Covid cases: ದೇಶದಲ್ಲಿ ಒಂದೇ ದಿನ 11000 ಕೋವಿಡ್‌ ಕೇಸ್‌, 29 ಮಂದಿ ಸಾವು

By Kannadaprabha News  |  First Published Apr 15, 2023, 8:22 AM IST

ಭಾರತದಲ್ಲಿ ಶುಕ್ರವಾರ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಒಂದೇ ದಿನ 11,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದು ಕಳೆದ 236 ದಿನಗಳಲ್ಲೇ ದಾಖಲಾದ ಗರಿಷ್ಠ ಪ್ರಮಾಣವಾಗಿದೆ.


ನವದೆಹಲಿ: ದೇಶದಲ್ಲಿ ಕೋವಿಡ್‌ ಅಬ್ಬರ ಮುಂದುವರೆದಿದ್ದು ಶುಕ್ರವಾರ ಒಂದೇ ದಿನ 11,109 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಕಳೆದ 236 (8 ತಿಂಗಳು) ದಿನಗಳಲ್ಲೇ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಇನ್ನು ಕೋವಿಡ್‌ ಏರಿಕೆ ಹಾಗೂ ಗುಣಮುಖರ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 49,622ಕ್ಕೆ ಏರಿಕೆಯಾಗಿದೆ. ಇದೇ ವೇಳೆ 29 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಲ್ಲಿ ಕೇರಳದ ಹಳೆಯ 9 ಸಾವಿನ ಪ್ರಕರಣಗಳು ಸೇರಿವೆ. ದೈನಂದಿನ ಹಾಗೂ ವಾರದ ಪಾಸಿಟಿವಿಟಿ ದರಗಳು ಕ್ರಮವಾಗಿ ಅತಿ ಹೆಚ್ಚು ಎನ್ನಬಹುದಾದ 5.01 ಹಾಗೂ 4.29 ರಷ್ಟುದಾಖಲಾಗಿವೆ.

ಇನ್ನು ದೇಶದಲ್ಲಿ ಈವರೆಗೆ 4.47 ಕೋಟಿ ಜನರಿಗೆ ಕೋವಿಡ್‌ ತಗುಲಿದ್ದು ಒಟ್ಟು 220.66 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳ (Vaccine) ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health ministry) ತಿಳಿಸಿದೆ. ಈ ನಡುವೆ, ರಾಜಸ್ಥಾನ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರಿಗೂ ಶುಕ್ರವಾರ ಕೊರೋನಾ ಸೋಂಕು (Corona virus) ದೃಢಪಟ್ಟಿದೆ. ಇತ್ತೀಚೆಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೂ ಸೋಂಕು ತಗುಲಿತ್ತು.

Latest Videos

undefined

Corona Virusನಿಂದಲೂ ಬರಬಹುದು ಸಾವು! ರಕ್ತದಲ್ಲಿಯೇ ಗೊತ್ತಾಗುತ್ತೆ

ಮತ್ತೆ ಕೋವಿಡ್ ಭೀತಿ, ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ
ಇತ್ತೀಚಿನ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಎಂಟು ರಾಜ್ಯಗಳು ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಇವುಗಳಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ 10ಕ್ಕೂ ಹೆಚ್ಚು ಜಿಲ್ಲೆಗಳು ಶೇಕಡಾ 10ಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ ಹೊಂದಿವೆ. ಈ ಪೈಕಿ ಮೂರು ರಾಜ್ಯಗಳು ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿವೆ (Mask compulsory). ಅವು ಯಾವುದೆಲ್ಲಾ ಅನ್ನೋ ಮಾಹಿತಿ ಇಲ್ಲಿದೆ.    

