ಬೆಳಿಗ್ಗೆ ಚಳಿ, ಮಧ್ಯಾಹ್ನ ಚಳಿ, ರಾತ್ರಿ ಚಳಿ.. ಚಳಿಗಾಲದಲ್ಲಿ ಚಳಿ ಬಿಡೋದೇ ಇಲ್ಲ. ಇದ್ರಿಂದ ಅನಾರೋಗ್ಯ ತಪ್ಪಿದ್ದಲ್ಲ. ಚಳಿ ಹತ್ತಿರವೂ ಸುಳಿಬಾರದು ಅಂದ್ರೆ ಈ ಋತುವಿನಲ್ಲಿ ಕೆಲ ಆಹಾರ ಸೇವನೆ ಶುರು ಮಾಡಿ.
ಚಳಿಗಾಲ ಶುರುವಾಗಿದೆ. ಬೆಚ್ಚಗೆ ಹೊದ್ದು ಮಲಗುವ ಆಸೆ ಆಗುತ್ತೆ. ಮನೆಯೊಳಗೆ ಎಲ್ಲ ಬಾಗಿಲು ಹಾಕಿದ್ರೂ ಸುಂಯ್ ಅಂತಾ ಎಲ್ಲಿಂದಲೂ ಗಾಳಿ ಬಂದಿರುತ್ತೆ. ಈ ಚಳಿಗಾಲದಲ್ಲಿ ಸದಾ ಬೆಚ್ಚಗಿನ ಬಟ್ಟೆ ಧರಿಸ್ತೇವೆ. ಮನೆಯನ್ನು ಬೆಚ್ಚಗಿಡುವ ಪ್ರಯತ್ನ ನಡೆಸ್ತೇವೆ. ಆದ್ರೆ ದೇಹ ಬೆಚ್ಚಗಿಡೋದು ಸವಾಲಿನ ಕೆಲಸವಾಗುತ್ತೆ. ಯಾಕೆಂದ್ರೆ ಚಳಿಗಾಲದಲ್ಲಿ ಆಹಾರದ ಮೂಲಕ ನೀವು ದೇಹವನ್ನು ಬೆಚ್ಚಗೆ ಮಾಡಿಲ್ಲವೆಂದ್ರೆ ಕೆಲ ಅನಾರೋಗ್ಯ ನಿಮ್ಮನ್ನು ಸುತ್ತಿಕೊಳ್ಳುತ್ತದೆ. ಹಾಗಾಗಿ ಚಳಿಗಾಲದಲ್ಲಿ ನೀವು ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ.
ಚಳಿಗಾಲ (Winter) ದಲ್ಲಿ ದುಬಾರಿ ಬೆಲೆಯ, ವಿಶೇಷ ಆಹಾರ (Food) ಸೇವನೆ ಮಾಡ್ಬೇಕು ಅಂತಾ ನಾವೇನು ಹೇಳ್ತಿಲ್ಲ. ಮನೆಯಲ್ಲಿರುವ ಆಹಾರವನ್ನೇ ನೀವು ಸೇವನೆ ಮಾಡ್ಬೇಕು. ಆದ್ರೆ ಬೇಸಿಗೆ, ಮಳೆಗಾಲಕ್ಕಿಂತ ನಿಮ್ಮ ಆಹಾರ ಶೈಲಿ ಸ್ವಲ್ಪ ಬದಲಾಗಬೇಕು. ಚಳಿಗಾಲದಲ್ಲಿ ದೇಹ ಬೆಚ್ಚಗೆ ಮಾಡುವ, ಅನಾರೋಗ್ಯ (Illness) ಹೊಡೆದೋಡಿಸುವ ಆಹಾರ ಯಾವುದು ಅಂತಾ ನಾವು ಹೇಳ್ತೇವೆ.
