ರಕ್ತ ಸಿಹಿ ಇರೋರಿಗೆ ಸೊಳ್ಳೆ ಕಚ್ಚೋದು ಹೆಚ್ಚು ಅಂತಾರಲ್ಲ, ಅದು ಹೌದಾ?

By Bhavani Bhat  |  First Published Jul 19, 2024, 2:16 PM IST

'ಎಲ್ಲಿ ಹೋದರೂ ಸೊಳ್ಳೆಗಳು ನನ್ನನ್ನೇ ಹುಡುಕಿಕೊಂಡು ಬಂದು ಕಚ್ಚುತ್ತವೆ. ಗುಂಪಿನ ನಡುವೆ ಇದ್ದರೂ ಎಲ್ಲರನ್ನು ಬಿಟ್ಟು ನನಗೇ ಕಚ್ಚುತ್ತವೆ. ಸಾಕಾಗಿಹೋಗಿದೆ' ಎಂದು ಕೆಲವರು ಅಲವತ್ತುಕೊಳ್ಳುವುದನ್ನು ನೀವು ನೋಡಿರಬಹುದು. ಅದಕ್ಕೂ ಕಾರಣವಿದೆ!


ಈಗ ಡೆಂಗೆ ಜ್ವರ, ಮಲೇರಿಯಾ, ಚಿಕುನ್ ಗುನ್ಯದಿಂದಾಗಿ ಎಲ್ಲೆಲ್ಲೂ ಸೊಳ್ಳೆಗಳದೇ ಮಾತು. ಮಳೆಗಾಲದಲ್ಲಿ ಸೊಳ್ಳೆಗಳು ಈ ಭೂಮಿಯನ್ನು ಆಳುತ್ತವೆ. ಕೆಲವರಿಗೆ ಈ ಸೊಳ್ಳೆಗಳ ಕಾಟ ಅಧಿಕ. ಕೆಲವು ವ್ಯಕ್ತಿಗಳು ತಾವು ಇತರರಿಗಿಂತ ಹೆಚ್ಚಾಗಿ ಸೊಳ್ಳೆಗಳಿಂದ ಕಡಿತಕ್ಕೊಳಗಾಗುವುದನ್ನು ಗಮನಿಸಿರಬಹುದು. ಇದು ಕೇವಲ ದುರದೃಷ್ಟದ ವಿಷಯವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಸೊಳ್ಳೆ ಕಡಿತವನ್ನು ತಡೆಗಟ್ಟಲು ಅನುಕೂಲಕರ. ಸೊಳ್ಳೆಗಳು ಕೆಲವರ ಮೇಲೆ ಆಸಕ್ತಿ ತೋರುವುದಿಲ್ಲ. ಇದಕ್ಕೆ ಹಲವು ಕಾರಣ. ದೇಹದ ಉಷ್ಣಾಂಶದಲ್ಲಿನ ವ್ಯತ್ಯಾಸಗಳು, ಚರ್ಮ ಮತ್ತು ಉಸಿರಾಟದಿಂದ ಬಿಡುಗಡೆಯಾದ ಪರಿಮಳಗಳು ಕಾರಣಗಳಲ್ಲಿ ಮುಖ್ಯವಾಗಿವೆ. ನಿಮ್ಮ ಆಹಾರ ಕೂಡ ನಿಮ್ಮ ದೇಹದ ವಾಸನೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.      
                                                               
ಸೊಳ್ಳೆಗಳು ಕೆಲವು ಜನರತ್ತ ಏಕೆ ಜಾಸ್ತಿ ಆಕರ್ಷಿತವಾಗುತ್ತವೆ ಎಂಬುದನ್ನು ಇದು ಹಲವು ರೀತಿಯಲ್ಲಿ ವಿವರಿಸಬಹುದು. ಸೊಳ್ಳೆಗಳು ಉತ್ತಮ ದೃಷ್ಟಿಯನ್ನು ಹೊಂದಿರುತ್ತವೆ, ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ. ಅವುಗಳು ಮುಖ್ಯವಾಗಿ ಕಪ್ಪು, ಕಡು ನೀಲಿ ಅಥವಾ ಕೆಂಪು ಬಟ್ಟೆಯತ್ತ ಹೆಚ್ಚು ಆಕರ್ಷಿತವಾಗುತ್ತವೆ. ಇನ್ನೊಂದು ವಿಷಯವೆಂದರೆ ನಾವು ಹೊರಸೂಸುವ ಕಾರ್ಬನ್ ಡೈಆಕ್ಸೈಡ್.

