ಚೀನಾ ಮೂಲದ ಮಾರಣಾಂತಿಕ ಕೊರೋನಾ ವೈರಸ್ ಏಷ್ಯಾದ ಬಹುತೇಕ ದೇಶಗಳೂ ಸೇರಿದಂತೆ 77 ದೇಶಗಳಿಗೆ ಹರಡಿದೆ. ವೈರಸ್ನಿಂದ ಈಗಾಗಲೇ 3000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 90,000 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಚೀನಾ ಮೂಲದ ಮಾರಣಾಂತಿಕ ಕೊರೋನಾ ವೈರಸ್ ಏಷ್ಯಾದ ಬಹುತೇಕ ದೇಶಗಳೂ ಸೇರಿದಂತೆ 77 ದೇಶಗಳಿಗೆ ಹರಡಿದೆ. ವೈರಸ್ನಿಂದ ಈಗಾಗಲೇ 3000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 90,000 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಇಷ್ಟು ದಿನ ದೂರದ ಚೀನಾ, ಅಮೆರಿಕ, ಕೊರಿಯಾದಲ್ಲಿದ್ದ ಕೊರೋನಾ ಈಗ ಬೆಂಗಳೂರು ಮತ್ತು ದೆಹಲಿಯಲ್ಲೂ ಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ದೇಶಾದ್ಯಂತ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ದೆಹಲಿಯ ನೋಯ್ಡಾದ ಶಾಲೆಗಳಿಗೆ ರಜೆ ನೀಡಲಾಗಿದೆ. ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್‌ನಿಂದ ಭಾರತಕ್ಕೆ ಬರುವವರ ವೀಸಾಗಳನ್ನು ರದ್ದುಪಡಿಸಲಾಗಿದ್ದು, 10ಕ್ಕೂ ಹೆಚ್ಚು ದೇಶಗಳಿಂದ ಆಗಮಿಸುವವರ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣ ಹಾಗೂ ಬಂದರಿನಲ್ಲಿ ಕಣ್ಗಾವಲಿಟ್ಟಿದೆ.
ಇನ್ನು ಬೆಂಗಳೂರಿನಲ್ಲಿದ್ದ ಟೆಕ್ಕಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರು ತುರ್ತು ಸಭೆ ನಡೆಸಿದ್ದಾರೆ.
ಕೊರೋನಾ ರೋಗಿಯನ್ನು ಕೊಲ್ಲಿಸಿದನೇ ತಿಕ್ಕಲು ಸರ್ವಾಧಿಕಾರಿ!
ಶೀತ, ಜ್ವರದಿಂದ ಬಳಲುತ್ತಿರುವ ಶಾಲಾ ಮಕ್ಕಳಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ ಕೊರೋನಾ ಬಗ್ಗೆ ಹೆಚ್ಚು ಭಯಭೀತರಾಗುವುದು ಬೇಡ. ವೈರಸ್ ತಗುಲದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಪಾಲಿಸಬೇಕಾದ ಕೆಲ ಟಿಪ್ಸ್ ಇಲ್ಲಿವೆ.
ಸ್ವಚ್ಛ ನೀರಿನಲ್ಲಿ ಕೈ ತೊಳೆಯುತ್ತಿರಿ
ಸ್ವಚ್ಛ ನೀರಿನಲ್ಲಿ ಸೋಪು ಬಳಸಿ ಕನಿಷ್ಠ 20 ಸೆಕೆಂಡ್ ಕೈಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವಾಗ ಉಗುರು, ಉಗುರಿನ ಸಂದಿ, ಕೈಬೆರಳ ಸಂದಿಗಳನ್ನೂ ಸ್ವಚ್ಛ ಮಾಡಿ. ಬಳಿಕ ಸ್ವಚ್ಛವಾದ ಟವೆಲ್ನಲ್ಲಿ ಒರೆಸಿಕೊಳ್ಳಿ ಅಥವಾ ಗಾಳಿಯಲ್ಲಿಯೇ ಒಣಗಲು ಬಿಡಿ. ಮದ್ಯ ಬೆರೆಸಿದ ಸ್ಯಾನಿಟೈಜರ್ ಬಳಸಿ 20 ಸೆಕೆಂಡ್ ಕೈಗಳನ್ನು ವಾಷ್ ಮಾಡುವುದೂ ಕೂಡ ಉಪಯೋಗಕಾರಿ. ಆದರೆ ನೀವು ಬಳಸುವ ಜೆಲ್ ಕನಿಷ್ಠ 60%-95% ಆಲ್ಕೋಹಾಲ್ ಅಂಶ ಒಳಗೊಂಡಿರಬೇಕು. ಪದೇಪದೇ ಹೀಗೆ ಮಾಡುವುದರಿಂದ ಸೋಂಕನ್ನು ತಡೆಗಟ್ಟಬಹುದು.
