ತೀವ್ರ ಜ್ವರದ ಜೊತೆ ಈ ಲಕ್ಷಣಗಳಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಡೆಂಗ್ಯೂ ಪರೀಕ್ಷೆ ಜೊತೆ ಎಚ್ಚರಿಕೆ ಅಗತ್ಯ

Published : Sep 23, 2026, 12:59 PM IST
Dengue mosquito

ಸಾರಾಂಶ

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಮಲ್ಲಮ್ಮ ಅವರ ಆಪ್ತೆ, ಉದ್ಯಮಿ ಪಲ್ಲವಿ, ಡೆಂಗ್ಯೂನಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ಕೇಳಿದ್ಮೇಲೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಜ್ವರ ಬರ್ತಿದ್ದಂತೆ ಡಾಕ್ಟರ್‌ ಬಳಿ ಹೋಗ್ಬೇಕಾ ಎನ್ನುವ ಪ್ರಶ್ನೆ ಕಾಡಲು ಶುರುವಾಗಿದೆ. ಡೆಂಗ್ಯೂ ಜ್ವರದ ಲಕ್ಷಣಗಳೇನು ಎನ್ನುವ ಮಾಹಿತಿ ಇಲ್ಲಿದೆ.

ಬೇಸಿಗೆ ಮತ್ತು ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಅಪಾಯ ಹೆಚ್ಚು. ಅದರಲ್ಲಿ ಡೆಂಗ್ಯೂ ಕೂಡ ಒಂದು. ಡೆಂಗ್ಯೂ ಬಂದಾಗ ಜ್ವರದ ಜೊತೆ ಮೈಕೈ ನೋವು ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಡೆಂಗ್ಯೂ ಲಕ್ಷಣಗಳು ಯಾವುವು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಂಗ್ಯೂ ಬಂದಾಗ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಸ್ನಾಯು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಇದರ ಜೊತೆಗೆ ವಾಕರಿಕೆ, ವಾಂತಿ ಮತ್ತು ಚರ್ಮದ ಮೇಲೆ ರ್ಯಾಶಸ್ ಅಥವಾ ಕೆಂಪು ದುದ್ದುಗಳು ಕೂಡ ಕಾಣಿಸಿಕೊಳ್ಳಬಹುದು. ಸೋಂಕಿತ ಸೊಳ್ಳೆ ಕಚ್ಚಿದ ಸುಮಾರು 4ರಿಂದ 10 ದಿನಗಳ ನಂತರ ಸಾಮಾನ್ಯವಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರಲ್ಲಿ ಡೆಂಗ್ಯೂ ಸೌಮ್ಯವಾಗಿರುತ್ತದೆ. ಒಂದರಿಂದ ಎರಡು ವಾರಗಳಲ್ಲಿ ಅವರು ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಡೆಂಗ್ಯೂ ಗಂಭೀರ ಸ್ವರೂಪ ಪಡೆದು ಪ್ರಾಣಕ್ಕೆ ಅಪಾಯವುಂಟು ಮಾಡುತ್ತದೆ.

ಎಲ್ಲ ಕೆಂಪು ದುದ್ದು ಡೆಂಗ್ಯೂನಾ?

ಡೆಂಗ್ಯೂನಲ್ಲಿ ಚರ್ಮದ ಮೇಲೆ ರ್ಯಾಶಸ್ ಅಥವಾ ಕೆಂಪು ಚಕ್ಕೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣಗಳಲ್ಲಿ ಒಂದು. ಆದರೆ ಚಕ್ಕೆಗಳು ಕಂಡ ಮಾತ್ರಕ್ಕೆ ಡೆಂಗ್ಯೂ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಜ್ವರದ ಜೊತೆ ರ್ಯಾಶಸ್ ಬೇರೆ ವೈರಲ್ ಸೋಂಕುಗಳಲ್ಲೂ ಕಾಣಿಸಿಕೊಳ್ಳಬಹುದು. ಜ್ವರ ನಿರಂತರವಾಗಿದ್ದು, ಅದರ ಜೊತೆಗೆ ಮೈಕೈ ನೋವು, ತಲೆನೋವು, ವಾಂತಿ ಅಥವಾ ಚರ್ಮದ ಮೇಲೆ ಚಕ್ಕೆಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.

