ಮಾಸ್ಕ್ ಧರಿಸಿದರೆ ತಲೆನೋವು! ಇದರಿಂದ ಪಾರಾಗೋದು ಹೇಗೆ?

By Suvarna NewsFirst Published Oct 11, 2021, 5:03 PM IST
Highlights

ದೀರ್ಘಕಾಲದವರೆಗೆ ಮಾಸ್ಕ್ ಧರಿಸಿಯೇ ಇರುವುದರಿಂದ ಕೆಲವರಲ್ಲಿ ಹಲವು ಬಗೆಯ ಸಮಸ್ಯೆಗಳು ತಲೆದೋರಬಹುದು. ತಲೆನೋವು ಅವುಗಳಲ್ಲಿ ಒಂದು. ಇದರಿಂದ ಪಾರಾಗುವುದು ಹೇಗೆ?
 

ಕೊರೊನಾವೈರಸ್ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಉತ್ತಮ ಮಾರ್ಗ. ಆದರೆ ಮಾಸ್ಕ್(Mask) ಧರಿಸುವುದು, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಲಸಿಕೆ ಹಾಕಿದ ನಂತರವೂ ಅನುಸರಿಸಬೇಕು ಎಂದು ಸರ್ಕಾರ ಹೇಳುತ್ತದೆ. ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸುಲಭ. ಆದರೆ ಸಾರ್ವಜನಿಕ ಪ್ರದೇಶಗಳಲ್ಲಿ ದೀರ್ಘಕಾಲದವರೆಗೆ ಮಾಸ್ಕ್ ಧರಿಸುವುದು ಅಸ್ವಸ್ಥತೆ ಮತ್ತು ತಲೆನೋವಿಗೆ ಕಾರಣವಾಗಬಹುದು.

ಮೊದಲು ಲಾಕ್‌ಡೌನ್(Lockdwon) ಸಂದರ್ಭದಲ್ಲಿ ಜನ ಹೆಚ್ಚು ಕಾಲ ಹೊರಗೆ ಹೋಗುತ್ತಿರಲಿಲ್ಲ. ಆದರೆ ಈಗ ಜನರು ಹೆಚ್ಚು ಗಂಟೆಗಳ ಕಾಲ ಹೊರಗೆ ಹೋಗುತ್ತಿರುವುದರಿಂದ, ಮಾಸ್ಕ್‌ಗೆ ಸಂಬಂಧಿಸಿದ ತಲೆನೋವಿನ ದೂರುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ದೀರ್ಘಕಾಲದವರೆಗೆ ಮಾಸ್ಕ್ ಧರಿಸಿದ ನಂತರ ಅನೇಕ ಜನರು ತಲೆನೋವು(Headache), ಅಸ್ವಸ್ಥತೆ, ನಿರ್ಜಲೀಕರಣದ ಬಗ್ಗೆ ದೂರು ನೀಡುತ್ತಾರೆ. ನೆಗಡಿ, ಕೆಮ್ಮು, ಅಸ್ತಮಾ, ಅಲರ್ಜಿ ಮತ್ತು ಚರ್ಮದ ದದ್ದು ಇರುವವರಿಗೆ ಮಾಸ್ಕ್ ಧರಿಸುವುದು ಇನ್ನೂ ಕಷ್ಟ. ಆದರೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಜನರು ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು. ಮಾಸ್ಕ್ ಧರಿಸುವುದರಿಂದ ಆಗುವ ಅನುಕೂಲಗಳು ಅದನ್ನು ಧರಿಸದೆ ಇರುವುದರಿಂದ ಆಗುವ ಅನಾನುಕೂಲತೆಯನ್ನು ಮೀರಿಸುತ್ತದೆ. 

ಆಯುರ್ವೇದ: ನವದುರ್ಗೆಯರ ಶಕ್ತಿ ಪಡೆದಿರುವ ಒಂಭತ್ತು ಗಿಡಮೂಲಿಕೆಗಳಿವು!!

ಏಕೆ ತಲೆನೋವು ಉಂಟಾಗುತ್ತದೆ?

ದೀರ್ಘಕಾಲದವರೆಗೆ ಬಿಗಿಯಾದ ಮಾಸ್ಕ್ ಧರಿಸುವುದರಿಂದ ಟೆಂಪೊರೊಮಾಂಡಿಬ್ಯುಲರ್ ಜಾಯಿಂಟ್‌ನಲ್ಲಿ(ಟಿಎಂಜೆ) ನೋವು ಉಂಟಾಗಬಹುದು. ಇದು ನಿಮ್ಮ ಕೆಳ ದವಡೆಯು ನಿಮ್ಮ ತಲೆಬುರುಡೆಯ ಉಳಿದ ಭಾಗವನ್ನು ಸಂಪರ್ಕಿಸುವ ಜಾಯಿಂಟ್. ಮಾಸ್ಕ್ ನಿಮ್ಮ ದವಡೆ ಚಲಿಸಲು ಅನುವು ಮಾಡಿಕೊಡುವ ಸ್ನಾಯುಗಳು ಮತ್ತು ಅಂಗಾಂಶಗಳನ್ನು ಜಡಗೊಳಿಸಬಹುದು. ದವಡೆಯ ಮೇಲೆ ಪರಿಣಾಮ ಬೀರುವ ನರಗಳು ನೋವು ಸಂಕೇತಗಳನ್ನು ಕಳುಹಿಸಬಹುದು, ಅದು ತಲೆನೋವಿನಂತೆ ಅನಿಸಬಹುದು.

