Covid Cases: ಕೋವಿಡ್‌ ಎದುರಿಸಲು ಸಿದ್ಧರಾಗಿ, ರಾಜ್ಯಗಳಿಗೆ ಕೇಂದ್ರ ಸೂಚನೆ

By Kannadaprabha NewsFirst Published Apr 8, 2023, 8:04 AM IST
Highlights

ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಕೋವಿಡ್‌ ಎದುರಿಸಲು ಸಿದ್ಧರಾಗಿ ಎಂದು ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ. ಕೋವಿಡ್‌ ನಿರ್ವಹಣಾ ವ್ಯವಸ್ಥೆ ಸುಧಾರಣೆಗೆ, ಲಸಿಕಾಕರಣ, ಜೀನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಳಕ್ಕೆ ಕರೆ ನೀಡಲಾಗಿದೆ.

ನವದೆಹಲಿ: ದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ನಿರ್ವಹಣಾ ವ್ಯವಸ್ಥೆಗಳನ್ನು ಸುಧಾರಿಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಸೂಚನೆ ನೀಡಿದ್ದಾರೆ. ಅಲ್ಲದೇ ಆಸ್ಪತ್ರೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಏ.10 ಮ್ತು 11ರಂದು ಅಣಕು ಕಾರ್ಯಾಚರಣೆ ನಡೆಸುವಂತೆ ಕರೆ ನೀಡಿದ್ದಾರೆ.

ಕೋವಿಡ್‌ ಹೆಚ್ಚಳವಾಗುತ್ತಿರುವ ಕಾರಣ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲು ಶುಕ್ರವಾರ ರಾಜ್ಯಗಳ ಆರೋಗ್ಯ ಸಚಿವರು (Health minister) ಹಾಗೂ ಮುಖ್ಯ ಕಾರ್ಯದರ್ಶಿಗಳ ಜತೆ ವರ್ಚುವಲ್‌ ಆಗಿ ಮಾಂಡವೀಯ ಸಭೆ ನಡೆಸಿದರು. ಈ ವೇಳೆ ರಾಜ್ಯಗಳಲ್ಲಿ ಲಸಿಕಾಕರಣವನ್ನು ವೇಗಗೊಳಿಸಲು ಹಾಗೂ ಸೋಂಕಿನ ಜಿನೋಮ್‌ ಸೀಕ್ವೆನ್ಸಿಂಗ್‌ ನಡೆಸುವ ಪ್ರಮಾಣವನ್ನು ಹೆಚ್ಚು ಮಾಡುವಂತೆ ಸೂಚಿಸಲಾಯಿತು. ಹಾಗೆಯೇ ಕೋವಿಡ್‌ ಸನ್ನಡತೆಯ ಬಗ್ಗೆ ಜಾಗೃತಿ (Awareness) ಮೂಡಿಸಬೇಕು. ರಾಜ್ಯದಲ್ಲಿ ಆಸ್ಪತ್ರೆಗಳ (Hospital) ಸನ್ನದ್ಧತೆಯ ಕುರಿತಾಗಿ ಪರಿಶೀಲನೆ ನಡೆಸಲು ಏ.10 ಮತ್ತು 11ರಂದು ಅಣಕು ಕಾರ್ಯಾಚರಣೆ ನಡೆಸಬೇಕು ಎಂದು ರಾಜ್ಯ ಸಚಿವರಿಗೆ ಸೂಚಿಸಲಾಯಿತು.

ಕೋವಿಡ್ ಹೆಚ್ಚಳದಿಂದ ಭಾರತದಲ್ಲಿ ಮಾರ್ಗಸೂಚಿ ಜಾರಿ, ಮತ್ತೆ ಬಂತು ಮಾಸ್ಕ್!

ಇದೇ ವೇಳೆ ಇನ್‌ಫ್ಲುಯೆಂಜಾ ಮತ್ತು ತೀವ್ರತರವಾದ ಉಸಿರಾಟ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಲಾಯಿತು. ಕೋವಿಡ್‌ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಲು ಏ.8 ಮತ್ತು 9ರಂದು ಜಿಲ್ಲಾಡಳಿತದ ಜೊತೆ ಸಭೆ ನಡೆಸಿ ಎಂದು ಸಚಿವರಿಗೆ ಸೂಚನೆ ನೀಡಲಾಯಿತು.

ಇನ್ನು ಆರ್‌ಟಿಪಿಸಿಆರ್‌ ಟೆಸ್ಟಿಂಗ್‌ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಂಡವೀಯ, ರಾಜ್ಯಗಳು ಈಗ ಪ್ರತಿ 10 ಲಕ್ಷ ಜನರಿಗೆ 100 ಟೆಸ್ಟಿಂಗ್‌ ಗುರಿ ಹೊಂದಿವೆ. ಇದು ಹೆಚ್ಚಾಗಬೇಕು ಎಂದು ಸೂಚಿಸಿದರು. ಇದೇ ವೇಳೆ, ಕರ್ನಾಟಕದ 5 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದೆ ಎಂಬುದನ್ನು ಸಚಿವರ ಗಮನಕ್ಕೆ ತರಲಾಯಿತು.

