
ಚೆನ್ನಾಗಿ, ಮೈಮರೆತು ಆಳವಾದ ನಿದ್ರೆ (Sleep) ದೇಹಕ್ಕಷ್ಟೇ ಅಲ್ಲ, ಮನಸ್ಸಿನ ಆರೋಗ್ಯಕ್ಕೂ ಅತ್ಯಂತ ಅಗತ್ಯ. ಒಂದೇ ರಾತ್ರಿ ಸರಿಯಾಗಿ ನಿದ್ರೆ ಬಾರದಿದ್ದರೆ ಮಾರನೆಯ ದಿನ ಎಷ್ಟೆಲ್ಲ ಕಿರಿಕಿರಿಯಾಗುತ್ತದೆ. ಆಹಾರದಂತೆಯೇ ನಿದ್ರೆಯೂ ಅತ್ಯಂತ ಅಗತ್ಯವಾದ ಮೂಲಭೂತ ಅಂಶ. ಸಾಮಾನ್ಯವಾಗಿ ನಿದ್ರೆಯಲ್ಲಿ ಐದು ಹಂತಗಳನ್ನು ನಾವು ದಾಟುತ್ತೇವೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಮೊದಲೆರಡು ಹಂತಗಳಲ್ಲಿ ಅಷ್ಟು ಆಳವಾದ ನಿದ್ರೆ ಬರುವುದಿಲ್ಲ. ಇದು ಲಘು ನಿದ್ರೆಯ ಸಮಯ. ಈ ಅವಧಿಯಲ್ಲಿ ದೇಹದ ಉಷ್ಣತೆ (Heat) ಕಡಿಮೆಯಾಗುತ್ತದೆ. ಮಿದುಳಿನ ಚಟುವಟಿಕೆಗಳು ಸಮಸ್ಥಿತಿಗೆ ಬರುತ್ತವೆ. ಮಿದುಳು (Brain) ಶಾಂತವಾಗುತ್ತದೆ. ಮೂರು ಮತ್ತು ನಾಲ್ಕನೇ ಹಂತ ಆಳವಾದ ನಿದ್ರೆಯ (Deep Sleep) ಸಮಯ. ಈ ಹಂತದಲ್ಲೇ ದೇಹ (Body) ಹಾಗೂ ಮನಸ್ಸು(Mental)ಗಳ ಅರ್ಥಾತ್ ಮಿದುಳಿನ ಆಯಾಸ ನಿವಾರಣೆಯಾಗುತ್ತದೆ. ವಿವಿಧ ಹಾರ್ಮೋನು(Harmone)ಗಳು ಬಿಡುಗಡೆಯಾಗಿ ದೇಹದ ರಿಪೇರಿ (Repair) ಕಾರ್ಯ ಮಾಡುತ್ತವೆ. ಐದನೇ ಹಂತ ಕನಸಿನದ್ದು. ಇಲ್ಲಿ ಕಣ್ಣುಗಳ ಚಲನೆಯಿದ್ದು, ಕನಸುಗಳು ಬೀಳುತ್ತವೆ. ರಾತ್ರಿ ಸಮಯದಲ್ಲಿ ನಿದ್ರೆ ಮಾಡುವಾಗ ಸಾಮಾನ್ಯವಾಗಿ ಈ ಐದು ಹಂತಗಳನ್ನು ಎಲ್ಲರೂ ಅನುಭವಿಸುತ್ತೇವೆ. ಆದರೆ, ಇವುಗಳ ಸಮಯ ಪ್ರತಿಯೊಬ್ಬರಲ್ಲಿಯೂ ವಿಭಿನ್ನವಾಗಿರಬಲ್ಲದು. ಆದರೆ, ಅನೇಕರು ನಿದ್ರೆ ಬಾರದೆ ತೊಳಲಾಡುತ್ತಾರೆ. ಕೆಲವು ಆಹಾರಗಳ ಸೇವನೆಯಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುವಂತೆ ಮಾಡಿಕೊಳ್ಳಬಹುದು. ಅವುಗಳ ಸೇವನೆಯಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
• ಹಾಲು (Milk)
ಬಹುತೇಕ ಎಲ್ಲರೂ ರಾತ್ರಿ ಊಟವಾದ ಬಳಿಕ ಹಾಲು ಸೇವಿಸುವ ಪದ್ಧತಿಯನ್ನು ಕೇಳಿರುತ್ತೇವೆ. ನಾವು ಹಾಲು ಕುಡಿಯದಿದ್ದರೂ ಕುಡಿಯುವವರನ್ನು ಕಂಡಿರುತ್ತೇವೆ. ಅಸಲಿಗೆ ಇದು ಉತ್ತಮ ಅಭ್ಯಾಸ. ಹಾಲಿನಲ್ಲಿರುವ ಟ್ರಿಪ್ಟೊಫ್ಯಾನ್ (Triptophan) ಎನ್ನುವ ಅಂಶದಿಂದ ಉತ್ತಮ ನಿದ್ರೆ ಬರುತ್ತದೆ. ರಾತ್ರಿ ಹದವಾದ ಬಿಸಿ (Hot) ಹಾಲು ಸೇವನೆ ಮಾಡುವುದು ಮಕ್ಕಳಿಂದ ಹಿಡಿದು ಮಹಿಳೆಯರು, ಹಿರಿಯರಿಗೆ ಅಗತ್ಯವೂ ಹೌದು.
