ಕೊರೋನಾ ವೈರಸ್ ಮಾನವ ನಿರ್ಮಿತ, ಚೀನಾದ ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ!

By Vinutha PerlaFirst Published Dec 5, 2022, 4:17 PM IST
Highlights

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೋನಾ ವೈರಸ್ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಕೋವಿಡ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ, ಮಾನವ ನಿರ್ಮಿತ ಎಂಬುದಾಗಿ ಚೀನಾದ ವುಹಾನ್‌ ಲ್ಯಾಬ್ ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದೆರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕಣ್ಣಿಗೆ ಕಾಣದ ಪುಟ್ಟ ವೈರಸ್ ಕೊರೋನಾ ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ಜನರು ಜ್ವರ, ಕೆಮ್ಮು, ಮೈ ಕೈ ನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಹೊರಲೋಕವನ್ನೇ ಕಾಣದೆ ಮೃತಪಟ್ಟರು. ವೈರಸ್ ಬೇಕಾಬಿಟ್ಟಿ ಹರಡಿ ಕರ್ಫ್ಯೂ, ಲಾಕ್‌ಡೌನ್‌ನ್ನು ಸಹ ಘೋಷಿಸಲಾಯಿತು. ಸಾಮಾಜಿಕ ಅಂತರ (Social distance) ಪಾಲನೆ, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಯಿತು. ಜನರು ಮನೆಯೊಳಗೇ ಬಂಧಿಯಾದರು. ಒತ್ತಡ (Pressure), ಮಾನಸಿಕ ಖಿನ್ನತೆ (Anxiety) ಮೊದಲಾದ ಸಮಸ್ಯೆಗಳಿಂದ ಬಳಲಿದರು. ಜಗತ್ತಿನ ಆರ್ಥಿಕ ವ್ಯವಸ್ಥೆಯು ಬುಡಮೇಲುಗೊಂಡಿತು. ಅದೆಷ್ಟೋ ಮಂದಿ ಹೊಟ್ಟೆಗೆ ಸರಿಯಾಗಿ ಆಹಾರ (Food) ಸಿಗದೆ ಒದ್ದಾಡಿದರು. ಕಾಯಿಲೆಯ ಜೊತೆಗೆ ಬಡತನ ಜಗತ್ತನ್ನು ಕಿತ್ತು ತಿಂದು ಹಾಕಿತು. ಕೊರೋನಾ ಅಂದ್ರೆ ಜನರು ನಿದ್ದೆಯಲ್ಲೂ ಬೆಚ್ಚಿಬೀಳುವಂತಾಗಿದೆ. ಈ ಮಧ್ಯೆ ಚೀನಾದ ವುಹಾನ್ ಲ್ಯಾಬ್‌ನಲ್ಲಿ ಕೆಲಸ ಮಾಡಿದ್ದ ವಿಜ್ಞಾನಿಯೊಬ್ಬರು (Scientist) ಆತಂಕಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಕೊರೋನಾ, ಮಾನವ ನಿರ್ಮಿತ ವೈರಸ್ ಎಂದ ವಿಜ್ಞಾನಿ
ವಿಶ್ವವನ್ನೇ ಮಾರಣಾಂತಿಕವಾಗಿ ಕಾಡಿದ, ಲಕ್ಷಾಂತರ ಜನರ ಜೀವ ಬಲಿಪಡೆದ ಕೊರೋನಾ ಸಾಂಕ್ರಾಮಿಕ ಪ್ರಕೃತಿಯಿಂದ ಬಂದಿದ್ದಲ್ಲ, ಮಾನವ ನಿರ್ಮಿತ ವೈರಸ್ (Man made virus) ಎಂದು ವಿಜ್ಞಾನಿಯೊಬ್ಬರು ಹೇಳಿದ್ದರು. ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕಾ ಮೂಲದ ವಿಜ್ಞಾನಿ ಹೀಗೆ ತಿಳಿಸಿದ್ದಾರೆ. ಚೀನಾದ ವುಹಾನ್‌ನಲ್ಲಿರುವ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಯುಎಸ್ ಮೂಲದ ವಿಜ್ಞಾನಿ ಆಂಡ್ರ್ಯೂ ಹಫ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೊರೋನಾ ವೈರಸ್ ಮಾನವ ನಿರ್ಮಿತ ವೈರಸ್ ಆಗಿದ್ದು, ಅದು ಚೀನಾದ ವುಹಾನ್ ನಲ್ಲಿರುವ ವೈರಾಣು ಸಂಶೋಧನಾ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂದು ಅದೇ ಲ್ಯಾಬ್ ನಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದ ಹಫ್ ಹೇಳಿದ್ದಾರೆ.