ಚಳಿಗಾಲದಲ್ಲಿರಲಿ ಈ ಆಹಾರ :
ಬಿಸಿ ಬಿಸಿ ಸೂಪ್ (Soup) : ನಮಗೆ ಗೊತ್ತು, ಮೈಕೊರೆಯುವ ಚಳಿಯಲ್ಲಿ ನಿಮಗೆ ಬಿಸಿ ಬಿಸಿ ಬಜ್ಜಿ ತಿನ್ಬೇಕು ಅನ್ನಿಸದೆ ಇರದು. ಆದ್ರೆ ಬಜ್ಜಿ ಬದಲು ಸೂಪ್ ಗೆ ನಿಮ್ಮ ಮನಸ್ಸನ್ನು ಡೈವರ್ಟ್ ಮಾಡಿ. ತರಕಾರಿಯಿಂದ ಮಾಡಿದ, ಕಾಳು ಮೆಣಸು, ದಾಲ್ಚನಿ, ಕಪ್ಪು ಉಪ್ಪು ಬೆರೆಸಿದ ಸೂಪ್ ದೇಹಕ್ಕೆ ಒಳ್ಳೆಯದು. ಬೇಳೆಕಾಳುಗಳು, ಧಾನ್ಯಗಳಿಂದ ಮಾಡಿದ ಸೂಪ್ ಗಳನ್ನು ನೀವು, ಚಳಿಗಾಲದಲ್ಲಿ ಅಗತ್ಯವಾಗಿ ಸೇವನೆ ಮಾಡಬೇಕು. ಸೂಪ್ ಮೂಲಕ ಸ್ವಲ್ಪ ದ್ರವ ಪದಾರ್ಥ ನಿಮ್ಮ ದೇಹ ಸೇರುತ್ತದೆ. ಇದ್ರಿಂದ ರೋಗ ದೂರವಾಗುವ ಜೊತೆಗೆ ದೇಹ ಬೆಚ್ಚಗಾಗುತ್ತದೆ.
ಮಾಂಸಹಾರ ಸೇವನೆ (Non Veg) : ನೀವು ಮಾಂಸಹಾರಿಗಳಾಗಿದ್ದರೆ ಚಳಿಗಾಲದ ನಿಮ್ಮ ಡಯೆಟ್ ನಲ್ಲಿ ಮಾಂಸಹಾರವಿರಲಿ. ಮಾಂಸಹಾರ ದೇಹದ ಉಷ್ಣತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಮಾಂಸಹಾರದಲ್ಲಿ ಕಬ್ಬಿಣ ಮತ್ತು ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ನಿಮ್ಮ ಚಯಾಪಚಯ ಸುಧಾರಿಸಲು ಇದು ನೆರವಾಗುತ್ತದೆ. ಇದ್ರಿಂದಾಗಿ ನೀವು ಚಳಿಗಾಲದಲ್ಲಿ ರೋಗ ಮುಕ್ತರಾಗಿರಬಹುದು. ನೆನಪಿರಲಿ ಮಾಂಸಹಾರ ಒಳ್ಳೆಯದು ಎನ್ನುವ ಕಾರಣಕ್ಕೆ ಅರೆ ಬೆಂದ ಅಥವಾ ಹಸಿ ಮಾಂಸ ಸೇವನೆ ಮಾಡಬೇಕು. ಪೂರ್ಣ ಪ್ರಮಾಣದಲ್ಲಿ ಬೆಂದ ಮಾಂಸವನ್ನು ನೀವು ತಿನ್ನಬೇಕು. ಸೂಪ್ ರೀತಿಯಲ್ಲಿ ಸೇವನೆ ಮಾಡಿದ್ರೆ ಒಳ್ಳೆಯದು.
ಹಾಟ್ ಡ್ರಿಂಕ್ಸ್ (Hot Drinks) : ಚಳಿಗಾಲದಲ್ಲಿ ಆಗಾಗ ದೇಹ ಬೆಚ್ಚಗಿನ ಪಾನೀಯವನ್ನು ಬಯಸುತ್ತದೆ. ಕಾಫಿ, ಟೀ, ಕಷಾಯ, ಹಾಲು, ಗ್ರೀನ್ ಟೀ ಹೀಗೆ ನಿಮಗಿಷ್ಟವಾಗುವ ಬಿಸಿ ಬಿಸಿ ಡ್ರಿಂಕ್ಸ್ ನೀವು ಸೇವನೆ ಮಾಡಬಹುದು. ಇದು ನಿಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಇದ್ರ ಜೊತೆ ಚಳಿಯಿಂದ ಮಂಕುಕವಿದಂತಾಗಿರುವ ನಿಮ್ಮ ಮೂಡನ್ನು ರಿಪ್ರೆಶ್ ಮಾಡುತ್ತದೆ. ಆದ್ರೆ ಕಾಫಿ, ಟೀಗಳ ಸೇವನೆಯಲ್ಲಿ ಮಿತಿಯಿರಲಿ. ಯಾವುದೇ ಕಾರಣಕ್ಕೂ ಮೂರಕ್ಕಿಂತ ಹೆಚ್ಚು ಬಾರಿ ಕಾಫಿ ಸೇವನೆ ಮಾಡ್ಬೇಡಿ.
