಕ ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಹಾಗೆಯೇ, ಹೈಫೋಥೈರಾಯ್ಡಿಸಮ್ ಸಮಸ್ಯೆಯಿಂದ ಬಳಲುವವರು ಸಹ ಆಹಾರ ಹಾಗೂ ತೂಕ ಹೆಚ್ಚಳದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಥೈರಾಯ್ಡ್ ಗ್ರಂಥಿ ಸಕ್ರಿಯವಾಗಿ ಇಲ್ಲದಿರುವಾಗ ಈ ಸಮಸ್ಯೆ ಉಂಟಾಗುತ್ತದೆ. ಥೈರಾಯ್ಡ್ ಕಡಿಮೆ ಪ್ರಮಾಣದಲ್ಲಿ ಸ್ರವಿಕೆಯಾದಾಗ ತೂಕ ಹೆಚ್ಚುವುದು ಮೊಟ್ಟಮೊದಲ ಲಕ್ಷಣ. ಹೀಗಾಗಿ, ಈ ಸಮಸ್ಯೆ ಇರುವಾಗ ತೂಕ ಇಳಿಸಿಕೊಳ್ಳುವುದು ಕಷ್ಟವೂ ಆಗುತ್ತದೆ. ಆದರೂ ಅಸಾಧ್ಯವೇನಲ್ಲ. ಇದಕ್ಕಾಗಿ ಕೆಲವು ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ. ಹೈಪೋಥೈರಾಯ್ಡಿಸಂ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಶಿಸ್ತುಬದ್ಧ ಜೀವನ ನಡೆಸುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಬಹುದು.

•    ಸಕ್ಕರೆ (Sugar) ಮತ್ತು ಕಾರ್ಬೋಹೈಡ್ರೇಟ್ (Corbohydrates)
ನರರೋಗ ತಜ್ಞರ ಪ್ರಕಾರ, ಹೈಪೋಥೈರಾಯ್ಡಿಸಂ ಸಮಸ್ಯೆ ಉಳ್ಳವರು ಕಾರ್ಬೋಹೈಡ್ರೇಟ್ ಪ್ರಮಾಣ ಮತ್ತು ಸಕ್ಕರೆಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಅಧಿಕ ಗ್ಲೈಸೆಮಿಕ್ ಅಂಶವಿರುವ ಆಹಾರಗಳು ದೇಹದಲ್ಲಿ ಉರಿಯೂತವನ್ನು (Inflammation) ಉಂಟುಮಾಡುತ್ತವೆ. ಉತ್ತಮ ಕ್ಯಾಲರಿಯುಳ್ಳ ಆಹಾರ ಸೇವನೆಗೆ (Food Intake) ಆದ್ಯತೆ ನೀಡಬೇಕು. ಇಲ್ಲವಾದರೆ, ದೇಹದಲ್ಲಿ ಒತ್ತಡವುಂಟಾಗಿ ಥೈರಾಯ್ಡ್ ಹಾರ್ಮೋನ್ ಉತ್ಪಾದನೆ ಇಳಿಕೆಯಾಗುತ್ತದೆ. ಹೆಚ್ಚು ಪ್ರೊಟೀನ್ (Protein) ಯುಕ್ತ ಆಹಾರ ಸೇವಿಸಬೇಕು. ಧಾನ್ಯಗಳು, ಮೀನು, ಸೆಲೆನಿಯಂಯುಕ್ತ ಮಾಂಸವನ್ನು ಸೇವಿಸುವುದರಿಂದ ಸುಸ್ತು ಕಡಿಮೆಯಾಗುತ್ತದೆ. ಮಾಂಸಖಂಡಗಳ ಬಲವರ್ಧನೆಗೆ ಸಹಕಾರಿಯಾಗುತ್ತದೆ. 

Latest Videos

undefined

ಆಫೀಸ್‌, ಮನೆ, ಊಟ, ನಿದ್ದೆ; ಲೈಫ್‌ ಇಷ್ಟೇ ಆಗಿದ್ಯಾ? ಈ ಎಲ್ಲಾ ಕಾಯಿಲೆ ವಕ್ಕರಿಸುತ್ತೆ ಹುಷಾರ್‌!

•    ಉರಿಯೂತ ಸೃಷ್ಟಿಸದ ಆಹಾರ
ಹಸಿರು ಸೊಪ್ಪು, ಟೊಮ್ಯಾಟೋ, ಕೆಲ ಜಾತಿಯ ಮೀನು, ಒಣಹಣ್ಣು, ಹಣ್ಣುಗಳು, ಆಲಿವ್ ಎಣ್ಣೆಯನ್ನು ಆಹಾರದಲ್ಲಿ ಹೆಚ್ಚು ಬಳಕೆ ಮಾಡಬೇಕು. ಇವು ಉರಿಯೂತವನ್ನು ಉಂಟುಮಾಡುವುದಿಲ್ಲವಾದ್ದರಿಂದ ಆರೋಗ್ಯಕ್ಕೆ (Health) ಸಹಕಾರಿಯಾಗಿವೆ. ಉರಿಯೂತವನ್ನು ಉಂಟುಮಾಡುವ ಆಹಾರಗಳು ಖಿನ್ನತೆ ಹಾಗೂ ಹೈಪೋಥೈರಾಯ್ಡಿಸಂ (Hypothyroidism) ಅನ್ನು ಹೆಚ್ಚಿಸುತ್ತವೆ. ಮೀನು ಮತ್ತು ಮೊಟ್ಟೆಯಿಂದ ಟಿಎಸ್ ಎಚ್ (ಥೈರಾಯ್ಡ್ ಉತ್ತೇಜಕ ಹಾರ್ಮೋನ್) ಹೆಚ್ಚುತ್ತದೆ. 