China: ಚೀನಾದಲ್ಲಿ ಕೊರೋನಾ ರೌದ್ರ ನರ್ತನ: ಮತ್ತೆ ಲಾಕ್ ಡೌನ್, ದಂಗೆ ಎದ್ದ ಜನ

ಚೀನಾದ ವೈರಸ್ ಸಂಶೋಧನೆಗೆ ಅಮೆರಿಕ ಸರ್ಕಾರದಿಂದ ಧನಸಹಾಯ
ಇತ್ತೀಚಿನ ಪುಸ್ತಕ, 'ದಿ ಟ್ರೂತ್ ಎಬೌಟ್ ವುಹಾನ್‌'ನಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹಫ್ ಅವರು ಚೀನಾ ಈ ಮಾರಕ ಸಾಂಕ್ರಾಮಿಕ ರೋಗದ ಸೃಷ್ಟಿಕರ್ತ ಎಂದು ಹೇಳಿದ್ದಾರೆ. ಮತ್ತೊಂದು ಹೇಳಿಕೆಯಲ್ಲಿ ಚೀನಾದ ಈ ವೈರಸ್ ಸಂಶೋಧನೆಗೆ ಅಮೆರಿಕ ಸರ್ಕಾರವೇ ಧನಸಹಾಯ ಒದಗಿಸಿದ್ದ ಆತಂಕಕಾರಿ ವಿಚಾರವನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಆಂಡ್ರ್ಯೂ ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು (Pandemic) ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ.

'ಚೀನಾ ಪ್ರಯೋಗಾಲಯಗಳು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಹೊಂದಿಲ್ಲ. ಸರಿಯಾದ ಜೈವಿಕ ಸುರಕ್ಷತೆ ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಂಡಿರದ ಕಾರಣ ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ವೈರಸ್ ಸೋರಿಕೆಗೆ ಕಾರಣವಾಯಿತು' ಎಂದು ಆಂಡ್ರ್ಯೂ ಹಫ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಮಾತ್ರವಲ್ಲ ಇದು ದೇಶಿಯವಾಗಿ ವಿನ್ಯಾಸಗೊಳಿಸಲಾದ ರೋಗದ ತಳಿ ಎಂದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು ಎಂದು ಪುಸ್ತಕದಲ್ಲಿ ಬರೆದಿದ್ದಾರೆ. 

ಕರೋನಾ ನಂತರ ದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ ಈ ರೋಗ, ಎಚ್ಚರವಿರಲಿ!

ಒಂದು ದಶಕಕ್ಕೂ ಹೆಚ್ಚು ಕಾಲ, ಸಂಸ್ಥೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ನಿಂದ ಧನಸಹಾಯದೊಂದಿಗೆ ಬಾವಲಿಗಳಲ್ಲಿನ ಹಲವಾರು ಕರೋನವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ. ಮಾತ್ರವಲ್ಲ ವುಹಾನ್ ಲ್ಯಾಬ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. NIH ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಗೆ ಜವಾಬ್ದಾರರಾಗಿರುವ ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ ಎಂದು ಹಫ್ ಹೇಳಿದ್ದಾರೆ.

ಇನ್ನು ಹಫ್ ಹೇಳಿಕೆ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವುಹಾನ್ ಲ್ಯಾಬ್ ಇದೀಗ COVID ನ ಮೂಲದ ಬಗ್ಗೆ ಬಿಸಿ ಚರ್ಚೆಗಳ ಕೇಂದ್ರಬಿಂದುವಾಗಿದೆ. ಆದರೆ ಈ ಆರೋಪಗಳನ್ನು ಚೀನಾದ ಸರ್ಕಾರಿ ಅಧಿಕಾರಿಗಳು ಮತ್ತು ಲ್ಯಾಬ್ ಕೆಲಸಗಾರರು ವೈರಸ್ ಅಲ್ಲಿ ಹುಟ್ಟಿಕೊಂಡಿದೆ ಎಂಬುದನ್ನು ತಳ್ಳಿ ಹಾಕಿದ್ದಾರೆ. 

click me!