ಜ್ವರ ಕಡಿಮೆಯಾದ್ರೂ ಎಚ್ಚರಿಕೆ ಅಗತ್ಯ

ಡೆಂಗ್ಯೂನಲ್ಲಿ ಜ್ವರ ಕಡಿಮೆಯಾಗುತ್ತಿದೆ ಎಂದ ಮಾತ್ರಕ್ಕೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅರ್ಥವಲ್ಲ.ಜ್ವರ ಕಡಿಮೆಯಾಗುವ ಸಮಯದಲ್ಲೇ ಕೆಲವರಲ್ಲಿ ಗಂಭೀರ ಡೆಂಗ್ಯೂನ ಎಚ್ಚರಿಕೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ, ಮೂಗು ಅಥವಾ ಒಸಡುಗಳಿಂದ ರಕ್ತಸ್ರಾವ, ಸುಸ್ತು, ವೇಗವಾಗಿ ಉಸಿರಾಟ, ವಾಂತಿ ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಮತ್ತು ಚರ್ಮ ತಣ್ಣಗಾಗುವುದು ಅಥವಾ ಹಳದಿ ಬಣ್ಣಕ್ಕೆ ತಿರುಗುವುದು ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

ಡೆಂಗ್ಯೂ ಅನುಮಾನ ಇದ್ರೆ ಏನು ಮಾಡಬೇಕು?

ಜ್ವರದ ಜೊತೆಗೆ ಕೆಂಪು ಚಕ್ಕೆಗಳು, ತೀವ್ರ ಮೈಕೈ ನೋವು ಅಥವಾ ಇತರ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ಡೆಂಗ್ಯೂಗೆ ನಿರ್ದಿಷ್ಟ ಆ್ಯಂಟಿವೈರಲ್ ಚಿಕಿತ್ಸೆ ಇಲ್ಲ. ಸಾಮಾನ್ಯವಾಗಿ ಸಾಕಷ್ಟು ವಿಶ್ರಾಂತಿ, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ದ್ರವಾಹಾರ ಸೇವನೆ ಮತ್ತು ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಲಾಗುತ್ತದೆ. ಜ್ವರ ಮತ್ತು ನೋವಿಗೆ ಪ್ಯಾರಾಸಿಟಮಾಲ್ ಬಳಸಬಹುದು. ಆದರೆ ಆಸ್ಪಿರಿನ್ ಮತ್ತು ಐಬುಪ್ರೊಫೆನ್ನಂತಹ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು. ಇವು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು.

ಸೊಳ್ಳೆಗಳಿಂದ ರಕ್ಷಣೆ

ಡೆಂಗ್ಯೂ ತಡೆಗಟ್ಟಲು ಸೋಂಕಿತ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುವುದು ಮುಖ್ಯ. ಡೆಂಗ್ಯೂ ಹರಡುವ ಏಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಸಕ್ರಿಯವಾಗಿರುತ್ತವೆ. ಹಾಗಾಗಿ ರಾತ್ರಿ ಮಾತ್ರ ಸೊಳ್ಳೆಗಳಿಂದ ರಕ್ಷಣೆ ಪಡೆದರೆ ಸಾಕಾಗುವುದಿಲ್ಲ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರಿನ ಟ್ಯಾಂಕ್ ಮತ್ತು ಇತರ ಪಾತ್ರೆಗಳನ್ನು ಮುಚ್ಚಿಡಿ. ಸಾಧ್ಯವಾದಷ್ಟು ಫುಲ್ ತೋಳಿನ ಬಟ್ಟೆ ಧರಿಸಿ ಮತ್ತು ಅಗತ್ಯವಿದ್ದರೆ ಸೊಳ್ಳೆ ನಿವಾರಕಗಳನ್ನು ಬಳಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತೂಕ ಇಳಿಸೋದು, ಜೀರ್ಣಕ್ರಿಯೆ ಹೆಚ್ಚಿಸೋದು ಹೇಗೆಂದು ಇನ್ಮುಂದೆ ಚಿಂತೆ ಮಾಡ್ಬೇಡಿ; ಇಲ್ಲಿದೆ ಬೆಸ್ಟ್ ಐಡಿಯಾ!
'ನಿದ್ದೆಗೆಟ್ಟೆಯಾ ಬುದ್ದಿಗೆಟ್ಟೆಯಾ' ಅನ್ನೋ ಗಾದೆ ಗೊತ್ತಲ್ಲ!.. ನಿದ್ದೆ ಟೈಂನಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!