Kitchen Tips: ಕರಿದ ಆಹಾರವನ್ನು ಮತ್ತೆ ಬಿಸಿಮಾಡಲು ಈ ಈಸಿ ಟಿಪ್ಸ್ ಟ್ರೈ ಮಾಡಿ
ತುಪ್ಪ (Ghee) : ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ತುಪ್ಪ ಅತ್ಯಂತ ಆರೋಗ್ಯಕರ ನೈಸರ್ಗಿಕ ಪದಾರ್ಥವಾಗಿದೆ. ಇದನ್ನು ಪ್ರತಿ ದಿನ ಊಟ, ದಾಲ್, ತರಕಾರಿ, ಚಪಾತಿ, ಹಾಲು ಹೀಗೆ ನಿಮಗಿಷ್ಟವಾಗುವ ಪದಾರ್ಥದ ಜೊತೆ ಸೇವನೆ ಮಾಡಬಹುದು. ಹಾಗೆ ಆಹಾರದ ಜೊತೆ ಮೊಸರಿರುವಂತೆ ನೋಡಿಕೊಳ್ಳಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ಇದ್ರಿಂದ ಬಲ ಪಡೆಯುತ್ತದೆ.
ಅಡುಗೆಯಲ್ಲಿರಲಿ ಶುಂಠಿ (Ginger) : ಶುಂಠಿ ಅತ್ಯುತ್ತಮ ಮನೆ ಮದ್ದಾಗಿದೆ. ಇದನ್ನು ಅನೇಕ ರೋಗಕ್ಕೆ ಬಳಕೆ ಮಾಡಲಾಗುತ್ತದೆ. ಕೆಮ್ಮು ಮತ್ತು ನೆಗಡಿಗೆ ಅತ್ಯಂತ ಪರಿಣಾಮಕಾರಿ ಗಿಡಮೂಲಿಕೆ ಎಂದ್ರೆ ತಪ್ಪಲ್ಲ. ಅನೇಕ ಅಧ್ಯಯನಗಳಲ್ಲೂ ಇದು ಸಾಭೀತಾಗಿದೆ. ಶುಂಠಿ ಸೇವನೆ ಮಾಡುವುದ್ರಿಂದ ರಕ್ತದ ಹರಿವು ಹೆಚ್ಚಾಗುತ್ತದೆ. ರಕ್ತದ ಹರಿವು ಹೆಚ್ಚಾದಾಗ ದೇಹ ಬೆಚ್ಚಗಾಗಲು ಶುರುವಾಗುತ್ತದೆ.
ಚಳಿಗಾಲದಲ್ಲಿರಲಿ ಡ್ರೈ ಫ್ರೂಟ್ಸ್ (Dry Fruits) : ಚಳಿಗಾಲದಲ್ಲಿ ಮೈ ಬೆಚ್ಚಗಿರಬೇಕು ಎನ್ನುವವರು ಡ್ರೈ ಫ್ರೂಟ್ಸ್ ಸೇವನೆ ಮಾಡಬೇಕು. ಇವುಗಳಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ. ದೇಹಕ್ಕೆ ಕಬ್ಬಿಣದಂಶವನ್ನು ಕೂಡ ನೀಡುತ್ತವೆ.
ಬೆಲ್ಲದಲ್ಲಿದೆ ಶಕ್ತಿ (Jaggery) : ಕಬ್ಬಿಣದಂಶ ಹೆಚ್ಚಿರುವ ಬೆಲ್ಲ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಪ್ರತಿ ದಿನ ನೀವು ಊಟದ ಜೊತೆ ಇದನ್ನು ಸೇವನೆ ಮಾಡಬಹುದು.
ಚಿಕನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟಾನ? ಹಾಗಿದ್ರೆ ಮಾರ್ಕೆಟ್‌ನಿಂದ ಖರೀದಿಸುವಾಗ ಈ ವಿಚಾರ ಗಮನಿಸಿ
ನೆನಪಿರಲಿ : ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡುವುದು ಕೂಡ ಅಷ್ಟೇ ಮುಖ್ಯ. ದೇಹ ಬೆಚ್ಚಗಿರಬೇಕೆನ್ನುವ ಕಾರಣಕ್ಕೆ ಹೆಚ್ಚು ಉಷ್ಣ ಪದಾರ್ಥ ಸೇವನೆ ಮಾಡಿದ್ರೆ ಸಮಸ್ಯೆಯಾಗುತ್ತದೆ. ಹಾಗಾಗಿ ಎಲ್ಲವನ್ನೂ ಇತಮಿತವಾಗಿ ಸೇವನೆ ಮಾಡಿ.