
ಈಗ ಎಲ್ಲೆಲ್ಲೂ ಡೆಂಗ್ಯೂ ಮಹಾಮಾರಿಯ ಭಯ ಶುರುವಾಗಿದೆ. ಕರ್ನಾಟಕಕ್ಕೂ ಕಾಲಿಟ್ಟಿರುವ ಈ ಮಹಾಮಾರಿ ಇದಾಗಲೇ ಕೆಲವರ ಬಲಿ ಪಡೆದಿದೆ. ಸ್ವಲ್ವ ಜ್ವರ ಬಂದರೂ ಡೆಂಗ್ಯೂ ಬಂದಿದೆ ಎಂಬ ಭೀತಿ ಎದುರಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಈಗ ಜ್ವರ, ನೆಗಡಿ, ಕೆಮ್ಮು ಎಲ್ಲವೂ ಮಾಮೂಲಾಗಿದೆ. ಆದರೆ ಡೆಂಗ್ಯೂ ಭೀತಿಯಿಂದ ಏನೇ ಸಮಸ್ಯೆ ಕಾಡಿದರೂ ಅದು ಡೆಂಗ್ಯುನೇ ಇರಬಹುದು ಎನ್ನುವಷ್ಟರ ಮಟ್ಟಿಗೆ ಜನರು ಜರ್ಜಿತರಾಗಿದ್ದಾರೆ. ಯಾವುದೇ ಸಮಸ್ಯೆ ಬಂದ ಮೇಲೆ ಅದನ್ನು ಹೋಗಲಾಡಿಸುವ ಬದಲು ಸಮಸ್ಯೆಯನ್ನು ಬಾರದಂತೆ ತಡೆಯುವುದೇ ಒಳ್ಳೆಯದು. ಅದೇ ರೀತಿ ಡೆಂಗ್ಯೂ ಹತ್ತಿರ ಸುಳಿಯದಂತೆ ಅಥವಾ ಡೆಂಗ್ಯೂ ಜ್ವರ ಬಂದರೆ ಅದನ್ನು ಹೋಗಲಾಡಿಸಲು ಸುಲಭದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಖ್ಯಾತ ವೈದ್ಯೆ ಡಾ.ಗೌರಿ ಅವರು ತಿಳಿಸಿಕೊಟ್ಟಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಭಾರತ ತಲೆತಲಾಂತರಗಳಿಂದ ಆಯುರ್ವೇದಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಇದೀಗ ವಿದೇಶಗಳಲ್ಲಿಯೂ ಭಾರತದ ಸಾಂಪ್ರದಾಯಿಕ ಔಷಧಗಳ ಮೊರೆ ಹೋಗುತ್ತಿದ್ದಾರೆ. ಆದರೆ ಭಾರತೀಯರಿಗೆ ಮಾತ್ರ ಇಂಗ್ಲಿಷ್ ಮೆಡಿಸಿನ್ ಮೇಲೆ ವ್ಯಾಮೋಹ ಸ್ವಲ್ಪ ಹೆಚ್ಚು. ಆದರೆ ನಮ್ಮಲ್ಲಿಯೇ ಸಿಗುವ ಗಿಡ ಮೂಲಿಕೆಗಳಿಂದಲೇ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದರಲ್ಲಿ ಒಂದು ಅದ್ಭುತ ಗಿಡ ಅಥವಾ ಬಳ್ಳಿ ಎಂದರೆ ಅಮೃತಬಳ್ಳಿ.
