ಕರೋನಾ ಭೀತಿ; ಕೈ ಕುಲುಕೋಕಿಂತ ನಮಸ್ತೇಯೇ ವಾಸಿ ಅಂತಿವೆ ವಿದೇಶಗಳು

By Suvarna NewsFirst Published Mar 4, 2020, 5:57 PM IST
Highlights

ಕರೋನಾ ವೈರಸ್ ಭೀತಿಯಿಂದಾಗಿ ಜಾಗತಿಕವಾಗಿ ಹಲವು ರಾಷ್ಟ್ರಗಳ ಜನರು ಕಚೇರಿ, ಮನೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ತಮ್ಮ ಸಾಮಾನ್ಯ ಅಭ್ಯಾಸಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ಕೈ ಕುಲುಕುವ ಬದಲಾಗಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ನಮಸ್ತೆ ಹೇಳುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ ವಿದೇಶಿಯರು.

ಕರೋನಾ ವೈರಸ್ ಈಗ ವಿಶ್ವಾದ್ಯಂತ ನಡುಕ ಸೃಷ್ಟಿ ಮಾಡಿದೆ. ಮೂರು ತಿಂಗಳ ಹಿಂದೆ ಚೀನಾದಲ್ಲಿ ಆರಂಭವಾದ ಈ ವೈರಸ್ ಈಗಾಗಲೇ 3000 ಜನರನ್ನು ಬಲಿ ತೆಗೆದುಕೊಂಡಿದೆ. 60 ದೇಶಗಳಿಗೆ ಹಬ್ಬಿ 90,000 ಜನರಿಗೆ ಸೋಂಕು ತಗಲಿದೆ. ಇದರಿಂದ ಭಯಭೀತರಾಗಿರುವ ಜನತೆ ವೈರಸ್ ತಮಗೆ ತಗುಲದಂತೆ ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಪರಸ್ಪರ ಗ್ರೀಟಿಂಗ್ ಮಾಡಿಕೊಳ್ಳುವ ರೀತಿನೀತಿಗಳು ಬಹಳಷ್ಟು ದೇಶಗಳಲ್ಲಿ ಬದಲಾಗಿವೆ. ಭಾರತದ ಗ್ರೀಟಿಂಗ್ ಪದ್ಧತಿಯೇ ಬೆಸ್ಟ್ ಎಂಬುದು ಇದೀಗ ಜಗತ್ತಿನಾದ್ಯಂತ ಸಾಬೀತಾಗುತ್ತಿದೆ. 

ಕೈ ಮುಗಿಯಿರಿ
ಕರೋನಾದ ತವರಾದ ಚೀನಾದಲ್ಲಿ, ದೊಡ್ಡ ದೊಡ್ಡ ಕೆಂಪು ಹೋರ್ಡಿಂಗ್‌ಗಳಲ್ಲಿ ಹ್ಯಾಂಡ್ ಶೇಕ್ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಬದಲಿಗೆ ತಮ್ಮ ಎರಡೂ ಕೈಗಳನ್ನು ಮುಗಿದು ಅಭಿನಂದನೆ ತಿಳಿಸುವಂತೆ ಸೂಚಿಸಲಾಗಿದೆ. ಇನ್ನು ಇಲ್ಲಿನ ನಗರಪಟ್ಟಣಗಳಲ್ಲಿ ಸಾಂಪ್ರದಾಯಿಕ ಗಾಂಗ್ ಶೌ ರೀತಿಯಲ್ಲಿ ಮುಷ್ಠಿಯನ್ನು ಮತ್ತೊಂದು ಕೈಯೊಳಗಿರಿಸಿ ಹೆಲ್ಲೋ ಹೇಳುವಂತೆ ಲೌಡ್‌ಸ್ಪೀಕರ್‌ಗಳಲ್ಲಿ ಎಚ್ಚರ ಮೂಡಿಸಲಾಗುತ್ತಿದೆ. 

ಫ್ರಾನ್ಸ್‌ನ ಸುದ್ದಿಪತ್ರಿಕೆಗಳಂತೂ ಅಲ್ಲಿಯ ಪದ್ಧತಿಯಂತೆ ಕೆನ್ನೆಗೆ ಕಿಸ್ ಕೊಡುವ ಬದಲಿಗೆ ಪರಿಚಿತರು ಕಂಡಾಗ ಹೇಗೆಲ್ಲ ಗ್ರೀಟ್ ಮಾಡಬಹುದೆಂಬ ಬಗ್ಗೆ ಉದ್ದುದ್ದ ಸಲಹೆಗಳನ್ನು ಬರೆಯುತ್ತಿವೆ. ಕಚೇರಿಯಲ್ಲಿ ಫಾರ್ಮಲ್ ಆಗಿ ಹ್ಯಾಂಡ್‌ಶೇಖ್ ಮಾಡುವ ಬದಲಿಗೆ ಮತ್ತೇನೇನು ಮಾಡಬಹುದು ಎಂದು ತಿಳಿಸುತ್ತಿದೆ. ಇಲ್ಲಿನ ಶಿಷ್ಠಾಚಾರ ತಜ್ಞ ಫಿಲಿಪ್ ಲಿಚ್‌ಫಸ್ ಪ್ರಕಾರ, ಹ್ಯಾಂಡ್‌ಶೇಖ್ ಆರಂಭವಾದದ್ದು ಮಧ್ಯಕಾಲೀನದಲ್ಲಿ. ಅದರ ಬದಲಿಗೆ ಸುಮ್ಮನೆ ಎದುರಿನ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಸಾಕಾಗುತ್ತದೆ ಗ್ರೀಟಿಂಗ್‌ಗೆ ಎನ್ನುತ್ತಿದ್ದಾರೆ ಅವರು. 

