
ಕಿರಿಯರಾದರೂ, ಹಿರಿಯರಾದರೂ ವ್ಯಾಯಾಮ (Exercise)ಮಾಡೋದು ಎಲ್ಲರಿಗೂ ಒಳ್ಳೆಯದೇ. ದಿನನಿತ್ಯದ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸಹ ಸೇರಿಸಿಕೊಳ್ಳುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ಪುಟ್ಟ ಮಕ್ಕಳು ವ್ಯಾಯಾಮ ಮಾಡುವುದು ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ, ದೊಡ್ಡವರೇನೋ ಜಿಮ್, ಯೋಗ (Yoga), ಧ್ಯಾನ ಸೆಂಟರ್‌ಗೆ ಸೇರಿಕೊಳ್ಳುತ್ತಾರೆ. ಆದ್ರೆ, ಪುಟ್ಟ ಮಕ್ಕಳಿಗೆ ಎಕ್ಸರ್ ಸೈಸ್ ಮಾಡಿಸುವುದು ಹೇಗೆ ? ಮಕ್ಕಳಿಗೆ ನಿಜವಾಗಿಯೂ ವ್ಯಾಯಾಮದ ಅಗತ್ಯವಿದೆಯಾ. ಇದ್ದರೆ ಯಾವ ರೀತಿಯ ವ್ಯಾಯಾಮ ಮಾಡಬೇಕು ಎಂದು ತಿಳಿದುಕೊಳ್ಳೋಣ.
ಸಣ್ಣಪುಟ್ಟ ಮನೆಯ ಕೆಲಸ ಮಾಡಿಸುವುದು
ಮೊಬೈಲ್ (Mobile), ಟ್ಯಾಬ್‌ಗಳನ್ನು ಕೊಟ್ಟು ಮಕ್ಕಳನ್ನು ಕೂರಿಸುವ ಬದಲು ಮನೆಗೆಲಸದ ಚಟುವಟಿಕೆಗಳಲ್ಲಿ ಅವರನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಪುಟ್ಟ ಮಕ್ಕಗಳು ಸಹಜವಾಗಿ ದೊಡ್ಡವರು ಕೆಲಸ ಮಾಡುವಾಗ ತಾವು ಕೂಡಾ ಕೆಲಸ ಮಾಡಲು ಹಠ ಮಾಡುತ್ತಾರೆ. ಕಸ ಗುಡಿಸಲು ಪೊರಕೆ ಎಳೆಯುವುದು, ಮಡಚಿಡುವ ಬಟ್ಟೆಯನ್ನು ಎಳೆದಾಡುವುದು ಮೊದಲಾದ ಕೆಲಸ ಮಾಡುತ್ತಾರೆ. ಹೀಗಿದ್ದಾಗ ಮಕ್ಕಳನ್ನೂ ಈ ಚಟುವಟಿಕೆಗಳ ಭಾಗವಾಗಿಸುವುದು ಅವರಿಗೆ ಖುಷಿ ನೀಡುತ್ತದೆ. ಈ ಚಟುವಟಿಕೆಗಳಿಂದ ಮಕ್ಕಳ ದೇಹಕ್ಕೆ ವ್ಯಾಯಾಮವೂ ಆದಂತಾಗುತ್ತದೆ.
Creativity in children: ಮಕ್ಕಳನ್ನು ಬ್ಯುಸಿಯಾಗಿಡಲು ಸರಳ ಉಪಾಯಗಳು
ನೆಲ ಶುಚಿಗೊಳಿಸುವುದು, ಒರೆಸುವುದು, ಧೂಳು ತೆಗೆಯುವುದು, ಬಟ್ಟೆ ಮಡಚಿಡುವುದು ಮುಂತಾದ ಮನೆಕೆಲಸಗಳು ಮಕ್ಕಳ ಪಾಲಿಗೆ ವರ್ಕೌಟ್‌ನಂತೆ ಆಗುತ್ತವೆ. ಹೀಗಾಗಿ ಮನೆಗೆಲಸ ಮಾಡುವಾಗ ಮಕ್ಕಳನ್ನೂ ಜತೆಗೆ ಸೇರಿಸಿಕೊಳ್ಳಿ. ಅವರಿಗೂ ಸಣ್ಣಪುಟ್ಟ ಕೆಲಸ ವಹಿಸಿ, ಹೀಗೇ ಮಾಡುವಂತೆ ಸೂಚಿಸಿ. ಇದು ಮಕ್ಕಳಿಗೆ ಚಿಕ್ಕಂದಿನಲ್ಲೇ ಕೆಲಸದ ಬಗ್ಗೆ ಅರಿವು ಮೂಡಿಸುತ್ತದೆ.
