ದೇಹಕ್ಕೆ ಮಾತ್ರವಲ್ಲ, ಮಿದುಳಿಗೂ ವಯಸ್ಸಾಗುತ್ತೆ! ಆಗ ಹೀಗೆಲ್ಲ ಬದಲಾಗುತ್ತೆ

By Suvarna NewsFirst Published Nov 7, 2022, 5:21 PM IST
Highlights

ವಯಸ್ಸಾಗುವುದು ದೇಹಕ್ಕೆ ಮಾತ್ರವಲ್ಲ, ಮಿದುಳೂ ಸಹ ವಯಸ್ಸಾಗುವಿಕೆಗೆ ಒಳಗಾಗುತ್ತದೆ. ಅದರ ಕೆಲವು ಲಕ್ಷಣಗಳ ಫಲವಾಗಿ ಮರೆಯುವ ಸಮಸ್ಯೆ, ಹೊಸತನ್ನು ಕಲಿಯಲು ಸಾಧ್ಯವಾಗದಿರುವುದು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. 
 

ವಯಸ್ಸಾದಂತೆ ದೇಹಕ್ಕೆ ಮಾತ್ರವಲ್ಲ, ಮಿದುಳಿಗೂ ವಯಸ್ಸಾಗುತ್ತದೆ. 40ರ ವಯೋಮಾನ ಮೀರಿದಂತೆ ದೇಹದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಗೋಚರಿಸುತ್ತವೆ. ಅವು ವಯಸ್ಸಾಗುತ್ತಿರುವುದನ್ನು ಸೂಚಿಸುತ್ತವೆ. ಹಾಗೆಯೇ ಮಿದುಳೂ ಸಹ ತನಗೆ ವಯಸ್ಸಾಗುತ್ತಿದೆ ಎನ್ನುವುದನ್ನು ಹಲವು ಸಂಕೇತಗಳ ಮೂಲಕ ತೋರಿಸಿಕೊಳ್ಳುತ್ತದೆ. ಅಧ್ಯಯನಗಳ ಪ್ರಕಾರ, 30 ವರ್ಷ ಮೀರಿದಂತೆ ನಮ್ಮ ಮಿದುಳು ಸಂಕುಚಿತಗೊಳ್ಳಲು ಆರಂಭವಾಗುತ್ತದೆ. ಮಿದುಳಿನ ಕುಗ್ಗುವಿಕೆ ಆರಂಭವಾದಾಗ ಅದರ ಚುರುಕುತನದ ಮೇಲೆ ಪರಿಣಾಮ ಶುರುವಾಗುತ್ತದೆ. ನೆನಪಿನ ಶಕ್ತಿ ಕುಗ್ಗುವುದು, ಏಕಾಗ್ರತೆ ಕ್ಷೀಣಿಸುವುದು ಇದಕ್ಕೆ ಉದಾಹರಣೆ. ತಜ್ಞರ ಪ್ರಕಾರ, ವಯಸ್ಸಾದಂತೆ ದೇಹದ ಬೇರೆ ಬೇರೆ ಅಂಗಗಳಿಗಿಂತ ಮೊದಲು ಮಿದುಳಿನ ಮೇಲೆ ಪರಿಣಾಮ ಕಂಡುಬರುತ್ತದೆ. ಮನುಷ್ಯ ಜೀವಿತನಾಗಿರುವವರೆಗೂ ಮಿದುಳು ಒಂದಿಷ್ಟು ಚುರುಕಾಗಿ ಇರಲೇಬೇಕಾಗುತ್ತದೆ. ಆದರೆ, ವಯಸ್ಸು ಹೆಚ್ಚಿದಂತೆ ಬದಲಾವಣೆ ಉಂಟಾಗುವುದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತವೆ. ನಮಗೇ ಅಚ್ಚರಿಯಾಗುವಂತೆ ನಮ್ಮಲ್ಲಿ ಕೆಲವು ತೊಂದರೆಗಳು ಗೋಚರಿಸುತ್ತವೆ. ಆ ಸಮಯದಲ್ಲಿ ಹೆಚ್ಚು ಕಿರಿಕಿರಿ ಮಾಡಿಕೊಳ್ಳದೆ ಅವುಗಳನ್ನು ಅರಿತುಕೊಂಡು  ನಡೆಯುವುದು ಮುಖ್ಯ. 