ಹಾರ್ಟ್ ಬ್ಲಾಕೇಜ್ ತೆಗೆಯುವ ಅದ್ಭುತ ಔಷಧ ಈ ಕಷಾಯ: ಹೃದಯ ಸಮಸ್ಯೆಗಳಿಗೆ ರಾಮಬಾಣ- ಡಾ.ಗೌರಿ ಮಾಹಿತಿ
ಅಮೃತಬಳ್ಳಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಯಾವುದೇ ರೀತಿಯ ಜ್ವರ ಬಂದಾಗ ಅಥವಾ ಡೆಂಗ್ಯೂ ಬಾರದಂತೆ ಈ ಬಳ್ಳಿಯನ್ನು ಉಪಯೋಗಿಸಿಕೊಂಡು ಯಾವ ರೀತಿಯಲ್ಲಿ ಔಷಧ ತಯಾರಿಸಬಹುದು ಎಂದು ಡಾ.ಗೌರಿ ಹೇಳಿಕೊಟ್ಟಿದ್ದಾರೆ. ಇದೊಂದು ಕಷಾಯ. ಇದಕ್ಕೆ ಬೇಕಿರುವುದು ಅಮೃತಬಳ್ಳಿಯ ಬಲಿತಿರುವ ಕಾಂಡ, ಬೇವಿನ ಕಡ್ಡಿ, ಹಸಿ ಶುಂಠಿ, ನಿಂಬೆ ರಸ, ಜೇನುತುಪ್ಪ. ಮಾಡುವ ವಿಧಾನ: ಅಮೃತಬಳ್ಳಿಯ ಬಲಿತಿರುವ ಕಾಂಡ, ಬೇವಿನ ಕಡ್ಡಿ ಮತ್ತು ಶುಂಠಿಯನ್ನು ಜಜ್ಜಿ ಅದನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಇದು ಡೆಂಗ್ಯೂ ಮಾತ್ರವಲ್ಲದೇ ಎಲ್ಲಾ ರೀತಿಯ ಜ್ವರಕ್ಕೂ ರಾಮಬಾಣ ಎನ್ನುತ್ತಾರೆ ವೈದ್ಯೆ. ವಾರಕ್ಕೊಮ್ಮೆ ಸುಮ್ಮನೇ ಈ ಕಷಾಯ ಕುಡಿಯುತ್ತಾ ಬನ್ನಿ, ಜ್ವರ ಹತ್ತಿರ ಸುಳಿಯುವುದಿಲ್ಲ ಎನ್ನುವುದು ಅವರ ಮಾತು. ಹಾಗೆಯೇ ಡೆಂಗ್ಯೂ ಕುರಿತು ಅವರು ಕೆಲವು ಮಾಹಿತಿ ನೀಡಿದ್ದಾರೆ. ಡೆಂಗ್ಯೂ ಲಕ್ಷಣ ಎಂದರೆ, ಮಾಮೂಲು ಜ್ವರ ಬಂದಾಗ ನೆಗಡಿ, ಕೆಮ್ಮು ಎಲ್ಲಾ ಇರತ್ತೆ. ಆದರೆ ಡೆಂಗ್ಯೂ ಆಗಿದ್ದರೆ, ಈ ಲಕ್ಷಣ ಇರಲ್ಲ. ಬದಲಿಗೆ ಮೈ ಕೈ ನೋವು, ಹೊಟ್ಟೆ ನೋವು ಬಂದು ಜ್ವರ ಬರತ್ತೆ. ಇದೇ ವೇಳೆ ತಲೆನೋವು ವಿಪರೀತ ಆಗುತ್ತದೆ.
