ಎಚ್‌3ಎನ್‌2 ಕೂಡ ಕೋವಿಡ್‌ ರೀತಿಯಲ್ಲೇ ಹಬ್ಬುತ್ತೆ: ತಜ್ಞರ ಎಚ್ಚರಿಕೆ

By Kannadaprabha NewsFirst Published Mar 8, 2023, 9:59 AM IST
Highlights

ಎಚ್‌3ಎನ್‌2 ಕೂಡ ಕೋವಿಡ್‌ ರೀತಿಯಲ್ಲೇ ಹಬ್ಬುತ್ತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸೀನಿದಾಗ ಹೊರಬರುವ ಹನಿಗಳಿಂದ ಸೋಂಕು ಬರಬಹುದು, ಎಚ್‌3ಎನ್‌2 ರೂಪಾಂತರದಿಂದ ಸೋಂಕು ಹೆಚ್ಚಳ ಎಂದೂ ಹೇಳಿದ್ದಾರೆ. 

ನವದೆಹಲಿ (ಮಾರ್ಚ್‌ 8, 2023): ಕಳೆದ ಮೂರು ತಿಂಗಳಿನಿಂದ ಜ್ವರ, ಶೀತ, ಕೆಮ್ಮು ಸಮಸ್ಯೆಗೆ ಕಾರಣವಾಗಿರುವ ಎಚ್‌3ಎನ್‌2 ವೈರಾಣು ಸೋಂಕು ವಿಶ್ವಾದ್ಯಂತ ಎರಡು ವರ್ಷಗಳ ಕಾಲ ಮರಣ ಮೃದಂಗ ಬಾರಿಸಿದ್ದ ಕೋವಿಡ್‌ ರೀತಿಯಲ್ಲೇ ಹಬ್ಬುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಸೋಂಕಿತ ವ್ಯಕ್ತಿ ಸೀನಿದಾಗ ಆತನ ದೇಹದಿಂದ ಹೊರಬರುವ ದ್ರವದ ಕಣಗಳಿಂದಾಗಿ ಸೋಂಕು ಹರಡುತ್ತದೆ (ಕೋವಿಡ್‌ನಲ್ಲೂ (COVID) ಹೀಗೆಯೇ ಆಗುತ್ತಿತ್ತು). ಹಬ್ಬದ ಸೀಸನ್‌ ಹತ್ತಿರದಲ್ಲಿರುವುದರಿಂದ ಜನರು ಅದರಲ್ಲೂ ವಿಶೇಷವಾಗಿ ವಯೋವೃದ್ಧರು, ಮತ್ತು ಪೂರ್ವರೋಗಬಾಧಿತರು ಎಚ್ಚರದಿಂದ ಇರಬೇಕು ಎಂದು ದೆಹಲಿ ಏಮ್ಸ್‌ನ ಮಾಜಿ ಮುಖ್ಯಸ್ಥ (Former AIIMS-Delhi Director) ಡಾ. ರಣದೀಪ್‌ ಗುಲೇರಿಯಾ (Dr Randeep Guleria) ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: H3N2 ವೃದ್ಧರು, ಮಕ್ಕಳಿಗೆ ಹೆಚ್ಚು ಅಪಾಯಕಾರಿ, ಸಾವಿನ ಪ್ರಮಾಣ ಕಡಿಮೆ, ಆದರೆ ನಿರ್ಲಕ್ಷ್ಯ ಬೇಡ

ಈಗ ಕಂಡುಬರುತ್ತಿರುವ ಎಚ್‌3ಎನ್‌2 (H3N2) ಸಾಮಾನ್ಯ ವೈರಾಣು ತಳಿ. ಆದರೆ ಅದು ಈಗ ಅಲ್ಪಪ್ರಮಾಣದಲ್ಲಿ ರೂಪಾಂತರಗೊಂಡಿದೆ. ಜತೆಗೆ ವೈರಸ್‌ (Virus) ವಿರುದ್ಧದ ನಮ್ಮ ರೋಗ ನಿರೋಧಕ ಶಕ್ತಿ  ಸ್ವಲ್ಪ ಕುಂದಿದೆ. ಹೀಗಾಗಿ ಜನರಿಗೆ ಸೋಂಕು ಹರಡುತ್ತಿರುವುದರಿಂದ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಅಲ್ಲದೆ ಹವಾಮಾನ ಬದಲಾವಣೆಯಾಗುವ (Climate Change) ಈ ಹಂತದಲ್ಲಿ ಜ್ವರ ಬಾಧಿಸುವ ಪ್ರಮಾಣ ಹೆಚ್ಚಿರುತ್ತದೆ. ಇದರ ಜತೆಗೆ ಜನರು ದಟ್ಟಣೆಯ ಪ್ರದೇಶಗಳಲ್ಲಿ ಮಾಸ್ಕ್‌ (Mask) ಧರಿಸುತ್ತಿಲ್ಲ. ಸೋಂಕು ಹೆಚ್ಚಳಕ್ಕೆ ಇದು ಕೂಡ ಕಾರಣವಾಗಿದೆ ಎಂದಿದ್ದಾರೆ.

ಸೋಂಕು ಹೆಚ್ಚಿದ್ದರೂ ಆಸ್ಪತ್ರೆ ಸೇರುವವರ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಹೀಗಾಗಿ ಕಳವಳಪಡಬೇಕಾಗಿಲ್ಲ. ಈ ಸೋಂಕಿನಿಂದ ಪಾರಾಗಲು ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ಪದೇಪದೇ ಕೈಗಳನ್ನು ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಪಾಲಿಸುವುದು ಮುನ್ನೆಚ್ಚರಿಕೆಯ ಕ್ರಮಗಳಾಗಿವೆ ಎಂದಿದ್ದಾರೆ.

ಇದನ್ನೂ ಓದಿ: ಎಚ್‌3ಎನ್‌2 ತಡೆಗೆ ರಾಜ್ಯ ಸರ್ಕಾರದ ಮುನ್ನೆಚ್ಚರಿಕೆ, ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ

click me!