ಆಯಿಲ್ ಪುಲ್ಲಿಂಗ್ ಎಂದರೇನು? ಹಲ್ಲುಗಳ ಆರೈಕೆಗೆ ಇದು ಯಾಕೆ ಮುಖ್ಯ

ತಲೆನೋವನ್ನು ತಡೆಯುವುದು ಹೇಗೆ

  • ನಿಮ್ಮ ಕಿವಿಯ ಹಿಂದೆ ಬಿಗಿಯಾಗಿ ಎಳೆಯುವ ಮಾಸ್ಕ್ ಧರಿಸುವುದನ್ನು ತಪ್ಪಿಸಿ. ಬಿಗಿಯಾದ ಮಾಸ್ಕ್ ನಿಮ್ಮ ಕಿವಿಗಳನ್ನು ಮುಂದಕ್ಕೆ ಎಳೆಯುತ್ತದೆ. ಇದು ಹತ್ತಿರದ ನರಗಳನ್ನು ಕೆರಳಿಸಬಹುದು. ನೀವು ಹೆಚ್ಚಿನ ಅಪಾಯದ ಪರಿಸ್ಥಿತಿಯಲ್ಲಿದ್ದೀರಿ ಅನಿಸಿದರೆ ಮಾತ್ರ ಬಿಗಿಯಾದ ಮತ್ತು ಹೆಚ್ಚು ನಿರ್ಬಂಧಿತ ಮಾಸ್ಕ್ ಧರಿಸಿಕೊಳ್ಳಿ.
  • ನಿಮ್ಮ ದವಡೆ ಮತ್ತು ಹಲ್ಲುಗಳ ಸ್ಥಾನಕ್ಕೆ ಗಮನ ಕೊಡಿ. ಒತ್ತಡ ಮತ್ತು ಚಿಂತೆ ನಿಮ್ಮ ದವಡೆಯ ಸ್ನಾಯುಗಳು ಮತ್ತು ಹಲ್ಲುಗಳನ್ನು ಸೆಳೆದುಕೊಳ್ಳಲು ಕಾರಣವಾಗಬಹುದು. ನೀವು ಆರಾಮವಾಗಿರುವಾಗ ನಿಮ್ಮ ದವಡೆ ಸಡಿಲವಾಗಿರಬೇಕು ಮತ್ತು ಹಲ್ಲುಗಳು ಮುಟ್ಟಬಾರದು.

  • ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಿ. ಟಿಎಂಜೆ ನೋವು ಕೆಟ್ಟ ಭಂಗಿಯಿಂದ ಕೂಡ ಉಂಟಾಗಬಹುದು, ಏಕೆಂದರೆ ಕೆಟ್ಟ ಭಂಗಿಯು ಸ್ನಾಯುವಿನ ಒತ್ತಡವನ್ನು ಹೆಚ್ಚಿಸುತ್ತದೆ.
  • ಕೆಲವು ಸೌಮ್ಯವಾದ ಕುತ್ತಿಗೆಯ ವ್ಯಾಯಾಮಗಳನ್ನು ಮಾಡಿ. 
  • ನಿಮ್ಮ ಕೆನ್ನೆ ಮತ್ತು ಕಪೋಲಗಳಿಗೆ ಹದವಾಗಿ ಮಸಾಜ್ ಮಾಡಿ.
  • ಕೆಲಸದ ನಡುವೆ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ.
  • ಮಾಸ್ಕ್ ಧರಿಸಿದ್ದಾಗ ತಲೆ ಬಗ್ಗಿಸಿ ಮೊಬೈಲ್ ನೋಡುವುದನ್ನು ಅವಾಯ್ಡ್ ಮಾಡಿ. ಇವೆರಡೂ ಕಪೋಲದ ನರಗಳಿಗೆ ಕಷ್ಟ ಕೊಡುತ್ತದೆ.
  • ನಿಮ್ಮ ನಾಲಿಗೆಯನ್ನು ನಿಮ್ಮ ಬಾಯಿಯ ಮೇಲ್ಛಾವಣಿಯ ಮೇಲೆ ಇರಿಸಿ, ನಿಧಾನವಾಗಿ ತೆರೆಯಿರಿ. ನಿಮ್ಮ ಬಾಯಿಯನ್ನು ಮುಚ್ಚಿ ದವಡೆಯ ಸ್ನಾಯುಗಳನ್ನು ಹಿಗ್ಗಿಸಿ ಮತ್ತು ಟಿಎಂಜೆಯನ್ನು ಮೆಲುವಾಗಿ ಉಜ್ಜಿ.
  • ನಿಮ್ಮ ಬಾಯಿಯನ್ನು ಸ್ವಲ್ಪ ತೆರೆದಿಟ್ಟುಕೊಳ್ಳಿ, ನಿಧಾನವಾಗಿ ನಿಮ್ಮ ದವಡೆಗೆ ಆರಾಮದಾಯಕವಾಗುವಂತೆ ಮಸಾಜ್ ಮಾಡಿ.
click me!