ಇನ್ನು 15-20 ದಿನಕ್ಕೆ ದೇಶದಲ್ಲಿ ಕೋವಿಡ್‌ ತುತ್ತ ತುದಿಗೆ: ತಜ್ಞರು
'ದೇಶದಲ್ಲಿ ಕೋವಿಡ್‌ ಸೋಂಕು ಮುಂದಿನ 15ರಿಂದ 20 ದಿನಗಳಲ್ಲಿ ತಾರಕಕ್ಕೆ ಏರಬಹುದು. ಆದರೆ 4ನೇ ಅಲೆ ಉಂಟಾಗುವ ಭಯವಿಲ್ಲ. ಕೋವಿಡ್‌ ಸಾಂಕ್ರಾಮಿಕ ಈಗಾಗಲೇ ಎಂಡೆಮಿಕ್‌ ಹಂತಕ್ಕೆ ತಲುಪಿದ್ದು, ಲಕ್ಷಣಗಳು ತೀರಾ ಸೌಮ್ಯವಾಗಿವೆ. ಕೇವಲ ಕೆಮ್ಮು, ನೆಗಡಿಗೆ ಸೀಮಿತವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಸಾಕು’ ಎಂದು ತಜ್ಞರು ಹೇಳಿದ್ದಾರೆ. ದೇಶದಲ್ಲಿ ಈಗ ನಿತ್ಯ 5-6 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾತಿ ಆರಂಭವಾಗಿದ್ದು, ಇದರ ನಡುವೆಯೇ ತಜ್ಞರ ಈ ಹೇಳಿಕೆ ಬಂದಿದೆ.

Covid Case ಹೆಚ್ಚಳ, ಮತ್ತೊಮ್ಮೆ ಬೂಸ್ಟರ್‌ ಡೋಸ್‌ ನೀಡಲು ಡಬ್ಲ್ಯುಎಚ್‌ಒ ಸಲಹೆ

‘ಶುಕ್ರವಾರ ದೇಶದಲ್ಲಿ ಕಳೆದ ಸೆಪ್ಟೆಂಬರ್‌ನಿಂದಲೇ ಅತ್ಯಂತ ಗರಿಷ್ಠ ಪ್ರಮಾಣದ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದು ಮುಂದಿನ 20 ದಿನಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು. ದೇಶದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಬಹುದು. ಇದಾದ ಬಳಿಕ ಸೋಂಕು ಇಳಿಕೆಯಾಗಲಿದೆ’ ಎಂದು ಕೋವಿಡ್‌ ತಜ್ಞರಾದ ರಘುವಿಂದರ್‌ ಪರಾಶರ್‌ ಅವರು ಹೇಳಿದ್ದಾರೆ. ‘ಅಲ್ಲದೇ ದೇಶದಲ್ಲಿ ಈಗ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಎಕ್ಸ್‌ಬಿಬಿ.1.16 ಕಾರಣವಾಗಿದೆ. ಆದರೆ ಈ ಹಿಂದೆ 2ನೇ ಅಲೆಗೆ ಕಾರಣವಾಗಿದ್ದ ‘ಡೆಲ್ಟಾ’ ಉಪತಳಿಯಷ್ಟುಇದು ಶಕ್ತಿ ಹೊಂದಿಲ್ಲ’ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಂಕು ಹೆಚ್ಚಾದರೂ ಭಯವಿಲ್ಲ:'ಕೋವಿಡ್‌ ತಾರಕಕ್ಕೇರಿದರೂ 4ನೇ ಅಲೆಯ ಭಯವಿಲ್ಲ. ಏಕೆಂದರೆ ಕೋವಿಡ್‌ ಸೋಂಕಿನಿಂದಾಗಿ ಈಗ ಸಾಮಾನ್ಯ ಕೆಮ್ಮು, ನೆಗಡಿ, ಗಂಟಲು ಕೆರೆತದಂಥ ಲಕ್ಷಣಗಳು ಮಾತ್ರ ಉಂಟಾಗುತ್ತಿವೆ. ಏಕೆಂದರೆ ಕೋವಿಡ್‌ ಬಹುತೇಕ ಎಂಡೆಮಿಕ್‌ ಹಂತಕ್ಕೆ ತಲುಪಿದೆ. ಸಾವು-ನೋವು, ಆಸ್ಪತ್ರೆ ದಾಖಲೀಕರಣವು 2ನೇ ಅಲೆಯಷ್ಟುಇರುವುದಿಲ್ಲ’ ಎಂದಿದ್ದಾರೆ.

click me!