ಅರಿಶಿನ ಸೇವನೆ ಮಾಡೋದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ, ಕಷಾಯದಿಂದ ಹಿಡಿದು ಆಹಾರದವರೆಗೆ ಎಲ್ಲದಕ್ಕೂ ಅರಿಶಿನ ಬಳಸಬೇಕು ಎಂಬ ಮಾತನ್ನು ನೀವು ಕೇಳಿರಬಹುದು. ಆದ್ರೆ ಅರಿಶಿನವನ್ನು ಕೂಡ ಇತಿಮಿತಿಯಲ್ಲಿ ಸೇವನೆ ಮಾಡಬೇಕು. ಇಲ್ಲವೆಂದ್ರೆ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಅರಿಶಿನ ಪ್ರಮುಖ ಸ್ಥಾನ ಪಡೆಯುತ್ತದೆ. ಅನೇಕ ಮಸಾಲೆ ಅಡುಗೆಗೆ ಅರಿಶಿನ ಬಳಸುತ್ತೇವೆ. ಅರಿಶಿನವನ್ನು ಬರೀ ಅಡುಗೆಗೆ ಮಾತ್ರವಲ್ಲ ಔಷಧಿ ರೂಪದಲ್ಲಿಯೂ ಬಳಕೆ ಮಾಡಲಾಗುತ್ತದೆ. ಸಣ್ಣಪುಟ್ಟ ಗಾಯವಾದಾಗ ಸೋಂಕು ಕಡಿಮೆಯಾಗ್ಲಿ ಎನ್ನುವ ಕಾರಣಕ್ಕೆ ಅರಿಶಿನ ಹಚ್ಚಲಾಗುತ್ತದೆ. ಅರಿಶಿನ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಪ್ರಾಚೀನ ಕಾಲದಿಂದಲೂ ಅರಿಶಿನ (Turmeric) ವನ್ನು ಆಯುರ್ವೇದ (Ayurveda) ದಲ್ಲಿ ಬಳಸಲಾಗುತ್ತಿದೆ. ಅರಿಶಿನದಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್, ಸತು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದೆ. ಇದು ಆರೋಗ್ಯ (health) ಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಸೀಮಿತ ಪ್ರಮಾಣದಲ್ಲಿ ಅರಿಶಿನವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅರಿಶಿನ ರೋಗ ನಿರೋಧಕ ಶಕ್ತಿ (Immunity) ಯನ್ನು ಹೆಚ್ಚಿಸುತ್ತದೆ. ಆದರೆ ಅರಿಶಿನವನ್ನು ಯಾವಾಗ್ಲೂ ಅತಿಯಾಗಿ ಸೇವನೆ ಮಾಡಬಾರದು. ಇದು ಹಲವು ವಿಧಗಳಲ್ಲಿ ನಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅತಿಯಾಗಿ ಅರಿಶಿನ ಸೇವನೆ ಮಾಡುವುದ್ರಿಂದ ಯಾವೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೆವೆ.
Ayurveda Tips: ಒಂದು ವರ್ಷ ಹಳೆ ಬೆಲ್ಲ ಆರೋಗ್ಯಕ್ಕೆ ಉತ್ತಮ?
ಅತಿಯಾದ ಅರಿಶಿನ ತಿಂದ್ರೆ ನಷ್ಟವೇನು? :
ಹೊಟ್ಟೆ ಸಮಸ್ಯೆ : ಅರಿಶಿನವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಕೆಲವೊಮ್ಮೆ ವಾಯು, ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.
ಅತಿಸಾರ ಅಥವಾ ವಾಂತಿ : ಅರಿಶಿನದಲ್ಲಿ ಕಂಡು ಬರುವ ಅಂಶಗಳಲ್ಲಿ ಕರ್ಕ್ಯುಮಿನ್ ಒಂದು. ಈ ಕರ್ಕ್ಯುಮಿನ್ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಹಲವು ಬಾರಿ ಭೇದಿ ಅಥವಾ ವಾಂತಿ ಸಮಸ್ಯೆಯೂ ಶುರುವಾಗುತ್ತದೆ.
ಯಕೃತ್ತಿಗೆ ಹಾನಿ : ಯಕೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಅರಿಶಿನ ಸೇವನೆಯನ್ನು ಅತಿ ಮಾಡಬಾರದು. ಇದನ್ನು ಅತಿಯಾಗಿ ಸೇವಿಸುವುದರಿಂದ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆ ಡಬಲ್ ಆಗುವ ಸಂಭವವಿರುತ್ತದೆ.