ಕಣ್ಣು, ಮೂಗು ಬಾಯಿ ಮುಟ್ಟಿಕೊಳ್ಳಬೇಡಿ
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬಾರದೆಂದು ಸಲಹೆ ನೀಡಿದೆ. ಹಾಗೆಯೇ ಪದೇ ಪದೇ ಬಳಕೆ ಮಾಡುವ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಿದೆ.
ತಜ್ಞರ ಪ್ರಕಾರ ಕೆಮ್ಮು, ಸೀನಿನ ಮುಖಾಂತರವೂ ವೈರಾಣು ಹರಡುವ ಸಾಧ್ಯತೆ ಇದೆ. ಹಾಗಾಗಿ ಯಾರಿಗಾದರೂ ಶೀತ, ಜ್ವರದ ಲಕ್ಷಣಗಳು ಇದ್ದರೆ ಅವರಿಂದ ಕನಿಷ್ಠ 6 ಅಡಿ ಅಂತರ ಇರುವಂತೆ ನೋಡಿಕೊಳ್ಳಬೇಕು. ಅಷ್ಟುದೂರ ಸಾಧ್ಯವಾಗದಿದ್ದರೆ ಸ್ವಲ್ಪವಾದರೂ ಅಂತರ ಇರುವಂತೆ ನೋಡಿಕೊಳ್ಳಬೇಕು.
ಮಾಸ್ಕ್ನಿಂದ ಉಪಯೋಗ ಇಲ್ಲ!
ಕೊರೋನಾ ವೈರಸ್ ಹೆಸರು ಕೇಳಿಬಂದಾಗಿನಿಂದ ಫೇಸ್ ಮಾಸ್ಕ್ ಎಲ್ಲೆಡೆ ಬಳಕೆಯಾಗುತ್ತಿದೆ. ಎಲ್ಲರೂ ಮಾಸ್ಕ್ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಆದರೆ ಮಾಸ್ಕ್ನಿಂದ ಹೆಚ್ಚೇನೂ ಉಪಯೋಗವಿಲ್ಲ. ನಿಮಗೆ ಸೋಂಕು ಹರಡಿಲ್ಲದಿದ್ದರೆ ಫೇಸ್ ಮಾಸ್ಕ್ ಬಳಸುವುದರಿಂದ ಯಾವುದೇ ಉಪಯೋಗ ಇಲ್ಲ. ಮಾಸ್ಕ್ ಧರಿಸಿದ್ದರೂ ಬೇರೆಯವರಿಂದ ನಿಮಗೆ ಕೊರೋನಾ ವೈರಸ್ ಸೋಂಕು ತಗುಲಬಹುದು.
ಭಾರತ ಕೊರೊನಾವೈರಸ್‌ನಿಂದ ಸೇಫು, ಯಾಕೆ ಗೊತ್ತಾ?
ಆದರೆ ಈಗಾಗಲೇ ನೀವು ಸೋಂಕಿತರಾಗಿದ್ದರೆ ನಿಮ್ಮಿಂದ ಇತರರಿಗೆ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾಸ್ಕ್ ಧರಿಸಬೇಕು. ಎನ್95 ಮಾಸ್ಕ್ ಪರಿಣಾಮಕಾರಿಯಾಗಿದ್ದು, 95% ಸಣ್ಣ ಸಣ್ಣ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುತ್ತದೆ. ಹಾಗೆಯೇ ನೀವು ಒಂದು ವೇಳೆ ಆರೋಗ್ಯ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರೆ ಫೇಸ್ ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಿ.
