ಜಿಮ್​: ಪುರುಷತ್ವದ ಪ್ರದರ್ಶನವೊ? ಸಾವಿನ ಹಾದಿಯೊ? ಲಾಭದ ಮಾರ್ಗವೊ?

Published : Jul 03, 2023, 06:02 PM IST
ಜಿಮ್​: ಪುರುಷತ್ವದ ಪ್ರದರ್ಶನವೊ? ಸಾವಿನ ಹಾದಿಯೊ? ಲಾಭದ ಮಾರ್ಗವೊ?

ಸಾರಾಂಶ

ಜಿಮ್​ಗೆ ಹೋಗಿ ಬಂದು ಸಾವನ್ನಪ್ಪುತ್ತಿರುವ ಯುವಕರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಇದು ಹೆಚ್ಚು ಪ್ರಶ್ನೆ ಹಲವು ಹುಟ್ಟುಹಾಕಿದೆ.   

ಕಳೆದ ಒಂದೆರಡು ವರ್ಷಗಳಿಂದ ಜಿಮ್​ಗೆ ಹೋಗಿ ಬಂದ ಯುವಕರ ಸಾವಿನ ಕುರಿತು ಬಹಳ ಸುದ್ದಿಗಳು ಬರುತ್ತಿವೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಆಘಾತಕಾರಿ ಸುದ್ದಿಗಳನ್ನು ಓದುತ್ತಲೇ ಇದ್ದೇವೆ.  ಈ ಯುವಕರ ಪೈಕಿ ಹಲವರು ಸಾವನ್ನಪ್ಪಿದ್ದು ಜಿಮ್​ನಲ್ಲಿ ಇಲ್ಲವೇ ಜಿಮ್​ನಲ್ಲಿ ವ್ಯಾಯಾಮ ಮುಗಿಸಿ ಹೊರಗೆ ಬಂದ ಬಳಿಕ. ಚಿತ್ರ ತಾರೆಯರು ಸೇರಿದಂತೆ ಹಲವು ಯುವಕರು ಜಿಮ್​ ಬಳಿಕವೇ ಎಳವೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಜಿಮ್​ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಸಿಕ್ಸ್​ಪ್ಯಾಕ್​ (Six Pack) ನೆಪದಲ್ಲಿ ಜಿಮ್​ ಸೇರಿಕೊಳ್ಳುವ ದೊಡ್ಡ ವರ್ಗವೇ ಇದೆ. ಹುಡುಗಿಯರನ್ನು ಇಂಪ್ರೆಸ್​ ಮಾಡುವುದು ಇವರ ಮುಖ್ಯ ಉದ್ದೇಶ. ಬಹುತೇಕ ಹುಡುಗಿಯರು ಕೂಡ ಇಂಥ ಹುಡುಗರ ಬಳಿಯೇ ಒಲವು ತೋರುವ ಹಿನ್ನೆಲೆಯಲ್ಲಿ, ಗರ್ಲ್​ಫ್ರೆಂಡ್ಸ್​ಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಬಹುತೇಕ ಯುವಕರು ಜಿಮ್​ಗೆ ಹೋಗುವುದು ಇದೆ. ಇನ್ನು ಸಿನಿಮಾ ಇತ್ಯಾದಿ ವಿಷಯಗಳು ಬಂದಾಗ ಬಾಡಿ ಬಿಲ್ಡ್​ ಮಾಡುವ ಅನಿವಾರ್ಯತೆ ಅವರಿಗೆ ಇರುತ್ತದೆ. ಈ ಕಾರಣಕ್ಕೆ ಅವರು ಜಿಮ್​ಗೆ ಸೇರುತ್ತಾರೆ. ಅದು ಎಷ್ಟರಮಟ್ಟಿಗೆ ಎಂದರೆ, ನಗರ ಪ್ರದೇಶಗಳಲ್ಲಿ ಬೀದಿಗೊಂದು ಜಿಮ್​ ತಲೆ ಎತ್ತಿವೆ. ಆದರೂ ಬೇಕಾದ ಸ್ಲಾಟ್​ ಸಿಗುವುದಿಲ್ಲ. ಬೆಳಗಿನ ಅವಧಿಯಲ್ಲಿ ಟೈಮಿಂಗ್ಸ್​ ಬೇಕೆಂದರೆ ಬಹುತೇಕ ಎಲ್ಲ ಜಿಮ್​ಗಳೂ ಭರ್ತಿ ಎನ್ನುವ ಮಾತು!
 