•    ಸ್ಮರಣೆ ಶಕ್ತಿ (Memory Power)
ಮನುಷ್ಯನ ಮಿದುಳು (Brain) 60 ವರ್ಷವಾಗುತ್ತಿರುವಂತೆ ಸ್ಮರಣೆ ಶಕ್ತಿಯ ಮೇಲೆ ಪರಿಣಾಮ ಉಂಟಾಗುವುದು ಸಹಜ. ದೈನಂದಿನ ಕೆಲಸ (Daily Work) ಕಾರ್ಯಗಳನ್ನು ಹೊರತುಪಡಿಸಿ ಹೊಸ ಕೆಲಸಗಳನ್ನು ಮರೆಯುವುದು, ಹೆಸರುಗಳು (Names) ಮರೆತು ಹೋಗುವ ಸಮಸ್ಯೆ ಎದುರಾಗುತ್ತದೆ. ಇದಕ್ಕಾಗಿ ಕುಗ್ಗದೆ ವಯೋಸಹಜ ಎಂದು ಸ್ವೀಕರಿಸಬೇಕು. 

ವೆಯಿಟ್ ಟ್ರೈನಿಂಗ್ ಮೂಲಕ ಮತ್ತಷ್ಟು ಯಂಗ್ ಆಗಿರಿ

•    ಅರಿತುಕೊಳ್ಳಲು ಕಷ್ಟ (Learning)
ಮಿದುಳಿನ ಒಟ್ಟಾರೆ ಭಾಗ ಕುಗ್ಗುವ ಜತೆಗೆ ಮುಂಭಾಗ (Frontal Lobe) ಮತ್ತು ಹಿಪ್ಪೊಕ್ಯಾಂಪಸ್ (Hippocampus) ಹೆಚ್ಚು ಸಂಕುಚಿತಗೊಳ್ಳಲು ಆರಂಭವಾಗುತ್ತದೆ. ಇದರಿಂದ ವಿವೇಚನಾ (Cognitive) ಸಾಮರ್ಥ್ಯ ಕಡಿಮೆ ಆಗುತ್ತದೆ. ಹೊಸ ಕಲಿಕೆ ಈ ಸಮಯದಲ್ಲಿ ಸಾಧ್ಯವಾಗದಿರುವುದು ಇದೇ ಕಾರಣಕ್ಕೆ. ಅಲ್ಲದೆ, ಬೇರೆಯವರು ಏನಾದರೂ ಹೇಳಿದ್ದನ್ನು ಅರ್ಥೈಸಿಕೊಳ್ಳಲು ಕಷ್ಟವಾಗುತ್ತದೆ. 

•    ನಿರ್ಧಾರ (Decision Making) ತೆಗೆದುಕೊಳ್ಳಲು ಕಷ್ಟವಾಗುವುದು
60 ವರ್ಷ ಆಗುತ್ತಿರುವಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆ ಆಗುತ್ತದೆ. ಯಾವುದಾದರೊಂದು ನಿರ್ಣಯಕ್ಕೆ ಬರಲು ಕಷ್ಟವಾಗುತ್ತದೆ. 

