
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಕರ್ನಾಟಕದಲ್ಲಿ 1,837 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ (Health Ministry) ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 1,837 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 40,20,087ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಇಂದು 4 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಸಾವಿನ ಸಂಖ್ಯೆ 40118ಕ್ಕೆ ಏರಿಕೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು 1137 ಮಂದಿಗೆ ಸೋಂಕು (Virus) ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 18,44,811 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ರಾಜ್ಯದಲ್ಲಿ ಇಂದು 1,290 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 39,68,029ಕ್ಕೆ ಏರಿಕೆಯಾಗಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 11,898ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯಾದ್ಯಂತ ಒಟ್ಟು 29425 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಆ ಮೂಲಕ ಒಟ್ಟಾರಿ ಕೋವಿಡ್ ಪರೀಕ್ಷೆಗಳ ಸಂಖ್ಯೆ 68024435ಕ್ಕೆ ಏರಿಕೆಯಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ದೃಢ, ದೆಹಲಿ ಪ್ರವಾಸ ರದ್ದು!
ಕರ್ನಾಟಕದಲ್ಲಿ ಮಂಕಿಪಾಕ್ಸ್ ಮೇಲೆ ಹೆಚ್ಚಿನ ನಿಗಾ: ಸಚಿವ ಸುಧಾಕರ್
ಇನ್ನೊಂದೆಡೆ, ರಾಜ್ಯದಲ್ಲಿ ಮಂಕಿಪಾಕ್ಸ್ ಸೋಂಕು ತಪಾಸಣೆ ಹೆಚ್ಚಿಸಿದ್ದು, ಈವರೆಗೂ ಒಬ್ಬರಲ್ಲಿಯೂ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ವಿಶ್ವ ವ್ಯಾಸ್ಕುಲರ್ ದಿನದ ಅಂಗವಾಗಿ ವ್ಯಾಸ್ಕುಲರ್ ಸರ್ಜನ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಜಾಗೃತಿ ವಾಕಥಾನ್‌ನಲ್ಲಿ ಮಾತನಾಡಿದ ಅವರು, ಮಂಕಿಪಾಕ್ಸ್ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಂಕಿಪಾಕ್ಸ್ ಭೀತಿಯಲ್ಲಿ ಕೋವಿಡ್ ಮರೀಬೇಡಿ, ಮರುಸೋಂಕಿನಿಂದ ಹೆಚ್ತಿದೆ ಅಪಾಯ !
ಮುಖ್ಯವಾಗಿ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆಯೂ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ಬಗೆಯ ಪಾಳಿಯನ್ನು ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ಪ್ರಕರಣ ಕಂಡುಬಂದರೂ, ರಾಜ್ಯದಲ್ಲಿ ಈವರೆಗೆ ಪ್ರಕರಣ ಕಂಡುಬಂದಿಲ್ಲ. ಇಥಿಯೋಪಿಯಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿ ಪಾಕ್ಸ್ ಇರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದು ಮಂಕಿಪಾಕ್ಸ್ ಅಲ್ಲ, ಸ್ಮಾಲ್ ಪಾಕ್ಸ್ ಎಂದು ದೃಢಪಟ್ಟಿದೆ ಎಂದರು.
ಚರ್ಮದಲ್ಲಿ ದದ್ದು ಸೇರಿದಂತೆ ಹಲವಾರು ಲಕ್ಷಣಗಳಿಂದ ಮಂಕಿಪಾಕ್ಸ್ ಗೊತ್ತಾಗುತ್ತದೆ. ಸೋಂಕಿತ ಪ್ರದೇಶದಿಂದ ಆಗಮಿಸಿದವರಲ್ಲಿ ಮೂರು ನಾಲ್ಕು ದಿನಗಳಾದ ನಂತರ ಪತ್ತೆಯಾಗುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಬಂದಾಗ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ತಿಳಿಸಿದರು.. ರಕ್ತಪರಿಚಲನೆ ವ್ಯವಸ್ಥೆಯ ಸಮಸ್ಯೆಗಳು ಬೇರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಡುತ್ತವೆ. ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ರಕ್ತಪರಿಚಲನೆ ಸಮಸ್ಯೆಯಿಂದ ಕಾಲನ್ನು ಕಳೆದುಕೊಳ್ಳುವ ಸ್ಥಿತಿ ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ರಕ್ತನಾಳದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಲಘು ವ್ಯಾಯಾಮವನ್ನು ಮಾಡುವಂತೆ ಎಲ್ಲರಿಗೂ ಉತ್ತೇಜಿಸಬೇಕು. ವಿಶೇಷವಾಗಿ ಮಧುಮೇಹಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.