 ತಮ್ಮ ದೇಹವನ್ನು ದಷ್ಟಪುಷ್ಟಗೊಳಿಸಿ ಪುರುಷತ್ವವನ್ನು ಸಾಬೀತುಪಡಿಸಲೋ ಇಲ್ಲವೇ ಹುಡುಗಿಯರನ್ನು ಒಲಿಸಿಕೊಳ್ಳಲೋ ಅಥವಾ ಇನ್ನಾವುದೇ ಕಾರಣಕ್ಕೆ ಜಿಮ್​ (Gym) ಮೊರೆ ಹೋಗುವ ಯುವಕರೇ ನಿಜಕ್ಕೂ ನೀವು ಜಿಮ್​ಗೆ ಹೋಗುತ್ತಿದ್ದೀರೋ ಇಲ್ಲವೇ ಸಾವಿನ ಮನೆಯ ಬಾಗಿಲು ತಟ್ಟುತ್ತಿದ್ದೀರೋ ಎನ್ನುವ ಯೋಚನೆ ಮಾಡುವ ಕಾಲ ಬಂದಿದೆ.  ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಈಚಿನ ದಿನಗಳಲ್ಲಿ ದಿನೇ ದಿನೇ ಏರುತ್ತಿರುವ ಕಾರಣ ವೈದ್ಯರು ಕೂಡ ಜಿಮ್​ ಬಗ್ಗೆ ಇದಾಗಲೇ ಸಾಕಷ್ಟು ಸಲ ಎಚ್ಚರಿಕೆಯನ್ನು ನೀಡಿದ್ದಾರೆ. ಬಾಹ್ಯ ಸೌಂದರ್ಯವನ್ನು ತೋರಿಸಿಕೊಳ್ಳಲು ಹೋಗಿ ಆಂತರಿಕವಾಗಿ ಸಮಸ್ಯೆ ತಂದುಕೊಳ್ಳಬೇಡಿ ಎಂದು ಮೇಲಿಂದ ಮೇಲೆ ಹೇಳುತ್ತಿದ್ದಾರೆ. 

ಅತಿಯಾದ ಬಾಡಿಬಿಲ್ಡಿಂಗ್ ಜೋ ಲಿಂಡ್ನರ್ ಜೀವಕ್ಕೇ ಮುಳುವಾಯ್ತಾ? ಏನಿದು ರಿಪ್ಲಿಂಗ್ ಮಸಲ್ ಕಾಯಿಲೆ?

ಅಷ್ಟಕ್ಕೂ ವ್ಯಾಯಾಮ (Exercise) ಮಾಡಿದ್ರೆ ಏನ್​ ಸಮಸ್ಯೆ ಎಂದು ಕೇಳುವವರೇ ಹೆಚ್ಚು. ವ್ಯಾಯಾಮ ದೇಹಕ್ಕೆ ಒಳ್ಳೆಯದು ಎಂದು ದಿನ ಬೆಳಗಾದರೆ ಪ್ರವಚನ ಮಾಡುವವರು ಇದ್ದರೆ, ಅದನ್ನೇ ಸರಿಯಲ್ಲ ಎಂದು ನೀವು ಹೇಳುವುದೇಕೆ ಎನ್ನುತ್ತಾರೆ ಹಲವು ಯುವಕರು. ಅಸಲಿಗೆ ವ್ಯಾಯಾಮ ಒಳ್ಳೆಯದೇ, ಆರೋಗ್ಯಕ್ಕೂ ಉತ್ತಮ. ಮಾನಸಿಕವಾಗಿ, ದೈಹಿಕವಾಗಿ ಎಲ್ಲದ್ದಕ್ಕೂ ವ್ಯಾಯಾಮ ಬೇಕೇ ಬೇಕು. ಆದರೆ ಎಲ್ಲದ್ದಕ್ಕೂ ಮಿತಿ ಇರಬೇಕು ಅಲ್ಲವೆ? ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು  ಜಿಮ್​ಗೂ ಅನ್ವಯ ಆಗುತ್ತದೆ. ​ ಅಷ್ಟಕ್ಕೂ ಸಾವಿನ ಹಾದಿಯನ್ನು ಯುವ ವಯಸ್ಸಿನಲ್ಲಿಯೇ ಈ ಜಿಮ್ ತೋರಿಸುತ್ತಿರಲು ಕಾರಣ, ಅಲ್ಲಿ ನೀಡುವ ಪೌಡರ್​ಗಳು ಹಾಗೂ ಶಕ್ತಿಗಾಗಿ ನೀಡುವ ಪೇಯಗಳು ಎಂದು ಇದಾಗಲೇ ಹಲವು ವೈದ್ಯರು ಹೇಳಿದ್ದಾರೆ. ಹೆಚ್ಚಿನ ವರ್ಕೌಟ್ ಮಾಡುವುದಕ್ಕೆ ದೇಹಕ್ಕೆ ಶಕ್ತಿ ಬೇಕು. ಅದಕ್ಕಾಗಿ ಮಿತಿ ಮೀರಿ  ಮೊಟ್ಟೆ ಸೇವನೆ ಮಾಡುವುದು, ಮಾಂಸಖಂಡಗಳನ್ನು ಬಲಪಡಿಸಲು ಸ್ಟಿರಾಯ್ಡ್ ಸೇವಿಸುವುದು,  ಶಕ್ತಿವರ್ಧಕ ಜ್ಯೂಸ್ ಎನ್ನುವ ಹೆಸರಿನಲ್ಲಿ ಅಲ್ಲಿ ನೀಡುವ ಪಾನೀಯ ಕುಡಿಯುವುದು ಇವೆಲ್ಲವೂ ಸಾವಿನ ಸಮೀಪ ಕೊಂಡೊಯ್ಯುತ್ತಿದೆ ಎನ್ನುತ್ತಿದ್ದಾರೆ ಬಲ್ಲವರು.  ಇವೆಲ್ಲಾ  ಒಂದು ರೀತಿಯ ನಿಧಾನ ವಿಷ ಅರ್ಥಾತ್​ ಸ್ಲೋ ಪಾಯಿಸನ್​ ಇದ್ದಂತೆ. ನಿಧಾನವಾಗಿ ದೇಹಕ್ಕೆ ತೊಂದರೆ ಒಡ್ಡುತ್ತವೆ ಎನ್ನುವುದು ಇತ್ತೀಚಿನ ಅಧ್ಯಯನಗಳಲ್ಲಿ ಕೂಡ ತಿಳಿದುಬಂದಿದೆ.   