ಆಲ್ಕೋಹಾಲ್ ಬಳಸಿ ಮನೆ ಸ್ವಚ್ಛ ಮಾಡಿ
ಆಲ್ಕೋಹಾಲ್ ಅತ್ಯುತ್ತಮವಾದ ಕೊರೋನಾ ಸೋಂಕು ನಿವಾರಕ. ಹಾಗಾಗಿ ಆಲ್ಕೋಹಾಲ್ ಬಳಸಿ ಮನೆಯನ್ನು ಆಗಾಗ ಸ್ವಚ್ಛ ಮಾಡುತ್ತಿರಿ. ಮೂಗು, ಕೈಗಳನ್ನು ಒರೆಸಿಟ್ಟ ಟಿಶ್ಶೂ ಪೇಪರ್ಗಳನ್ನು ಸ್ಟಾಕ್ ಮಾಡಿಟ್ಟುಕೊಳ್ಳದೆ ತಕ್ಷಣವೇ ಮನೆಯಿಂದ ಎಸೆದುಬಿಡಿ. ಹಾಗೆಯೇ ಫೋನ್, ಟ್ಯಾಬ್ಲೆಟ್ಸ್ ಅಥವಾ ಪದೇ ಪದೇ ಬಳಕೆ ಮಾಡುವ/ ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿಡಿ.
ಎಮರ್ಜೆನ್ಸಿ ಪ್ಲಾನ್ ರೆಡಿ ಮಾಡಿಟ್ಟುಕೊಳ್ಳಿ!
ಕೊರೋನಾ ಭೀಕರತೆಗೆ ಸಂಬಂಧಿಸಿದಂತೆ ಕುಟುಂಬದ ಎಲ್ಲರೂ ಅಪ್‌ಡೇಟ್ ಆಗಿರಿ. ನಿಮ್ಮ ಮಕ್ಕಳು ಹೋಗುವ ಶಾಲೆಯಲ್ಲಿನ ವಿದ್ಯಮಾನಗಳ ಬಗ್ಗೆ ಜಾಗೃತರಾಗಿರಿ. ನಿಮ್ಮ ನೆರೆಹೊರೆಯಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಹತ್ತಿರದ ಆರೋಗ್ಯ ಇಲಾಖೆ ಬಳಿ ಮಾಹಿತಿ ಪಡೆದುಕೊಳ್ಳಿ.
ಮಕ್ಕಳಿಗೆ ಕೊರೋನಾ ಬರೋದು ಅಪರೂಪದಲ್ಲೇ ಅಪರೂಪ
ನೀವು ನಿಮ್ಮನ್ನು ಕೊರೋನಾದಿಂದ ರಕ್ಷಿಸಿಕೊಳ್ಳಲು ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೀರೋ ಅದೇ ರೀತಿಯ ಕ್ರಮಗಳಿಂದ ನಿಮ್ಮ ಮಕ್ಕಳನ್ನೂ ರಕ್ಷಿಸಿ. ಇನ್ನೊಂದು ಶುಭ ಸುದ್ದಿ ಎಂದರೆ ಮಕ್ಕಳಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು ಅಪರೂಪ. ಆದರೆ ನಿರ್ಲಕ್ಷ್ಯ ಬೇಡ. ಹಾಗಾಗಿ ಪದೇ ಪದೇ ಮಕ್ಕಳು ಕೈ ತೊಳೆಯುವಂತೆ ಎಚ್ಚರಿಸಿ. ಶೀತ, ಕೆಮ್ಮು, ಜ್ವರದ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರ ಇರುವಂತೆ ಮೊದಲೇ ತಿಳಿಸಿ. ಹಾಗೆಯೇ ಮೊದಲೇ ಜ್ವರದ ಲಸಿಕೆ ಹಾಕಿಸಿಬಿಡಿ. ಜೊತೆಗೆ ಕೊರೋನಾ ಸೋಂಕಿನ ಬಗ್ಗೆ, ಅದರ ಭೀಕರತೆಯ ಬಗ್ಗೆ ಮಕ್ಕಳು ಭೀತರಾಗದಂತೆ ಮಾಹಿತಿ ನೀಡಿ.
