ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

By Kannadaprabha NewsFirst Published Mar 8, 2023, 9:02 AM IST
Highlights

ಕೋವಿಡ್‌ ಸೋಂಕಿಗೆ ತುತ್ತಾಗಿದ್ದವರು ತಮ್ಮ ವಯಸ್ಸು ಎಷ್ಟೇ ಆಗಿರಲಿ ಅಥವಾ ದೈಹಿಕವಾಗಿ ಎಷ್ಟೇ ಫಿಟ್‌ ಆಗಿರಲಿ ಉಸಿರಾಟ ಸಮಸ್ಯೆಯಂತಹ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ ವಹಿಸಬಾರದು. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹಾಗೆಯೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಏಮ್ಸ್‌ ಪ್ರಾಧ್ಯಾಪಕ ರಾಕೇಶ್‌ ಯಾದವ್‌ ಸಲಹೆ ಮಾಡಿದ್ದಾರೆ.

ನವದೆಹಲಿ: ತೀರಾ ಚಿಕ್ಕವಯಸ್ಸಿನವರೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಹಠಾತ್ತನೆ ಸಾವಿಗೀಡಾಗುತ್ತಿರುವಾಗಲೇ, ಕೋವಿಡ್‌ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡು ಆರೋಗ್ಯವಂತರಾಗಿದ್ದ ವ್ಯಕ್ತಿಗಳಲ್ಲಿ ಹೃದಯಸ್ತಂಭನದಿಂದ ಮರಣ ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.50ರಷ್ಟು ಮಂದಿ ಧೂಮಪಾನದ ನಂಟನ್ನೇ ಹೊಂದಿಲ್ಲದವರು. ಬಹುತೇಕ ಮಂದಿಗೆ ಹೃದಯ ಸಮಸ್ಯೆಯ ಕೌಟುಂಬಿಕ ಹಿನ್ನೆಲೆಯೇ ಇಲ್ಲ ಎಂದು ದೆಹಲಿಯ ವೈದ್ಯರು ಹೇಳಿದ್ದಾರೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ದೆಹಲಿಯ ಕೆಲವು ಆಸ್ಪತ್ರೆಗಳಲ್ಲಿ ಹೃದಯ ಸ್ತಂಭನದಿಂದ ಸಾವು ಸಂಭವಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.10ರಿಂದ 15ರವರೆಗೂ ಹೆಚ್ಚಳ ಕಂಡುಬಂದಿದೆ. ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಗಳಲ್ಲಿ ಸಾವು ಹಾಗೂ ಹೃದಯ ಸ್ತಂಭನ, ಪಾಶ್ರ್ವವಾಯು, ಶ್ವಾಸಕೋಶ ಸಮಸ್ಯೆಯ ಅಪಾಯದ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದಲ್ಲಿ ಸಂಶೋಧನಾ ವರದಿಯೊಂದು ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತಿವೆ ಎಂದು ದೆಹಲಿಯ ವೈದ್ಯರು ಹೇಳಿದ್ದಾರೆ.

ಇದನ್ನು ದೆಹಲಿಯ ಸಾಕೇತ್‌ನಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಬಲಬೀರ್‌ ಸಿಂಗ್‌ ಕೂಡ ದೃಢೀಕರಿಸಿದ್ದಾರೆ. ಹೃದಯ ಸ್ತಂಭನ ಪ್ರಕರಣಗಳು ಹೆಚ್ಚಾಗಿವೆ. ಕೋವಿಡ್‌ ಪೂರ್ವದಲ್ಲಿ 50 ವರ್ಷದೊಳಗಿನವರು ಹೃದಯ ಸ್ತಂಭನದಿಂದ ಸಾವಿಗೀಡಾಗುವ ಪ್ರಮಾಣ ಶೇ.15ರಷ್ಟಿತ್ತು. ಆದರೆ ಕೋವಿಡ್‌ ನಂತರ ಶೇ.24ಕ್ಕೆ ಏರಿಕೆಯಾಗಿದೆ. ಇಂತಹ ಸಾವುಗಳಲ್ಲಿ 20 ವರ್ಷ ವಯಸ್ಸಿನವರೂ ಇದ್ದಾರೆ. ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ ಎಂದಿದ್ದಾರೆ.