ಮೆಟ್ಟಿಲುಗಳ ಮೇಲೆ ನಡೆಯುವುದು
ಕಿರಿಯವರಾದರೂ-ಹಿರಿಯವರಾದರೂ ನಡೆಯುವುದು ಎಲ್ಲರ ಪಾಲಿಗೂ ಅತ್ಯುತ್ತಮ ಅಭ್ಯಾಸವಾಗಿದೆ. ದಿನವೊಂದಕ್ಕೆ ಕಾಲು, ಗಂಟೆ ಅರ್ಧ ಗಂಟೆ ನಡೆಯುವುದು ಆರೋಗ್ಯ (Health)ಕ್ಕೆ ಒಳ್ಳೆಯದು. ಅದೇ ರೀತಿ ಮಕ್ಕಳಿಗೂ ನಡೆಯುವ ಅಭ್ಯಾಸ ಉತ್ತಮವಾಗಿದೆ. ಮಕ್ಕಳನ್ನು ಟಿವಿಯ ಎದುರು ಕುಳ್ಳಿರಿಸಿ, ನೀವು ಕೂಡಾ ಮೊಬೈಲ್ ಒತ್ತುತ್ತಾ ಕೂರುವುದು ಬಿಟ್ಟು ಮಗುವಿಗೆ ಮೆಟ್ಟಿಲುಗಳ ಮೇಲೆ ನಡೆಯಲು ಸೂಚಿಸಿ. ದಿನವೊಂದಕ್ಕೆ 10-15 ನಿಮಿಷಗಳ ಕಾಲ ಮೆಟ್ಟಿಲುಗಳಲ್ಲಿ ಮೇಲಕ್ಕೆ ಮತ್ತು ಕೆಳಗೆ ಇಳಿಯುವು ಅಭ್ಯಾಸ ಮಕ್ಕಳ ಕೈ, ಕಾಲುಗಳನ್ನು ಬಲಪಡಿಸುತ್ತದೆ.
Kids Health: ಮಕ್ಕಳಿಗೆ 2 ವರ್ಷ ತುಂಬುವ ಮೊದಲು ಸಕ್ಕರೆಯನ್ನು ಕೊಡಲೇಬೇಡಿ
ಮಕ್ಕಳಿಗೆ ಡ್ಯಾನ್ಸ್ ಮಾಡಲು ಹೇಳಿ
ಹಾಡುವುದು, ಕುಣಿಯುವುದು ಮಕ್ಕಳ ನೆಚ್ಚಿನ ಅಭ್ಯಾಸವಾಗಿರುತ್ತದೆ. ತೊದಲು ಮಾತಾದರೂ ಸರಿ, ತಪ್ಪು ತಪ್ಪು ಹೆಜ್ಜೆಯಾದರೂ ಸರಿ ಮಕ್ಕಳು ಇಂಥಹಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಅದರಲ್ಲೂ ಡ್ಯಾನ್ಸ್ (Dance) ಮಾಡುವುದು ಮಕ್ಕಳಿಗೆ ಉತ್ತಮ ವ್ಯಾಯಾಮವಾಗಿದೆ. ಮಕ್ಕಳಿಗೆ ಸಣ್ಣಪುಟ್ಟ ಡ್ಯಾನ್ಸ್‌ನ ಸ್ಟೆಪ್‌ಗಳನ್ನು ಹೇಳಿಕೊಡಿ. ಅವರು ಇದನ್ನು ಆಗಾಗ ಮಾಡುತ್ತಾ ಖುಷಿಪಡುತ್ತಿರುತ್ತಾರೆ.
ಸ್ಕಿಪ್ಪಿಂಗ್ ಮಾಡಲು ಕಲಿಸಿ
ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಮಾಡುವುದು ಮಕ್ಕಳ ಪಾಲಿಗೆ ಅತ್ಯುತ್ತಮವಾಗಿದೆ. ಮನೆಯ ಒಳಾಂಗಣದಲ್ಲಿಯೇ ಸುಲಭವಾಗಿ ಇದನ್ನು ಮಾಡಬಹುದು. ಮಕ್ಕಳ ಕೈ ಕಾಲುಗಳಿಗಿಗೆ, ಸಂಪೂರ್ಣ ದೇಹಕ್ಕೆ ಇದರಿಂದ ಉತ್ತಮ ವ್ಯಾಯಾಮ ಸಿಗುತ್ತದೆ. ಆದರೆ ಮಕ್ಕಳಿಗೆ ಇದನ್ನು ಮಾಡಲು ಸೂಚಿಸುವ ಮುನ್ನ ಚೆನ್ನಾಗಿ ತರಬೇತಿ ನೀಡಿ. ಇಲ್ಲದಿದ್ದರೆ ಬಿದ್ದು ಕೈ, ಕಾಲಿಗೆ ಏಟು ಮಾಡುವ ಸಾಧ್ಯತೆಯೇ ಹೆಚ್ಚು.
ಯೋಗ/ ಧ್ಯಾನ ಮಾಡಲು ಕಲಿಸಿ
ದೇಹದ, ಮನಸ್ಸಿನ ಆರೋಗ್ಯಕ್ಕೆ ಯೋಗ ಅತ್ಯುತ್ತಮ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಮಕ್ಕಳ ಪಾಲಿಗೂ ಯೋಗಾಭ್ಯಾಸ ಒಳ್ಳೆಯದೇ. ಆದರೆ ದೊಡ್ಡವರು ಮಾಡುವ ಯೋಗಾಭ್ಯಾಸಗಳನ್ನು ಪುಟ್ಟ ಮಕ್ಕಳು ಮಾಡುವುದು ಕಷ್ಟ. ಹೀಗಾಗಿ ಸುಲಭವಾದ ಆಸನಗಳನ್ನು ಕಲಿಸುವ ಮೂಲಕ ಮಕ್ಕಳಿಗೆ ಯೋಗಾಭ್ಯಾಸ ಆರಂಭಿಸಿ. ಇನ್ನು ಧ್ಯಾನ (Meditation)ವನ್ನು ಅಭ್ಯಾಸ ಮಾಡುವುದರಿಂದ ಮಕ್ಕಳ ಹಠ ಸ್ವಭಾವ ಹೋಗಿ ಮನಸ್ಸು ಶಾಂತಗೊಳ್ಳುತ್ತದೆ. ಮಕ್ಕಳಲ್ಲಿ ಪಠ್ಯದಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.