ವಿದೇಶ ಪ್ರವಾಸ ಎಷ್ಟು ಸೇಫ್?
ಕೋರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿದೇಶಕ್ಕೆ ಪ್ರವಾಸ ಹೋಗುವ ಪ್ಲಾನ್ ಮಾಡಿಕೊಂಡವರು ಸ್ವಲ್ಪ ಕಾಲ ಮುಂದೂಡುವುದು ಒಳ್ಳೆಯದು. ಭಾರತದಲ್ಲಿ ಈಗಾಗಲೇ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಇಟಲಿ, ಇರಾನ್ನಿಂದ ಬರುವವರ ವೀಸಾಗಳನ್ನು ರದ್ದುಪಡಿಸಲಾಗಿದೆ. ನೂತನ ಟ್ರಾವೆಲ್ ಅಡ್ವೈಸರಿಯನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರ ಕೂಡ ಅನಗತ್ಯವಾಗಿ ಕೊರೋನಾಪೀಡಿತ ದೇಶಗಳಿಗೆ ಅಥವಾ ಇತರ ದೇಶಗಳಿಗೆ ಹೋಗುವುದು ಬೇಡ ಎಂದು ಸೂಚಿಸಿದೆ. ಈಗಾಗಲೇ ಜ್ವರ ಅಥವಾ ಯಾವುದೇ ರೋಗ ತಗುಲಿದ್ದರೆ, ಗರ್ಭಿಣಿಯಾಗಿದ್ದರೆ ವಿದೇಶ/ ವಿಮಾನ ಪ್ರವಾಸಕ್ಕೂ ಮುನ್ನ ಎರಡು ಬಾರಿ ಯೋಚಿಸಿ.
ವರ್ಕ್ ಫ್ರಮ್ ಹೋಮ್ ಅವಕಾಶ ಇದ್ದರೆ ಬಳಸಿಕೊಳ್ಳಿ
ಜ್ವರ ಅಥವಾ ತೀವ್ರ ಉಸಿರಾಟ ತೊಂದರೆ ಇರುವ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗದೆ ರಜೆ ಪಡೆದು ಮನೆಯಲ್ಲಿಯೇ ಇರುವುದು ಒಳ್ಳೆಯದು. ಹಾಗೊಂದು ವೇಳೆ ಉಸಿರಾಟದ ತೊಂದರೆ ಇರುವ ಉದ್ಯೋಗಿ ಕೆಲಸಕ್ಕೆ ಹಾಜರಾಗಿದ್ದರೆ ಅವರಿಗೆ ಪ್ರತ್ಯೇಕ ಜಾಗ ಮೀಸಲಿಟ್ಟು, ಇತರ ಉದ್ಯೋಗಿಗಳನ್ನು ರೋಗಿಯಿಂದ ದೂರ ಇಡುವುದು ಸೂಕ್ತ.
ಕೊರೋನಾ ವೈರಸ್, ಕರಾವಳಿ ಏರ್‌ಪೋರ್ಟ್, ಬಂದರಿನಲ್ಲಿ ಸ್ರ್ಕೀನಿಂಗ್
ಹಾಗೆಯೇ ಕಚೇರಿಗಳಲ್ಲಿ ಕೆಲಸದ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಎಲ್ಲಕ್ಕಿಂತ ಒಳ್ಳೆಯ ಮಾರ್ಗವೆಂದರೆ ನಿಮ್ಮ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಂ ಅವಕಾಶ ಇದ್ದರೆ ಬಳಸಿಕೊಂಡು ಮನೆಯಿಂದಲೇ ಕೆಲಸ ಮಾಡಿ.
ಹ್ಯಾಂಡ್ ಶೇಕ್, ಅಪ್ಪುಗೆ ಬೇಡ. ಕೈಮುಗೀರಿ!