ಏನೇನೋ ಔಷಧ ತೆಗೆದುಕೊಂಡ ಮೇಲೆ ಜ್ವರ ಹೊರಟುಹೋಗಬಹುದು. ಆದರೆ ಎರಡು ದಿನ ಬಿಟ್ಟು ಮೈಮೇಲೆ ರ್‍ಯಾಶಸ್ ಬಂದರೆ, ಮೈ ಕೈ ನೋವು ಬಂದರೆ, ಹೊಟ್ಟೆ ನೋವು ವಿಪರೀತವಾಗಿ ವಾಂತಿ ಶುರುವಾದರೆ ಅದು ಡೆಂಗ್ಯೂ ಲಕ್ಷಣ. ಆಗ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು. ಇದು ಡೆಂಗ್ಯೂ ಜ್ವರನೇ ಅಗಿದ್ದರೆ, ಬೇರೆ ಅಂಗಾಂಗಳನ್ನು ಡ್ಯಾಮೇಜ್ ಮಾಡುತ್ತವೆ. ಯಕೃತ್ತು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. . ಲಿವರ್ ಮೇಲೆ ಪ್ರಭಾವ ಬೀರಿದರೆ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಶ್ವಾಸಕೋಶದ ಮೇಲೆ ಪರಿಣಾಮ ಬೀರಿದರೆ ಉಸಿರಾಟದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದಿದ್ದಾರೆ ವೈದ್ಯೆ.
ಇದು ಬರುವುದು ಸೊಳ್ಳೆಯಿಂದ. ಈ ಸೊಳ್ಳೆಯ ಮೇಲೆ ಕಪ್ಪು ಗೀರು ಇರುತ್ತದೆ. ಇದನ್ನು ಟೈಗರ್ ಮಾಸ್ಕಿಟೋ ಎಂದು ಕರೆಯುತ್ತಾರೆ. ಇದು ಕಚ್ಚುವುದು ರಾತ್ರಿಯಲ್ಲಲ್ಲ, ಬದಲಿಗೆ ಹಗಲಿನಲ್ಲಿ. ಆದ್ದರಿಂದ ಅಮೃತಬಳ್ಳಿಯ ಕಷಾಯ ಮಾಡಿ ಕುಡಿಯುತ್ತಾ ಬನ್ನಿ ಎಂದಿದ್ದಾರೆ. ಅಮೃತಬಳ್ಳಿಯಲ್ಲಿ ಯಾವುದೇ ವಿಧವಾದ ಜ್ವರ ಇರಲಿ, ಅದು ಹೋಗುತ್ತದೆ. ಇಂಥದ್ದೇ ಜ್ವರ ಎಂದು ತಿಳಿಯಬೇಕು ಎಂದೇನೂ ಇಲ್ಲ. ಅಮೃತಬಳ್ಳಿಯಲ್ಲಿ ಔಷಧೀಯ ಗುಣ ಹೆಚ್ಚು ಇದೆ. ಬೇವಿನಲ್ಲಿ ಕಹಿ ಇರುವ ಅಂಶ ಬಿಟ್ಟರೆ, ಅದು ಕೂಡ ಆರೋಗ್ಯಕ್ಕೆ ಅಮೃತವೇ. ಬೇವಿನ ಕಡ್ಡಿಯಲ್ಲಿ ವೈರಲ್ ಫೀವರ್, ಟೈಪಾಯ್ಡ್ ಜ್ವರ, ಮಲೇರಿಯಾ, ಡೆಂಗ್ಯೂ ಎಂಥದ್ದೇ ಜ್ವರ ಇದ್ದರೂ ಅದನ್ನು ಹೋಗಲಾಡಿಸುತ್ತದೆ. ಶುಂಠಿಯಲ್ಲಿ ಶ್ವಾಸಕೋಶದ ಸಮಸ್ಯೆಯನ್ನು ಹೋಗಲಾಡಿಸುವ ಶಕ್ತಿ ಇದೆ. ಆದ್ದರಿಂದ ಅವುಗಳ ಮಿಶ್ರಣ ಈ ಕಷಾಯ.
ಕೆಮ್ಮು, ಶೀತ, ಅಲರ್ಜಿ, ಕ್ರಿಮಿ ಕಡಿತ... ಅಬ್ಬಬ್ಬಾ ದೊಡ್ಡಪತ್ರೆ ಪ್ರಯೋಜನ ಒಂದೆರಡಲ್ಲ... ಅದಿತಿ ಪ್ರಭುದೇವ ಟಿಪ್ಸ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.