ಬೆಂಗ್ಳೂರಲ್ಲಿ ಕೊರೋನಾ ವೈರಸ್: ರೋಗ ಬರದಂತೆ ಹಿಂಗ್ ಮಾಡಿದ್ರೆ ಬೆಸ್ಟ್...

ಶಿಮರೋ ಬಳಸದಿರಲು ಕರೆ
ಕರೋನಾ ಭೀತಿಯಿಂದ ಕಂಗೆಟ್ಟಿರುವ ಬ್ರೆಜಿಲ್‌ನಲ್ಲಿ ಆರೋಗ್ಯ ಸಚಿವಾಲಯವು , ಕೆಫಿನ್ ಹೊಂದಿರುವ ದಕ್ಷಿಣ ಅಮೆರಿಕಾದ ಪಾನೀಯವಾದ ಶಿಮಾರೋ ಕುಡಿಯಲು ಬಳಸುವ ಮೆಟಲ್ ಸ್ಟ್ರಾಗಳನ್ನು ಒಬ್ಬರು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ಹೊರಡಿಸಿದೆ. ಜೊತೆಗೆ, ಬಾಯಿಗೆ ಅಥವಾ ಕೆನ್ನೆಗೆ- ಮುತ್ತು ಕೊಡುವುದರಿಂದ ದೂರ ಉಳಿಯುವಂತೆ ಕರೆ ನೀಡಿದೆ. 

ಜರ್ಮನಿಯಲ್ಲಿ ಕಳೆದ ಸೋಮವಾರ ಆಂತರಿಕ ಸಚಿವ ಹಾರ್ಸ್ಟ್ ಸೀಹಾಫರ್ ಅವರಿಗೆ ಛಾನ್ಸೆಲರ್ ಏಂಜೆಲಾ ಮರ್ಕೆಲ್ ಶೇಕ್ ಹ್ಯಾಂಡ್ ಮಾಡಲು ಬಂದಾಗಅವರು ಕೈಯ್ಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಕೇವಲ ಸ್ಮೈಲ್ ಮಾಡುವ ಮೂಲಕ ಜನರಿಗೆ ಕರೋನಾ ಭೀತಿಯ ಈ ಸಂದರ್ಭದಲ್ಲಿ ಹ್ಯಾಂಡ್‌ಶೇಕ್ ಸಲ್ಲದು ಎಂಬ ಸೂಚನೆ ರವಾನಿಸಿದ್ದಾರೆ. 

ಈಸ್ಟರ್ ಸಂಪ್ರದಾಯಕ್ಕೆ ಹೊಡೆತ
ಇನ್ನೇನು ತಿಂಗಳಲ್ಲಿ ಈಸ್ಟರ್ ಬರುತ್ತಿದೆ. ಸ್ಪೇನ್‌ನಲ್ಲಿ ಈ ಹಬ್ಬದ ಸಂದರ್ಭದಲ್ಲಿ ವಾರದ ಕಾಲ ವರ್ಜಿನ್ ಮೇರಿಯ ಪ್ರತಿಮೆಗಳಿಗೆ ಜನರು ಸಾಲಾಗಿ ಬಂದು ಕಿಸ್ ಮಾಡುವ ಪದ್ಧತಿ ಜಾರಿಯಲ್ಲಿದೆ. ಆದರೆ, ಈ ಬಾರಿ ಈ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ಕುರಿತು ಆಲೋಚಿಸುತ್ತಿದ್ದೇವೆ ಎಂದು ದೇಶದ ಆರೋಗ್ಯ ಅಧಿಕಾರಿ ಫರ್ನಾಂಡೋ ಸೈಮನ್ ತಿಳಿಸಿದ್ದಾರೆ.

ಕೊರೋನಾ ರೋಗಿಯನ್ನು ಕೊಲ್ಲಿಸಿದನೇ ತಿಕ್ಕಲು ಸರ್ವಾಧಿಕಾರಿ!...