ಸೋಂಕಿತರಿಂದ ಅಂತರ ಕಾಯ್ದುಕೊಳ್ಳಿ. ಇನ್ನೊಬ್ಬರಿಗೆ ವಿಶ್ ಮಾಡುವಾಗ ಅಥವಾ ಸ್ವಾಗತಿಸುವಾಗ, ಅವರು ಕೊರೋನಾ ಸೋಂಕಿತರಲ್ಲದಿದ್ದರೂ, ಹ್ಯಾಂಡ್ ಶೇಕ್ ಅಥವಾ ಹಗ್ಗಿಂಗ್ ಬೇಡ. ಪಾಶ್ಚಾತ್ಯರಂತೆ ಕೆನ್ನೆಗೆ ಕೆನ್ನೆ ತಾಗಿಸಿ ಕಿಸ್ ನೀಡುವುದೂ ಅಪಾಯಕಾರಿ. ಭಾರತೀಯ ಸಂಪ್ರದಾಯದಂತೆ ದೂರದಿಂದಲೇ ಕೈಮುಗಿಯುವುದು ಎಲ್ಲದಕ್ಕಿಂತ ಸುರಕ್ಷಿತ.
ಕೆಮ್ಮುವಾಗ ಟಿಶ್ಶೂ ಬಳಸಿ
ಕೊರೋನಾ ವೈರಸ್ ಕೆಮ್ಮು, ಸೀನಿನಿಂದ ಕೂಡ ಇತರರಿಗೆ ಹರಡುತ್ತದೆ. ಹಾಗಾಗಿ ಕೆಮ್ಮು, ಸೀನು ಬಂದಾಗ ಟಿಶ್ಶೂ ಬಳಸಿ. ಹಠಾತ್ ಆರೋಗ್ಯ ಕೆಟ್ಟರೆ ಹೆದರದಿರಿ. ಎಲ್ಲ ಜ್ವರವೂ ಕೊರೋನಾ ಲಕ್ಷಣವಲ್ಲ. ಹಾಗೆಯೇ ಸರಿಯಾಗಿ ಬೇಯಿಸಿದ ಆಹಾರ ಸೇವಿಸಿ.
ಪ್ರಾಣಿಗಳನ್ನು ಗ್ಲೌಸ್ ಇಲ್ಲದೆ ಮುಟ್ಟಬೇಡಿ
ಈಗಾಗಲೇ ಸೋಂಕು ಪತ್ತೆಯಾಗಿರುವ ಪ್ರದೇಶದ ಪ್ರಾಣಿಗಳನ್ನು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಅಂದರೆ ಗ್ಲೌಸ್ ಹಾಗೂ ಮಾಸ್ಕ್ ಇಲ್ಲದೆ ಮುಟ್ಟಬೇಡಿ. ಹಾಗೆಯೇ ಎರಡು ವಾರದ ಹಿಂದೆ ಸೋಂಕು ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ವಾಪಸ್ಸಾಗಿದ್ದರೆ ಮುಂದಿನ 14 ದಿನ ಮನೆಯಿಂದ ಹೊರಬರಬೇಡಿ. ಅನ್ಯರನ್ನು ಸಂಪರ್ಕಿಸಬೇಡಿ.
ಮುಂಬೈನಲ್ಲಿ ಸ್ಯಾನಿಟೈಸರ್, ಮಾಸ್ಕ್‌ಗಳಿಗೆ ಬರ!
ಚೀನಾ ಮಾತ್ರವಲ್ಲ ಭಾರತದಲ್ಲೂ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಭಾರತದಲ್ಲಿ ಹ್ಯಾಂಡ್ ಸ್ಯಾನಿಟೈಜರ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮುಂಬೈನಲ್ಲಂತೂ ಆದರೆ, ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳಿಗೆ ಬೇಡಿಕೆ ವಿಪರೀತ ಹೆಚ್ಚಿದ್ದು, ಪೂರೈಕೆಯ ಕೊರತೆ ಉಂಟಾಗಿದೆ. ಆದರೆ, ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸ್ಯಾನಿಟೈಸರ್‌ಗಳನ್ನೇ ಬಳಸಬೇಕು ಎಂದೇನೂ ಇಲ್ಲ. ಸೋಪು ಕೂಡ ಕೊರೋನಾ ವೈರಾಣುವನ್ನು ಕೊಲ್ಲುತ್ತದೆ ಎಂಬುದು ಸಾಬೀತಾಗಿದೆ.