ವೇಗವಾದ ಚಯಾಪಚಯ ಮತ್ತು ದೊಡ್ಡ ದೇಹವನ್ನು ಹೊಂದಿರುವ ಜನರು, ಹಾಗೆಯೇ ಗರ್ಭಿಣಿಯರು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೊರಬಿಡುತ್ತಾರೆ. ಕಾರ್ಬನ್ ಡೈಆಕ್ಸೈಡ್ ಸೊಳ್ಳೆಗಳನ್ನು ಸೆಳೆಯುವ ಮುಖ್ಯ ಧಾತು. ಚರ್ಮ ಅಥವಾ ಉಸಿರಾಟದಿಂದ ಬರುವ ಇತರ ವಾಸನೆಗಳು ಕೂಡ ಸೊಳ್ಳೆಗಳನ್ನು ಸೆಳೆಯುತ್ತವೆ. ವಿವಿಧ ಪ್ರಮಾಣದ ಲ್ಯಾಕ್ಟಿಕ್ ಆಮ್ಲ ದೈಹಿಕ ಚಟುವಟಿಕೆಗಳ ಸಮಯದಲ್ಲಿ ಬಿಡುಗಡೆಯಾಗುತ್ತದೆ. ಅಸಿಟೋನ್ (ಉಸಿರಾಟದ ಸಮಯದಲ್ಲಿ ಬಿಡುಗಡೆಯಾಗುತ್ತದೆ), ಮತ್ತು ಎಸ್ಟ್ರಾಡಿಯೋಲ್ (ಈಸ್ಟ್ರೊಜೆನ್ ಒಡೆದುಹೋದಾಗ ಇದು ರೆಡಿಯಾಗುತ್ತದೆ) ಇವು ಸೊಳ್ಳೆಗಳನ್ನು ಆಕರ್ಷಿಸಬಹುದು. 

Latest Videos

undefined

ಮಾರ್ಕೆಟಿಗೆ ಬಂದಿದೆ ನಿಮ್ಮನ್ನ ಸಾವಿನ ದವಡೆಗೆ ನೂಕುವ ನಕಲಿ ಪನೀರ್, ಫೇಕೋ, ರಿಯಲ್ಲೋ?

ನಮ್ಮ ದೇಹದ ಉಷ್ಣತೆಯು ಸಹ ಆಕರ್ಷಣೆಗೆ ಮತ್ತೊಂದು ಕಾರಣ. ಸೊಳ್ಳೆಗಳು ಗರ್ಭಿಣಿಯರತ್ತ ಆಕರ್ಷಿತವಾಗಬಹುದು. ಏಕೆಂದರೆ ಇವರ ದೇಹವು ಹೆಚ್ಚು ಬಿಸಿಯಾಗಿರುತ್ತದೆ. ಸೊಳ್ಳೆಗಳು ನಮ್ಮನ್ನು ಕಚ್ಚಿದಾಗ ಮತ್ತು ಝಿಕಾ ಅಥವಾ ಡೆಂಗ್ಯೂ ವೈರಸ್ ಹರಡಿದಾಗ, ವೈರಸ್ ನಮ್ಮ ದೇಹದ ವಾಸನೆಯನ್ನು ಬದಲಾಯಿಸುತ್ತದೆ ಎಂದು ಇತ್ತೀಚಿನ ಅಧ್ಯಯನವು ಹೇಳುತ್ತದೆ. ಇದು ಅಸಿಟೋಫೆನೋನ್ ಎಂಬ ರಾಸಾಯನಿಕ ಸಂಯುಕ್ತವನ್ನು ಬಿಡುಗಡೆ ಮಾಡುತ್ತದೆ. ಇದು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಅಸಿಟೋಫೆನೋನ್ ಒಂದು ಮೆಟಾಬಾಲೈಸ್ಡ್ ಆಮ್ಲ, ಇದನ್ನು ಸಾಮಾನ್ಯವಾಗಿ ಸುಗಂಧ ದ್ರವ್ಯಗಳು ಮತ್ತು ಸಾಬೂನುಗಳಲ್ಲಿ ಮತ್ತು ಆಹಾರಗಳಲ್ಲಿ ಸುವಾಸನೆಯ ಏಜೆಂಟ್ ಆಗಿ ಬಳಸಲಾಗುತ್ತದೆ.

ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುವ ಆಹಾರಗಳು 
1. ಬಾಳೆಹಣ್ಣು (Banana) :
ಒಂದು ಅಧ್ಯಯನದ ಪ್ರಕಾರ, ಮಲೇರಿಯಾವನ್ನು ಹರಡುವ ಅನಾಫಿಲಿಸ್ ಸ್ಟೆಫೆನ್ಸಿ ಮತ್ತು ಎ. ಗ್ಯಾಂಬಿಯಾ ಸೊಳ್ಳೆಗಳು ಬಾಳೆಹಣ್ಣು ತಿಂದ ಒಂದು ಗಂಟೆಯ ಅವಧಿಯಲ್ಲಿ ಮಾನವನ ಕೈ ಪರಿಮಳಕ್ಕೆ ಹೆಚ್ಚು ಆಕರ್ಷಿತವಾಗುತ್ತವೆ. 

2. ಮದ್ಯ (Alcohol)): ಆಲ್ಕೋಹಾಲ್ ಕುಡಿಯುವುದರಿಂದ ದೇಹದಲ್ಲಿನ ಬಾಷ್ಪಶೀಲ ಸಾವಯವ ಸಂಯುಕ್ತಗಳು ಹೆಚ್ಚುತ್ತವೆ. ಜರ್ನಲ್ ಆಫ್ ದಿ ಅಮೇರಿಕನ್ ಮಸ್ಕಿಟೋ ಕಂಟ್ರೋಲ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಬಿಯರ್ ಕುಡಿದ ನಂತರ ಹೆಚ್ಚು ಸೊಳ್ಳೆಗಳು ಅವರ ಮೇಲೆ ದಾಳಿ ಮಾಡುವುದನ್ನು ಕಂಡುಕೊಂಡರು. 

3. ಕೆಫೀನ್ (Caffeine): ಕಾಫಿ ಅಥವಾ ಕೆಫೀನ್-ಸಂಬಂಧಿತ ಪಾನೀಯಗಳ ಸೇವನೆಯು ಮಾನವರಲ್ಲಿ ವಾಸನೆಯನ್ನು ಮಾರ್ಪಡಿಸುತ್ತದೆ ಮತ್ತು ಸೊಳ್ಳೆಗಳನ್ನು ಆಕರ್ಷಿಸುವಂತೆ ಮಾಡುತ್ತದೆ ಎಂದು ಅಧ್ಯಯನವು ಸೂಚಿಸುತ್ತದೆ. ಇದು ಕೆಫೀನ್ ವ್ಯಸನಿಗಳಲ್ಲಿ ಹೆಚ್ಚು ಸೊಳ್ಳೆ ಕಡಿತಕ್ಕೆ ಕಾರಣವಾಗಬಹುದು.

ದಿನದಲ್ಲಿ ಒಮ್ಮೆಯಾದರೂ ನಗಲೇಬೇಕು! ಹೀಗೊಂದು ಕಾನೂನು ಮಾಡಿದ ದೇಶ ಯಾವುದು, ಯಾಕೆ ನೋಡಿಬಿಡಿ!
 

click me!