• ಅನ್ನದ ಊಟ (Rice)
ಇತ್ತೀಚಿನ ದಿನಗಳಲ್ಲಿ ರಾತ್ರಿ(Night)ಯ ಊಟಕ್ಕೆ ಅನ್ನವನ್ನು ಸೇವಿಸದಿರುವ ಪದ್ಧತಿ ಕಾಣಬಹುದೇ ವಿನಾ ಮೊದಲೆಲ್ಲ ರಾತ್ರಿಯ ಊಟಕ್ಕೆ ಅನ್ನ ಸಾಮಾನ್ಯವಾಗಿತ್ತು. ರಾಗಿ ಮುದ್ದೆ, ಜೋಳದ ರೊಟ್ಟಿ ಏನೇ ತಿಂದರೂ ಸ್ವಲ್ಪ ಅನ್ನದ ಊಟ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ದೀರ್ಘ ಸಮಯ ಚೆನ್ನಾಗಿ ನಿದ್ರೆ ಮಾಡಲು ಅನ್ನ ಸಹಕಾರಿಯಾಗುತ್ತದೆ.
• ವಾಲ್ ನಟ್ (Walnut)
ನಿದ್ರೆಯ ಗುಣಮಟ್ಟ ಚೆನ್ನಾಗಿರಲು ರಾತ್ರಿ ಮಲಗುವ ಮುನ್ನ ವಾಲ್ ನಟ್ ಸೇವನೆ ಮಾಡುವುದು ಒಳ್ಳೆಯದು. ನಿದ್ರೆಗೆ ಕಾರಣವಾಗುವ ಹಾರ್ಮೋನ್ ಆಗಿರುವ ಮೆಲಟೋನಿನ್ ಅನ್ನು ಇದು ಬಿಡುಗಡೆ ಮಾಡುತ್ತದೆ. ತೀವ್ರ ನಿದ್ರಾಹೀನತೆ (Insomnia) ಸಮಸ್ಯೆ ಉಳ್ಳವರಿಗೆ ಮೆಲಟೋನಿನ್ ನೀಡಲಾಗುತ್ತದೆ. ಆದರೆ, ಈ ಅಂಶ ವಾಲ್ ನಟ್ ನಲ್ಲಿ ನೈಸರ್ಗಿಕವಾಗಿಯೇ ಲಭಿಸುತ್ತದೆ.
• ಪನೀರ್ (Paneer)
ರಾತ್ರಿ ಸಮಯದಲ್ಲಿ ಪನೀರ್ ಸೇವನೆ ಮಾಡಲು ಹೆದರುವವರಿದ್ದಾರೆ. ಆದರೆ, ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ನಿದ್ರೆಯ ಸಮಸ್ಯೆ ಉಳ್ಳವರಂತೂ ಇದನ್ನು ಸೇವನೆ ಮಾಡುವುದು ಉತ್ತಮ ಪರಿಪಾಠ. ಇದರಲ್ಲಿ ಕೆಸೀನ್ ಎನ್ನುವ ಅಂಶವಿರುತ್ತದೆ. ಇದು ಮಾಂಸಖಂಡಗಳ ರಿಪೇರಿ ಹಾಗೂ ಬೆಳವಣಿಗೆಗೆ ಕಾರಣವಾಗುತ್ತದೆ. ಕೆಸೀನ್ ದೇಹದ ನೋವು ನಿವಾರಿಸುವ ಗುಣ ಹೊಂದಿದೆ.
• ಓಟ್ಸ್ (Oats)
ಓಟ್ಸ್ ನಲ್ಲಿ ಕಾರ್ಬೋಹೈಡ್ರೇಟ್ (Carbohydrates) ಪ್ರಮಾಣ ಹೆಚ್ಚಿರುತ್ತದೆ. ಇದನ್ನು ಸೇವನೆ ಮಾಡಿದರೆ ತೂಕಡಿಕೆ (Drowsiness) ಗ್ಯಾರೆಂಟಿ. ಹಾಸಿಗೆಗೆ ಹೋಗುವ ಮುನ್ನ ಸೇವನೆ ಮಾಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.