ಕೇರಳ
ಗರ್ಭಿಣಿಯರು, ವೃದ್ಧರು, ಮಕ್ಕಳು ಮತ್ತು ವಯೋಸಹಜ ಕಾಯಿಲೆ ಇರುವವರಿಗೆ ಮಾಸ್ಕ್ ಕಡ್ಡಾಯವಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಹೇಳಿದ್ದಾರೆ. ಕೇರಳದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್‌ ಸೋಂಕು ತುಸು ಹೆಚ್ಚೇ ಇದೆ. ಶನಿವಾರ ರಾಜ್ಯದಲ್ಲಿ 1,801 ಜನರಿಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ (Health minister) ವೀಣಾ ಜಾರ್ಜ್ ಶನಿವಾರ ಮಾಸ್ಕ್‌ ಕಡ್ಡಾಯಯ ಬಗ್ಗೆ ಆದೇಶ ಹೊರಡಿಸಿದ್ದಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಮತ್ತು ಮಧುಮೇಹ (Diabetes)ದಂತಹ ಜೀವನಶೈಲಿ ಕಾಯಿಲೆ ಇರುವವರಲ್ಲಿ ಹೆಚ್ಚಿನ ಸಾವುಗಳು (Death) ವರದಿಯಾಗಿವೆ ಎಂದು ಸಚಿವರು ಹೇಳಿದರು.

ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸಚಿವರು ಮಾತನಾಡಿ, ಕೋವಿಡ್ ಸಂಬಂಧಿತ ಸಾವುಗಳು ಹೆಚ್ಚಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮತ್ತು ಮಧುಮೇಹದಂತಹ ಕಾಯಿಲೆ ಇರುವವರಲ್ಲಿ ವರದಿಯಾಗುತ್ತಿವೆ. ಹೀಗಾಗಿ ಗರ್ಭಿಣಿಯರು, ವೃದ್ಧರು ಮತ್ತು ವಯೋಸಹಜ ಕಾಯಿಲೆ (Disease) ಇರುವವರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ ಎಂದಿದ್ದಾರೆ. ಕೇರಳದಲ್ಲಿ 1,801 ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದ್ದು, ಎರ್ನಾಕುಲಂ, ತಿರುವನಂತಪುರಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ಭಾರತದಲ್ಲಿ ಕೋವಿಡ್‌ನ ಮತ್ತಷ್ಟು ರೂಪಾಂತರ, ಸೋಂಕು ಹೆಚ್ಚಳ ಸಾಧ್ಯತೆ: WHO

ಪುದುಚೇರಿ: ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಪುದುಚೇರಿ ಆಡಳಿತವು ಶುಕ್ರವಾರ ಕೇಂದ್ರಾಡಳಿತ ಪ್ರದೇಶದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಕೊರೋನಾ ವೈರಸ್ ಪ್ರಕರಣಗಳ ಇತ್ತೀಚಿನ ಉಲ್ಬಣವನ್ನು ಎತ್ತಿ ಹಿಡಿದ ಜಿಲ್ಲಾಧಿಕಾರಿ ಇ ವಲ್ಲವನ್ ಅವರು,'ಮುಂದಿನ ದಿನಗಳಲ್ಲಿ ಕೋವಿಡ್ -19 ರ ಪ್ರಸರಣ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡಲು ಆಡಳಿತವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹರಿಯಾಣ: ಹರಿಯಾಣ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಶುಕ್ರವಾರ ಹರ್ಯಾಣದಲ್ಲಿ 407 ಮಂದಿಗೆ ಸೋಂಕು ತಗುಲಿದೆ. ಮಾಹಿತಿಯ ಪ್ರಕಾರ, ಹರಿಯಾಣದ ಅರ್ಧದಷ್ಟು ಕೋವಿಡ್ ಪ್ರಕರಣಗಳು ಗುರುಗ್ರಾಮ್ ಜಿಲ್ಲೆಯಿಂದ ದಾಖಲಾಗಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಶುಕ್ರವಾರ ಬುಲೆಟಿನ್‌ನಲ್ಲಿ ತಿಳಿಸಿದೆ. ಈ ವಾರ ಎರಡು ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ.

click me!