ಇದನ್ನು ಓದಿ: ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ, ಹೃದಯದ ಆರೋಗ್ಯಕ್ಕಿಲ್ಲ ವಯಸ್ಸಿನ ಮಿತಿ

ಸೂಕ್ತ ದತ್ತಾಂಶಗಳು ಇಲ್ಲ. ಆದರೆ ಅಂದಾಜಿನ ಪ್ರಕಾರ ಕೋವಿಡ್‌ ಬಳಿಕ ಹೃದಯಸ್ತಂಭನ ಪ್ರಕರಣಗಳಲ್ಲಿ ಶೇ.10ರಿಂದ 15ರಷ್ಟುಹೆಚ್ಚಳ ಕಂಡುಬಂದಿದೆ. ಕೋವಿಡ್‌ ಸೋಂಕಿಗೆ ತುತ್ತಾಗಿದ್ದವರು ತಮ್ಮ ವಯಸ್ಸು ಎಷ್ಟೇ ಆಗಿರಲಿ ಅಥವಾ ದೈಹಿಕವಾಗಿ ಎಷ್ಟೇ ಫಿಟ್‌ ಆಗಿರಲಿ ಉಸಿರಾಟ ಸಮಸ್ಯೆಯಂತಹ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ ವಹಿಸಬಾರದು. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹಾಗೆಯೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಏಮ್ಸ್‌ ಪ್ರಾಧ್ಯಾಪಕ ರಾಕೇಶ್‌ ಯಾದವ್‌ ಸಲಹೆ ಮಾಡಿದ್ದಾರೆ.
ಕೋವಿಡ್‌ ಇತಿಹಾಸ ಹೊಂದಿರುವ ಮಧ್ಯವಯಸ್ಕರು ಹಾಗೂ ವಯೋವೃದ್ಧರು ಅಧಿಕ ರಕ್ತದೊತ್ತಡ, ಬೊಜ್ಜು, ಕೊಲೆಸ್ಟ್ರಾಲ್‌ ಮೇಲೆ ನಿಗಾ ಇಡಬೇಕು. ಅಸಾಮಾನ್ಯ ರೀತಿಯಲ್ಲಿ ವಿಪರೀತ ವ್ಯಾಯಾಮ ಮಾಡಬಾರದು. ಏಕೆಂದರೆ, ಇಂತಹ ಕಸರತ್ತಿನ ವೇಳೆಯೇ ಹಲವು ಸಾವುಗಳು ಸಂಭವಿಸಿವೆ ಎಂದು ಪಿಎಸ್‌ಆರ್‌ಐ ಶ್ವಾಸಕೋಶ ಸಂಸ್ಥೆಯ ಡಾ. ಜಿ.ಸಿ.ಖಿಲ್ನಾನಿ ಎಚ್ಚರಿಸಿದ್ದಾರೆ.

ತಜ್ಞ ವೈದ್ಯರು ಹೇಳುವುದೇನು?

  • ದೆಹಲಿಯ ಕೆಲವು ಆಸ್ಪತ್ರೆಗಳಲ್ಲಿ ಹೃದಯಸ್ತಂಭನದಿಂದ ಸಂಭವಿಸುವ ಸಾವು 15% ಹೆಚ್ಚಳ
  • ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಸಮಸ್ಯೆ ಹೆಚ್ಚೆಂದು ಅಮೆರಿಕದಲ್ಲಿ ಸಾಬೀತಾಗಿತ್ತು
  • ಅದಕ್ಕೆ ಪೂರಕ ಬೆಳವಣಿಗೆಗಳು ಈಗ ಭಾರತದಲ್ಲೂ ನಡೆಯುತ್ತಿವೆ
  • ಕೋವಿಡ್‌ಗೂ ಮುನ್ನ 50 ವರ್ಷದೊಳಗಿನವರ ಹೃದಯಸ್ತಂಭನ ಸಾವು 15% ಇತ್ತು, ಈಗ 24% ಆಗಿದೆ
     

ಇದನ್ನೂ ಓದಿ: ಮಕ್ಕಳಿಗೆ ಓಪನ್ ಹಾರ್ಟ್‌ ಸರ್ಜರಿ ಮಾಡೋದು ತುಂಬಾ ರಿಸ್ಕ್‌-ಡಾ.ಸಿ.ಎನ್ ಮಂಜುನಾಥ್ 

click me!