•    ಕಿರು ಆಹಾರ, ಆಗಾಗ ಸೇವನೆ
ಹೈಪೋಥೈರಾಯ್ಡಿಸಂ ಜೀರ್ಣಕ್ರಿಯೆಯನ್ನು (Digest) ನಿಧಾನಗೊಳಿಸುತ್ತದೆ. ಹೀಗಾಗಿ, ಒಮ್ಮೆಲೆ ಹೆಚ್ಚು ಆಹಾರ ಸೇವನೆ ಮಾಡಿದರೆ ಜೀರ್ಣವಾಗುವುದು ಕಷ್ಟವಾಗುತ್ತದೆ. ಸಮತೋಲಿತ ಆಹಾರವನ್ನು ಪದೇ ಪದೆ ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡಬೇಕು.

•    ನಿಗದಿತ ವ್ಯಾಯಾಮ (Exercise)
ಕ್ಯಾಲರಿ ಜೀರ್ಣವಾಗಲು ನಿಗದಿತ ವ್ಯಾಯಾಮ ಮಾಡುವುದು ಅತ್ಯಗತ್ಯ. ಹಾಗೆಂದು, ಅತಿಯಾಗಿ ಸುಸ್ತಾದಾಗ ವ್ಯಾಯಾಮ ಮಾಡಬಾರದು. ಹೈಪೋಥೈರಾಯ್ಡಿಸಂ ಅನ್ನು ಸರಿಯಾಗಿ ನಿಭಾಯಿಸಲು ಸೂಕ್ತ ಪ್ರಮಾಣದಲ್ಲಿ ವ್ಯಾಯಾಮ ಮಾಡಬೇಕು. ಜತೆಗೆ, ಯಾವಾಗಲೂ ದೇಹ ಹೈಡ್ರೇಟ್ (Hydrate) ಆಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ಜೀರ್ಣಕ್ರಿಯೆಗೂ ಅನುಕೂಲವಾಗುತ್ತದೆ.

ಬ್ಲಡ್ ಶುಗರ್ ಲೆವೆಲ್‌ ಕಡಿಮೆ ಮಾಡ್ಕೊಳ್ಳೋಕೆ ಸಿಂಪಲ್ ಮನೆಮದ್ದು

•    ಅಯೋಡಿನ್ (Iodine) ಬಗ್ಗೆ ಗಮನ
ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ಅಯೋಡಿನ್ ಬೇಕು. ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಅಯೋಡಿನ್ ಸಿಗುತ್ತಿದೆಯೇ ಇಲ್ಲವೇ ಎಂದು ಚೆಕ್ ಮಾಡಿಕೊಳ್ಳಿ. ದೇಹಕ್ಕೆ ಸೂಕ್ತ ಅಯೋಡಿನ್ ಸಿಗಲಿಲ್ಲ ಎಂದಾದರೆ ಥೈರಾಯ್ಡ್ ಗ್ರಂಥಿಯ (Gland) ಮೇಲೆ ಭಾರೀ ಪರಿಣಾಮವುಂಟಾಗುತ್ತದೆ. ಪ್ರಾಣಿಗಳ ಪ್ರೊಟೀನ್, ಸಮುದ್ರ ಆಹಾರ ಹಾಗೂ ಅಯೋಡಿನ್ ಯುಕ್ತ ಉಪ್ಪಿನ ಮೂಲಕ ಇದು ದೇಹಕ್ಕೆ ದೊರೆಯುತ್ತದೆ. 

•    ಔಷಧ
ವೈದ್ಯರು ನೀಡಿದ ಔಷಧವನ್ನು (Medicine) ಸರಿಯಾಗಿ ತೆಗೆದುಕೊಳ್ಳುವುದು ಅಗತ್ಯ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವ ಔಷಧದೊಂದಿಗೆ ಬೇರೆ ಯಾವುದೇ ಔಷಧ ತೆಗೆದುಕೊಳ್ಳಬಾರದು. ಆಹಾರ ಸೇವನೆಗೂ ಕನಿಷ್ಠ 30-60 ನಿಮಿಷಗಳ ಮುನ್ನ ಮಾತ್ರೆ ತೆಗೆದುಕೊಳ್ಳಬೇಕು. ಯಾವುದೇ ರೀತಿಯಲ್ಲಿ ಬದಲಾವಣೆ ಮಾಡುವುದಾದರೂ ವೈದ್ಯರಲ್ಲಿ ವಿಚಾರಿಸಬೇಕು.
 

click me!