ನೋವನ್ನು ಯಾರು ಅನುಭವಿಸ್ತಾರೆ ಹೇಳಿ? ಆದಷ್ಟು ಬೇಗ ನೋವು ಕಡಿಮೆಯಾಗ್ಲಿ ಅಂತಾ ಮನೆಯಲ್ಲಿರೋ ನೋವಿನ ಮಾತ್ರೆ ಬಾಯಿಗೆ ಹಾಕಿಕೊಳ್ತೇವೆ. ಆ ಕ್ಷಣಕ್ಕೆ ನೋವು ಕಡಿಮೆಯಾದಂತೆ ಅನ್ನಿಸಿದ್ರೂ ಅದ್ರ ಅಡ್ಡಪರಿಣಾಮ ಸಾಕಷ್ಟಿದೆ.
ದಿನಪೂರ್ತಿ ಕೆಲಸ, ಒತ್ತಡ ಹಾಗೂ ಟೆನ್ಶನ್ ನಿಂದ ಕೆಲವೊಮ್ಮೆ ಮೈ ಕೈ ನೋವು, ಸೊಂಟನೋವು, ತಲೆನೋವು ಮುಂತಾದವು ಕಾಣಿಸಿಕೊಳ್ಳುತ್ತವೆ. ಕೆಲವು ನೋವು ವಯೋಸಹಜ ನೋವುಗಳಾಗಿರುತ್ತವೆ. ಇನ್ನೂ ಕೆಲವು ವರ್ಕ್ ಪ್ರೆಶರ್ ನಿಂದ ಉಂಟಾಗಿರುತ್ತದೆ. ಇಂತಹ ನೋವುಗಳು ಬೇಗ ವಾಸಿಯಾಗಬೇಕೆಂದು ಓವರ್ ದ ಕೌಂಟರ್ ಮಾತ್ರೆಗಳ ಮೊರೆ ಹೋಗುತ್ತಾರೆ. ಎಲ್ಲವೂ ಫಾಸ್ಟ್ ಆಗಿರುವ ಇಂದಿನ ಯುಗದಲ್ಲಿ ನೋವು (Pain) ಗಳು ಕೂಡ ಅಷ್ಟೇ ಬೇಗ ಗುಣವಾಗಬೇಕೆಂದು ಎಲ್ಲರೂ ಬಯಸುತ್ತಾರೆಯೇ ಹೊರತು ಅದರಿಂದ ನಮ್ಮ ಶರೀರಕ್ಕೆ ಉಂಟಾಗುವ ಹಾನಿಯ ಬಗ್ಗೆ ವಿಚಾರ ಮಾಡೋದಿಲ್ಲ. ಆದ್ದರಿಂದ ಅದನ್ನು ಗುಣಪಡಿಸಲು ಶಾಶ್ವತ ಪರಿಹಾರ ಏನು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗೋದಿಲ್ಲ. ಒಂದು ಚಿಕ್ಕ ಮಾತ್ರೆಯಿಂದ ಅಂತಹ ತೊಂದರೆ ಏನೂ ಆಗೋದಿಲ್ಲ ಎನ್ನುವ ತಪ್ಪು ಕಲ್ಪನೆಯಲ್ಲೇ ಇರುತ್ತಾರೆ.
ಪುರುಷರು ಮಹಿಳೆಯರೆನ್ನದೇ ಎಲ್ಲರೂ ಸರಿಸಮಾನವಾಗಿ ದುಡಿಯುವ ಈ ಕಾಲದಲ್ಲಿ ಎಲ್ಲರ ಮೇಲೂ ಒತ್ತಡ ಹೆಚ್ಚಾಗಿಯೇ ಇರುತ್ತದೆ. ಒತ್ತಡದ ಕಾರಣ ತಲೆನೋವು (Headache) ಸರ್ವೇಸಾಮಾನ್ಯವಾಗಿದೆ. ಕೆಲವರಿಗೆ ಹಾರ್ಮೋನ್ ಅಸಮತೋಲನ, ಮೈಗ್ರೇನ್ಗಳಿಂದಲೂ ತಲೆನೋವು ಬಾಧಿಸಿಬಹುದು. ತಲೆನೋವಿನ ಕಾರಣ ಕೆಲಸವನ್ನು ಮಾಡಲು ಆಗೋದಿಲ್ಲ ಎನ್ನುವ ಕಾರಣಕ್ಕೆ ತಕ್ಷಣ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಇಂತಹ ಮಾತ್ರೆಗಳು ದೇಹಕ್ಕೆ ಬಹಳ ಹಾನಿ ಮಾಡುತ್ತವೆ. ಅದರಲ್ಲೂ ತಲೆನೋವು ಬಂದ ಕೂಡಲೇ ಮಾತ್ರೆಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ತೀರ ಅಪಾಯಕಾರಿಯಾಗಿದೆ.
SLEEP DISORDER: ಪುರುಷರಿಗೆ ಹೋಲಿಸಿದ್ರೆ ತಡರಾತ್ರಿಯಾದ್ರೂ ಮಹಿಳೆಗೆ ನಿದ್ರೆ ಬರೋದಿಲ್ಲ ಯಾಕೆ?