ರೊಮಾನಿಯಾದಲ್ಲಿ ಮಾರ್ಟಿಸರ್ ಹಬ್ಬ ಹತ್ತಿರಾಗುತ್ತಿದೆ. ಈ ಸಂದರ್ಭದಲ್ಲಿ ಪುರುಷರು ಹೂವಿನ ಬೊಕೆಗಳಿಗೆ ಮುತ್ತು ನೀಡಿ ಅದನ್ನು ಮಹಿಳೆಯರಿಗೆ ನೀಡುವ ಸಂಪ್ರದಾಯವಿದೆ. ಆದರೆ ಈ ಬಾರಿ ಇಲ್ಲಿನ ಸರ್ಕಾರ ಹೀಗೆ ಹೂವುಗಳಿಗೆ ಕಿಸ್ ಮಾಡದಂತೆ ಆದೇಶಿಸಿದೆ. ಕರೋನಾ ವೈರಸ್ ಭೀತಿ ಇರುವುದರಿಂದ ನಾವು ಮಹಿಳೆಯರಿಗೆ ಕೇವಲ ಹೂವನ್ನು ನೀಡೋಣ, ಕಿಸ್ಸನ್ನಲ್ಲ ಎಂದು ಪ್ರಕಟಣೆ ಹೊರಡಿಸಿದೆ. 

ಹ್ಯಾಂಡ್‌ಶೇಕ್‌ಗೆ ಫುಟ್‌ಶೇಕ್ ಬದಲಿ?
ಇರಾನ್‌ನಲ್ಲಿ ಈಗಾಗಲೇ ಕರೋನ ವೈರಸ್‌ಗೆ 66 ಮಂದಿ ಬಲಿಯಾಗಿದ್ದಾರೆ. ಹಾಗಾಗಿ, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಮೂವರು ಮಾಸ್ಕ್ ಧರಿಸಿದ ಗೆಳೆಯರು ಭೇಟಿಯಾದಾಗ ತಮ್ಮ ಕೈಗಳನ್ನು ಪಾಕೆಟ್‌ನಲ್ಲಿರಿಸಿ, ಕಾಲುಗಳನ್ನು ಅತ್ತಿಂದಿತ್ತ ಅಲುಗಿಸುವ ಮೂಲಕ ಗ್ರೀಟ್ ಮಾಡಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಲೆಬನಾನ್‌ನಲ್ಲಿ ಕೂಡಾ ಗಾಯಕ ರಾಗ್ಹೆಬ್ ಅಲಾಮಾ ಹಾಗೂ ಕಾಮಿಡಿಯನ್ ಮೈಕೆಲ್ ಅಬು ಸ್ಲೀಮನ್ ಭೇಟಿಯಾದಾಗ ಬಾಯಿಯಲ್ಲಿ ಕಿಸ್‌ನಂತೆ ಶಬ್ದ ಹೊರಡಿಸಿ ಕಾಲುಗಳನ್ನು ನೆಲಕ್ಕೆ ಬಡಿದು ಗ್ರೀಟ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. 

ನ್ಯೂಜಿಲೆಂಡ್‌ನಲ್ಲಿ ಕೂಡಾ ಕರೋನಾ, ಮೂಗನ್ನು ತಾಕಿಸಿ ಗ್ರೀಟ್ ಮಾಡಿಕೊಳ್ಳುವ ಅಭ್ಯಾಸಕ್ಕೆ ಬ್ರೇಕ್ ಹಾಕಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು ಈ ಅಭ್ಯಾಸವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು, ಅದರ ಬದಲಿಗೆ ಹಾಡಜಿನ ಮೂಲಕ ಹೊಸ ವಿದ್ಯಾರ್ಥಿಗಳನ್ನು ವೆಲ್‌ಕಂ ಮಾಡುವಂತೆ ಕೋರಿವೆ. 

ಆಸ್ಟ್ರೇಲಿಯಾದ ನ್ಯೂ ಸೌತ್ ವ್ಹೇಲ್ಸ್‌ನ ಆರೋಗ್ಯ ಸಚಿವ ಬ್ರಾಡ್ ಹಜ್ಜಾರ್ಡ್ ಇಲ್ಲಿನ ನಾಗರಿಕರಿಗೆ ಎಚ್ಚರಿಕೆಯಿಂದ ತಮ್ಮ ಪ್ರೀತಿಪಾತ್ರರಿಗೆ ಕಿಸ್ ಮಾಡುವಂತೆ ಸೂಚಿಸಿದ್ದಾರೆ. ಜೊತೆಗೆ, ಹ್ಯಾಂಡ್‌ಶೇಕ್ ಬೇಡವೇ ಬೇಡ. ಕೆಲ ದಿನಗಳ ಮಟ್ಟಿಗೆ ಪರಿಚಯಸ್ಥರು ಕಂಡಾಗ ಅವರ ಬೆನ್ನಿನ ಮೇಲೆ ಸಣ್ಣದಾಗಿ ಕೈ ಬಡಿದು ವಿಶ್ ಮಾಡುವ ಅಭ್ಯಾಸ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ದುಬೈ ಕೂಡಾ ಮೂಗಿಗೆ ಮೂಗು ತಾಗಿಸುವ ಅಭ್ಯಾಸ ಬಿಟ್ಟು ಗಾಳಿಯಲ್ಲಿ ಕೈ ಆಡಿಸಿ ಹಾಯ್ ಹೇಳಿ ಎಂದಿದೆ. 

click me!