- ಕಾಂಗೋದಲ್ಲಿ ಈ ವರ್ಷ 9 ಸಾವು
- ಯುರೋಪ್, ಅಮೆರಿಕದಲ್ಲಿ ಹೆಚ್ಚಾಗುತ್ತಿರುವ ಸೋಂಕು
- ಆಫ್ರಿಕಾದಲ್ಲಿ ಎಂಡೆಮಿಕ್ ಹಂತಕ್ಕೆ ತಲುಪಿರುವ ಮಂಕಿಪಾಕ್ಸ್
ಅಬುಜಾ (ಜೂ.1): ಕೋವಿಡ್ ಸಾಂಕ್ರಾಮಿಕದ (Covid-19) ನಂತರ ವಿಶ್ವದಲ್ಲಿ ವೇಗವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್ ಸೋಂಕಿಗೆ (monkeypox) ಈ ವರ್ಷ ನೈಜೀರಿಯಾದಲ್ಲಿ (nigeria) ಮೊದಲ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಫ್ರಿಕಾದ ಮತ್ತೊಂದು ರಾಷ್ಟ್ರವಾದ ಕಾಂಗೋದಲ್ಲಿ (Congo) ಈ ವರ್ಷ 9 ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಖಚಿತಪಡಿಸಿದೆ.
ನೈಜಿರಿಯಾದಲ್ಲಿ 2017ರಿಂದ ಈ ಸೋಂಕು ಸ್ಫೋಟಗೊಂಡಿಲ್ಲ. ಆದರೂ 22 ರಾಜ್ಯಗಳಿಂದ ಒಟ್ಟು 247 ಪ್ರಕರಣಗಳು ಖಚಿತಪಟ್ಟಿವೆ. ಕಾಂಗೋ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ಐಮೀ ಅಲೋಂಗೋ ಅವರ ಪ್ರಕಾರ ಸೋಮವಾರ ದೇಶದಲ್ಲಿ 465 ಪ್ರಕರಣಗಳು ದಾಖಲಾಗಿವೆ. ಕಾಂಗೋದಲ್ಲಿ ಈ ಸೋಂಕು ಸತ್ತ ಕೋತಿಗಳು ಮತ್ತು ಇಲಿಗಳಿಂದ ಹಬ್ಬುತ್ತಿದೆ. ಇಲ್ಲಿನ ನಿವಾಸಿಗಳು ಅರಣ್ಯಕ್ಕೆ ಪ್ರವೇಶಿಸಿ ಸತ್ತ ಮಂಗ, ಬಾವಲಿ, ಇಲಿಗಳ ಸಂಪರ್ಕಕ್ಕೆ ಬರುತ್ತಿದ್ದಾರೆ ಹಾಗಾಗಿ ಸೋಂಕು ಹರಡುತ್ತಿದೆ. ಪ್ರಸ್ತುತ ಮಂಕಿಪಾಕ್ಸ್ ಆಫ್ರಿಕಾದಲ್ಲಿ ಎಂಡೆಮಿಕ್ ಹಂತಕ್ಕೆ ತಲುಪಿದೆ ಎಂದು ಅವರು ಹೇಳಿದ್ದಾರೆ. ಯುರೋಪ್ ಮತ್ತು ಅಮೆರಿಕದಲ್ಲಿ ಈ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಈವರೆಗೆ ಸುಮಾರು 250ಕ್ಕೂ ಹೆಚ್ಚು ಪ್ರಕರಣಗಳು ವಿಶ್ವಾದ್ಯಂತ ದಾಖಲಾಗಿವೆ.
ಮಂಕಿಪಾಕ್ಸ್ ಬಗ್ಗೆ ಕೇಂದ್ರ ಕಟ್ಟೆಚ್ಚರ
ನವದೆಹಲಿ (ಜೂ.1): ಯುರೋಪ್ (Europe) ಮತ್ತು ಅಮೆರಿಕದ ದೇಶಗಳಲ್ಲಿ (US) ಮಂಕಿಪಾಕ್ಸ್ ಸೋಂಕು ಏರಿಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಒಂದೇ ಒಂದು ಪ್ರಕರಣ ಕಾಣಿಸಿಕೊಂಡರು ಅದನ್ನು ಸೋಂಕು ಸ್ಫೋಟ ಎಂದು ಪರಿಗಣಿಸಬೇಕು ಮತ್ತು ಈ ಕುರಿತಾಗಿ ವಿಸ್ತೃತವಾದ ತನಿಖೆ ಕೈಗೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
Monkeypox Virus ಮಂಕಿಪಾಕ್ಸ್ ಬಗ್ಗೆ ಕೇಂದ್ರ ಕಟ್ಟೆಚ್ಚರ, 1 ಕೇಸಿದ್ದರೂ ಸ್ಫೋಟವೆಂದು ಪರಿಗಣನೆ!
ಹೊಸ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೋಂಕು ಕಾಣಿಸಿಕೊಂಡವರನ್ನು ಐಸೋಲೇಟ್ ಮಾಡಬೇಕು. ಅಲ್ಲದೇ ಸೋಂಕಿತರ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಹಚ್ಚಬೇಕು. ಸೋಂಕು ಕಾಣಿಸಿಕೊಂಡರೆ ಅದನ್ನು ಪಿಸಿಆರ್ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.
ಮಕ್ಕಳಿಗೆ ಮಂಕಿಪಾಕ್ಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಹೇಗೆ ?
ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ದೇಶಗಳಿಗೆ ಕಳೆದ 21 ದಿನಗಳಲ್ಲಿ ಪ್ರಯಾಣ ಮಾಡಿರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಈ ಪ್ರಯಾಣಿಕರು ಸತ್ತಿರುವ ಅಥವಾ ಬದುಕಿರುವ ಇಲಿ, ಅಳಿಲು ಮುಂತಾದ ಪ್ರಾಣಿಗಳ ಸಂಪರ್ಕಕ್ಕೆ ಬಂದಿಲ್ಲ ಎನ್ನುವುದನ್ನೂ ಖಚಿತ ಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.