•    ಇದ್ದಕ್ಕಿದ್ದ ಹಾಗೆ ಬದಲಾಗುವ ಮನಸ್ಥಿತಿ (Mood)
ಮಿದುಳಿಗೆ ವಯಸ್ಸಾಗುವಾಗ ಅದು ಕೆಲಸ ಮಾಡುವ ವಿಧಾನವೂ ಬದಲಾಗುತ್ತದೆ. ಇದು ಭಾವನಾತ್ಮಕ (Emotional) ಕಾರ್ಯಕ್ಷಮತೆಯ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಮಕ್ಕಳು ಹತ್ತಿರ ಇರಬೇಕು ಎನಿಸುತ್ತದೆ. ಸಮೀಪದವರು ದೂರ ಇದ್ದರೆ ಕಷ್ಟವಾಗುತ್ತದೆ. ಮಕ್ಕಳು ಹೊರಟಾಗ ಹಿರಿಯರು ಅರಿಯದೇ ಕಣ್ಣೀರು ಹಾಕುವುದು, ಮೊಮ್ಮಕ್ಕಳನ್ನು ನೆನೆದು ಭಾವಪರವಶರಾಗುವುದು ಇದೇ ಕಾರಣಕ್ಕೆ. ಈ ಸಮಯದಲ್ಲಿ ಅವರು ಮನೆಯಿಂದ ದೂರವಿದ್ದರೂ ಚಡಪಡಿಕೆ ಅನುಭವಿಸುತ್ತಾರೆ. ಪದೇ ಪದೆ ಮೂಡಿನಲ್ಲಿ ವ್ಯತ್ಯಾಸವಾಗುತ್ತದೆ. 

ಯಾವಾಗಲೂ ಯಂಗ್ ಆಗಿರಲು ನಮ್ಮ ಹಿರಿಯರು ಇದನ್ನೇ ಬಳಸ್ತಿದ್ರು

•    ಆತಂಕ ಮತ್ತು ಖಿನ್ನತೆ (Anxiety and Depression)
50-60ರ ಮೇಲ್ಪಟ್ಟ ವಯೋಮಾನದವರಿಗೆ ಆತಂಕ ಹೆಚ್ಚು. ಇದು ಸಹ ಮಿದುಳು ಕ್ಷೀಣಿಸುತ್ತಿರುವುದರ ಬಹುದೊಡ್ಡ ಸಂಕೇತ. ಈ ಸಮಯದಲ್ಲಿ ವ್ಯಕ್ತಿಯ ಮಾನಸಿಕ ಆರೋಗ್ಯದಲ್ಲೂ (Mental Health) ಏರುಪೇರಾಗುತ್ತದೆ. ಸಾಮಾನ್ಯವಾಗಿ ಆರ್ಥಿಕ ಹಾಗೂ ಭಾವನಾತ್ಮಕ ಅಂಶಗಳು ವೃದ್ಧರನ್ನು ಹೆಚ್ಚು ನಲುಗಿಸುತ್ತವೆ. ಭಯ, ಅಭದ್ರತೆ ಉಂಟಾಗುತ್ತದೆ. ಯಾರಾದರೂ ಕೆಟ್ಟ ಮಾತುಗಳನ್ನಾಡಿದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಖಿನ್ನತೆಯೂ ಸಾಮಾನ್ಯ. ಇದಕ್ಕೆ ಪರಿಹಾರವೆಂದರೆ, ವಯಸ್ಸಾಗುವಿಕೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ದಿನಚರಿ, ಆಹಾರ-ವಿಹಾರಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಲಘು ವ್ಯಾಯಾಮ, ಧ್ಯಾನ, ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವುದು ಉತ್ತಮ.

•    ದೃಷ್ಟಿ ದೋಷ (Vision Problem)
ಒಂದೊಮ್ಮೆ ಮೊದಲಿನಿಂದಲೂ ದೃಷ್ಟಿ ದೋಷವಿದ್ದರೆ ಈ ಸಮಯದಲ್ಲಿ ಅದು ಹೆಚ್ಚಾಗುತ್ತದೆ. “ಚಾಳೀಸು’ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಮಸ್ಯೆ ಅತಿ ಸಾಮಾನ್ಯ.

click me!