ಆದ್ದರಿಂದ ವ್ಯಾಯಾಮಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ರೂಪಿಸುವ ಮೊದಲು, ನಿಮ್ಮ ದೇಹದ ಸಾಮರ್ಥ್ಯವನ್ನು ನೀವು ತಿಳಿದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.   ಜಿಮ್ ಅನ್ನು ಪ್ರಾರಂಭಿಸುವ ಮೊದಲು, ಪ್ರಮುಖ ನಾಡಿ, ರಕ್ತದೊತ್ತಡ, SPO2, ರಕ್ತದ ಸಕ್ಕರೆ ಮಟ್ಟ ಮತ್ತು CBC, ಮೂತ್ರಪಿಂಡದ ಕಾರ್ಯ ಮತ್ತು ಯಕೃತ್ತಿನ ಕ್ರಿಯೆಯಂತಹ ಇತರ ದೇಹದ ಭಾಗಗಳನ್ನು ಒಳಗೊಂಡಂತೆ ಹೃದಯ ಮತ್ತು ಶ್ವಾಸಕೋಶದ ಪ್ರೊಫೈಲ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದರ ಜೊತೆ ಹಿಮೋಗ್ಲೋಬಿನ್, ಲಿಪಿಡ್ ಪ್ರೊಫೈಲ್, ಥೈರಾಯ್ಡ್ ಪ್ರೊಫೈಲ್, ಇಸಿಜಿ(ECG)ಯಂತಹ ರಕ್ತ ಪರೀಕ್ಷೆಗಳನ್ನು ಮಾಡಬೇಕು. ಅದನ್ನು ಬಿಟ್ಟು ಪುರುಷತ್ವ ಪ್ರದರ್ಶನಕ್ಕೆ, ಮೈಕಟ್ಟು ಅಭಿವೃದ್ಧಿಗೆ ಹೋಗಿ ಜೀವ ಕಳೆದುಕೊಳ್ಳಬೇಡಿ ಎನ್ನುತ್ತಾರೆ ವೈದ್ಯರು. ಮೈ ಸುಂದರ ಮಾಡಲು ಶಾರ್ಟ್‌ಕಟ್‌ ಅನುಸರಿಸಿದರೆ ನಿಮ್ಮ ಜೀವನವೂ ಷಾರ್ಟ್​ ಆಗುತ್ತದೆ ಎಚ್ಚರ!

ಪೋರ್ನ್​ ವಿಡಿಯೋ ಹೆಚ್ಚು ನೋಡಿದ್ರೆ ಏನಾಗುತ್ತೆ? ಸದ್ಗುರು ಹೇಳ್ತಾರೆ ಕೇಳಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!