ತಲೆನೋವು ಬಂದ ತಕ್ಷಣ ಮಾತ್ರೆ ತಿನ್ನಬೇಡಿ : ತಲೆನೋವಿನ ಪರಿಹಾರಕ್ಕಾಗಿ ಓವರ್ ದ ಕೌಟಂರ್ ಮಾತ್ರೆಗಳನ್ನು ಅಪರೂಪಕ್ಕೊಮ್ಮೆ ಒಂದು ಲಿಮಿಟ್ ನಲ್ಲಿ ಸೇವಿಸಬಹುದು. ಆದರೆ ಒಮ್ಮೆ ಅದನ್ನು ಸೇವಿಸಿದ ತಕ್ಷಣ ಇನ್ನೊಮ್ಮೆ ತಲೆನೋವು ಬಂದಾಗ ಮತ್ತೆ ನೋವುನಿವಾರಕ ಮಾತ್ರೆಗಳನ್ನು ಸೇವಿಸಬೇಕೆನಿಸುತ್ತದೆ. ಆ ಕ್ಷಣಕ್ಕೆ ಅದು ನೋವಿನಿಂದ ಮುಕ್ತಿ ಕೊಡುತ್ತದೆ ಎನ್ನುವುದೇ ಮುಖ್ಯವಾಗಿರುತ್ತದೆ.
ತಲೆನೋವನ್ನು ಹೋಗಲಾಡಿಸಲು ವೈದ್ಯರ ಸಲಹೆಯಿಲ್ಲದೇ ಮಾತ್ರೆಗಳನ್ನು ಸೇವಿಸುವುದು ಅನೇಕ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಹೃದಯಾಘಾತ ಮುಂತಾದ ಸಮಸ್ಯೆಗಳನ್ನು ಹೊಂದಿರುವವರಿಗಂತೂ ನೋವು ನಿವಾರಕ ಮಾತ್ರೆಗಳು ತೀರ ಅಪಾಯಕಾರಿಯಾಗಿದೆ. ತಲೆನೋವು ನಿವಾರಕ ಮಾತ್ರೆಗಳನ್ನು ನಿಯಮಿತವಾಗಿ ಬಳಸುವವರಲ್ಲಿ ಮೇಲಿಂದ ಮೇಲೆ ತಲೆನೋವು ಕಾಣಿಸಿಕೊಳ್ಳುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ.
Health Tips: ಈ ರೋಗ ಶುರುವಾದ್ರೆ ನಾಲಿಗೆಯ ಮೇಲೆ ಕೂದಲು ಬೆಳೆಯುತ್ತೆ !
ತಲೆನೋವಿಗೆ ಮಾತ್ರೆ ಸೇವಿಸುವುದರಿಂದ ಈ ತೊಂದರೆಗಳು ಉಂಟಾಗುತ್ತೆ :
• ಓವರ್ ಡೋಸ್ ಮಾತ್ರೆಗಳಿಂದ ಹೊಟ್ಟೆ ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವುಂಟಾಗುತ್ತದೆ.
• ನೋವು ನಿವಾರಕ ಮಾತ್ರೆಗಳಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ಅಜೀರ್ಣ ಮುಂತಾದವು ಉಂಟಾಗುತ್ತದೆ.
• ಪೇನ್ ಕಿಲ್ಲರ್ ಹೆಚ್ಚು ಸೇವಿಸೋದ್ರಿಂದ ಲಿವರ್, ಕಿಡ್ನಿ ಮುಂತಾದ ಅಂಗಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ನೋವು ನಿವಾರಕ ಮಾತ್ರೆಗಳಲ್ಲಿರುವ ವಿಷವನ್ನು ಲಿವರ್ ಸಂಗ್ರಹಿಸುತ್ತದೆ. ಇದರಿಂದ ಲಿವರ್ ಗೆ ಹಾನಿಯಾಗುತ್ತದೆ.
• ನೋವು ನಿವಾರಕ ಮಾತ್ರೆಗಳನ್ನು ಹೆಚ್ಚು ಹೆಚ್ಚು ತೆಗೆದುಕೊಳ್ಳೋದ್ರಿಂದ ದೇಹದ ರೋಗನಿರೋಧಕ ಶಕ್ತಿ ಕೂಡ ನಾಶವಾಗಬಹುದು. ಇದರಿಂದ ದೇಹ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
• ನೋವು ನಿವಾರಕ ಮಾತ್ರೆಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಇದರಿಂದ ಹೃದಯಾಘಾತದ ಅಪಾಯ ಹೆಚ್ಚುತ್ತದೆ.
• ತಲೆನೋವು ಬಂದಾಗ ಪ್ರತಿಬಾರಿಯೂ ಪೇನ್ ಕಿಲ್ಲರ್ ತೆಗೆದುಕೊಂಡ್ರೆ ಅದರಿಂದ ಹೊಟ್ಟೆಯ ಅಲ್ಸರ್ ಉಂಟಾಗಬಹುದು.
ನೋವು ನಿವಾರಕ ಮಾತ್ರೆಗಳ ಸೇವನೆ ಯಾವ ಸಂದರ್ಭದಲ್ಲೂ ಒಳ್ಳೆಯದಲ್ಲ. ಇದರಿಂದ ಅನಾನುಕೂಲವೇ ಹೆಚ್ಚು ಹಾಗಾಗಿ ಎಂತಹ ನೋವುಗಳೇ ಇದ್ದರೂ ಮೊದಲು ವೈದ್ಯರ ಸಲಹೆ ಪಡೆದುಕೊಂಡು ನಂತರ ಯಾವ ಮಾತ್ರೆಗಳನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎನ್ನುವುದನ್ನು ನಿರ್ಧರಿಸಬೇಕು.