Mango eating tips: ಮಾವಿನ ಹಣ್ಣಿನ ಜೊತೆ ಇವುಗಳನ್ನು ತಿಂತಿದ್ರೆ ಇಂದೇ ಬಿಟ್ಟು ಬಿಡಿ

Published : Jun 11, 2025, 11:32 AM ISTUpdated : Jun 11, 2025, 12:55 PM IST
mango sweets

ಸಾರಾಂಶ

ಕೆಲವು ಪದಾರ್ಥಗಳೊಂದಿಗೆ ಮಾವಿನ ಹಣ್ಣು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಹಾಗಾದರೆ ಯಾವ ಆಹಾರದ ಜೊತೆ ಮಾವಿನ ಹಣ್ಣಿನ ಸೇವನೆ ತಪ್ಪಿಸಬೇಕು ಮತ್ತು ಏಕೆ ಎಂದು ನೋಡೋಣ...

ಮಳೆಗಾಲ ಆರಂಭವಾದರೂ ಸದ್ಯ ಮಾವು ಎಲ್ಲೆಡೆ ಕಡಿಮೆ ಬೆಲೆಗೆ ಲಭ್ಯವಿದೆ. ಹಾಗಾಗಿ ಜನ ಮುಗಿಬಿದ್ದು ಕೊಳ್ಳುವುದನ್ನು ನೀವೆಲ್ಲಾ ಕಣ್ಣಾರೆ ಕಂಡಿರುತ್ತೀರಿ. ಮಾವು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ. ಮಕ್ಕಳಿಗಾಗಲಿ ಅಥವಾ ವಯಸ್ಕರಿಗಾಗಲಿ ಎಲ್ಲರ ನೆಚ್ಚಿನ ಹಣ್ಣಾಗಿದೆ. ಇದು ಮಾರುಕಟ್ಟೆಗೆ ಬರುತ್ತಿದ್ದಂತೆ ಜನರು ಅದನ್ನು ಖರೀದಿಸಿ ಪ್ರತಿಯೊಂದು ರೂಪದಲ್ಲಿಯೂ ಆನಂದಿಸುತ್ತಾರೆ. ಅಂದರೆ ಮಾವಿನ ಜ್ಯೂಸ್‌, ಶೇಕ್, ಸಲಾಡ್ ಅಥವಾ ಸ್ಲೈಸ್ ಮಾಡಿ ತಿನ್ನುತ್ತಾರೆ. ಆದರೆ ವಿಶೇಷವಾಗಿ ಕೆಲವು ಪದಾರ್ಥಗಳೊಂದಿಗೆ ಮಾವಿನಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಗಂಭೀರ ಹಾನಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?. ಹೌದು, ಇಂದು ಮಾವನ್ನು ಯಾವ ಪದಾರ್ಥಗಳ ಜೊತೆ ಸೇವಿಸಲೇಬಾರದು ಎಂದು ನೋಡೋಣ..

ಮೊಸರು (Yogurt)
ಮೊಸರು ಮತ್ತು ಮಾವು ಎರಡು ವಿಭಿನ್ನ ರೀತಿಯ ಆಹಾರ ಪದಾರ್ಥಗಳಾಗಿವೆ. ಮಾವಿನ ಗುಣ ಸ್ವಭಾವತಃ ಬಿಸಿ, ಆದರೆ ಮೊಸರು ತಂಪಾಗಿರುತ್ತದೆ. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಉಷ್ಣಾಂಶ ಅಸಮತೋಲನ ಉಂಟಾಗಬಹುದು. ಇದು ಆಮ್ಲೀಯತೆ, ಹೊಟ್ಟೆ ನೋವು ಅಥವಾ ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಮಾವನ್ನು ಮೊಸರಿನೊಂದಿಗೆ ಬೆರೆಸಿ ತಯಾರಿಸಿದ 'ಮಾವಿನ ಮೊಸರು' ಕೆಲವೊಮ್ಮೆ ರುಚಿಕರವಾಗಿರುತ್ತದೆ, ಆದರೆ ಅದು ಹೊಟ್ಟೆಗೆ ಒಳ್ಳೆಯದಲ್ಲ.