ಇನ್ನು ಎಷ್ಟು ದಿನ ಭಾರತ ಸುರಕ್ಷಿತ?
ಕೊರೋನಾ ವೈರಸ್ ಭಾರತ ಸೇರಿದಂತೆ 77 ರಾಷ್ಟ್ರಗಳಿಗೆ ಹಬ್ಬಿದೆ. ಇಡೀ ಏಷ್ಯಾ ಕೊರೋನಾ ಭೀತಿಯಲ್ಲಿದೆ. ಭಾರತದಲ್ಲಿ ಸೋಮವಾರ ಎರಡು ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೇಳಿ ಕೇಳಿ ಚೀನಾ ನಮ್ಮ ನೆರೆಯ ದೇಶ. ಆದಾಗ್ಯೂ ಭಾರತ ಚೀನಾದಿಂದ ಅಂತರ ಕಾಯ್ದುಕೊಂಡಿರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ಸೋಂಕು ಇನ್ನೂ ಹರಡಿಲ್ಲ.
ಬೇರೆ ಏಷ್ಯನ್ ದೇಶಗಳಿಗೆ ಹೋಲಿಸಿದರೆ ಚೀನಾದಿಂದ ಭಾರತಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆ ಎನ್ನುವುದು ಭಾರತ ಅಲ್ಪ ಮಟ್ಟಿಗೆ ಸೇಫ್ ಆಗಿರುವುದಕ್ಕೆ ಇನ್ನೊಂದು ಕಾರಣ. ಹಾಗೆಯೇ ಚೀನಾ ಕೇಂದ್ರಿತ ಏಷ್ಯಾ ಸರಬರಾಜಿನ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿಲ್ಲದೇ ಇರುವುದರಿಂದ ಚೀನಾ ಮೂಲದ ಕೊರೋನಾ ಭಾರತದ ಆರ್ಥಿಕತೆ ಮೇಲೂ ಅಷ್ಟಾಗಿ ಪ್ರಭಾವ ಬೀರಿಲ್ಲ.
ಇತ್ತೀಚೆಗೆ ಚೀನಾದ ಕೊರೋನಾ ವೈರಸ್ ಭಾರತದ ಅಂದರೆ ಔಷಧ, ಎಲೆಕ್ಟ್ರಾನಿಕ್, ಜವಳಿ, ಕೆಮಿಕಲ್ಸ್ ಅಥವಾ ಉತ್ಪಾದನಾ ಮತ್ತು ಆಮದು ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದ ಉದ್ಯಮಗಳು ನಷ್ಟಅನುಭವಿಸದಂತೆ ಭಾರತ ಸರ್ಕಾರ ಸೂಕ್ತ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಸದ್ಯ ಭಾರತದಲ್ಲಿ ಮತ್ತೆರಡು ಕೊರೋನಾ ಸೋಂಕಿತರು ಪತ್ತೆಯಾಗಿರುವುದರಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಮೂಡಿ, ಏಷ್ಯಾದ ಬೆಳವಣಿಗೆ ಮೇಲೆ ಕೊರೋನಾ ಪ್ರಭಾವ ಬೀರುತ್ತದೆ ಎಂದು ಅಂದಾಜಿಸಿದೆ. ಅಂದರೆ ಟೂರಿಸಂ, ಪೂರೈಕೆ ಮೇಲೆ ಪ್ರಭಾವ ಬೀರಬಹುದು. ಆಗ ಭಾರತದಲ್ಲಿ ಕೆಲ ವಸ್ತುಗಳ ಬೆಲೆ ಏರಿಕೆಯಾಗಬಹುದು.