ಚರ್ಮ ಸಮಸ್ಯೆ : ಅರಿಶಿನವನ್ನು ಅತಿಯಾಗಿ ಸೇವಿಸುವುದರಿಂದ ಚರ್ಮದ ದದ್ದುಗಳಂತಹ ಸಮಸ್ಯೆಗಳೂ ಉಂಟಾಗಬಹುದು. ಆದ್ರೆ ಅರಿಶಿನ ಸೇವನೆಯಿಂದ ಚರ್ಮದ ಸಮಸ್ಯೆ ಕಾಡುವುದು ಬಹಳ ಅಪರೂಪ.
ಮೂತ್ರಪಿಂಡದ ಕಲ್ಲು ಕಾಡಬಹುದು : ಅರಿಶಿನದಲ್ಲಿ ಆಕ್ಸಲೇಟ್ ಅಧಿಕವಾಗಿದೆ. ಇದು ಕ್ಯಾಲ್ಸಿಯಂನೊಂದಿಗೆ ಸೇರಿಕೊಂಡು ಕಲ್ಲುಗಳನ್ನು ರೂಪಿಸುತ್ತದೆ. ಅರಿಶಿನವನ್ನು ಹೆಚ್ಚು ತಿಂದರೆ ಕಿಡ್ನಿ ಸ್ಟೋನ್ ಸಮಸ್ಯೆಯೂ ಉಂಟಾಗುತ್ತದೆ.
ಅರಿಶಿನ ಅತಿಯಾದ್ರೆ ಅಲರ್ಜಿ : ಅರಿಶಿನದಲ್ಲಿನ ಕೆಲವು ಸಂಯುಕ್ತಗಳು ಅಲರ್ಜಿಯ ತೊಂದರೆಗೆ ಕಾರಣವಾಗುತ್ತದೆ. ಆರೋಗ್ಯಕ್ಕೆ ಅರಿಶಿನ ಒಳ್ಳೆಯದಾದ್ರೂ ಅನೇಕ ಆರೋಗ್ಯ ಅಪಾಯಗಳು ಇದ್ರಲ್ಲಿದೆ.
ORGANIC FOOD: ಸಾವಯವ ಆಹಾರ ಖರೀದಿಸೋ ಮುನ್ನ ಈ ಎಚ್ಚರ!
ತಲೆನೋವು ಮತ್ತು ಚಡಪಡಿಕೆ : ಹೆಚ್ಚಿನ ಪ್ರಮಾಣದಲ್ಲಿ ಅರಿಶಿನವನ್ನು ತೆಗೆದುಕೊಳ್ಳುವುದರಿಂದ ತಲೆನೋವು ಮತ್ತು ಕೆಲವೊಮ್ಮೆ ಹೆದರಿಕೆ, ಚಡಪಡಿಕೆಯಂತಹ ಸಮಸ್ಯೆಗಳು ನಿಮ್ಮನ್ನು ಕಾಡುವ ಸಂಭವವಿರುತ್ತದೆ. ಇದು ಎಲ್ಲ ಜನರಲ್ಲಿ ಕಂಡು ಬರುತ್ತದೆ ಎಂದಲ್ಲ. ಆದ್ರೆ ಅಧ್ಯಯನ ಒಂದರ ಪ್ರಕಾರ, ಅರಿಶಿನದ ಅತಿಯಾದ ಸೇವನೆಯಿಂದ ತಲೆನೋವು ಮತ್ತು ಚಡಪಡಿಕೆ ಅನುಭವಿಸುವವರು ಅನೇಕರಿದ್ದಾರೆ.
ಕಬ್ಬಿಣ ಹೀರಿಕೊಳ್ಳುವ ಸಮಸ್ಯೆ : ನಮ್ಮ ದೇಹಕ್ಕೆ ಕಬ್ಬಿಣದ ಅಂಶವೂ ಅಗತ್ಯ. ಕಬ್ಬಿಣದ ಕೊರತೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅರಿಶಿನದ ಅತಿಯಾದ ಸೇವನೆಯು ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಈಗಾಗಲೇ ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ ಅರಿಶಿನವನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
ಅರಿಶಿನವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? : ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಒಂದು ಚಮಚ ಅರಿಶಿನವನ್ನು ತಿನ್ನುವುದು ಜನರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ನೀವು ಪ್ರತಿ ದಿನ ಒಂದು ಚಮಚಕ್ಕಿಂತ ಹೆಚ್ಚು ಅರಿಶಿನವನ್ನು ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.