ಖಾರದ ಆಹಾರ(Spicy food)
ನೀವು ತುಂಬಾ ಖಾರವಾದ ಆಹಾರವನ್ನು ಸೇವಿಸಿ ನಂತರ ಮಾವಿನಹಣ್ಣನ್ನು ಸೇವಿಸಿದರೆ, ಅದು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಬಹುದು. ಇದು ಮೊಡವೆ, ಹುಣ್ಣು ಅಥವಾ ಅಲರ್ಜಿಯಂತಹ ಸಮಸ್ಯೆಗಳನ್ನು ತಂದೊಡ್ಡುವುದಲ್ಲದೆ, ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ, ಮಾವಿನಹಣ್ಣನ್ನು ತಿನ್ನುವ ಮೊದಲು ಅಥವಾ ನಂತರ ಖಾರವಾದ ಆಹಾರವನ್ನು ಸೇವಿಸದಿರಲು ಪ್ರಯತ್ನಿಸಿ.

ತಂಪು ಪಾನೀಯ (Soft drink)
ಬೇಸಿಗೆಯಲ್ಲಿ, ಅನೇಕ ಜನರು ಮಾವಿನಹಣ್ಣು ತಿಂದ ತಕ್ಷಣ ತಂಪು ಪಾನೀಯಗಳು, ನೀರು ಅಥವಾ ಸೋಡಾ ಕುಡಿಯುತ್ತಾರೆ. ಆದರೆ ಈ ಅಭ್ಯಾಸವು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆ. ತಂಪು ಪಾನೀಯಗಳು ಮತ್ತು ಮಾವಿನಹಣ್ಣು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್, ಆಮ್ಲೀಯತೆ ಅಥವಾ ಉಬ್ಬುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಒಂದು ವೇಳೆ ನೀವು ನೀರು ಕುಡಿಯಬೇಕೆಂದರೆ ಮಾವಿನ ಹಣ್ಣು ತಿಂದು ಅರ್ಧ ಗಂಟೆಯ ನಂತರ ಕುಡಿಯಿರಿ.

ಹಾಲು (Milk)
ಅನೇಕ ಜನರು 'ಮ್ಯಾಂಗೋ ಮಿಲ್ಕ್ ಶೇಕ್' ಕುಡಿಯುತ್ತಾರೆ, ಆದರೆ ಇದು ಎಲ್ಲರ ದೇಹಕ್ಕೆ ಸೂಕ್ತವಲ್ಲ. ನಿಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ ಅಥವಾ ನಿಮಗೆ ಅಲರ್ಜಿ ಸಮಸ್ಯೆಯಿದ್ದರೆ, ಮಾವು ಮತ್ತು ಹಾಲಿನ ಸಂಯೋಜನೆಯು ಹಾನಿಕಾರಕವಾಗಬಹುದು. ಇದು ಚರ್ಮದ ಅಲರ್ಜಿ ಅಥವಾ ಹೊಟ್ಟೆ ಊತದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಹೀಗೆ ಸೇವಿಸಿ
* ಮಾವಿನಹಣ್ಣನ್ನು ತಿನ್ನುವ ಮೊದಲು, ಅದನ್ನು ತಣ್ಣೀರಿನಲ್ಲಿ 1-2 ಗಂಟೆಗಳ ಕಾಲ ನೆನೆಸಿಡಿ. ಇದು ಅದರಲ್ಲಿರುವ ಹೆಚ್ಚುವರಿ ಶಾಖವನ್ನು ತೆಗೆದುಹಾಕುತ್ತದೆ.
* ಮಾವಿನಹಣ್ಣು ತಿಂದ ನಂತರ ಉಗುರು ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು.
* ಮಾವಿನಹಣ್ಣು ತಿಂದ ತಕ್ಷಣ ಯಾವುದೇ ಭಾರವಾದ ಆಹಾರ ಅಥವಾ ತಂಪು ಪಾನೀಯಗಳನ್ನು ಸೇವಿಸಬೇಡಿ.

ಮುಂದಿನ ಬಾರಿ
ಮಾವಿನ ಹಣ್ಣು ಅದ್ಭುತ ರುಚಿಯನ್ನು ಹೊಂದಿರಬಹುದು, ಆದರೆ ಅದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ತಿನ್ನುವುದು ಮುಖ್ಯ. ಕೆಲವು ಆಹಾರಗಳೊಂದಿಗೆ ಸೇವಿಸಿದಾಗ ಅದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಮುಂದಿನ ಬಾರಿ ನೀವು ಮಾವಿನ ಹಣ್ಣು ತಿಂದಾಗ, ಈ ವಿಷಯಗಳನ್ನು ನೆನಪಿನಲ್ಲಿಡಿ. ಇದರಿಂದ ನೀವು ಮಾವಿನ ರುಚಿ ಮತ್ತು ಆರೋಗ್ಯ ಎರಡರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